ADVERTISEMENT

ದೇಶ ಗೌರವ ಮೆರೆಸಿದ ಬಾಂಗ್ಲಾ ವಿಮೋಚನೆ

ಸೇನಾನಿಯ ಸ್ವಗತ

ಬ್ರಿಗೇಡಿಯರ್ ಐ.ಎನ್.ರೈ
Published 16 ಡಿಸೆಂಬರ್ 2019, 5:00 IST
Last Updated 16 ಡಿಸೆಂಬರ್ 2019, 5:00 IST
   

ಈಗಲೂ ನನ್ನ ಕಣ್ಣಾಲಿಗಳು ಈ ದೃಶ್ಯವನ್ನು ನೆನೆದು ಹನಿಗೂಡುತ್ತವೆ.

ಅದು ಮುಂಜಾನೆ 5.30! ನಿರಂತರ ನಡೆದ ಧಾಳಿಗೆ ಸಾಕ್ಷಿ ಎಂಬಂತೆ ಆ ಸೂರ್ಯೋದಯದ ಹೊತ್ತಿನಲ್ಲಿ ಎಲ್ಲೆಲ್ಲೂ ಮದ್ದು ಗುಂಡುಗಳ ವಾಸನೆ, ರಕ್ತದ ಕಲೆಗಳು! ನಿರಂತರ ಹೋರಾಟ, ಹುಮ್ಮಸ್ಸು ತುಂಬಿಕೊಂಡಿದ್ದ ನಾವು ಆ ಸಂಪೂರ್ಣ ಚಳಿಯ ವಾತಾವರಣದಲ್ಲೂ ಬೆವರಿದ್ದೆವು-ಅಷ್ಟು ಹೋರಾಟ ನಡೆದಿತ್ತು. ಅಂತೂ ಗನ್ ಗಳು ಶಾಂತವಾದುವು, ಮದ್ದು ಗುಂಡುಗಳ ಮೊರೆತ ನಿಂತಿತು-ರಣರಂಗ ಶಾಂತವಾದ ಆ ಹೊತ್ತಿನಲ್ಲಿ ಡಿಸೆಂಬರ್ ಚಳಿ ನಮ್ಮ ದೇಹಕ್ಕೆ ಅನುಭವವಾಗತೊಡಗಿತು. ಹಲ್ಲುಗಳು ಕಟ ಕಟ ಸದ್ದು ಮಾಡಲಾರಂಭಿಸಿದುವು. ನಾವೆಲ್ಲರೂ ಸೂರ್ಯದೇವಾ, ಬೇಗ ಉದಯಿಸು ಎಂದು ಪ್ರಾರ್ಥಿಸಲು ಆರಂಭಿಸಿದೆವು.

ಮಂಜು ಮಸುಕಿದ ವಾತಾವರಣವನ್ನು ಆತ ಕಷ್ಟ ಪಟ್ಟು ತಿಳಿಯಾಗಲೆತ್ನಿಸುತ್ತ ಸೂರ್ಯ ಬಂದ. ನಾನೂ ನನ್ನ ಪಡೆಯ ಸೈನಿಕರನ್ನು ಒಬ್ಬೊಬ್ಬರನ್ನಾಗಿ ಮಾತಾಡಿಸುತ್ತಾ, ಮುಖಾಮುಖಿಯಾಗಿ ಅವರಲ್ಲಿ ಮತ್ತೆ ಧೈರ್ಯ ತುಂಬಲಾರಂಭಿಸಿದೆ.

ADVERTISEMENT

ಪ್ರಖ್ಯಾತ ವಾಟರ್ ಲೂ ಯುದ್ಧದ ನಂತರ ಲಾರ್ಡ್ ವೆಲಿಂಗ್ ಟನ್ ಹೇಳಿದ್ದ-The saddest thing in battle after defeat is to win and see your own dead!!

