ADVERTISEMENT

ಎ. ಸೂರ್ಯ ಪ್ರಕಾಶ್ ಲೇಖನ: ಕೋವಿಡ್ ವೇಳೆ ವಿವಿಧತೆಯಲ್ಲಿ ಏಕತೆ

ಒಗ್ಗಟ್ಟಿನಿಂದ ಮಾತ್ರ ವೈರಾಣುವಿಗೆ ಸಡ್ಡು ಹೊಡೆಯಲು ಸಾಧ್ಯ ಎಂಬುದು ಎಲ್ಲರಿಗೂ ಅರ್ಥವಾಗಿದೆ

ಎ.ಸೂರ್ಯ ಪ್ರಕಾಶ್
Published 20 ಡಿಸೆಂಬರ್ 2020, 19:31 IST
Last Updated 20 ಡಿಸೆಂಬರ್ 2020, 19:31 IST
   

ಸೆಪ್ಟೆಂಬರ್‌ನಲ್ಲಿ ದೇಶದಲ್ಲಿ ಪ್ರತಿದಿನ 98 ಸಾವಿರ ಹೊಸ ಕೋವಿಡ್–19 ಪ್ರಕರಣಗಳು ವರದಿಯಾಗುತ್ತಿದ್ದವು. ಈಗ ಆ ಸಂಖ್ಯೆಯು ದಿನವೊಂದಕ್ಕೆ 25 ಸಾವಿರಕ್ಕಿಂತ ಕಡಿಮೆಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಆರೋಗ್ಯ ಸೇವಾ ವಲಯವು ಎಂಟು ತಿಂಗಳುಗಳಿಂದ ಸಂಘಟಿತವಾಗಿ ನಡೆಸಿದ ಪ್ರಯತ್ನಗಳು ಕೊನೆಗೂ ಫಲ ನೀಡುತ್ತಿವೆ ಎಂದು ಹೇಳಲು ಅಡ್ಡಿಯಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರು ಮುಂಚೂಣಿಯಲ್ಲಿ ನಿಂತು ದೇಶವನ್ನು ಮುನ್ನಡೆಸುತ್ತಿದ್ದಾರೆ, ಮುಖ್ಯಮಂತ್ರಿಗಳ ಜೊತೆ ಹತ್ತು ಬಾರಿ ಸಭೆ ನಡೆಸಿದ್ದಾರೆ, ಸಾಂಕ್ರಾಮಿಕವನ್ನು ಹತ್ತಿಕ್ಕಲು ಪೂರ್ತಿಯಾಗಿ ಸಮರ್ಪಿಸಿಕೊಂಡಿದ್ದಾರೆ. ಪ್ರಧಾನಿಯವರು ತಾವೇ ಮುಂದಾಗಿ ಸಮಸ್ಯೆಯನ್ನು ನಿಭಾಯಿಸುವ ಬಗೆ, ಕೊರೊನಾ ವಿಚಾರದಲ್ಲಿ ರಾಜ್ಯವಾರು ನಿಗಾ ಇರಿಸುವಿಕೆ, ಲಸಿಕೆ ತಯಾರಿಕೆಯ ಸ್ಥಿತಿ ಹೇಗಿದೆ ಎಂಬುದನ್ನು ತಿಳಿಯಲು ಔಷಧ ಕಂಪನಿಗಳ ಕಚೇರಿಗೆ ಖುದ್ದು ಭೇಟಿ, ಕೊರೊನಾ ಹರಡುವಿಕೆ ತೀವ್ರವಾಗಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ... ಇವೆಲ್ಲ ಸಾಂಕ್ರಾಮಿಕದ ನಿಯಂತ್ರಣದಲ್ಲಿ ಮಹತ್ವದ ಕೊಡುಗೆ ನೀಡಿರುವುದಷ್ಟೇ ಅಲ್ಲದೆ, ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಮತ್ತು ವೈದ್ಯಕೀಯ ಕ್ಷೇತ್ರದ ಸಂಶೋಧಕರ ಮನೋಸ್ಥೈರ್ಯ ಕುಸಿಯದಂತೆಯೂ ನೋಡಿಕೊಂಡಿವೆ.

