ADVERTISEMENT

‘ನನ್ನ ಮೇಲೂ ಹರ್ಭಜನ್ ಆಶೀರ್ವಾದದ ದೃಷ್ಟಾಂತಗಳು’

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 10:39 IST
Last Updated 9 ಏಪ್ರಿಲ್ 2019, 10:39 IST
   

ಬಾಬಾಹರ್ಭಜನ್ ಸಿಂಗ್ ಬಗ್ಗೆ ಪ್ರಚಲಿತವಿರುವ ಅನೇಕ ದೃಷ್ಟಾಂತಗಳಲ್ಲಿ ಇದೊಂದು. ಒಂದು ದಂಪತಿ ಯಾವುದೋ ಕಾರಣದಿಂದ ಜಗಳಾಡಿಕೊಳ್ಳುತ್ತಿರುತ್ತಾರೆ. ಹೆಂಡತಿಗೆ ಇನ್ನು ಈ ಗಂಡನೊಂದಿಗೆ ಸಂಸಾರ ಸಾಧ್ಯವೇ ಇಲ್ಲ ಎಂಬ ಭಾವ.

ಒಂದು ದಿನ ಅವರಿಬ್ಬರೂ ಯಾವುದೋ ಪ್ರಯಾಣಕ್ಕಾಗಿ ಜಗಳಾಡಿಕೊಳ್ಳುತ್ತಲೇ ಜಲಂಧರ್ ರೈಲ್ವೇ ನಿಲ್ದಾಣದಲ್ಲಿ ಕಪುರ್ತಲಾಕ್ಕೆ ಹೋಗುವ ರೈಲನ್ನೇರುತ್ತಾರೆ. ತಮ್ಮ ಬರ್ತ್‌ನಲ್ಲಿ ಕುಳಿತುಕೊಂಡಾಗ ಎದುರಿಗೆ ಒಬ್ಬ ಸರ್ದಾರ್‌ಜೀಯನ್ನು ನೋಡುತ್ತಾರೆ. ಇವರ ಮುಖವನ್ನು ನೋಡಿದ ಸರ್ದಾರ್‌ಜೀ ಏನಾಯ್ತು ಎಂದು ಪ್ರಶ್ನಿಸಿದಾಗ, ಹೆಂಡತಿ ತನ್ನ ಗಂಡನ ಬಗ್ಗೆ ಪುಂಖಾನುಪುಂಖವಾಗಿ ಆರೋಪಗಳನ್ನು ಮಾಡುತ್ತಾಳೆ.

ಸರ್ದಾರ್‌ಜೀ ಮುಗುಳ್ನಕ್ಕು, ‘ನಿನ್ನ ಗಂಡನ ಬಗ್ಗೆ ಯಾವುದಾದರೂ ಐದು ಒಳ್ಳೆಯು ಗುಣಗಳನ್ನು ಪಟ್ಟಿ ಮಾಡು’ ಎಂದು ಹೇಳುತ್ತಾನೆ. ಸರಿ ಎಂದು ಹೆಂಡತಿ ಪಟ್ಟಿ ಮಾಡಲು ಕುಳಿತುಕೊಂಡು, ಕಷ್ಟಪಟ್ಟು ಗಂಡನ ಬಗ್ಗೆ ತಾನು ಒಳ್ಳೆಯದೆಂದು ಭಾವಿಸಿದ ಐದು ಗುಣಗಳನ್ನು ಪಟ್ಟಿ ಮಾಡುತ್ತಾಳೆ. ಈಗ ಅವನ ಬಗ್ಗೆ ಇರುವ ಎರಡೇ ಎರಡು ಕೆಟ್ಟ ಗುಣಗಳನ್ನು ಪಟ್ಟಿ ಮಾಡುವಂತೆ ಅದೇ ಮಹಿಳೆಗೆ ಹೇಳುತ್ತಾನೆ. ಈಗಾಗಲೇ ಐದು ಒಳ್ಳೆಯ ಗುಣಗಳನ್ನು ಪಟ್ಟಿ ಮಾಡಿದ ಮಹಿಳೆಗೆ ಎಷ್ಟೇ ತಲೆ ಕೆರೆದುಕೊಂಡರೂ ಗಂಡನ ಬಗ್ಗೆ ಕೆಟ್ಟ ಗುಣ ಕಾಣಿಸುವುದೇ ಇಲ್ಲ!. ಆಕೆಯ ಮನ ಪರಿವರ್ತನೆ ಆಗುತ್ತದೆ.