ಇಂದಿಗೂ ನನ್ನೊಳಗೆ ಒಂದು ರೀತಿಯ ಕಂಪನ ಸೃಷ್ಟಿಗೆ ಇದು ಕಾರಣವಾಗುತ್ತದೆ. ನಾನು ಯುದ್ಧಾರಂಭದಲ್ಲಿ ಹೇಳಿದ, ಒಂದೇ ತಟ್ಟೆಯಲ್ಲಿ ಊಟ ಮಾಡಿ ಯುದ್ಧಕ್ಕೆ ಹೊರಟಿದ್ದ ನನ್ನಿಬ್ಬರು ಆತ್ಮೀಯರಾಗಿದ್ದ ಕ್ಯಾಪ್ಟನ್ ಕರಂ ಸಿಂಗ್ ಮತ್ತು 2 ಲೆಫ್ಟಿನೆಂಟ್ ಹೆಚ್ .ಪಿ. ನಯ್ಯರ್ ಇಬ್ಬರೂ ಅಲ್ಲಿ ಕಾಣುತ್ತಿರಲಿಲ್ಲ! ಕಳೆದ ರಾತ್ರಿ ಒಂದೇ ತಟ್ಟೆಯಲ್ಲಿ ದಾಲ್ ರೋಟಿ ತಿಂದು ದೇವರ ದಯೆ ಇದ್ದರೆ ಬೆಳಿಗ್ಗೆ ಸಿಗೋಣ ಎಂದಿದ್ದೆವು-ದೇವರು ದಯೆ ತೋರಲೇ ಇಲ್ಲ.

ಫತೇಪುರ್ ಮರಳಿನಮ್ಮ ವಶವಾಗಿತ್ತು. ಯುದ್ಧದ ಗೆಲುವಿಗಾಗಿ ಹುತಾತ್ಮರಾದವರೂ ಕಡಿಮೆಯೇನಲ್ಲ. ನಮ್ಮ ಸೇನೆಯಲ್ಲಿ ಮೂವರು ಆಫೀಸರ್‍ಗಳು, ಓರ್ವ ಜೂನಿಯರ್ ಕಮಾಂಡರ್, ನಲವತ್ತೆರಡು ಜನ ಸೈನಿಕರು ಹುತಾತ್ಮರಾಗಿದ್ದರು!. ಕೇವಲ ಒಂದೇ ರಾತ್ರಿಯಲ್ಲಿ ಇಷ್ಟು ವೀರರನ್ನು ಕಳೆದುಕೊಂಡದ್ದೇ ಅಲ್ಲದೇ, ಓರ್ವ ಆಫೀಸರ್, ಮೂವರು ಜೂನಿಯರ್ ಕಮಾಂಡರ್ ಹಾಗೂ ತೊಂಭತ್ತೇಳು ಜನ ಸೈನಿಕರು ಗಾಯಾಳುಗಳಾಗಿದ್ದರು. ಇದೇ ಹಂತದಲ್ಲಿ ನಮಗೆ ಸಿಕ್ಕ ಲೆಕ್ಕಾಚಾರದ ಪ್ರಕಾರ ಪಾಕ್ ಸೈನ್ಯದಲ್ಲಿ 32ಜನರನ್ನು ನಾವೂ ಕೊಂದಿದ್ದೆವು ಮತ್ತು 9ಜನರನ್ನು ಸೆರೆ ಹಿಡಿದಿದ್ದೆವು!

