ADVERTISEMENT

ಸೀಮೋಲ್ಲಂಘನ | ಬಾಂಗ್ಲಾ ವಿಮೋಚನೆ: ಇಂದಿರಾ ಪರ್ವ, ಅಮೆರಿಕದ ಗರ್ವ

ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ಸಾರಿದ ವಿದ್ಯಮಾನ

ಸುಧೀಂದ್ರ ಬುಧ್ಯ
Published 31 ಮಾರ್ಚ್ 2021, 21:50 IST
Last Updated 31 ಮಾರ್ಚ್ 2021, 21:50 IST
ಸುಧೀಂದ್ರ ಬುಧ್ಯ
ಸುಧೀಂದ್ರ ಬುಧ್ಯ   

ಬಾಂಗ್ಲಾದೇಶ ತನ್ನ ಸ್ವಾತಂತ್ರ್ಯ ಸುವರ್ಣ ಮಹೋತ್ಸವ ವನ್ನು ಇತ್ತೀಚೆಗೆ ಆಚರಿಸಿಕೊಂಡಿತು. ಬಾಂಗ್ಲಾ ವಿಮೋ ಚನೆಗೆ 50 ವರ್ಷ ಎಂದರೆ ಅದು ಇತಿಹಾಸದ ಒಂದು ಮಹತ್ವಪೂರ್ಣ ಅಧ್ಯಾಯವನ್ನು ನೆನಪು ಮಾಡಿಕೊಳ್ಳ ಬೇಕಾದ ಸಂದರ್ಭ. ‘ಬಾಂಗ್ಲಾ ವಿಮೋಚನಾ ಯುದ್ಧ’ ಪಾಕ್ ಸೇನೆಯ ಕ್ರೌರ್ಯ, ಅಮೆರಿಕದ ಬೂಟಾಟಿಕೆ, ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ಕಾಣಿಸಿದ ಐತಿಹಾಸಿಕ ವಿದ್ಯಮಾನ. ಹಾಗಾಗಿ ‘ಬಾಂಗ್ಲಾ ವಿಮೋಚನೆ’ ಎಂದರೆ ಶೇಕ್ ಮುಜೀಬುರ್ ರಹಮಾನರ ಜೊತೆಗೆ ಇಂದಿರಾ ಗಾಂಧಿ, ನಿಕ್ಸನ್ ಹಾಗೂ ಕಿಸ್ಸಿಂಜರ್ ದ್ವಯರು, ಪಿ.ಎನ್.ಹಕ್ಸರ್, ಎಲ್.ಕೆ.ಝಾ, ಟಿ.ಎನ್.ಕೌಲ್‌ರಂತಹ ರಾಜತಾಂತ್ರಿಕ ನಿಪುಣರು, ಮಾಣೆಕ್ ಷಾರಂತಹ ಸೇನಾನಿಗಳು ಕೂಡ ನೆನಪಾಗಬೇಕು.

ಹಾಗೆ ನೋಡಿದರೆ, 1947ರಲ್ಲಿ ಒಂದು ರಾಷ್ಟ್ರವಾಗಿ ಜನ್ಮತಳೆಯುವಾಗಲೇ ಪಾಕಿಸ್ತಾನ ಒಡೆದುಹೋಗಿತ್ತು. ಪಶ್ಚಿಮ ಪಾಕಿಸ್ತಾನದ ಮುಸ್ಲಿಮರು, ಪೂರ್ವ ಪಾಕಿಸ್ತಾನದ ಮುಸ್ಲಿಮರನ್ನು ತುಚ್ಛವಾಗಿ ಕಾಣುತ್ತಿದ್ದರು. ಲಿಯಾಕತ್ ಅಲಿಖಾನ್ ನೇತೃತ್ವದ ಸರ್ಕಾರಕ್ಕೆ ಆಡಳಿತ ನಿರ್ವಹಣೆ ಅಸಾಧ್ಯ ಎನಿಸಿತ್ತು. 1958ರಲ್ಲಿ ಪಾಕಿಸ್ತಾನ ಸೇನೆ ಆಡಳಿತವನ್ನು ತೆಕ್ಕೆಗೆ ತೆಗೆದುಕೊಂಡಿತು. ಸ್ವತಂತ್ರಗೊಂಡ 23 ವರ್ಷಗಳ ಬಳಿಕ, ಅಂದರೆ 1970ರಲ್ಲಿ ಪಾಕಿಸ್ತಾನ ಮೊದಲ ಸಾರ್ವತ್ರಿಕ ಚುನಾವಣೆಗೆ ಅಣಿಯಾಯಿತು. ಪಶ್ಚಿಮ ಪಾಕಿಸ್ತಾನದಲ್ಲಿ ಭುಟ್ಟೊ ನಾಯಕತ್ವದ ‘ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ’ ಗೆದ್ದರೆ, ಪೂರ್ವ ಪಾಕಿಸ್ತಾನದಲ್ಲಿ ಮುಜೀಬ್ ನೇತೃತ್ವದ ‘ಅವಾಮಿ ಲೀಗ್’ ಹೆಚ್ಚಿನ ಸ್ಥಾನ ಗಳಿಸಿತು. ಆದರೆ ಆಡಳಿತವನ್ನು ಪ್ರಜಾ ಸರ್ಕಾರಕ್ಕೆ ಬಿಟ್ಟುಕೊಡಲು ಸೇನಾ ನಾಯಕ ಯಾಹ್ಯಾಖಾನ್ ಸಿದ್ಧರಿರಲಿಲ್ಲ.