ADVERTISEMENT

ಗಂಡನನ್ನು ಪ್ರೀತಿಸಲು ಅವನ ಬಳಿ ಇರುವ ಒಳ್ಳೆಯ ಗುಣಗಳೇ ಸಾಕು ಎಂಬ ನಿರ್ಧಾರಕ್ಕೆ ಬಂದ ಆಕೆ ಸರ್ದಾರ್‌ಜೀಗೆ ನಮಸ್ಕರಿಸಿ, ‘ತಾವು ಯಾರು’ ಎಂದು ಕೇಳುತ್ತಾಳೆ. ತನ್ನ ಹೆಸರು ಹರ್ಭಜನ್ ಸಿಂಗ್ ಎಂದೂ, ಜಲಂಧರ್‌ನಿಂದ ಕಪುರ್ತಲಾಕ್ಕೆ ಹೋಗುತ್ತಿದ್ದೇನೆ ಎಂದೂ ಆತ ಹೇಳುತ್ತಾನೆ. ಎಲ್ಲರೂ ಮಲಗುತ್ತಾರೆ. ಇಳಿಯುವ ಸ್ಥಳದಲ್ಲಿ ಆ ದಂಪತಿಯೂ ಇಳಿಯುವಾಗ, ಹರ್ಭಜನ್ ಕಾಣುವುದಿಲ್ಲ. ಬದಲಿಗೆ ಆತನ ಬರ್ತ್‌ನಲ್ಲಿ ಎರಡು ಪೆಟ್ಟಿಗೆಗಳು. ಅದನ್ನು ಗೌರವಪೂರ್ವಕವಾಗಿ ಇಬ್ಬರು ಸೇನಾ ಸಿಬ್ಬಂದಿ ಇಳಿಸುವುದನ್ನು ಕಂಡು ಅವರು, ‘ಹರ್ಭಜನ್ ಎಲ್ಲಿ’ ಎಂದು ಕೇಳಿದಾಗ, ಸೈನಿಕರು ಮುಖ ಮುಖ ನೋಡಿಕೊಂಡು, ‘ಹರ್ಭಜನ್ ಸತ್ತು ಅದಾವ ಕಾಲವೋ ಆಗಿ ಈಗ ವಾರ್ಷಿಕ ಪದ್ಧತಿಯಂತೆ ಕಪುರ್ತಲಾಕ್ಕೆ ಅವನ ಸಂಕೇತವಾಗಿ ಈ ಪೆಟ್ಟಿಗೆ, ಭಾವ ಚಿತ್ರ ತರುತ್ತಿದ್ದೇವೆ’ ಎಂದಾಗ ದಂಪತಿಗೆ ದಿಗಿಲು!

ಅಂದರೆ ಹರ್ಭಜನ್ ಈ ದಂಪತಿಯ ಸಮಸ್ಯೆಯನ್ನು ಬಗೆಹರಿಸಿದ ಎಂಬ ನಂಬಿಕೆ. ಇಂತಹ ಹಲವಾರು ನಿದರ್ಶನಗಳು ಬಾಬಾ ಹರ್ಭಜನ್ ಕುರಿತು ಪ್ರಚಲಿತದಲ್ಲಿವೆ.

