ADVERTISEMENT

ಸೂರ್ಯ ಪ್ರಕಾಶ್ ಅಂಕಣ– ಸೂರ್ಯ ನಮಸ್ಕಾರ| ‘ಪರಿವಾರವಾದ’ದ ಸಮಸ್ಯೆಯಲ್ಲಿ ಕಾಂಗ್ರೆಸ್

ಬಿಕ್ಕಟ್ಟುಗಳನ್ನು ಪ್ರಬುದ್ಧವಾಗಿ ನಿಭಾಯಿಸುವುದಕ್ಕೆ ಕುಟುಂಬದ ನಿಯಂತ್ರಣ ಅಡ್ಡಿಯಾಗಿದೆ

ಎ.ಸೂರ್ಯ ಪ್ರಕಾಶ್
Published 1 ಅಕ್ಟೋಬರ್ 2021, 19:31 IST
Last Updated 1 ಅಕ್ಟೋಬರ್ 2021, 19:31 IST
   

ನೆಹರೂ ನಂತರದ ಕಾಲಘಟ್ಟದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಕುಟುಂಬದ ನಿಯಂತ್ರಣದಿಂದಾಗಿ ಶುರುವಾದ ಕಾಯಿಲೆಯು ಇನ್ನೂ ಕಾಡುತ್ತಿದೆ, ಪಕ್ಷದ ಪ್ರಭಾವವನ್ನು ಕುಗ್ಗಿಸುತ್ತಿದೆ ಎಂಬುದರ ಸೂಚಕಪಕ್ಷವು ಅಧಿಕಾರದಲ್ಲಿ ಇರುವ ಪಂಜಾಬ್, ಚತ್ತೀಸಗಡ ಮತ್ತು ರಾಜಸ್ಥಾನದಲ್ಲಿನ ಸಮಸ್ಯೆಗಳು.

ರಾಜಸ್ಥಾನ ಮತ್ತು ಚತ್ತೀಸಗಡದ ಮುಖ್ಯಮಂತ್ರಿಗಳು ಆಂತರಿಕ ಭಿನ್ನಮತವನ್ನು ಎದುರಿಸುತ್ತಿದ್ದಾರೆ. ಅವರು ತಮ್ಮ ಸ್ಥಾನದಲ್ಲಿ ಸಂತೃಪ್ತಿಯಿಂದ ಮುಂದು ವರಿಯುತ್ತಿರುವಂತೆ ಕಾಣುತ್ತಿಲ್ಲ. ಪಕ್ಷದ ಹೈಕಮಾಂಡ್ ಎಂದು ಕರೆಸಿಕೊಂಡಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ಪಕ್ಷದ ಹಿರಿಯ ನಾಯಕ, ಪಂಜಾಬ್‌ನ ಮುಖ್ಯಮಂತ್ರಿ ಆಗಿದ್ದ ಅಮರಿಂದರ್ ಸಿಂಗ್ ಅವರನ್ನು ಅವಮಾನಿಸಿದ್ದಾರೆ. ಅಮರಿಂದರ್‌ ಅವರಿಗೆ‍ಆಗಿರುವ ಅವಮಾನವು ಮುಂದಿನ ದಿನಗಳಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಲಿದೆ.

ಚತ್ತೀಸಗಡದಲ್ಲಿನ ವ್ಯವಹಾರಗಳಲ್ಲಿ ಹೈಕಮಾಂಡ್‌ ಮಧ್ಯಪ್ರವೇಶಿಸಿದ ಬಗೆ ಕೂಡ ಅಲ್ಲಿ ಸಮಸ್ಯೆ ಸೃಷ್ಟಿಸ
ಬಲ್ಲದು. ರಾಜಸ್ಥಾನದಲ್ಲಿ ನೆಹರೂ–ಗಾಂಧಿ ಕುಟುಂಬವು ಸಚಿನ್ ಪೈಲಟ್ ಅವರ ನಾಯಕತ್ವದ ಶಕ್ತಿಯನ್ನು ಗುರುತಿಸುವಲ್ಲಿ ವಿಫಲವಾಯಿತು. ಪೈಲಟ್ ಅವರಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ನೆಹರೂ–ಗಾಂಧಿ ಕುಟುಂಬದ ನೆರವು ಬೇಕಿಲ್ಲ ಎಂಬ ಸಂಗತಿಯೂ ಹೈಕಮಾಂಡ್‌ಗೆ ಸರಿಬರುತ್ತಿಲ್ಲ. ಮುಂದಿನ ವರ್ಷಗಳಲ್ಲಿ ಇದಕ್ಕೆ ಪಕ್ಷ ಬೆಲೆ ತೆರಬೇಕಾಗುತ್ತದೆ.

