ADVERTISEMENT

ಹೆಣ್ಣೆಂದರೇನು ಆಸ್ತಿಯೇ, ಒತ್ತೆಯಾಳೇ?

ಪುರುಷಾಧಿಪತ್ಯಕ್ಕೆ ಕುಖ್ಯಾತವಾದ ಹರಿಯಾಣದಲ್ಲಿ ಲಿಂಗಾನುಪಾತ ಆತಂಕಕಾರಿ

ರೇಣುಕಾ ನಿಡಗುಂದಿ
Published 26 ಆಗಸ್ಟ್ 2019, 20:30 IST
Last Updated 26 ಆಗಸ್ಟ್ 2019, 20:30 IST
   

ಹರಿಯಾಣದ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್, ಹೆಣ್ಣುಮಕ್ಕಳನ್ನು ಅತ್ಯಂತ ತುಚ್ಛವಾಗಿ ಕಾಣುವವರನ್ನೂ ನಾಚಿಸುವಂತೆ ‘ಇನ್ನು ಮುಂದೆ ಕಾಶ್ಮೀರಿ ಯುವತಿಯರನ್ನು ಕರೆತಂದು ವಿವಾಹವಾಗಬಹುದು’ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆದರು. ಉತ್ತರಪ್ರದೇಶದ ಬಿಜೆಪಿ ಶಾಸಕ ವಿಕ್ರಮ್ ಸೈನಿ ‘ಈಗ ನೀವು ಕಾಶ್ಮೀರದ ಬೆಳ್ಳಗಿನ ಯುವತಿಯರನ್ನು ಮದುವೆಯಾಗಬಹುದು’ ಎಂದು ಹೇಳಿ ಬಿಳಿ ತೊಗಲಿನ ಬಗ್ಗೆ ತಮಗಿರುವ ಮೋಹವನ್ನು ಜಾಹೀರುಪಡಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅನ್ವಯ ನೀಡಿದ್ದ ವಿಶೇಷ ಸ್ಥಾನಮಾನ ರದ್ದಾದಾಗಿನಿಂದ ಸಂಪರ್ಕ ವ್ಯವಸ್ಥೆ ಇಲ್ಲದೆ ಯಾತನೆ ಅನುಭವಿಸುತ್ತಿರುವ ಕಾಶ್ಮೀರಿಗರ ಬಗ್ಗೆ ಗಂಭೀರ ಚರ್ಚೆ, ಚಿಂತನೆಗಳು ನಡೆಯಬೇಕಾಗಿರುವ ಸಂದರ್ಭ ಇದು. ಅಂತಲ್ಲಿ, ಕಾಶ್ಮೀರಿ ತರುಣಿಯರ ಕುರಿತು ಕೀಳುಮಟ್ಟದ ಟೀಕೆ, ಹಾಸ್ಯ ಮಾಡುತ್ತಾ ಸಂಭ್ರಮಿಸುವವರಿಗೆ, ಕಾಶ್ಮೀರಿಗರ ಒಳಗುದಿ ಅರ್ಥವಾಗುವುದೇ? ಹೆಣ್ಣೆಂದರೆ ಬರೀ ಆಟದ ಗೊಂಬೆಯೇ?