ಪ್ರಧಾನಿಯವರಷ್ಟೇ ಅಲ್ಲದೆ, ಹಲವು ಮುಖ್ಯಮಂತ್ರಿಗಳು ರಾಜಕೀಯವನ್ನು ಬದಿಗಿರಿಸಿ, ತಮ್ಮ ರಾಜ್ಯಗಳಲ್ಲಿ ಸಾಂಕ್ರಾಮಿಕವನ್ನು ನಿಯಂತ್ರಿಸಲು ಕೇಂದ್ರದ ಜೊತೆಯಾಗಿ ಅವಿರತ ಶ್ರಮಿಸಿದ್ದಾರೆ. ದೇಶದ ಆಡಳಿತವನ್ನು ಕೇಂದ್ರದಲ್ಲಿ ಹಾಗೂ ರಾಜ್ಯಗಳ ಮಟ್ಟದಲ್ಲಿ ನೋಡಿಕೊಳ್ಳುತ್ತಿರುವ ನಲವತ್ತಕ್ಕೂ ಹೆಚ್ಚಿನ ರಾಜಕೀಯ ಪಕ್ಷಗಳು ಇವೆ. ಕೇಂದ್ರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎನ್‌ಡಿಎ) ಪಕ್ಷಗಳು, ರಾಜ್ಯಗಳ ಮಟ್ಟದಲ್ಲಿ ಭಾರಿ ಬಹುಮತ ಹೊಂದಿರುವ ಬಿಜು ಜನತಾ ದಳ, ಆಮ್‌ ಆದ್ಮಿ ಪಕ್ಷ, ತೃಣಮೂಲ ಕಾಂಗ್ರೆಸ್, ವೈಎಸ್‌ಆರ್ ಕಾಂಗ್ರೆಸ್, ತೆಲಂಗಾಣ ರಾಷ್ಟ್ರ ಸಮಿತಿಯಂತಹ ಪಕ್ಷಗಳು ಸೇರಿವೆ. ಸಿಪಿಎಂ (ಕೇರಳ), ಜೆಡಿಯುನಂತಹ (ಬಿಹಾರ) ಮೈತ್ರಿಕೂಟ ಸರ್ಕಾರ ಮುನ್ನಡೆಸುತ್ತಿರುವ ಪಕ್ಷಗಳಿವೆ. ಕರ್ನಾಟಕ, ಉತ್ತರಪ್ರದೇಶ, ಮಧ್ಯಪ್ರದೇಶ, ಹರಿಯಾಣ, ರಾಜಸ್ಥಾನ, ಪಂಜಾಬ್ ಮತ್ತು ಛತ್ತೀಸಗಡ ರಾಜ್ಯಗಳನ್ನು ಆಳುತ್ತಿರುವ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಇವೆ.

ADVERTISEMENT

140 ಕೋಟಿ ಜನರನ್ನು ಆಳುತ್ತಿರುವ ಬಹುಬಗೆಯ ರಾಜಕೀಯ ಪಕ್ಷಗಳ ವಿವರ ಇದು. ಜಿಲ್ಲಾ ಪಂಚಾಯಿತಿ ಅಥವಾ ಮುನಿಸಿಪಲ್ ಹಂತದಲ್ಲಿ ಆಡಳಿತ ನಡೆಸುತ್ತಿರುವ ಕೆಲವು ರಾಜಕೀಯ ಗುಂಪುಗಳ ವಿವರ ಇಲ್ಲಿಲ್ಲ. ನಮ್ಮ ರಾಜಕಾರಣವು ಒಡೆದಂತಿದ್ದರೂ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಹಾಗೂ ಕೆಲವು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಇತರ ರಾಜಕೀಯ ಪಕ್ಷಗಳು ರಾಜಕೀಯ ಸಂಘರ್ಷಗಳನ್ನು ಜೋರಾಗಿಯೇ ನಡೆಸಿದ್ದರೂ, ಎಲ್ಲ ಪಕ್ಷಗಳು ತಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬಹುತೇಕ ಬದಿಗಿರಿಸಿವೆ, ಸಾಂಕ್ರಾಮಿಕದ ವಿರುದ್ಧ ಹೋರಾಡಲು ಒಂದಾಗಿವೆ. ಪ್ರಧಾನಿಯವರು ಬಯಸಿದ್ದ ಸಹಕಾರ ಒಕ್ಕೂಟ ವ್ಯವಸ್ಥೆಯೆಂದರೆ ಇದುವೇ. ಕೋವಿಡ್–19ರ ವಿರುದ್ಧದ ಹೋರಾಟದಲ್ಲಿ ಒಂದೇ ಉದ್ದೇಶವನ್ನು ತೋರ್ಪಡಿಸಿದ ಶ್ರೇಯಸ್ಸು ಎಲ್ಲ ಪಕ್ಷಗಳಿಗೂ ಸಲ್ಲಬೇಕು.

