ADVERTISEMENT

ನರಮಾಂಸ ಭಕ್ಷಣೆಗಿಂತ ಹೇಯವಾದದ್ದು

ಡಾ. ಗುರುರಾಜ ಕರಜಗಿ
Published 10 ಡಿಸೆಂಬರ್ 2020, 8:38 IST
Last Updated 10 ಡಿಸೆಂಬರ್ 2020, 8:38 IST
   

ವಾರಾಣಸಿಯ ರಾಜ ಮಾಂಸವಿಲ್ಲದೆ ಎಂದೂ ಊಟ ಮಾಡುತ್ತಿರಲಿಲ್ಲ. ಉಪೋಸಥ ದಿನ ಸಹಿತ ಮಾಂಸದ ಊಟವನ್ನು ಕೊಡಲೇಬೇಕಿತ್ತು. ಒಂದು ದಿನ ಮಾಂಸವನ್ನು ಬೇಯಿಸಿಟ್ಟ ಅಡುಗೆಯವ ಮರೆತು ಹೊರಗೆ ಹೋದ. ಆಗ ರಾಜನ ಮೆಚ್ಚಿನ ನಾಯಿ ಬಂದು ಮಾಂಸವನ್ನು ಕಚ್ಚಿಕೊಂಡು ಹೋಯಿತು. ಮಾಂಸವಿಲ್ಲದೆ ರಾಜನಿಗೆ ಹೇಗೆ ಬಡಿಸುವುದು ಎಂದು ತಿಳಿಯದೆ ಅಡುಗೆಯುವ ಹಣ ಹಿಡಿದುಕೊಂಡು ಅಂಗಡಿ-ಅಂಗಡಿ ಸುತ್ತಿದ. ಎಲ್ಲಿಯೂ ಗುಲಗಂಜಿ ತೂಕದ ಮಾಂಸ ದೊರೆಯಲಿಲ್ಲ. ನಾನು ಮಾಂಸ ತೆಗೆದುಕೊಂಡು ಹೋಗಿ ಊಟ ಸಿದ್ಧ ಮಾಡದಿದ್ದರೆ ನನ್ನ ಪ್ರಾಣ ಉಳಿಯುವುದಿಲ್ಲವೆಂದು ಚಿಂತಿಸಿ ಸ್ಮಶಾನಕ್ಕೆ ಬಂದ. ಅಲ್ಲಿ ತಂದಿದ್ದ ಸತ್ತ ಪುರುಷನ ತೊಡೆಯ ಮಾಂಸವನ್ನು ಕತ್ತರಿಸಿಕೊಂಡು ತಂದು, ಬೇಯಿಸಿ ರಾಜನಿಗೆ ಬಡಿಸಿದ. ಅದನ್ನು ನಾಲಗೆಗೆ ಇಟ್ಟೊಡನೆ ರಾಜನ ದೇಹ ಚೈತನ್ಯಮಯವಾಯಿತು. ಯಾಕೆಂದರೆ ಹಿಂದಿನ ಜನ್ಮದಲ್ಲಿ ಆತ ಯಕ್ಷನಾಗಿ ನರಮಾಂಸ ಭಕ್ಷಿಸಿದ್ದ. ಅದರ ಸ್ಮರಣೆ ಅವನಿಗಾಯಿತು. ಅಡುಗೆಯವನನ್ನು ಈ ಮಾಂಸವನ್ನು ಎಲ್ಲಿಂದ ತಂದೆ ಎಂದು ಪ್ರಶ್ನಿಸಿದ. ಆತ ರಾಜನ ಒತ್ತಡ ತಡೆಯಲಾರದೆ ಸತ್ಯ ಹೇಳಿಬಿಟ್ಟ. ವಿಷಯ ತಿಳಿದು ತನ್ನನ್ನು ರಾಜ ಕೊಂದೇಬಿಡುತ್ತಾನೆ ಎಂದು ಅಡುಗೆಯವ ತಿಳಿದಿದ್ದ. ಆದರೆ ರಾಜ ಅವನಿಗೆ ಸಾಕಷ್ಟು ಹಣ ಕೊಟ್ಟು, ಇನ್ನು ಮೇಲೆ ನಿತ್ಯವೂ ತನಗೆ ನರಮಾಂಸವನ್ನೇ ತಂದು ಆಹಾರ ತಯಾರು ಮಾಡಬೇಕು ಎಂದು ಆಜ್ಞೆ ನೀಡಿದ. ಅಡುಗೆಯವ ಗಾಬರಿಯಾದ. ‘ಸ್ವಾಮಿ, ಇದು ಕಷ್ಟದ ಕೆಲಸ. ನನಗೆ ನಿತ್ಯವೂ ಶವಗಳು ದೊರಕುವುದು ಹೇಗೆ?’ ಎಂದು ಕೇಳಿದ. ‘ಮೂರ್ಖ, ನಿನಗೆ ಶವಗಳೇಕೆ ಬೇಕು? ನಮ್ಮ ಕಾರಾಗೃಹದಲ್ಲಿ ಬಹಳ ಜನರಿದ್ದಾರಲ್ಲ. ದಿನಕ್ಕೊಬ್ಬರನ್ನು ಕೊಂದು ಮಾಂಸ ಪಡೆ’ ಎಂದ ರಾಜ.