ಹರ್ಭಜನ್ ಮೇಲೆ ನನ್ನೊಳಗೂ ಅದೇನೋ ಒಂದು ರೀತಿಯ ಭಕ್ತಿ, ಭಾವ. ಪ್ರಮೋಶನ್ ವೇಳೆಯಲ್ಲಿ, ನನ್ನ ಪದೋನ್ನತಿಯ ದ್ಯೋತಕವಾದ ಬೇರೆ ಬೇರೆ ರ‍್ಯಾಂಕ್‌ಗಳ ಪದಕ ಧರಿಸುವ ವೇಳೆ ನಾನೂ ಈ ಮಂದಿರದಲ್ಲಿ ಪೂಜೆ ಮಾಡಿಸುತ್ತಿದ್ದೆ. ನನ್ನ ನಿಯಂತ್ರಣದ ಸೇನಾ ವಿಭಾಗದ ಒಟ್ಟು 5 ಸಾವಿರ ಸೈನಿಕರ ಯೋಗಕ್ಷೇಮದ ಕಾಳಜಿ ನನಗಿತ್ತು. ಎಲ್ಲರ ಸುರಕ್ಷೆಯನ್ನು ಪ್ರಾರ್ಥಿಸಿಕೊಳ್ಳುತ್ತಾ, ನಾನೂ ಈ ಕಮಾಂಡ್ ಅವಧಿಯಲ್ಲಿ ಆಲ್ಕೋಹಾಲ್‌ನ್ನು ಸಂಪೂರ್ಣ ತ್ಯಜಿಸಿದೆ. ಅಲ್ಲಿನ ಸಂಪ್ರದಾಯದಂತೆ ವಾರಕ್ಕೆರಡು ದಿನ ಸಂಪೂರ್ಣ ಶುದ್ಧ ಸಸ್ಯಹಾರಿಯಾದೆ. ಇಂದು ನಾನು ಬಹಳ ಹೆಮ್ಮೆಯಿಂದ ಒಂದು ವಿಷಯವನ್ನು ಹೇಳಬಹುದು. ನನ್ನ ಮೂವತ್ತು ತಿಂಗಳ ಇಲ್ಲಿನ ಕಮಾಂಡರ್ ಅವಧಿಯಲ್ಲಿ ಒಬ್ಬ ಸೈನಿಕನೂ ಬಲಿದಾನವಾಗಲಿಲ್ಲ! ಯಾವುದೇ ರೀತಿಯ ಹಾನಿಯಾಗಲಿಲ್ಲ. ಒಂದೇ ಒಂದು ಗಡಿ ಉಲ್ಲಂಘನೆ ಅಥವಾ ಗುಂಡಿನ ಕಾಳಗ ನಡೆಯಲಿಲ್ಲ.

ಪ್ರತೀ ದಿನ ಬೆಳಿಗ್ಗೆ ನಾನು ಹರ್ಭಜನ್ ಮಂದಿರದಲ್ಲಿ ಸಿಗುತ್ತಿದ್ದ ಪವಿತ್ರ ತೀರ್ಥವನ್ನು ಸೇವಿಸುತ್ತಿದ್ದೆ. ನೀವು ನಂಬಲಿಕ್ಕಿಲ್ಲ, ವ್ಯತಿರಿಕ್ತ ಹವಾಮಾನ, ವಾತಾವರಣದಿಂದ ಸೈನಿಕರಿಗೆ ಸಹಜವಾಗಿದ್ದ ಶೀತ, ಜ್ವರ, ಹೊಟ್ಟೆನೋವು, ಕೆಮ್ಮು ಅಥವಾ ಯಾವುದೇ ದೈಹಿಕ ಅನಾರೋಗ್ಯ ನನಗೆ ಅಲ್ಲಿದ್ದ ಮೂವತ್ತೂ ತಿಂಗಳಲ್ಲಿ ಒಮ್ಮೆಯೂ ಕಾಡಿರಲಿಲ್ಲ. ಇಂದಿಗೂ ನಾನು ಮನೆಯಲ್ಲಿಯೇ ಇದ್ದರೂ ಬಾಬಾ ಹರ್ಭಜನ್‌ಗೆ ನನ್ನ ಪ್ರಾರ್ಥನೆ ಸಲ್ಲಿಸುತ್ತೇನೆ. ನನಗೀಗ 71ರ ಹರೆಯವಾದರೂ, ಆರೋಗ್ಯವಂತನಾಗಿರುವುದಕ್ಕೆ ಬಾಬಾರ ಆಶೀರ್ವಾದವೇ ಕಾರಣವೆಂದೇ ನಂಬಿದ್ದೇನೆ. ಆ ಮಂದಿರದಲ್ಲಿ ಸಂಗ್ರಹವಾಗುವ ಹಣದಲ್ಲಿ ಇಂದಿಗೂ ಬಾಬಾರ ಕುಟುಂಬಕ್ಕೆ ಒಂದು ಪಾಲು ಹೋದರೆ ಉಳಿದದ್ದನ್ನು ಸೈನಿಕರ ಕಲ್ಯಾಣ ನಿಧಿಗೆ ಬಳಕೆ ಮಾಡಲಾಗುತ್ತದೆ. ಇದು ಬಾಬಾ ಬಗ್ಗೆ ಸಂಕ್ಷಿಪ್ತ ಇತಿಹಾಸ.

ವಾಟರ್ ಶೆಡ್ ಪ್ರದೇಶವನ್ನು ಮತ್ತು ಸೈನಿಕರನ್ನು ಒಟ್ಟಾಗಿ ಬಾಬಾ ಹರ್ಭಜನ್ ಸಿಂಗ್ ಈಗಲೂ ಕಾಯುತ್ತಿರುತ್ತಾರೆ. ಸೈನಿಕರ ನಿಜಾರ್ಥದ ರಕ್ಷಕ ಈ ಬಾಬಾ ಎಂಬುದು ಎಲ್ಲರ ನಂಬಿಕೆಯೂ-ನಾನೂ ಅದಕ್ಕೆ ಹೊರತಾಗಿಲ್ಲ.

ಅಂತೂ ನನ್ನ ಇಲ್ಲಿನ ಮೂವತ್ತು ತಿಂಗಳ ಅವಧಿಯೂ ಮುಗಿಯಿತು. ಹೆಸರು, ಪ್ರಸಿದ್ಧಗಳೆರಡೂ ಇಲ್ಲಿ ನನ್ನ ಬಗ್ಗೆ ಸೈನ್ಯದಲ್ಲಿ ಇದ್ದಿದ್ದ ಗೌರವವನ್ನು ಹೆಚ್ಚಿಸಿದ್ದವು. ಇದಕ್ಕೂ ಮಿಗಿಲಾಗಿ ನನ್ನ ನಿಯಂತ್ರಣದಲ್ಲಿದ್ದ 11 ಬೇರೆ ಬೇರೆ ರೆಜಿಮೆಂಟ್‌ನ ಸೈನಿಕರ ಪ್ರೀತಿ, ವಿಶ್ವಾಸ ಗಳಿಸಿದ್ದೆ. ಇದು ನನ್ನ ಜೀವನದಲ್ಲಿ ಎಂದೂ ಮರೆಯಲಾರದ ದಾಖಲೆಗಳಲ್ಲೊಂದು.