ಒಂದೇ ರಾತ್ರಿಯಲ್ಲಿ ಗೆಲುವು:ಇಷ್ಟು ದೊಡ್ಡ ಪ್ರದೇಶವನ್ನು ವೀರಾವೇಶದಿಂದ ವಶ ಪಡಿಸಿಕೊಂಡ ನಮ್ಮ ಸೈನ್ಯ ಅಪಾರ ಪ್ರಮಾಣದ ಮದ್ದು ಗುಂಡುಗಳು, ಅಮೇರಿಕಾ ಮತ್ತು ಚೈನಾ ನಿರ್ಮಿತ ಗನ್‍ಗಳನ್ನೂ ವಶಪಡಿಸಿಕೊಂಡಿದ್ದೆವು. ಮೂರು ಟ್ರಕ್ ಲೋಡ್ ಗಳಷ್ಟು ಶಸ್ತ್ರಾಸ್ತ್ರ, ಮದ್ದು ಗುಂಡುಗಳನ್ನೂ ವಶಪಡಿಸಿಕೊಂಡಿದ್ದೆವು. ಈ ಕದನ ಒಂದೇ ರಾತ್ರಿಯಲ್ಲಿ ಗೆಲುವು ಸಾಧಿಸಿದ ಅತ್ಯಂತ ವಿಶೇಷ ಯುದ್ಧವಾಗಿಯೂ ಚರಿತೆಯ ಪುಟಗಳಲ್ಲಿ ದಾಖಲಾಯ್ತು. ಫತೇಪುರ್ ಬ್ಯಾಟಲ್ ಗೌರವ ಮತ್ತು ಪಂಜಾಬ್ ತಿಯೇಟರ್ ಗೌರವ ಗಳನ್ನು ಸೈನ್ಯದ ಶೌರ್ಯಕ್ಕಾಗಿ ನೀಡಲಾಯಿತು. ಇದು ನನ್ನ ಸೈನಿಕ ಜೀವನದ ಸಾರ್ವಕಾಲಿಕ ಸಾಧನೆಯೆಂದೇ ಪರಿಗಣಿಸಿದ್ದೇನೆ. ಇದರೊಂದಿಗೆ ಈ ಕದನದಲ್ಲಿ ಹೋರಾಡಿದ ಶೌರ್ಯವಂತ ಸೈನಿಕರಿಗಾಗಿ ನೀಡಲಾಗುವ ಪ್ರಮೋಚ್ಛ ಸೈನಿಕ ಪ್ರಶಸ್ತಿಗಳಲ್ಲಿ ಒಂದು ಮಹಾವೀರ ಚಕ್ರ, ಐದು ವೀರ ಚಕ್ರ ಮತ್ತು ನಾಲ್ಕು ಸೇನಾ ಪದಕಗಳು ಈ ಕದನ ಕಲಿಗಳಿಗೆ ಪ್ರಾಪ್ತವಾಯಿತು.

ಶೆಲ್ಲಿಂಗ್, ಗುಂಡುಗಳ ಹಾರಾಟ, ಯುದ್ಧ ಸ್ಥಿತಿ ಡಿಸೆಂಬರ್ 16ರ ತನಕವೂ ಮುಂದುವರಿಯಿತು. ಈ ಹಂತದಲ್ಲಿಯೇ ಸೈನಿಕರ ವೈದ್ಯಕೀಯ ನೆರವಿಗೆ ಧಾವಿಸುತ್ತಿದ್ದ ಟ್ರಕ್ ಮೈನ್ಸ್ ಗಳ ಮೇಲೆ ಹರಿದು, ಅದು ಸ್ಫೋ‌ಟಗೊಂಡು ಕರಕಲಾಯಿತು. ಓರ್ವ ಮೇಜರ್ ವೈದ್ಯರೂ ಹುತಾತ್ಮರಾದರು. 16ರಂದು ಪೂರ್ವ ಪಾಕಿಸ್ಥಾನ ಶರಣಾಗತವಾಗುವುದರೊಂದಿಗೆ ಕದನ ವಿರಾಮ ಘೋಷಣೆಯಾಯ್ತು. ಮದ್ದು ಗುಂಡುಗಳ ಮೊರೆತ ಕಡಿಮೆಯಾಯ್ತು.

ರಾವಿ ನದೀ ದಟದಲ್ಲಿ ಎರಡೂ ದೇಶದ ಸೈನಿಕರ ನಡುವೆ ಧ್ವಜ ಸಭೆ ನಡೆದಾಗ ಶತ್ರು ಸೈನ್ಯದ ನಾಯಕರು ಹೇಳಿದ್ದು-ನಿಮ್ಮಲ್ಲಿ ಸಿಖ್ ಸೈನ್ಯದ ಮೂರು ಬೆಟಾಲಿಯನ್ ಪಡೆ ಹೋರಾಡಿತ್ತೆಂದು ನಾವು ಭಾವಿಸಿದ್ದೆವು ಎಂದರು. ವಾಸ್ತವದಲ್ಲಿ ಅವರೆಣಿಸಿದ್ದಕ್ಕಿಂತ ಮೂರನೇ ಒಂದು ಭಾಗದ ನಮ್ಮ ಸೈನ್ಯ ಈ ಯುದ್ಧ ಗೆದ್ದಿತ್ತು ಮತ್ತು ಇದೇ ಭಾರತೀಯ ಸೈನ್ಯದ ಶಕ್ತಿ, ಶೌರ್ಯ ಎಂಬುದು ನಮ್ಮ ಹೆಮ್ಮೆ.

