ADVERTISEMENT

ಹೀಗಾಗುತ್ತೆ ಷೇರುಪೇಟೆ ವಹಿವಾಟು..!

ಶರತ್ ಎಂ.ಎಸ್.
Published 14 ಜೂನ್ 2021, 22:56 IST
Last Updated 14 ಜೂನ್ 2021, 22:56 IST
ಶರತ್ ಎಂ.ಎಸ್.
ಶರತ್ ಎಂ.ಎಸ್.   

ಕಂಪನಿಗಳು ಷೇರುಪೇಟೆ ಪ್ರವೇಶಿಸುವುದು ಏಕೆ, ಕಂಪನಿಗಳು ಹೇಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ, ಜನರು ಷೇರುಗಳ ವಹಿವಾಟಿನಲ್ಲಿ ತೊಡಗುವುದೇಕೆ, ಯಾವೆಲ್ಲಾ ಕಾರಣಗಳಿಗೆ ಷೇರು ಮಾರುಕಟ್ಟೆ ಏರಿಳಿತ ಕಾಣುತ್ತದೆ? ಹೀಗೆ ಹಲವು ಪ್ರಶ್ನೆಗಳು ನಿಮ್ಮಲ್ಲಿ ಇವೆ ಅಲ್ಲವೇ? ಎಲ್ಲವಕ್ಕೂ ಸರಳವಾಗಿ ಉತ್ತರ ಕಂಡುಕೊಳ್ಳೋಣ ಬನ್ನಿ.

ಹೆಚ್ಚು ಬಂಡವಾಳ ಸಂಗ್ರಹಿಸಲು, ಉದ್ಯಮ ವಿಸ್ತರಿಸಲು, ದೈನಂದಿನ ನಿರ್ವಹಣಾ ವೆಚ್ಚ ನಿಭಾಯಿಸಲು, ಸಾಲ ಮರುಪಾವತಿ ಮಾಡಲು... ಹೀಗೆ ಹಲವು ಪ್ರಮುಖ ಕಾರಣಗಳಿಗೆ ಷೇರು ಮಾರುಕಟ್ಟೆ ಪ್ರವೇಶಿಸುತ್ತವೆ. ಎಲ್ಲಾ ಕಂಪನಿಗಳು ಷೇರು ಮಾರುಕಟ್ಟೆಗೆ ಪ್ರವೇಶ ಪಡೆಯಲು ಸಾಧ್ಯವಿಲ್ಲ. ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಮಾನದಂಡಗಳಿಗೆ ಅನುಗುಣವಾಗಿ ಖಾಸಗಿ ಕಂಪನಿಗಳು ಷೇರು ಮಾರುಕಟ್ಟೆಗೆ ಲಗ್ಗೆ ಹಾಕಬಹುದು.

ಐಪಿಒ ಮೂಲಕ ಪ್ರವೇಶ, ನಂತರ ಸ್ಥಾನ: ಖಾಸಗಿ ಕಂಪನಿಗಳು ‘ಐಪಿಒ’ (ಆರಂಭಿಕ ಸಾರ್ವಜನಿಕ ಹೂಡಿಕೆ) ಪ್ರಕ್ರಿಯೆ ಮೂಲಕ ತಮ್ಮ ಷೇರುಗಳನ್ನು ಸಾರ್ವಜನಿಕರಿಗೆ ನೀಡಿ ಬಂಡವಾಳ ಸಂಗ್ರಹಿಸಲು ಮುಂದಾಗುತ್ತವೆ. ಸರಳವಾಗಿ ಹೇಳುವುದಾದರೆ, ಕಂಪನಿಯೊಂದು ತನ್ನ ಒಂದಷ್ಟು ಷೇರನ್ನು ನಮ್ಮನಿಮ್ಮಂತಹ ಹೂಡಿಕೆದಾರರಿಗೆ ನೀಡುವ ಪ್ರಕ್ರಿಯೆಯೇ ಆರಂಭಿಕ ಸಾರ್ವಜನಿಕ ಹೂಡಿಕೆ. ‘ಐಪಿಒ’ ಪ್ರಕ್ರಿಯೆ ಬಳಿಕ ಆ ನಿರ್ದಿಷ್ಟ ಕಂಪನಿಯ ಷೇರು, ಷೇರುಮಾರುಕಟ್ಟೆಯಲ್ಲಿ ಸ್ಥಾನ (ಲಿಸ್ಟಿಂಗ್) ಪಡೆದುಕೊಳ್ಳುತ್ತದೆ. ಕಂಪನಿಯ ಷೇರು ಲಿಸ್ಟ್ ಆದ ಬಳಿಕ ಹೂಡಿಕೆದಾರರು ಷೇರುಗಳ ಖರೀದಿ ಮತ್ತು ಮಾರಾಟ ಮಾಡಬಹುದು.