ಹರಿಯಾಣದಲ್ಲಿ ಜಾಟ್ ಸಮುದಾಯದ ‘ಖಾಪ್’ ಪಂಚಾಯಿತಿಯ ಕೆಲವು ಪುರುಷರು ಹೆಣ್ಣು ಭ್ರೂಣಹತ್ಯೆ, ಮರ್ಯಾದೆಗೇಡು ಹತ್ಯೆಯ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಕೊನೆಗಾಣಿಸುತ್ತಿದ್ದರೂ ತಟಸ್ಥವಾಗಿರುವ ಖಟ್ಟರ್‌ ಅವರ ಹೇಳಿಕೆ ಅಚ್ಚರಿಯನ್ನೇನೂ ಹುಟ್ಟಿಸುವುದಿಲ್ಲ. ಅತ್ಯಾಚಾರದ ಆರೋಪದ ಅಡಿ ಬಾಬಾ ರಾಮ್ ರಹೀಂ ಶಿಕ್ಷೆಗೊಳಗಾದಾಗ, ಡೇರಾ ಸಚ್ಚಾ ಸೌದಾದ ಅನುಯಾಯಿಗಳು ಪಂಚಕುಲಾದಲ್ಲಿ ಗಲಭೆ ನಡೆಸಲು ಖಟ್ಟರ್‌ ಮೌನವಾಗಿಯೇ ಅವಕಾಶ ಮಾಡಿಕೊಟ್ಟಿದ್ದರು ಎಂಬ ಆರೋಪ ಇದೆ. ಸಿಬಿಐ ಕೋರ್ಟ್‌ ಬಾಬಾನನ್ನು ತಪ್ಪಿತಸ್ಥನೆಂದು ಪರಿಗಣಿಸಿದಾಗ, ಗೂಂಡಾಗಳು ನಡೆಸಿದ ಹಲ್ಲೆಯಲ್ಲಿ ಡಜನ್‌ಗಟ್ಟಲೆ ಪುರುಷರು ಮತ್ತು ಮಹಿಳೆಯರು ಪ್ರಾಣ ಕಳೆದುಕೊಂಡರು. ಆಗಲೂ ಖಟ್ಟರ್ ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಕಾರಣ, ಡೇರಾ ಸಚ್ಚಾ ಸೌದಾವು ಹರಿಯಾಣದ ದೊಡ್ಡ ಮತಬ್ಯಾಂಕ್! ಇನ್ನು ಖಟ್ಟರ್ ಅವರ ಮಾತಿನ ಎಳೆಯನ್ನು ಹರಿಯಾಣದ ವಧುಗಳ ಕಳ್ಳಸಾಗಾಣಿಕೆಯ ಹಿನ್ನೆಲೆಯಿಂದ ನೋಡಿದಾಗ, ಕಣ್ಣೀರಿನ ಕಥೆಗಳೇ ತೆರೆದುಕೊಳ್ಳುತ್ತವೆ. ಪುರುಷಾಧಿಪತ್ಯ ಹಾಗೂ ವಧುಗಳ ಖರೀದಿಗೆ ಕುಖ್ಯಾತವಾಗಿರುವ ಹರಿಯಾಣದಲ್ಲಿ ಲಿಂಗಾನುಪಾತ ಅತ್ಯಂತ ಆತಂಕಕಾರಿಯಾಗಿದೆ.

ADVERTISEMENT

2011ರ ಜನಗಣತಿಯ ಪ್ರಕಾರ, ಭಾರತದ ಲಿಂಗಾನುಪಾತವು ಪ್ರತಿ 1,000 ಪುರುಷರಿಗೆ 940 ಸ್ತ್ರೀಯರನ್ನು ಹೊಂದಿದೆ. ಹರಿಯಾಣದಲ್ಲಿ 1,000 ಪುರುಷರಿಗೆ 877 ಮಹಿಳೆಯರಿದ್ದಾರೆ. ಮುಸ್ಲಿಂ ಪ್ರಾಬಲ್ಯವಿರುವ ಮೇವಾತ್‌ನಲ್ಲಿ ‘ಖರೀದಿಸಿದ ವಧು’ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಂಥವರನ್ನು ‘ಪಾರೋ’ ಅಥವಾ ‘ಮೋಲ್ಕಿ’ ಎನ್ನಲಾಗುತ್ತದೆ. ಅಂದರೆ, ದುಡ್ಡು ಕೊಟ್ಟು ಖರೀದಿಸಿ ತಂದವಳು ಎಂದರ್ಥ. ರಾಜ್ಯದಲ್ಲಿ ಈ ಸಮಸ್ಯೆ ಹೆಚ್ಚಾಗಿರುವ 56 ಗ್ರಾಮಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಶೇ 7ರಷ್ಟು ಮಹಿಳೆಯರನ್ನು ಇತರ ರಾಜ್ಯಗಳಿಂದ ಖರೀದಿಸಿ ತರಲಾಗಿದೆ.