ADVERTISEMENT

ಕ್ಯಾಪ್ಟನ್ ಅಮರಿಂದರ್‌ ಸಿಂಗ್ ಅವರು ರಾಜೀವ್ ಗಾಂಧಿ ಅವರ ಶಾಲಾ ಸಹಪಾಠಿ. ಅವರಿಗೆ ನೆಹರೂ–ಗಾಂಧಿ ಕುಟುಂಬವು ಅರವತ್ತಕ್ಕೂ ಹೆಚ್ಚು ವರ್ಷಗಳಿಂದ ಗೊತ್ತು. ತಲೆ ಎತ್ತಿ ನಡೆಯುವ ರಾಜಕೀಯ ನಾಯಕರ ಸಾಲಿಗೆ ಸೇರಿದವರು ಅಮರಿಂದರ್. ಅವರು ಘನತೆ ಯಿಂದ ನಡೆದುಕೊಳ್ಳುವ ವ್ಯಕ್ತಿತ್ವದವರು. ಇಂದಿರಾ ಗಾಂಧಿ ಅವಧಿಯಲ್ಲಿ ಪಕ್ಷದಲ್ಲಿ ಬೆಳೆದುಬಂದ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವಧಿಯಲ್ಲಿ ಮುಂದುವರಿದ ಭಟ್ಟಂಗಿತನಕ್ಕೆ ಇವರು ಒಗ್ಗುವವರಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅಮರಿಂದರ್ ಅವರು ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ, ಮತ ಪಡೆಯಲು ಅವರಿಗೆ ನೆಹರೂ–ಗಾಂಧಿಗಳು ಬೇಕಾಗಿಲ್ಲ.

ಕಾಂಗ್ರೆಸ್ ಈಗ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿದೆ. ನಾಲ್ಕು ಜನ, ಅದರ ಮೂರೂವರೆ ಷೇರುಗಳನ್ನು ಹೊಂದಿದ್ದಾರೆ– ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಜೊತೆಗೆ ರಾಬರ್ಟ್‌ ವಾದ್ರಾ ಅವರು ಅರ್ಧ ಷೇರು ಹೊಂದಿದ್ದಾರೆ. ಈ ಕಂಪನಿಯ ಆಡಳಿತ ಮಂಡಳಿ ನಿರ್ದೇಶಕರಿಗೆ ತಮ್ಮ ಆಸ್ಥಾನಿಕರು ತೋರುವ ಅತಿಯಾದ ನಿಷ್ಠೆಯನ್ನು ಕಂಡು ಅಭ್ಯಾಸವಾಗಿಬಿಟ್ಟಿದೆ. ರಾಜಕೀಯ ಶಕ್ತಿಯಿರುವ ನಾಯಕರು ಪಕ್ಷದ ‘ಪ್ರಥಮ ಕುಟುಂಬ’ದ ವಲಯದಲ್ಲಿ ಪ್ರಭಾವ ಕಳೆದುಕೊಳ್ಳುತ್ತಿದ್ದಾರೆ. ಭಟ್ಟಂಗಿಗಳು ಪ್ರವೇಶಿಸಿ, ಮೊದಲಿನಿಂದ ವಿಶ್ವಾಸ ಇರಿಸಿಕೊಂಡು ಬಂದಿದ್ದವರು ಹಾಗೂ ಕುಟುಂಬದ ನಡುವೆ ಸಂಘರ್ಷ ಸೃಷ್ಟಿಸುತ್ತಾರೆ. ಒತ್ತಡಕ್ಕೆ ಮಣಿಯುವ ಹೈಕಮಾಂಡ್ ಒಳ್ಳೆಯ ನಾಯಕರನ್ನು ಕೈಬಿಡುತ್ತದೆ. ಇದಾದ ನಂತರದಲ್ಲಿ ಅವನತಿ ಶುರುವಾಗುತ್ತದೆ.