ನನ್ನ ಇನ್ನೊಂದು ಹವ್ಯಾಸದ ಬಗ್ಗೆ ಇಲ್ಲಿ ಹೇಳಲೇ ಬೇಕು. ನಾನೊಬ್ಬ ಛಾಯಾಚಿತ್ರಗ್ರಾಹಕನೂ ಹೌದು. ಸುಮಾರು 1 ಸಾವಿರ ಅಡಿಗಳಿಗೂ ಹೆಚ್ಚಿನ ಎತ್ತರದ ಈ ಪರ್ವತ ಪ್ರದೇಶಗಳಲ್ಲಿ ಚಿತ್ರ ವಿಚಿತ್ರ ಮತ್ತು ಬಹು ಅಪರೂಪದ ಹೂವುಗಳು ಅರಳುತ್ತಿದ್ದವು. ನನ್ನ ಪ್ರತೀ ದಿನದ ಕಾರ್ಯಾಚರಣೆಯಲ್ಲೂ ಕ್ಯಾಮೆರಾ ನನ್ನ ಜೊತೆಗಿರುತ್ತಿತ್ತು. ಮೂರು ವಸಂತ ಕಾಲಗಳನ್ನು ನಾನಿಲ್ಲಿ ಕಳೆದಿದ್ದೆ. ಪ್ರತಿ ಸಲವೂ ಹೊಸ ಹೊಸ ಹೂವುಗಳನ್ನು ಕಂಡು ಮೂಕವಿಸ್ಮಿತನಾಗಿದ್ದೇನೆ. ಪೂರ್ವ ಸಿಕ್ಕಿಂನ ಸುಮಾರು 1 ಸಾವಿರ ಅಡಿ ಎತ್ತರದ ಗುಡ್ಡ ಪ್ರದೇಶಗಳಲ್ಲಿರುವ ಹೂವು, ಪ್ರಾಣಿಗಳದ್ದೇ ಎರಡು ಆಲ್ಬಂ ಅನ್ನು ಮಾಡಿದ್ದೇನೆ. ಅದೆಷ್ಟೋ ವೈದ್ಯಕೀಯ ಸಸ್ಯಗಳದ್ದೂ ಚಿತ್ರ ತೆಗೆದಿದ್ದೇನೆ. ಹನುಮಂತ ಸಂಜೀವಿನಿ ಪರ್ವತವನ್ನು ಇಲ್ಲಿಂದಲೇ ತೆಗೆದುಕೊಂಡ ಹೋದ ಎಂಬ ಬಗ್ಗೆ ಪ್ರತೀತಿಯೂ ಇದೆ. ನಿಜಕ್ಕೂ ಇದೊಂದು ವಿಸ್ಮಯದ ಪ್ರಪಂಚವೇ! ಈಗಲೂ ನನ್ನ ಬಳಿ ಇಲ್ಲಿ ತೆಗೆದ ಸಾವಿರಾರು ಚಿತ್ರಗಳ ಆಲ್ಬಂ ಇದೆ. ಇದೂ ಜೀವಮಾನದ ಗಳಿಕೆಗಳಲ್ಲೊಂದು. ಅಂದು ಅಲ್ಲಿನ ಪ್ರವಾಸೋದ್ಯಮ ಇಲಾಖೆ ಮತ್ತು ಅರಣ್ಯ ಇಲಾಖೆಗಳೂ ನಾನು ತೆಗೆದಿದ್ದ ಫೋಟೋಗಳನ್ನು ತಮ್ಮ ಬ್ರೋಶರ್‌ಗೆ ಉಪಯೋಗಿಸಿಕೊಂಡಿವೆ. ನಾವಲ್ಲಿರುವಾಗಲೇ ತೋಟಗಾರಿಕಾ ಇಲಾಖೆ ಹಳ್ಳಿಗಳಲ್ಲಿ ಗ್ರೀನ್ ಹೌಸ್ ಆರಂಭಿಸಿದೆವು. ಇಂದು ಇದು ಪ್ರವಾಸಿಗರ ಮಟ್ಟಿಗೆ ನಿಜಾರ್ಥದ ಶಾಂಗ್ರಿಲಾ ದಂತೇ ಯಶಸ್ವಿಯಾಗಿದೆ.