ಪಂಜಾಬ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕಿ ಹಾಗೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿರುವ ಪ್ರೊ. ರಾಜೇಶ್ ಗಿಲ್ ಹೇಳುವಂತೆ, ಈ ಪಾರೋಗಳು ಕೌಟುಂಬಿಕ ದೌರ್ಜನ್ಯದ ಬಲಿಪಶುಗಳು. ಕೃಷಿ ಕೆಲಸ, ಪಶುಸಂಗೋಪನೆ, ಮನೆಗೆಲಸದ ನಿರ್ವಹಣೆಗೆ ಮಾತ್ರವಲ್ಲದೆ ಲೈಂಗಿಕ ಗುಲಾಮರನ್ನಾಗಿಯೂ ಇವರನ್ನು ಬಳಸಿಕೊಳ್ಳಲಾಗುತ್ತದೆ. ಹೀಗೆ ಖರೀದಿಸಿ ತಂದ ಈ ಮಹಿಳೆಯರು ಹೆಂಡತಿಯ ಸ್ಥಾನಮಾನವನ್ನು ಎಂದಿಗೂ ಪಡೆಯುವುದಿಲ್ಲ. ಈ ಶೋಷಿತ ಮಹಿಳೆಯರಿಗೆ ತಮ್ಮ ಮನೆಗೆ ಮರಳಲು ಅವಕಾಶವಿಲ್ಲ. ತಮ್ಮೊಂದಿಗೆ ತಮ್ಮ ಹೆಸರು, ಗುರುತು ಮತ್ತು ಸಂಸ್ಕೃತಿಯನ್ನೂ ಅವರು ಕಳೆದುಕೊಳ್ಳುತ್ತಾರೆ.

ಹೆಣ್ಣು ಸಂತತಿ ಹೆಚ್ಚಾಗಿ ಬೆಳೆಯದಂತೆ ನೋಡಿಕೊಂಡು, ಗಂಡು ಸಂತತಿಯೇ ಬೇಕೆಂದು ಬಯಸುವ ಜಾಟರ ನಾಡಿನಲ್ಲಿ ಹೆಣ್ಣಿನ ಸ್ಥಾನಮಾನವೇನಿದ್ದರೂ ಗಂಡಾಡಳಿತದ ಅಧೀನಕ್ಕೆ ಒಳಪಟ್ಟಿರುತ್ತದೆ. ಇಂಥ ಪುರುಷಾಧಿಪತ್ಯದ ಹರಿಯಾಣದ ಜನರು ಮದುವೆಗೆ ಹೆಣ್ಣುಗಳು ಸಿಗದೆ ದೂರದ ಬಿಹಾರ, ಒಡಿಶಾದಿಂದ ಹಿಡಿದು ಮಧ್ಯಪ್ರದೇಶ, ರಾಜಸ್ಥಾನದವರೆಗೂ ಹೋಗಿ ವಧುಗಳನ್ನು ಖರೀದಿಸಿ ತರುತ್ತಾರೆ. ಕರುಳಕುಡಿಗಳನ್ನು ಮಾರುವವರಿಗೆ ಕಡುಬಡತನವೇ ಶಾಪ!

ವಿವಾಹದ ಯಾವುದೇ ಕಾನೂನುಬದ್ಧ ಸಿಂಧುತ್ವವಿಲ್ಲದ ಈ ಪಾರೋಗಳ ಸ್ಥಿತಿ ಅತ್ಯಂತ ಕರುಣಾಜನಕ. ಹರಿಯಾಣ ರಾಜ್ಯವು ಸಾಮಾಜಿಕವಾಗಿ ಮತ್ತು ಸಾಂಸ್ಥಿಕವಾಗಿ ವಧುಗಳ ಖರೀದಿಯನ್ನು ಒಪ್ಪಿಕೊಂಡರೂ ಆ ಹೆಣ್ಣುಮಕ್ಕಳ ಭವಿಷ್ಯದ ಬಗ್ಗೆ ಕಾನೂನಿನಡಿ ಯಾವ ಸುರಕ್ಷೆಯನ್ನೂ ಅದು ಕಲ್ಪಿಸಿಲ್ಲ. ಹಳ್ಳಿಗರೂ ಮೌನಸಮ್ಮತಿಯ ಮುಚ್ಚಳಿಕೆಯನ್ನು ಬರೆದುಕೊಟ್ಟಂತಿದೆ. ಖಾಪ್ ಪಂಚಾಯಿತಿಗಳು ಈ ಬಗ್ಗೆ ದನಿ ಎತ್ತಿದ ಉದಾಹರಣೆ ಈವರೆಗೂ ಇಲ್ಲ. ದಿಲ್ಲಿಯ ಸುತ್ತಲಿನ ಹರಿಯಾಣ, ಪಾಣಿಪತ್, ಸೋನಿಪತ್ ರಾಷ್ಟ್ರಿಯ ಹೆದ್ದಾರಿಗಳಲ್ಲಿ ಓಡಾಡುವ ಟ್ರಕ್ ಚಾಲಕರು ಈ ಜಾಲದ ಮುಖ್ಯ ಕೊಂಡಿಗಳು. ವಧುಗಳನ್ನು ಗುಟ್ಟಾಗಿ ಸಾಗಿಸುವಲ್ಲಿ ಅವರ ಕೈವಾಡ ಮಹತ್ವದ್ದಾಗಿರುತ್ತದೆ. ಕರ್ನಾಟಕದಲ್ಲೂ ‘ಗುಜ್ಜರ್ ಕೀ ಶಾದಿ’ ಎಂಬ ಅನಿಷ್ಟದ ಬಗ್ಗೆ ಕೇಳಿದ್ದೇವೆ.