ರಾಜ್ಯಗಳ ಮಟ್ಟದಲ್ಲಿ ಗೌರವ ಸಂಪಾದಿಸಿದ್ದ ನಾಯಕರನ್ನು ಪಕ್ಷದ ನಾಯಕರು ಅವಮಾನಿಸಿದ ಹಲವು ಉದಾಹರಣೆಗಳು ಇವೆ. ಎರಡು ನಿದರ್ಶನಗಳು ತಕ್ಷಣಕ್ಕೆ ಮನಸ್ಸಿಗೆ ಬರುತ್ತಿವೆ. ರಾಜೀವ್ ಗಾಂಧಿ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಆಂಧ್ರ
ಪ್ರದೇಶದ ಮುಖ್ಯಮಂತ್ರಿ ಟಿ. ಅಂಜಯ್ಯ ಅವರನ್ನು ಸಾರ್ವಜನಿಕವಾಗಿ ಅವಮಾನಿಸಿದರು. ನಂತರ ಪ್ರಧಾನಿ ಹಾಗೂ ಪಕ್ಷದ ಅಧ್ಯಕ್ಷರಾಗಿದ್ದಾಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲರನ್ನು ಹುದ್ದೆಯಿಂದ ಕೆಳಗಿಳಿಸಿದರು. ಅಂಜಯ್ಯ ಪ್ರಕರಣವು ಆಂಧ್ರಪ್ರದೇಶದ ಜನರ ಆತ್ಮಗೌರವಕ್ಕೆ ಧಕ್ಕೆ ತಂದಿತು, ಅಲ್ಲಿ ಕಾಂಗ್ರೆಸ್ಸಿನ ಸೋಲು ಹಾಗೂ ತೆಲುಗುದೇಶಂ ಪಕ್ಷದ ಬಲವರ್ಧನೆಗೆ ಕಾರಣವಾಯಿತು. ಈಗ ಅಲ್ಲಿ ಪಕ್ಷವು ಅಳಿವಿನತ್ತ ಸಾಗಿದೆ.

ವೀರೇಂದ್ರ ಪಾಟೀಲ್ ಪ್ರಕರಣವು‍ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿತು. ಕರ್ನಾಟಕದ ಪ್ರಬಲ ಲಿಂಗಾಯತ ಸಮುದಾಯದಿಂದ ಪಕ್ಷವನ್ನು ದೂರ ಮಾಡಿತು. ಆಂಧ್ರ ಪ್ರದೇಶ, ತೆಲಂಗಾಣಕ್ಕೆ ಹೋಲಿಸಿದರೆ, ಕರ್ನಾಟಕದಲ್ಲಿ ಪಕ್ಷದ ಸ್ಥಿತಿ ಚೆನ್ನಾಗಿ ಇದೆಯಾದರೂ, ಆಗ ಪಕ್ಷಕ್ಕೆ ಆದ ಹಾನಿಯು ಇಂದಿಗೂ ಪರಿಣಾಮ ಉಂಟುಮಾಡುತ್ತಿದೆ. ಹೀಗಾಗಿ, ಪಕ್ಷದ ಕುಸಿತಕ್ಕೆ ಬಹುದೊಡ್ಡ ಕಾರಣ ‘ಪರಿವಾರವಾದ’, ಅಂದರೆ ಕುಟುಂಬದ ನಿಯಂತ್ರಣ. ಇದು ಬಿಕ್ಕಟ್ಟುಗಳನ್ನು ಪ್ರಬುದ್ಧವಾಗಿ ನಿಭಾಯಿಸುವುದಕ್ಕೆ ಅಡ್ಡಿಯಾಗಿದೆ.