ಎಲ್ಲಾ ಒಳ್ಳೆಯದಕ್ಕೂ ಕೆಟ್ಟದಕ್ಕೂ ಒಂದು ಕೊನೆ ಇದ್ದೆ ಇರುತ್ತದೆ. ನಾನು ಅನುಭವಿಸಿದ ಅತ್ಯಂತ ಮಹತ್ವದ ಶಾಂತಿ, ಸಮಾಧಾನ ಮತ್ತು ಸಂತೃಪ್ತ ಸೈನ್ಯ ಜೀವನದ ಕಾಲ ಇದಾಗಿತ್ತು. ಬಾಬಾ ಹರ್ಭಜನ್‌ನ ಈ ಕ್ಷೇತ್ರಕ್ಕೆ ಅನಿವಾರ್ಯವಾಗಿ ವಿದಾಯ ಹೇಳುವ ದಿನವೂ ಬಂದಿತು. ಸಾಮಾನ್ಯವಾಗಿ ಸೈನ್ಯದ ನಿಯಮ ಮತ್ತು ವೈದ್ಯಕೀಯ ಕಾರಣಗಳಿಂದಾಗಿ ಇಂತಹ ಪರಿಸರದಲ್ಲಿ ಒಬ್ಬ ಸೈನಿಕನಿಗೆ 24 ತಿಂಗಳು ಮಾತ್ರ ಸೇವೆ ಸಲ್ಲಿಸುವ ಅವಕಾಶವಿರುತ್ತದೆ. ಆದರೆ, ನಾನು ಅದೃಷ್ಟವಂತ. ನನಗಿಲ್ಲಿ ಬ್ರಿಗೇಡ್ ಕಮಾಂಡ್ ಆಗಿ 30 ತಿಂಗಳು ಸೇವೆ ಸಲ್ಲಿಸುವ ಅಪೂರ್ವ ಅವಕಾಶ ಒದಗಿತು.

ಈ ಅವಧಿಯಲ್ಲಿ ನಾನೂ ಚೈನಾ ಸೇನೆಯೊಂದಿಗೆ ದಾಖಲೆಯ ಆರು ಸಭೆಗಳನ್ನು ನಡೆಸಿದೆ. ಅತ್ಯಂತ ಉತ್ತಮ ಸಂಬಂಧವನ್ನು ಬೆಳೆಸಿ, ಕಾಯ್ದುಕೊಳ್ಳುವಲ್ಲಿಯೂ ಯಶಸ್ವಿಯಾದೆ.

ಚೈನಾ ಮತ್ತು ನಮ್ಮ ಸೇನೆ, ಹಸ್ತಲಾಘವ (ಶೇಕ್ ಹ್ಯಾಂಡ್) ದೂರದಲ್ಲಿದ್ದರೂ, ಒಂದೇ ಒಂದು ಅನಪೇಕ್ಷಿತ ಘಟನೆಯೂ ನಡೆಯದೇ, ಈ ರೀತಿ ಶಾಂತವಾಗಿದ್ದುದೇ ದೊಡ್ಡ ಸಾಧನೆಯಾಗಿ ದಾಖಲಾಗಿದೆ. ಇದು ನನಗೂ ಹೆಮ್ಮೆ.

ಹೀಗೆ ಒಂದು ವಿಶೇಷ ಸಮಾಧಾನದ ಕರ್ತವ್ಯ ನಿರ್ವಹಣೆಯಲ್ಲಿರುವಾಗಲೇ ನನಗೆ ಮತ್ತೆ ವರ್ಗಾವಣೆಯ ಆದೇಶ ಬಂದಿತು. ನಾನು ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ವರ್ಗವಾಗಿದ್ದೆ. ಇದೂ ಭೂಲೋಕದ ಮತ್ತೊಂದು ಸ್ವರ್ಗ! ಪರಿಸರ ರಮಣೀಯ, ಸುಂದರ ಪ್ರದೇಶ ಸಿಕ್ಕಿಂನಿಂದ ಅನೇಕ ಅನುಭವ ಹಾಗೂ ನೆನಪುಗಳ ಮೂಟೆ ಹೊತ್ತು ನಾನು ಡೆಹ್ರಾಡೂನ್‌ಗೆ ನನ್ನ ಪತ್ನಿಯೊಂದಿಗೆ ಗಂಡು ಮೂಟೆ ಕಟ್ಟಿ ಹೊರಟೆ.