ಹಿಂದೆ ನಾನು ದೆಹಲಿಯ ಮುನಿರ್ಕಾ ಎಂಬಲ್ಲಿ ಜಾಟ್ ಚೌಧರಿಯೊಬ್ಬರ ಚಾಳಿನ ಬಾಡಿಗೆ ಮನೆಯಲ್ಲಿದ್ದಾಗ, ಮಿಜೋರಾಮಿನ ಒಬ್ಬ ಯುವತಿಯಿದ್ದಳು. ಆಕೆ ಮನೆಯ ಹೊರಗೆ ಕಾಣಿಸಿಕೊಂಡಿದ್ದೇ ಇಲ್ಲ. ಹೊಡೆತ ಬಡಿತಗಳಿಂದ ಮುಖದಲ್ಲಿ ರಕ್ತ ಹೆಪ್ಪುಗಟ್ಟಿರುತ್ತಿತ್ತು. ಗಂಡ–ಹೆಂಡಿರ ಜಗಳವಿರಬೇಕು ಅಂದುಕೊಂಡಿದ್ದೆ. ಕಿಟಕಿಯಿಂದ ಆಗಾಗ ಮಾತನಾಡುತ್ತಿದ್ದಾಗ ನೋವು ಸೂಸುತ್ತಿದ್ದ ಆ ನೋಟ ಈಗಲೂ ಕಾಡುತ್ತದೆ.