ಇಂದಿರಾ ಗಾಂಧಿ ಅವರು ಪಕ್ಷದ ಚುಕ್ಕಾಣಿ ಹಿಡಿದ ನಂತರ ಪರಿಸ್ಥಿತಿ ಬದಲಾಗಲು ಆರಂಭಿಸಿತು. ಹೆಚ್ಚಿನ ರಾಜಕೀಯ ಹಾಗೂ ಆಡಳಿತಾತ್ಮಕ ಅನುಭವವಿದ್ದ ನಾಯಕರನ್ನು ಅನಿವಾರ್ಯವಾಗಿ ಸರ್ಕಾರದಲ್ಲಿ ಉಳಿಸಿ ಕೊಳ್ಳಲಾಯಿತು. ಅವರ ಜೊತೆ ಎಲ್ಲ ಬಾರಿಯೂ ಸಮಾಲೋಚಿಸುತ್ತಿರಲಿಲ್ಲ. ಲೋಕಸಭೆ ಅಥವಾ ವಿಧಾನಸಭಾ ಚುನಾವಣೆಗಳಲ್ಲಿ ಗೆಲ್ಲಲು ಆಗದಿದ್ದವ
ರಿಗೆ ಬಡ್ತಿ ನೀಡಲಾಯಿತು. ಏಕೆಂದರೆ, ಕುಟುಂಬಕ್ಕೆ ನಿಷ್ಠೆ ತೋರುತ್ತಿದ್ದವರಿಗೆ ಆದ್ಯತೆ ಕೊಡಲಾಯಿತು. ಆದರೆ ಇದರಿಂದಾದ ಪರಿಣಾಮವೆಂದರೆ, ಪಕ್ಷವು ವೋಟು ಗಳಿಸಲು ಕುಟುಂಬವನ್ನೇ ನೆಚ್ಚಿಕೊಳ್ಳಬೇಕಾಯಿತು. ಟಿಕೆಟ್ ದಕ್ಕಿಸಿಕೊಂಡವರು ಮತಗಳ ಲೆಕ್ಕದಲ್ಲಿ ಪಕ್ಷಕ್ಕೆ ಏನನ್ನೂ ತಂದುಕೊಡಲಿಲ್ಲ.

ತಮ್ಮ ಸಾಮರ್ಥ್ಯದ ಆಧಾರದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದ ನಾಯಕರು ಪಕ್ಷವನ್ನು ತೊರೆದು ತಮ್ಮದೇ ಆದ ಪಕ್ಷ ಸ್ಥಾಪಿಸಿದ್ದು ಅಥವಾ ಇತರ ಪಕ್ಷಗಳನ್ನು ಸೇರುವುದು 1970ರ ನಂತರ ಶುರುವಾಗಿದ್ದಕ್ಕೆ ಕಾರಣ ಇದು. ಕಾಂಗ್ರೆಸ್ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿ, ನಂತರದಲ್ಲಿ ಬೇರೆ ಮಾರ್ಗವನ್ನು ತುಳಿದ ರಾಜಕೀಯ ನಾಯಕರ ದೊಡ್ಡ ಪಟ್ಟಿಯೇ ಇದೆ. ಈ ಪಟ್ಟಿಯಲ್ಲಿ ಎಚ್.ಡಿ. ದೇವೇಗೌಡ, ರಾಮಕೃಷ್ಣ ಹೆಗಡೆ, ಚಂದ್ರಬಾಬು ನಾಯ್ಡು, ಆರಿಫ್ ಮೊಹಮ್ಮದ್ ಖಾನ್, ವಿ.ಪಿ. ಸಿಂಗ್, ಶರದ್‌ ಪವಾರ್‌, ಪಿ.ಎ. ಸಂಗ್ಮಾ ಮತ್ತು ಮಮತಾ ಬ್ಯಾನರ್ಜಿ ಅವರ ಹೆಸರು ಇವೆ. ಜ್ಯೋತಿರಾದಿತ್ಯ ಸಿಂಧಿಯಾ ಅವರ ಹೆಸರು ತೀರಾ ಈಚೆಗಿನ ಸೇರ್ಪಡೆ. ಇಂತಹ ವಿದ್ಯಮಾನಗಳು ಪ್ರತೀ ರಾಜ್ಯದಲ್ಲಿಯೂ ಇವೆ. ಇಂತಹ ನಾಯಕರು ಪಕ್ಷದಿಂದ ಹೊರಗೆ ನಡೆದಿದ್ದಕ್ಕೂ ಪಕ್ಷವು ಚುನಾವಣಾ ರಾಜಕೀಯದಲ್ಲಿ ಹಿನ್ನಡೆ ಅನುಭವಿಸುತ್ತ ಬಂದಿದ್ದಕ್ಕೂ ನೇರ ಸಂಬಂಧ ಇದೆ.