ಪೂರ್ವ ಪಾಕಿಸ್ತಾನಕ್ಕೆ ಹೆಚ್ಚಿನ ಸ್ವಾಯತ್ತತೆ ಇರಬೇಕು ಮತ್ತು ಕೇಂದ್ರ ಸರ್ಕಾರ ಕೇವಲ ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರ ವಿಷಯಗಳನ್ನು ಮಾತ್ರ ನಿರ್ವಹಿಸಬೇಕು ಎಂಬ ಆರು ಅಂಶಗಳ ಯೋಜನೆಯನ್ನು 1966ರಲ್ಲಿ ಪ್ರತಿಪಾದಿಸಿದ್ದ ಮುಜೀಬ್, 1971ರ ಮಾರ್ಚ್ 7ರಂದು ಮಹತ್ವದ ಭಾಷಣವನ್ನು ಮಾಡಿ ‘ಇದು ನಮ್ಮ ವಿಮೋಚನೆಯ ಹೋರಾಟ, ಸ್ವಾತಂತ್ರ್ಯದ ಹೋರಾಟ. ಪ್ರತೀ ಮನೆಯನ್ನು ಕೋಟೆಯನ್ನಾಗಿ ಮಾಡಿ ಶತ್ರುಗಳನ್ನು ಎದುರಿಸಿ’ ಎಂದು ಸ್ವಾತಂತ್ರ್ಯದ ಕಹಳೆ ಊದಿದರು.

ADVERTISEMENT

ಇದಕ್ಕೆ ಪ್ರತಿಯಾಗಿ ಅವಾಮಿ ಲೀಗನ್ನು ಯಾಹ್ಯಾಖಾನ್ ನಿಷೇಧಿಸಿದರು, ಮುಜೀಬರನ್ನು ಬಂಧಿಸಿ ರಾವಲ್ಪಿಂಡಿ ಜೈಲಿಗಟ್ಟಿದರು. ಹಿಂಸಾಚಾರ ಭುಗಿಲೆದ್ದಿತು. ಸೇನೆ ‘ಆಪರೇಷನ್ ಸರ್ಚ್‌ಲೈಟ್’ ಕಾರ್ಯಾಚರಣೆಗೆ ಇಳಿಯಿತು. ಹಿಂದೂಗಳನ್ನು ಗುರಿಯಾಗಿಸಿಕೊಂಡ ಜನಾಂಗೀಯ ಹತ್ಯೆ ನಡೆಯಿತು. ಭೀತಿಗೊಂಡ ಜನ ದೊಡ್ಡ ಸಂಖ್ಯೆಯಲ್ಲಿ ಭಾರತದತ್ತ ವಲಸೆ ಬರಲು ಆರಂಭಿಸಿದರು. ಭಾರತ ಮಧ್ಯಪ್ರವೇಶಿಸಿತು. ‘ಮುಕ್ತಿ ವಾಹಿನಿ’ ಗೆರಿಲ್ಲಾ ಪಡೆಗೆ ಸಾಮರಿಕ ತರಬೇತಿ ನೀಡಿತು. 1971ರ ಮಾರ್ಚ್ 26ರಂದು ಸ್ವಾತಂತ್ರ್ಯ ಘೋಷಿಸಿಕೊಂಡ ಪೂರ್ವ ಪಾಕಿಸ್ತಾನದ ತಾತ್ಕಾಲಿಕ ಸರ್ಕಾರ ಕೊಲ್ಕತ್ತಾಕ್ಕೆ ಸ್ಥಳಾಂತರ ಗೊಂಡಿತು.