ಡೆಹ್ರಾಡೂನ್‌ನಲ್ಲಿರುವ ನಮ್ಮ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಅದರದ್ದೇ ಆದ ಪ್ರತಿಷ್ಠಿತ ಗೌರವ ಇದೆ. ಇಡೀ ವಿಶ್ವದಲ್ಲಿಯೇ ಇಷ್ಟು ದೊಡ್ಡ ಮಟ್ಟದ ಸೈನಿಕ ತರಬೇತಿ ಶಾಲೆ ಇರುವುದು ಕೇವಲ ಮೂರು ಕಡೆಗಳಲ್ಲಿ. ಅವುಗಳೆಂದರೆ ಅಮೆರಿಕದಲ್ಲಿರುವ ವೆಸ್ಟ್ ಪಾಯಿಂಟ್, ಬ್ರಿಟನ್‌ನ ಸ್ಯಾಂಡ್‌ಹರ್ಸ್ಟ್‌ನಲ್ಲಿರುವ ರಾಯಲ್ ಮಿಲಿಟರಿ ಅಕಾಡೆಮಿ ಮತ್ತು ನಮ್ಮ ಇಂಡಿಯನ್ ಮಿಲಿಟರಿ ಅಕಾಡೆಮಿ! ಇಂತಹ ಪ್ರತಿಷ್ಠಿತ ಸೈನಿಕ ತರಬೇತಿ ಕೇಂದ್ರಕ್ಕೆ ನಾನು 2001ರ ಜನವರಿಯಂದು ಕೆಲಸಕ್ಕೆ ರಿಪೋರ್ಟ್ ಮಾಡಿಕೊಂಡೆ.

ಭಾರತೀಯ ಸೈನ್ಯದಲ್ಲಿ 1932ರಲ್ಲಿ ಅತ್ಯುನ್ನತ ಅಧಿಕಾರಿಯಾಗಿದ್ದರು, ಫೀಲ್ಡ್ ಮಾರ್ಷಲ್ ಸರ್ ಫಿಲಿಪ್ ಚೆಟುವುಡ್. ಡೆಹ್ರಾಡೂನ್ ಸೈನಿಕ ತರಬೇತಿ ಕೇಂದ್ರದಲ್ಲಿ ಇವರ ಹೆಸರಲ್ಲಿ ಅವರ ಗೌರವಾರ್ಥ ಒಂದು ಬ್ಲಾಕ್ ಇದೆ. ಇದನ್ನು ಚೆಟುವುಡ್ ಬ್ಲಾಕ್ ಎಂದೇ ಕರೆಯಲಾಗುತ್ತದೆ. ಇಲ್ಲಿ ಅವರ ಒಂದು ಪ್ರಸಿದ್ದ ಮಾತನ್ನು ಬರೆದಿಡಲಾಗಿದೆ.

ಅದೆಂದರೆ: ‘The safety, welfare and honour of your country comes first, always and every time. Honour, welfare and comfort of men you command come next. Your own ease and safety come last and every time’.