ಹೀಗೆ ಒಂದು ಯುದ್ಧ ಗೆದ್ದ ಹಮ್ಮೆ ಒಂದು ಕಡೆ. ಒಂದೇ ತಟ್ಟೆಯಲ್ಲಿ ಊಟ ಮಾಡಿದ್ದ ನನ್ನ ಆರುತಿಂಗಳು ಕಿರಿಯ ಮತ್ತು ಇನ್ನೋರ್ವ ಆರುತಿಂಗಳ ಹಿರಿಯ ಸ್ನೇಹಿತರನ್ನು ಹುತಾತ್ಮರಾಗುವಂತಾಯಿತು ಎನ್ನುವುದು ದುಃಖ. ಇಂದಿಗೂ ಅವರ ನೆನಪು ನನ್ನೆದೆಯಲ್ಲಿ ಗಟ್ಟಿಯಾಗಿದೆ.

ಯುದ್ಧ ಮುಗಿಯಿತು ಎಂದು ನಿರಾಳರಾಗುವಂತಿರಲಿಲ್ಲ. ನಮ್ಮಲ್ಲಿಯೂ ಅನೇಕರು ಹುತಾತ್ಮರಾದರು. ಗಾಯಾಳುಗಳಾದರಲ್ಲ. ಸೈನ್ಯದಲ್ಲಿ ಯೋಧರ ಕೊರತೆ ಆಗಬಾರದೆಂದು 80 ಜನ ಯೋಧರನ್ನು ನಮ್ಮಲ್ಲಿಗೆ ಕಳುಹಿಸಲಾಯಿತು. ಬಂದು ಎದುರ ನಿಂತ ಯೋಧರನ್ನು ಕಂಡಾಗ ಮನಸ್ಸು ಒಂದು ಕ್ಷಣ ವಿಹ್ವಲಗೊಂಡಿತು. ಎದೆ ಝಲ್ಲೆಂದಿತು. 19ರ ಹರೆಯದ ಮೀಸೆ ಗಡ್ಡ ಬೆಳೆಯದ ಹುಡುಗರು. ಆರಂಭಿಕ ತರಬೇತಿ ಮುಗಿಸಿ, ಭಾರತದ ಧ್ವಜದ ಮೇಲೆ, ಗ್ರಂಥ್ ಸಾಹಿಬ್ ಮೇಲೆ ಕೈ ಇಟ್ಟು, ದೇಶಕ್ಕೋಸ್ಕರ ಸರ್ವ ತ್ಯಾಗಕ್ಕೆ ಸಿದ್ಧ ಎಂದು ಪ್ರತಿಜ್ಞೆ ಮಾಡಿ ದೇಶ ಸೇವೆಗೆ ಬದ್ಧರಾದ ಹುಡುಗರು. ನಮ್ಮನೆಯ ಹುಡುಗರನ್ನು ಅಪಾಯದ ಹೊಸ್ತಿಲಲ್ಲಿ ನಿಲ್ಲಿಸಿದ ಭಾವನೆ.

ಸುತ್ತಲೂ ಎಲಿಫಂಟ್ ಗ್ರಾಸ್! ಅಂದರೆ ಹುಲ್ಲುಗಾವಲಿನ ಪ್ರದೇಶ. ಒಳಗೆ ಶತ್ರು ಸೈನಿಕರೂ ಅಡಗಿ ಕುಳಿತಿರುವ ಅಪಾಯದ ಸಾಧ್ಯತೆ. ಇನ್ನೂ ಸರಿಯಾದ ತರಬೇತಿ ಮುಗಿಸಿಲ್ಲದ 19ರ ಹರೆಯದ ಹುಡುಗರು!. ಕಣ್ಣೆದುರಿಗೇ ಯುದ್ಧದ ಭೀಕರ ಸನ್ನಿವೇಶಗಳು-ಕುರುಹುಗಳು. ಎಂತವರ ಎದೆಯನ್ನೂ ನಡುಗಿಸುವ ಆ ಸನ್ನಿವೇಶದಲ್ಲಿ ಈ ಹುಡುಗರ ಆತ್ಮ ವಿಶ್ವಾಸ ಹೆಚ್ಚಿಸುವ, ಗುಂಡಿಗೆ ಗಟ್ಟಿಗೊಳಿಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲೆ. ಹಾಗೆಂದು ನಾವೇನೂ ಅತ್ಯಂತ ಹಿರಿಯರಲ್ಲ. ಇನ್ನೂ 21ರ ಹರೆಯದವರು!. ಆದರೆ ಸೈನ್ಯದಲ್ಲಿ ಪ್ರತೀ ದಿನದ ವಯಸ್ಸೂ ಅಷ್ಟು ಮಹತ್ವದ್ದು...ಪಡೆದ ಪ್ರತೀ ದಿನದ ತರಬೇತಿಯೂ ನಮ್ಮನ್ನು ಗಟ್ಟಿಗೊಳಿಸಿರುತ್ತದೆ....ಆ ದೃಷ್ಟಿಯಲ್ಲಿ ನಾವು ಹಿರಿಯರೆಂದುಕೊಳ್ಳಬಹುದು!