ಇತ್ತ ಭಾರತದಲ್ಲಿ ಪ್ರತಿಪಕ್ಷಗಳು ಪಾಕಿಸ್ತಾನದ ಸೇನಾ ಕ್ರಮವನ್ನು ಖಂಡಿಸಿ ಸತ್ಯಾಗ್ರಹ ನಡೆಸಿದವು. ಯುದ್ಧ ಸಾರುವಂತೆ ಸರ್ಕಾರವನ್ನು ಆಗ್ರಹಿಸಿದವು. ಆದರೆ ಕಾಲ ಪಕ್ವವಾಗಿರಲಿಲ್ಲ. ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಮಾಣೆಕ್ ಷಾ, ಸೇನೆ ಸಿದ್ಧವಾಗಲು ಕೊಂಚ ಸಮಯ ಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಒಂದೊಮ್ಮೆ ಯುದ್ಧ ನಡೆದರೆ ಪಾಕಿಸ್ತಾನದ ಸಹಾಯಕ್ಕೆ ಚೀನಾ ನಿಲ್ಲಲಿದೆ ಮತ್ತು ಅಮೆರಿಕ ಅಗತ್ಯ ಯುದ್ಧ ಸಾಮಗ್ರಿಗಳನ್ನು ಒದಗಿಸಿ ತೆರೆಮರೆಯಲ್ಲಿ ಬೆಂಬಲ ನೀಡಲಿದೆ ಎಂಬುದು ಇಂದಿರಾ ಮತ್ತು ತಂಡಕ್ಕೆ ಮನವರಿಕೆಯಾಗಿತ್ತು. ಆ ತಂಡ ಹೊಸದೊಂದು ಕಾರ್ಯಯೋಜನೆ ರೂಪಿಸಿತು. ಇಂದಿರಾ ಮತ್ತು ಆಪ್ತ ಅಧಿಕಾರಿಗಳು ವಿವಿಧ ದೇಶಗಳಿಗೆ ಭೇಟಿ ಕೊಟ್ಟು ಬಾಂಗ್ಲಾದ ಪರ, ಪಾಕಿಸ್ತಾನದ ವಿರುದ್ಧ ಅಭಿಪ್ರಾಯ ರೂಪಿಸುವ ಮತ್ತು ಭಾರತದ ಮಧ್ಯಪ್ರವೇಶ ಏಕೆ ಎಂದು ವಿವರಿಸುವ ಕೆಲಸ ಮಾಡಿದರು. ಆಗ ಸವಾಲಾಗಿದ್ದೇ ಅಮೆರಿಕ.

ಅಮೆರಿಕದ ಅಧ್ಯಕ್ಷ ನಿಕ್ಸನ್ ಮತ್ತು ಭದ್ರತಾ ಸಲಹೆಗಾರ ಕಿಸ್ಸಿಂಜರ್ ಅದಾಗ ಚೀನಾದೊಂದಿಗೆ ಕೈಕುಲುಕಲು ಹಾತೊರೆಯುತ್ತಿದ್ದರು. ಆ ಪ್ರಕ್ರಿಯೆಗೆ ಪಾಕಿಸ್ತಾನ ಕೊಂಡಿಯಾಗಿತ್ತು. ಮಿಗಿಲಾಗಿ ಪಾಕಿಸ್ತಾನವು ಅಮೆರಿಕಕ್ಕೆ 24 ವರ್ಷಗಳ ಸ್ನೇಹಿತ. ಈ ಎರಡು ಕಾರಣಗಳಿಂದಾಗಿ ಪೂರ್ವ ಪಾಕಿಸ್ತಾನದಲ್ಲಿ ಪಾಕ್ ಸೇನೆ ನರಮೇಧ ನಡೆಸಿದರೂ ಅಮೆರಿಕ ಧ್ವನಿಯೆತ್ತಲಿಲ್ಲ! ‘Yahya has not had such fun since the last Hindu massacre’ ಎಂಬ ಕೀಳು ಮಟ್ಟದ, ಅಕ್ಷಮ್ಯ ಮಾತನ್ನು ಜನಾಂಗೀಯ ಹತ್ಯೆಯ ಕುರಿತಾಗಿ ಕಿಸ್ಸಿಂಜರ್ ಹೇಳಿದ್ದರು ಎಂಬುದನ್ನು ‘ಪೆಂಟಗನ್ ಪೇಪರ್ಸ್’ ಜಾಹೀರು ಮಾಡಿತ್ತು. ವ್ಯಕ್ತಿಗತವಾಗಿ ಇಂದಿರಾ ಮತ್ತು ನಿಕ್ಸನ್ ಅವರ ನಡುವೆ ಉತ್ತಮ ಬಾಂಧವ್ಯ ಇರಲಿಲ್ಲ. ‘ಇಂದಿರಾ ಕುರಿತು ನಿಕ್ಸನ್ ವ್ಯಕ್ತಪಡಿಸುತ್ತಿದ್ದ ಅಭಿಪ್ರಾಯಗಳನ್ನು ಮುದ್ರಿಸಲು ಸಾಧ್ಯವಿಲ್ಲ’ ಎಂದು ಕಿಸ್ಸಿಂಜರ್ ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ.