ಈ ಎಲ್ಲ ಬೆಳವಣಿಗೆಗಳಿಂದ ಚುನಾವಣೆಗಳಲ್ಲಿ ಆಗಿರುವ ಪರಿಣಾಮ ಸ್ಪಷ್ಟವಾಗಿ ಕಾಣಿಸುತ್ತಿದೆ. ನೆಹರೂ ಮತ್ತು ಇಂದಿರಾ ಗಾಂಧಿ ಅವರ ದಿನಗಳಲ್ಲಿ ಲೋಕಸಭಾ ಚುನಾವಣೆಗಳಲ್ಲಿ ಪಕ್ಷವು ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇಕಡ 42ರಿಂದ ಶೇ 45ರಷ್ಟು ಮತಗಳನ್ನು ಗಳಿಸುತ್ತಿತ್ತು. ಒಟ್ಟು ಸ್ಥಾನಗಳ ಪೈಕಿ ಶೇ 65ರಷ್ಟನ್ನು ಗೆದ್ದುಕೊಳ್ಳುತ್ತಿತ್ತು. 1957ರಲ್ಲಿ ಶೇ 47.8ರಷ್ಟು ಮತಗಳನ್ನು ಪಡೆದುಕೊಂಡಿದ್ದು ಪಕ್ಷದ ಅತ್ಯುತ್ತಮ ಸಾಧನೆ. ಇಂದಿರಾ ಗಾಂಧಿ ಅವರ ಹತ್ಯೆ ನಂತರ ನಡೆದ ಚುನಾವಣೆಯಲ್ಲಿ ಚಲಾವಣೆಯಾದ ಮತಗಳಲ್ಲಿ ಪಕ್ಷವು ಶೇ 48.1ರಷ್ಟು ಮತಗಳನ್ನು ಪಡೆದಿತ್ತು. ಆದರೆ, ಇವೆಲ್ಲ ಈಗ ಇತಿಹಾಸ. 2000ನೆಯ ಇಸವಿಯಿಂದ 2010ನೆಯ ಇಸವಿ ನಡುವೆ ಕಾಂಗ್ರೆಸ್ ಪಕ್ಷದ ಮತಗಳಿಕೆ ಪ್ರಮಾಣವು ಶೇ 25ರಿಂದ ಶೇ 28ರ ನಡುವೆ ಹೊಯ್ದಾಡಿದೆ. ಲೋಕಸಭೆಗೆ ನಡೆದ ಕೊನೆಯ ಎರಡು ಸಾರ್ವತ್ರಿಕ ಚುನಾವಣೆ
ಗಳಲ್ಲಿ ಕಾಂಗ್ರೆಸ್ಸಿನ ಮತಗಳಿಕೆ ಪ್ರಮಾಣವು ಶೇ 20ರ ಗಡಿ ದಾಟಿಲ್ಲ.

ಇನ್ನೊಂದು ರೀತಿಯಲ್ಲಿ ಹೇಳಬೇಕು ಎಂದಾದರೆ, ಕಾಂಗ್ರೆಸ್ ಪಕ್ಷವು ಈಗ ವಾಸಿ ಆಗಲಾರದಂತಹ ಬಿಕ್ಕಟ್ಟಿ ನಲ್ಲಿ ಸಿಲುಕಿಕೊಂಡಿದೆ. ಜನಬೆಂಬಲ ಹೊಂದಿರುವ ಮತ್ತು ಪಕ್ಷಕ್ಕೆ ಮತ ಸೆಳೆಯಬಲ್ಲ ನಾಯಕರನ್ನು ಪಕ್ಷದ ಮುಂಚೂಣಿ ಸ್ಥಾನಗಳಿಗೆ ನೇಮಕ ಮಾಡದ ಹೊರತು, ತೀರ್ಮಾನಗಳನ್ನು ಕೈಗೊಳ್ಳಲು ಶಕ್ತಿಯುತ ನಾಯಕರ ತಂಡವೊಂದನ್ನು ರಚಿಸದ ಹೊರತು ದೇಶದ ಅತ್ಯಂತ ಹಳೆಯ ಪಕ್ಷವು ಕುಸಿತವನ್ನು ಮುಂದುವರಿಸಲಿದೆ. ಮತಗಳನ್ನು ಗಳಿಸಲು ಹಾಗೂ ಪಕ್ಷಕ್ಕೆ ಪುನಶ್ಚೇತನ ನೀಡಲು ನೆಹರೂ–ಗಾಂಧಿಗಳ ಬಳಿ ಮಂತ್ರದಂಡ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.