ಕೋವಿಡ್–19ನ್ನು ಎದುರಿಸಲು ದೆಹಲಿಯ ಮೂಲಸೌಕರ್ಯ ಹೆಚ್ಚಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜೊತೆ ಮಾತುಕತೆಗೆ ಮುಂದಾಗಿದ್ದರಲ್ಲಿ ರಾಜಕೀಯವನ್ನು ಹೊರಗಿಟ್ಟು, ಒಟ್ಟಾಗಿ ಕೆಲಸ ಮಾಡುವ ಒಳ್ಳೆಯ ಒಂದು ಉದಾಹರಣೆಯನ್ನು ಕಾಣಬಹುದು. ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್–19 ಪರಿಸ್ಥಿತಿಯು ಕಳವಳ ಮೂಡಿಸುವಂತಾದಾಗ ಶಾ ಅವರು ಕೇಜ್ರಿವಾಲ್ ಜೊತೆ ಎರಡಕ್ಕಿಂತ ಹೆಚ್ಚು ಬಾರಿ ಸಭೆ ನಡೆಸಿದರು. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರೂ ಶಾ ಜೊತೆ ಇದ್ದರು. ದೇಶಕ್ಕೆ ಎದುರಾದ ಅತಿದೊಡ್ಡ ಸಾರ್ವಜನಿಕ ಆರೋಗ್ಯ ಸಮಸ್ಯೆಯನ್ನು ಪರಿಹರಿಸಲು ಹರ್ಷವರ್ಧನ್ ಅವರು ಹತ್ತು ತಿಂಗಳುಗಳಿಂದ ಕೆಲಸ ಮಾಡುತ್ತಿದ್ದಾರೆ.

ನವೆಂಬರ್‌ನಲ್ಲಿ ನಡೆದ ಸಭೆಗಳ ಕಾರಣದಿಂದಾಗಿ ದೆಹಲಿಗೆ ಇನ್ನಷ್ಟು ಐಸಿಯು ಹಾಸಿಗೆಗಳು ಹಾಗೂ ಇತರ ಉಪಕರಣಗಳು ಸಿಗುವಂತಾಯಿತು. ಸಭೆಯ ನಂತರ ಕೇಂದ್ರ ಗೃಹ ಸಚಿವರಿಗೆ ಧನ್ಯವಾದ ಅರ್ಪಿಸಿದ ಕೇಜ್ರಿವಾಲ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎಲ್ಲ ಸಂಸ್ಥೆಗಳು ಕೋವಿಡ್–19 ಹತ್ತಿಕ್ಕಲು ಒಟ್ಟಾಗಿ ಕೆಲಸ ಮಾಡುವ ಭರವಸೆ ತಮಗಿದೆ ಎಂದರು.

ಈ ನಡುವೆ, ಮೋದಿ ಅವರು ದೇಶವು ಲಸಿಕೆಯನ್ನು ಹೇಗೆ ನೀಡಲಿದೆ, ಲಸಿಕೆ ಸಂಶೋಧನೆ ಕುರಿತು ಈಗಿನ ಸ್ಥಿತಿ ಏನಿದೆ, ಲಸಿಕೆ ಲಭ್ಯವಾದಾಗ ಅದನ್ನು ಹೇಗೆ ವಿತರಿಸಲಾಗುತ್ತದೆ ಎಂಬ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಈ ಕೆಲಸದಲ್ಲಿ ಕೂಡ ರಾಜ್ಯಗಳ ಜೊತೆ ಸಮಾಲೋಚನೆ ಈಗಾಗಲೇ ನಡೆದಿದೆ.