ಕೆಲದಿನಗಳ ನಂತರ ಕಾರಾಗೃಹದಲ್ಲಿ ಕೈದಿಗಳೇ ಇಲ್ಲದಂತಾಯಿತು. ರಾಜ ಹೇಳಿದ, ‘ರಸ್ತೆಯಲ್ಲಿ ಸಾವಿರ ನಾಣ್ಯಗಳ ಚೀಲವನ್ನು ಎಸೆ. ಅದನ್ನು ಆಸೆಯಿಂದ ಎತ್ತಿಕೊಂಡವನನ್ನು ಕರೆದುಕೊಂಡು ಬಂದು ಕೊಲ್ಲು’. ಮುಂದೆ ನಾಣ್ಯದ ಚೀಲವನ್ನು ತೆಗೆದುಕೊಳ್ಳುವವರು ಯಾರೂ ದೊರೆಯಲಿಲ್ಲ. ನಂತರ ಅಡುಗೆಯವ ನಗರದ ಸಂದಿಗಳಲ್ಲಿ ನಿಂತು ಯಾರಾದರೂ ಏಕಾಂಗಿಯಾಗಿ ಕಂಡರೆ ಅವರನ್ನು ಕೊಲ್ಲುತ್ತಿದ್ದ. ನಗರದಲ್ಲಿ ಹಾಹಾಕಾರವೆದ್ದಿತು. ನಮ್ಮ ಸ್ನೇಹಿತರು, ಸಂಬಂಧಿಕರು ಮಾಯವಾಗುತ್ತಿದ್ದಾರೆ. ಇದು ಯಾರೋ ನರಭಕ್ಷಕರ ಅಥವಾ ಪ್ರಾಣಿಯ ಕೆಲಸ. ಅದನ್ನು ಹಿಡಿಯಬೇಕೆಂದು ನಾಗರಿಕರು ಹೊಂಚು ಹಾಕಿದರು. ಸೇನಾಪತಿ ಕಾಲಹತ್ಥಿ ಸೈನಿಕರನ್ನು ನೇಮಿಸಿದ. ಒಂದು ದಿನ ಅಡುಗೆಯವ ಸಂದಿಯಲ್ಲಿ ನಿಂತಿದ್ದು ಅಲ್ಲಿಗೆ ಬಂದ ಹೆಂಗಸೊಬ್ಬಳನ್ನು ಕೊಂದು ಅವಳ ಎದೆಯ ಭಾಗದ ದಪ್ಪ ದಪ್ಪ ಮಾಂಸವನ್ನು ಬುಟ್ಟಿಗೆ ತುಂಬಿಕೊಳ್ಳುತ್ತಿದ್ದಾಗ ಸೈನಿಕರ ಕೈಯಲ್ಲಿ ಸಿಕ್ಕಿಬಿದ್ದ. ಇವನು ಯಾರಿಗೋಸ್ಕರ ಇದನ್ನು ಒಯ್ಯುತ್ತಾನೆ ಎಂದು ತನಿಖೆ ಮಾಡಿದಾಗ ಇದಕ್ಕೆಲ್ಲ ರಾಜನೇ ಕಾರಣ ಎಂದು ತಿಳಿಯಿತು. ಸೇನಾಪತಿ ರಾಜನಿಗೆ ತಿಳಿ ಹೇಳಿದ. ರಾಜ, ‘ನಾನು ರಾಜ್ಯ ಬಿಟ್ಟೇನು ಆದರೆ ನರಮಾಂಸ ಭಕ್ಷಣೆಯನ್ನು ಬಿಡಲಾರೆ’ ಎಂದ. ಹಾಗಾದರೆ ನೀನು ರಾಜ್ಯ ಬಿಟ್ಟು ಹೊರಡು ಎಂದು ಎಲ್ಲರೂ ಆಗ್ರಹ ಮಾಡಿದಾಗ, ಅಡುಗೆಯವನನ್ನು ತನ್ನೊಡನೆ ಕರೆದುಕೊಂಡು ರಾಜ ಕಾಡಿಗೆ ಹೋದ. ಅಲ್ಲಿಯೂ ಪ್ರವಾಸಿಗರನ್ನು ಕೊಂದು ತನ್ನ ಆಸೆಯನ್ನು ತೀರಿಸಿಕೊಳ್ಳುತ್ತಿದ್ದ. ಬೋಧಿಸತ್ವ ಅಲ್ಲಿಗೇ ಬಂದು, ‘ಏನು ನಿನ್ನ ಕರ್ಮ? ನಿನ್ನದು ಎಂಥ ವಂಶ, ನಿನ್ನ ಕಲಿಕೆ ದೊಡ್ಡದು. ನೀನು ಮಾಡುತ್ತಿರುವುದನ್ನು ಯಾವ ದುಷ್ಟ ಪ್ರಾಣಿಯೂ ಮಾಡಲಾರದು. ಜನರನ್ನು ಕಾಪಾಡಬೇಕಾದ ನೀನೇ ಅವರನ್ನು ಕೊಂದು ತಿನ್ನುತ್ತೀಯಲ್ಲ, ನಿನಗೆ ಎಂಥ ನರಕ ಕಾದಿದೆ ಗೊತ್ತೇ?’ ಎಂದು ನಿಧಾನವಾಗಿ ಅವನ ಮನಃಪರಿವರ್ತನೆ ಮಾಡಿದ. ರಾಜ ಮರಳಿ ರಾಜ್ಯಕ್ಕೆ ಹೋಗದೆ ಪ್ರವ್ರಜಿತನಾಗಿ ಹಿಮಾಲಯಕ್ಕೆ ಹೋಗಿ ಅಲ್ಲಿಯೇ ದೇಹ ತ್ಯಾಗ ಮಾಡಿದ.

ಭ್ರಷ್ಟಾಚಾರವೂ ನರಮಾಂಸ ಭಕ್ಷಣೆಯಷ್ಟೇ ಕನಿಷ್ಠವಾದದ್ದು. ಕೊಂದು ಮಾಂಸ ತಿನ್ನುವುದಕ್ಕಿಂತ ಜೀವಂತವಿರುವವರನ್ನೇ ನೋಯಿಸಿ, ಶೋಷಿಸುವುದು ಅದಕ್ಕಿಂತ ಹೇಯವಾದದ್ದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.