(ನಿನ್ನ ದೇಶದ ರಕ್ಷಣೆ, ಗೌರವಕ್ಕೆ ಯಾವಾಗಲೂ ಮತ್ತು ಪ್ರತಿಕ್ಷಣವೂ ಮೊದಲ ಆದ್ಯತೆ. ನಿನ್ನ ಕೈ ಕೆಳಗಿರುವ ನಿನ್ನ ಸೈನಿಕರ ರಕ್ಷಣೆ, ಯೋಗಕ್ಷೇಮ ಮತ್ತು ಗೌರವಕ್ಕೆ ಎರಡನೆಯ ಆದ್ಯತೆ. ನಿನ್ನ ರಕ್ಷಣೆ ಮತ್ತು ಆದ್ಯತೆಗೆ ಯಾವಾಗಲೂ ಮೂರನೆಯ ಸ್ಥಾನ)ಇದು ಭಾರತೀಯ ಸೈನ್ಯದ ಪ್ರತಿ ಸೈನಿಕನೂ ಬಲವಾಗಿ ನಂಬಿರುವ ಮತ್ತು ನಡೆದುಕೊಳ್ಳುವ ಮೂಲ ಸಿದ್ಧಾಂತ. ತಾವೂ ಗಮನಿಸಬಹುದು. ನಮ್ಮ ಸೈನ್ಯದಲ್ಲಿ ಅತ್ಯಂತ ಕಷ್ಟ ಮತ್ತು ಸಂದಿಗ್ಧ ಸಂದರ್ಭಗಳಲ್ಲಿ ಸೈನ್ಯದ ಮೇಜರ್‌ಗಳು ಹುತಾತ್ಮರಾಗುತ್ತಾರೆ.

ಮೂವತ್ತು, ನಲವತ್ತು ಸೈನಿಕರನ್ನು ಕೊಂಡೊಯ್ಯುವ ಮೇಜರ್ ಅಥವಾ ನಾಯಕ, ತಾನು ಮುಂಚೂಣಿಯಲ್ಲಿದ್ದು, ತನ್ನ ಸೈನಿಕರ ರಕ್ಷಣೆಗೆ ಬಾದ್ಯಸ್ಥನಾಗಿರುತ್ತಾನೆ. ಹಾಗಾಗಿಯೇ ಮೇಜರ್‌ಗಳೇ ಹೆಚ್ಚು ಹುತಾತ್ಮರಾಗುತ್ತಾರೆ. ಮತ್ತು ಇದು ನಮ್ಮ ಸೈನ್ಯದ ನಿಜವಾದ ಹೆಮ್ಮೆ.

ಇನ್ನು ಡೆಹ್ರಾಡೂನ್ ಅಕಾಡೆಮಿಯ ಬಗ್ಗೆಯೂ ವಿಶೇಷ ದಾಖಲೆಗಳಿವೆ. ಇಲ್ಲಿನ ಮೊದಲ ಬ್ಯಾಚ್‌ನಲ್ಲಿ ತಮ್ಮ ತರಬೇತಿ ಮುಗಿಸಿ ಹೋದ ಮೂವರ ಬಗ್ಗೆ ಈಗಲೂ ಅಕಾಡೆಮಿಗೆ ವಿಶೇಷ ಹೆಮ್ಮೆ ಇದೆ.

ಇವರಲ್ಲಿ ಮಾಣಿಕ್ ಶಾ ಮುಂದೆ ಭಾರತೀಯ ಸೈನ್ಯದ ಮುಖ್ಯಸ್ಥರಾದರು. ಮೊಹಮದ್ ಮೂಸಾ ಪಾಕಿಸ್ಥಾನದ ಸೈನ್ಯದ ಮುಖ್ಯಸ್ಥರಾದರೆ; ಸ್ಟೀವ್ ಡುನ್ ಬರ್ಮಾ ಸೈನ್ಯದ ಮುಖ್ಯಸ್ಥರಾದವರು.

ಇಂತಹ ಹೆಮ್ಮೆ ಮತ್ತು ವಿಶೇಷ ದಾಖಲೆಯ ಡೆಹ್ರಾಡೂನ್‌ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ನಾನು ಹೆಮ್ಮೆಯಿಂದ ನನ್ನ ನಿವೃತ್ತಿಯ ಸಮೀಪದಲ್ಲಿ ಸೇವೆ ಮಾಡುವ ಅಪರೂಪದ ಅವಕಾಶ ಪಡೆದು ಅಧಿಕಾರ ವಹಿಸಿಕೊಂಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.