‘ದಿ ಗಾರ್ಡಿಯನ್’ ಪತ್ರಿಕೆಯಲ್ಲಿ ಇತ್ತೀಚೆಗೆ ಪ್ರಕಟವಾದ, ನೈಜೀರಿಯಾದ ಸಂತ್ರಸ್ತೆ ನ್ಯಾನ್ಸಿ ಎಸಿಯೊವಾಳ ಕತೆ ಕಳ್ಳಸಾಗಾಣಿಕೆಗೆ ಬಲಿಪಶುಗಳಾದ ನಮ್ಮ ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ದಾರಿದೀಪವಾಗಬಹುದು. ಕಳ್ಳಸಾಗಾಣಿಕೆದಾರರ ಮೂಲಕ ಬ್ರಿಟನ್‌ಗೆ ಬಂದು ಅಲ್ಲಿನ ಕುಟುಂಬವೊಂದರಲ್ಲಿ ಹತ್ತು ವರ್ಷಗಳ ಕಾಲ ಗುಲಾಮಳಾಗಿ ಮಾಲೀಕರಿಂದ ಹೊಡೆತ ತಿನ್ನುತ್ತಾ, ಸಂಬಳವಿಲ್ಲದೆ ಕೆಲಸ ಮಾಡುತ್ತಿದ್ದ ನ್ಯಾನ್ಸಿಯಲ್ಲಿ, ಮುಂದೊಂದು ದಿನ ತಾನು ಸ್ವತಂತ್ರಳಾಗಬಹುದು ಎಂಬ ನಂಬಿಕೆ ಇತ್ತು. ಕಡೆಗೊಂದು ದಿನ ದೇಶದ ಗೃಹ ಸಚಿವಾಲಯವು ಆಧುನಿಕ ಗುಲಾಮಗಿರಿಯ ಸಂತ್ರಸ್ತೆ ಎಂದು ಆಕೆಯನ್ನು ಗುರುತಿಸಿದ ಬಳಿಕ ಗುಲಾಮಗಿರಿಯಿಂದೇನೋ ಆಕೆ ಮುಕ್ತಳಾದಳು. ಆದರೆ ನಂತರ ಯಾರ ಬೆಂಬಲವೂ ಇಲ್ಲದೆ ಬೀದಿಗೆ ಬಿದ್ದ ನ್ಯಾನ್ಸಿ, ತನಗೆ ಆಶ್ರಯ ನೀಡಬೇಕೆಂದು ಮಾಡಿದ ಮನವಿಯನ್ನು ಗೃಹ ಸಚಿವಾಲಯವು ಪರಿಗಣಿಸಲಿಲ್ಲ. ಅಷ್ಟೇ ಅಲ್ಲ, ಆಕೆ ದೇಶದಲ್ಲಿ ಉಳಿಯಲು ಅನುಮತಿಯನ್ನೂ ಕೊಡಲಿಲ್ಲ. ಹೀಗಾಗಿ, ಅಕ್ರಮ ವಲಸೆ ನಿಯಮದಡಿ ತನ್ನನ್ನು ಬಂಧಿಸಲಾಗುವುದೋ ಅಥವಾ ವಾಪಸ್‌ ಬಂದರೆ ತನ್ನನ್ನು ಕೊಲ್ಲುವುದಾಗಿ ಕಳ್ಳಸಾಗಣೆದಾರರು ಬೆದರಿಕೆ ಒಡ್ಡಿರುವ ನೈಜೀರಿಯಾಕ್ಕೇ ವಾಪಸ್‌ ಅಟ್ಟಲಾಗುವುದೋ ಎಂಬ ಅಸ್ಥಿರತೆಯಲ್ಲೇ ದಿನದೂಡುತ್ತಿರುವ ನ್ಯಾನ್ಸಿ, ವಿಶ್ವದಾದ್ಯಂತ ಮಾನವ ಕಳ್ಳಸಾಗಣೆ ಮತ್ತು ಗುಲಾಮ ಗಿರಿಯಿಂದ ಬದುಕುಳಿದ ಜನರನ್ನು ಸಬಲೀಕರಣಗೊಳಿಸಲು ‘ಸರ್ವೈವರ್‌ ಅಲಯನ್ಸ್‌’ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳೆ ಮತ್ತು ಗೃಹ ಕಚೇರಿಯ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡುತ್ತಿದ್ದಾಳೆ.

ಭ್ರೂಣಹತ್ಯೆಯ ಕರಾಳಮುಖವನ್ನು ಚಿತ್ರಿಸಿರುವ, ‘ಎ ನೇಷನ್ ವಿತೌಟ್ ವಿಮೆನ್’ ಎಂಬ ಅಡಿಬರಹವನ್ನುಳ್ಳ ‘ಮಾತೃಭೂಮಿ’ ಹಿಂದಿ ಸಿನಿಮಾ ನೆನಪಾಗುತ್ತದೆ. ಹೆಣ್ಣುಮಕ್ಕಳನ್ನು ವ್ಯವಸ್ಥಿತವಾಗಿ ಕೊಲ್ಲುವ ಪಿತೃಪ್ರಧಾನ ಸಮಾಜ ಏನಾಗಬಹುದು ಎಂಬ ದುಃಸ್ವಪ್ನವನ್ನು ಈ ಚಿತ್ರ ಕಟ್ಟಿಕೊಡುತ್ತದೆ. ಪಾರೋಗಳ ಸ್ಥಿತಿ ಹೀಗೇ ಉಳಿದರೆ, ಹರಿಯಾಣದ ಸ್ಥಿತಿ ಅಂತಿಮವಾಗಿ ಹೇಗಾಗಬಹುದು ಎಂದು ಯೋಚಿಸಲೂ ಭಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.