ADVERTISEMENT

ಷೇರುಗಳ ಖರೀದಿ, ಮಾರಾಟ ಏಕೆ?: ಲಾಭ ಗಳಿಕೆಯ ಉದ್ದೇಶದಿಂದ ಷೇರು ಮಾರುಕಟ್ಟೆಯಲ್ಲಿ ಷೇರುಗಳ ಖರೀದಿ ಮತ್ತು ಮಾರಾಟ ಪ್ರಕ್ರಿಯೆ ನಡೆಯುತ್ತದೆ. ಉದಾಹರಣೆ: ಉತ್ತಮ ಕಂಪನಿಯೊಂದರಲ್ಲಿ ನಾಯಕತ್ವದ ಸಮಸ್ಯೆಯಾದ ಕಾರಣ ಆ ಕಂಪನಿಯ ಷೇರು ಮೌಲ್ಯ ₹ 1000ದಿಂದ ₹ 700ಕ್ಕೆ ಇಳಿಯುತ್ತದೆ ಎಂದುಕೊಳ್ಳೋಣ. ಆಗ, ವಿನೀತ್ (ಕಾಲ್ಪನಿಕ ವ್ಯಕ್ತಿ) ಷೇರಿನ ಮೌಲ್ಯ ಮತ್ತಷ್ಟು ತಗ್ಗಬಹುದು ಎಂದು ಭಾವಿಸಿ ₹ 1000 ಕೊಟ್ಟು ಖರೀದಿಸಿದ್ದ ಷೇರುಗಳನ್ನು ₹ 700ಕ್ಕೆ ಮಾರಾಟ ಮಾಡುತ್ತಾರೆ.

ಷೇರಿನ ಬೆಲೆ ಕುಸಿದಿದ್ದರೂ ಕಂಪನಿಯ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುವುದನ್ನು ಗುರುತಿಸಿದ ರೇಷ್ಮಾ (ಕಾಲ್ಪನಿಕ ವ್ಯಕ್ತಿ), ಅದೇ ಷೇರುಗಳನ್ನು ಖರೀದಿಸುತ್ತಾರೆ. ಇಲ್ಲಿ ರವಿ ಷೇರಿನ ಮಾರಾಟಗಾರ, ರೇಷ್ಮಾ ಖರೀದಿದಾರ ಆಗುತ್ತಾರೆ.

ಬೆಲೆ ಏರಿಳಿತಕ್ಕೆ ಕಾರಣ: ಮಾರುಕಟ್ಟೆಯಲ್ಲಿ ಪೂರೈಕೆಗಿಂತ ಷೇರುಗಳಿಗೆ ಬೇಡಿಕೆ ಹೆಚ್ಚಾದಾಗ ಷೇರಿನ ಬೆಲೆ ಸಹಜವಾಗಿಯೇ ಹೆಚ್ಚಾಗುತ್ತದೆ. ಒಂದು ಕಂಪನಿಯ ಪ್ರಗತಿಯ ಬಗ್ಗೆ ಹೂಡಿಕೆದಾರರಲ್ಲಿ ಭಿನ್ನ ಆಲೋಚನೆಗಳಿದ್ದರೆ ಷೇರು ಏರಿಳಿತ ಕಾಣುತ್ತೆ. ಕಂಪನಿ ಲಾಭ ಗಳಿಸಿದರೆ, ಹೊಸ ಟೆಂಡರ್‌ಗಳನ್ನು ಪಡೆದರೆ, ಬಿಸಿನೆಸ್ ವಿಸ್ತರಣೆ ಮಾಡಿದರೆ ಷೇರಿನ ಬೆಲೆ ಹಿಗ್ಗುತ್ತದೆ. ಚುನಾವಣೆ ಹತ್ತಿರವಿದ್ದಾಗ ಷೇರುಗಳ ಬೆಲೆಯಲ್ಲಿ ಏರಿಳಿತವಿರುತ್ತದೆ. ಸ್ಥಿರವಾದ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಷೇರುಪೇಟೆ ಸೂಚ್ಯಂಕಗಳು ಏರಿಕೆಯಾಗುತ್ತೆ.

ಇಷ್ಟೇ ಅಲ್ಲ, ನೈಸರ್ಗಿಕ ವಿಕೋಪಗಳು, ಆರ್ಥಿಕ ಹಿಂಜರಿತ, ಸರ್ಕಾರದ ಹಣಕಾಸು ನೀತಿ, ಜಾಗತಿಕ ವಿದ್ಯಮಾನಗಳು ಕೂಡ ತೀವ್ರ ಏರಿಳಿತಕ್ಕೆ ದಾರಿ ಮಾಡುತ್ತವೆ. ಈ ಎಲ್ಲಾ ಲೆಕ್ಕಾಚಾರಗಳನ್ನೂ ಮೀರಿ ಎಣಿಕೆಗೆ ಸಿಗದ ರೀತಿಯಲ್ಲಿ ಷೇರುಪೇಟೆ ಏರಿಳಿತ ಕಂಡಿರುವ ಉದಾಹರಣೆಗಳು ಇತಿಹಾಸದಲ್ಲಿವೆ.⇒.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.