1971ರ ಆಗಸ್ಟ್ 9ರಂದು ಭಾರತ ಮತ್ತು ಸೋವಿಯತ್ ರಷ್ಯಾ ನಡುವೆ ಸ್ನೇಹ ಒಪ್ಪಂದ ಏರ್ಪಟ್ಟ ಬಳಿಕ ಅಮೆರಿಕ ಜಾಗೃತವಾಯಿತು. ಯಾಹ್ಯಾಖಾನ್ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿತು. ಆಗಲೂ ನಿಕ್ಸನ್ ‘To All hands. Don't squeeze Yahya at this time. RN’ ಎಂದು ಸ್ವಹಸ್ತಾಕ್ಷರದಲ್ಲಿ ಬರೆದು ಸಂದೇಶ ರವಾನಿಸಿದ್ದರು. 1971ರ ನವೆಂಬರ್ 4 ಮತ್ತು 5ರಂದು ಇಂದಿರಾ ಹಾಗೂ ನಿಕ್ಸನ್ ನಡುವೆ ಮಾತುಕತೆ ನಡೆಯಿತು. ಇಂದಿರಾ ಜೊತೆಗೆ ಪಿ.ಎನ್.ಹಕ್ಸರ್ ಇದ್ದರೆ, ನಿಕ್ಸನ್ ಬಗಲಲ್ಲಿ ಕಿಸ್ಸಿಂಜರ್ ಇದ್ದರು. ವಿಯೆಟ್ನಾಂ ಮತ್ತು ಚೀನಾ ವಿಷಯವನ್ನು ನಿಕ್ಸನ್ ನಿರ್ವಹಿಸಿದ ರೀತಿಯನ್ನು ಪ್ರಶಂಸಿಸುತ್ತಲೇ, ಪಾಕಿಸ್ತಾನದ ಪರವಾಗಿ ನಿಂತ ನಡೆ ಯನ್ನು ಇಂದಿರಾ ತೀವ್ರವಾಗಿ ಖಂಡಿಸಿದ್ದರು. ಈ ಕುರಿತು ಕಿಸ್ಸಿಂಜರ್ ‘ಪ್ರಾಧ್ಯಾಪಕರೊಬ್ಬರು ಅಧ್ಯಯನದಲ್ಲಿ ಹಿಂದುಳಿದ ವಿದ್ಯಾರ್ಥಿಯನ್ನು ಉತ್ತೇಜಿಸುವಂತೆ ಇಂದಿರಾ ಮಾತು ಆರಂಭಿಸಿದರು, ನಿಕ್ಸನ್ ಮತ್ತು ಇಂದಿರಾ ನಡುವಿನ ಮಾತುಕತೆ ಕಿವುಡರಿಬ್ಬರ ನಡುವಿನ ಮಾತುಕತೆಯಂತಿತ್ತು’ ಎಂದು ತಮ್ಮ ಅನುಭವ ಕಥನ ‘ದಿ ವೈಟ್ ಹೌಸ್ ಇಯರ್ಸ್’ನಲ್ಲಿ ಬಣ್ಣಿಸಿದ್ದಾರೆ. ‘ಬಾಂಗ್ಲಾ ವಿಮೋಚನೆಯ ಹೊರತಾಗಿ ಮತ್ತಾವುದೇ ಪರಿಹಾರಕ್ಕೆ ನಮ್ಮ ಸಮ್ಮತಿಯಿಲ್ಲ. ಬಲೂಚಿಸ್ತಾನವೂ ಪಾಕಿಸ್ತಾನಕ್ಕೆ ಸೇರಿದ್ದಲ್ಲ’ ಎಂದು ಹೇಳಿ ಇಂದಿರಾ ಸಭೆಯಿಂದ ಎದ್ದಿದ್ದರು.