ರಾವೀ ನದಿಯ ಆ ಕಡೆ ಪಾಕಿಸ್ತಾನೀಯರು ಇನ್ನೂ ಇದ್ದರು. ನಮ್ಮ ಪಡೆಯಲ್ಲಿ ನುರಿತ ಎರಡು ಜನ ಸೈನಿಕರ ನಡುವೆ ಒಬ್ಬಿಬ್ಬರು ಹುಡುಗರನ್ನು ಸೇರಿಸಿದೆವು. ಮಂಜು ಕವಿದ, ಮೈ ಕೊರೆಯುವ ಚಳಿಯ ಭಯಾನಕ ವಾತಾವರಣ. ಹುಲ್ಲುಗಾವಲಿನ ನಡುವೆ ಗಾಳಿ ಬೀಸಿದರೂ ಶತ್ರು ಸೈನಿಕರಿರಬಹುದೇನೋ ಎಂಬ ಅನುಮಾನ. ಈ ಸಂದರ್ಭದಲ್ಲಿ ಪಾಕಿಸ್ಥಾನೀಯರಿಂದ ವಶ ಪಡಿಸಿಕೊಂಡ 13 ಮೆಶಿನ್ ಗನ್‍ಗಳನ್ನು ಅಲ್ಲಲ್ಲಿ ಕಬ್ಬಿಣ ಆ್ಯಂಗಲ್ ಗಳನ್ನು ಹುಗಿದು ಅದಕ್ಕೆ ಚೈನ್ ಮೂಲಕ ಬಂಧಿಸಿದೆವು. ಈ ಯುವ ಪಡೆಯ ಹುಡುಗರನ್ನು ಹಗಲು-ರಾತ್ರಿಯ ಪಾಳಿಗೆ ನೇಮಿಸಿದೆವು. ಚೈನ್ ಮೂಲಕ ಅವರನ್ನು ಓರ್ವ ಹಿರಿಯ ಸೈನಿಕ ಸೊಂಟಕ್ಕೆ ಕಟ್ಟಿಕೊಳ್ಳಬೇಕಿತ್ತು. ರಾತ್ರಿ ಹೆದರಿ ಈ ಚಿಕ್ಕ ಚಿಕ್ಕ ಮಕ್ಕಳು ಹೆದರಿ ಓಡಿ ಹೋಗಬಾರದಲ್ಲ. ಶತ್ರು ಸೈನಿಕರ ಮೇಲೆ ಒಂದು ಕಣ್ಣಿಟ್ಟಿರುವ ಹಾಗೆಯೇ ಈ ಹುಡುಗರನ್ನೂ ಕಾಯ್ದುಕೊಳ್ಳುವುದು ನಮ್ಮ ಮತ್ತೊಂದು ಸವಾಲಾಗಿತ್ತು. ರಂ ಬಾಟಲ್‍ಗೆ ಸೀಮೆ ಎಣ್ಣೆ ತುಂಬಿಸಿ, ಬತ್ತಿ ಹಾಕಿ ದೀಪ ಮಾಡಿಕೊಂಡು ಒಂದು ಕ್ಷಣವೂ ನಿದ್ದೆ ಇಲ್ಲದೇ ಹೀಗೆ ನಾಲ್ಕು ರಾತ್ರಿ ನಾನು ಮತ್ತು ಇನ್ನೊಬ್ಬ ಕ್ಯಾಪ್ಟನ್ ಕಾದಿದ್ದೆವು!. ಯಾವುದೇ ಸಂದರ್ಭದಲ್ಲಿ ಈ ಹುಡುಗರು ಧೃತಿಗೆಡದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆಯಾಗಿತ್ತು.