ಡಿಸೆಂಬರ್ 4ರಂದು ಯಾಹ್ಯಾಖಾನ್ ಯುದ್ಧ ಘೋಷಿಸಿದರು. ಡಿಸೆಂಬರ್ 6ರಂದು ಅಧಿಕೃತವಾಗಿ ಬಾಂಗ್ಲಾದೇಶವನ್ನು ಭಾರತ ಗುರುತಿಸಿತು. ಪೂರ್ವ ಪಾಕಿಸ್ತಾನದ ಬಳಿಕ ಪಾಕ್ ಆಕ್ರಮಿತ ಕಾಶ್ಮೀರದತ್ತ ಭಾರತ ದೃಷ್ಟಿ ನೆಟ್ಟಿತು. ನಿಕ್ಸನ್- ಕಿಸ್ಸಿಂಜರ್ ಜೋಡಿ ಭಾರತದ ಮೇಲೆ ಕೆಂಡವಾಯಿತು. ಆ ಸಂದರ್ಭದಲ್ಲಿ ಅವರು ಬಳಸಿದ ಅಶ್ಲೀಲ ಪದಗಳು ಅಮೆರಿಕಕ್ಕಾದ ಗರ್ವಭಂಗ ವನ್ನು ಧ್ವನಿಸುತ್ತಿದ್ದವು. ಭಾರತವನ್ನು ಹೇಗಾದರೂ ತಡೆಯಬೇಕೆಂಬ ದಿಸೆಯಲ್ಲಿ ಸೋವಿಯತ್ ಮೂಲಕ ಅಮೆರಿಕ ಒತ್ತಡ ಹೇರಿತು. ಪರಮಾಣು ವಿಮಾನವಾಹಕ ನೌಕೆ ಯುಎಸ್ಎಸ್ ಎಂಟರ್‌ಪ್ರೈಸ್ ಅನ್ನು ಬಂಗಾಳ
ಕೊಲ್ಲಿಯತ್ತ ಕಳುಹಿಸಿತು. ಕೊನೆಗೆ ಡಿಸೆಂಬರ್ 16ರಂದು ಪಾಕಿಸ್ತಾನ ಸೇನೆ ಭಾರತಕ್ಕೆ ಶರಣಾಯಿತು. ಅದುವರೆಗೂ ಪಾಕಿಸ್ತಾನದ ಒಬ್ಬ ಸೈನಿಕ ಭಾರತದ ಹತ್ತು ಸೈನಿಕರಿಗೆ ಸಮ ಎಂಬ ಹಮ್ಮಿನಲ್ಲಿದ್ದ ಪಾಕ್ ಸೇನೆಗೆ ಮುಖಭಂಗವಾಗಿತ್ತು.

ನಿಕ್ಸನ್ ಭೇಟಿಯ ವೇಳೆ ಇಂದಿರಾ ‘ಭಾರತದ ವಿಭಜನೆಯನ್ನು ಒಪ್ಪಿಕೊಂಡದ್ದಕ್ಕಾಗಿ ನನ್ನ ತಂದೆಯನ್ನು ದೂಷಿಸಲಾಯಿತು’ ಎಂದಿದ್ದನ್ನು ಕಿಸ್ಸಿಂಜರ್ ಉಲ್ಲೇಖಿಸಿ ದ್ದಾರೆ. ಆ ದೂಷಣೆ ತೊಡೆದುಹಾಕಲೋ ಎಂಬಂತೆ ಪಾಕಿಸ್ತಾನವನ್ನು ಇಂದಿರಾ ಮುರಿದರೇ? ಒಂದೊಮ್ಮೆ ಅಮೆರಿಕ ತನ್ನ ಯುದ್ಧನೌಕೆಯನ್ನು ಬಂಗಾಳಕೊಲ್ಲಿಯತ್ತ ಕಳುಹಿಸದಿದ್ದರೆ, ಭಾರತದ ಮೇಲೆ ಸೋವಿಯತ್ ರಷ್ಯಾ ಒತ್ತಡ ಹೇರದಿದ್ದರೆ, ಕಾಶ್ಮೀರದ ಸಮಸ್ಯೆಯನ್ನು ಅಂದೇ ಇತ್ಯರ್ಥಗೊಳಿಸುವ ಇಂಗಿತವನ್ನು ಇಂದಿರಾ ಹೊಂದಿದ್ದರೇ? ಅಮೆರಿಕದ ಎದುರು ಅಂದು ಸೆಟೆದು ಕೂತ ಪ್ರಧಾನಿ ಇಂದಿರಾ ಅವರನ್ನು ಭಾರತ, ಬಾಂಗ್ಲಾದೇಶವಷ್ಟೇ ಅಲ್ಲ, ಅಮೆರಿಕವೂ ಮರೆಯಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.