ಯುದ್ಧ ಮುಗಿದ ವಾತಾರಣ ಎಲ್ಲೆಡೆಯಲ್ಲಿದ್ದರೂ, ಯಾವ ಕ್ಷಣ ಹೇಗೋ ಎಂಬ ಆತಂಕ ಎಲ್ಲರಲ್ಲೂ ಇತ್ತು. ಇದೇ ಹಂತದಲ್ಲಿ ಎರಡು ದಿನ ಕಳೆದಾಗ ಸುತ್ತಲೂ ತುಂಬಿಕೊಂಡಿದ್ದ ಸಮೃದ್ಧ ಹುಲ್ಲುಗಳೆಡೆಯಲ್ಲಿ ಅಡಗಿಕುಳಿತಿದ್ದ 9 ಜನ ಪಾಕ್ ಸೈನಿಕರನ್ನು ವಶಪಡಿಸಿಕೊಂಡು, ಟ್ರಕ್‌ಗಳ ಮೂಲಕ ನಮ್ಮ ಮುಖ್ಯ ಕ್ಯಾಂಪ್‍ಗೆ ಕಳಿಸಿದೆವು. ನಾವೂ ಪಾಕ್‌ನಿಂದ ವಶ ಪಡಿಸಿಕೊಂಡಿದ್ದ ಎಲ್ಲಾ ಮದ್ದು ಗುಂಡುಗಳನ್ನು ರಾತ್ರಿ ಹೊತ್ತಿನಲ್ಲಿ ಸಿಡಿಸಿ ಖಾಲಿ ಮಾಡಿದೆವು! ಇದೂ ಒಂದು ಯುದ್ಧ ವಿಧಾನ.

ಕದನ ವಿರಾಮ ಘೋಷಣೆ ಆಯ್ತು. ಇತಿಹಾಸದಲ್ಲಿ ಈ ಯುದ್ಧ ಅತ್ಯಂತ ಕಡಿಮೆ ಅವಧಿಯ ಯುದ್ಧವೆಂದೂ ದಾಖಲಾಯ್ತು. ಕೇವಲ 13ದಿನಗಳ ಯುದ್ಧವಾಗಿತ್ತದು. ಢಾಕಾದಲ್ಲಿ ಲೆಫ್ಟಿನೆಂಟ್ ಗನರಲ್ ಜೆ. ಎಸ್ . ಆರೋರಾ ಅವರ ಮುಂದೆ ಲೆಫ್ಟಿನೆಂಟ್ ಜನರಲ್ ಆಕ್ ನಿಯಾಝಿ ಶರಣಾದರು. 93,000 ಜನ ಪಾಕ್ ಸೈನಿಕರು ಮತ್ತು ಪ್ಯಾರಾ ಮಿಲಿಟರಿ ಪಡೆಯವರು ತಮ್ಮ ಗನ್‍ಗಳನ್ನು ಕೆಳಗಿಟ್ಟು ಶರಣಾದರು. ಇದು ಯುದ್ಧದ ಇತಿಹಾಸದಲ್ಲಿಯೇ ಜರ್ಮನ್ ಸೈನ್ಯ ರಷ್ಯಾಕ್ಕೆ ಶರಣಾದ ನಂತರದ ಅತ್ಯಂತ ದೊಡ್ಡ ಶರಣಾಗತಿ ಎಂದೂ ದಾಖಲಾಗಿದೆ!. ನಮ್ಮ ಕಡೆಯಿಂದ 1,426 ಸೈನಿಕರು ಹುತಾತ್ಮರಾಗಿ 3,611 ಜನ ಗಾಯಾಳುಗಳಾದರು. ಪಾಕ್ ಸೈನ್ಯದಲ್ಲೂ ನಮ್ಮ ಮಾಹಿತಿಯ ಪ್ರಕಾರ 8,000 ಜನ ಸೈನಿಕರು ಕೊಲ್ಲಲ್ಪಟ್ಟರೆ, ಅಂದಾಜು 10,000 ಕ್ಕೂ ಮಿಕ್ಕಿ ಸೈನಿಕರು ಗಾಯಾಳುಗಳಾದರು. ಬಾಂಗ್ಲಾ ವಿಮೋಚನೆ ಆಯ್ತು. ಎಲ್ಲೆಂದರಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು.

ನಿರೂಪಣೆ: ಅರೆಹೊಳೆ ಸದಾಶಿವರಾವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.