ಇದು ನಾವು ಕಳೆದ ಹತ್ತು ತಿಂಗಳಲ್ಲಿ ಕಲಿತ ಪಾಠ ಏನೆಂಬುದನ್ನು ಹೇಳುತ್ತದೆ. ಕೋವಿಡ್–19 ಬಿಕ್ಕಟ್ಟು ನಮ್ಮ ಮೇಲೆ ಎರಗಿದಾಗ, ಕೇಂದ್ರ ಸರ್ಕಾರವು ದೇಶದಲ್ಲಿ ಲಾಕ್‌ಡೌನ್‌ ಜಾರಿಗೆ ತಂದಾಗ, ಅದನ್ನು ವಿಸ್ತರಿಸಿದಾಗ, ಲಾಕ್‌ಡೌನ್‌ ಎಷ್ಟು ಪರಿಣಾಮಕಾರಿ ಎಂಬ ಚರ್ಚೆಯು ದೇಶದೆಲ್ಲೆಡೆ ನಡೆದಿತ್ತು. ಅದಾದ ನಂತರ, ಹಲವು ಮುಖ್ಯಮಂತ್ರಿಗಳು ಕೇಂದ್ರದ ಬಗ್ಗೆ ತೀವ್ರ ಟೀಕೆ ವ್ಯಕ್ತಪಡಿಸಿದರು, ಪಶ್ಚಿಮ ಬಂಗಾಳದಂತಹ ರಾಜ್ಯಗಳು ತನ್ನ ನಿರ್ದೇಶನಗಳನ್ನು ಪಾಲಿಸುತ್ತಿಲ್ಲ ಎಂದು ಕೇಂದ್ರ ದೂರಿತ್ತು. ಕೇಂದ್ರ ಸರ್ಕಾರವು ಲಾಕ್‌ಡೌನ್‌, ಪರಸ್ಪರ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್‌ ಧರಿಸುವುದು, ವಾಣಿಜ್ಯ ಚಟುವಟಿಕೆಗಳನ್ನು, ಮನರಂಜನಾ ಸ್ಥಳಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಸ್ಥಗಿತಗೊಳಿಸುವುದರ ವಿಚಾರವಾಗಿ ನೀಡುತ್ತಿದ್ದ ನಿರ್ದೇಶನಗಳು ರಾಷ್ಟ್ರೀಯ ವಿಕೋಪಗಳು ಹಾಗೂ ತುರ್ತು ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬ ಬಗ್ಗೆ ತನಗಿದ್ದ ಸಾಂವಿಧಾನಿಕ ಅಧಿಕಾರವ್ಯಾಪ್ತಿಯಲ್ಲೇ ಇವೆ ಎಂಬುದು ಎಲ್ಲರಿಗೂ ಅರ್ಥವಾಗಲು ತುಸು ಸಮಯ ಬೇಕಾಯಿತು. ಕ್ರಿಯೆಯಲ್ಲಿ ಒಗ್ಗಟ್ಟು ಇಲ್ಲದಿದ್ದರೆ ಎಲ್ಲ ರಾಜ್ಯಗಳೂ ಅಪಾಯಕ್ಕೆ ಸಿಲುಕುತ್ತವೆ, ವೈರಾಣುವಿಗೆ ರಾಜ್ಯಗಳ ಗಡಿಗಳು ಅರ್ಥವಾಗುವುದಿಲ್ಲ ಎಂಬುದು ಕೂಡ ರಾಜ್ಯಗಳಿಗೆ ಅರ್ಥವಾಯಿತು.

ಎ. ಸೂರ್ಯ ಪ್ರಕಾಶ್

ಆದರೆ, ನಕಾರಾತ್ಮಕ ವಿಚಾರಗಳನ್ನೇ ಉಸಿರಾಡುವವರಿಗೆ ಇವನ್ನೆಲ್ಲ ಕಾಣಲು ಆಗುತ್ತಿಲ್ಲ. ಅವರು ‘ವಿನಾಶ ಸಂಭವಿಸಲಿದೆ’ ಎಂದು ಹೇಳುತ್ತಲೇ ಇರುತ್ತಾರೆ. ಬಹುತ್ವದ ಈ ದೇಶವು ಇಸ್ಪೀಟಿನ ಎಲೆಗಳಿಂದ ಕಟ್ಟಿದ ಮನೆಯಂತೆ ಕುಸಿದು ಬೀಳುತ್ತದೆ ಎಂದು ಅವರು ಬಯಸುತ್ತಿರುತ್ತಾರೆ. ಆದರೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿನ ನಾಯಕತ್ವವು ಸಣ್ಣ ರಾಜಕೀಯಗಳಿಂದ ಮೇಲೆದ್ದು ಈ ಸಾಂಕ್ರಾಮಿಕಕ್ಕೆ ಎದುರಾಗಿ ಒಗ್ಗಟ್ಟಿನಿಂದ ನಿಲ್ಲುವ ಶಕ್ತಿ ಹೊಂದಿದೆ ಎಂಬುದನ್ನು ಎಲ್ಲ ಸೂಚಕಗಳೂ ಹೇಳುತ್ತಿವೆ. ಅಮೆರಿಕದಲ್ಲಿನ ಪರಿಸ್ಥಿತಿಯನ್ನು ಗಮನಿಸಿದರೆ, ನಾವು ಎಷ್ಟು ಅದೃಷ್ಟವಂತರು ಎಂಬುದು ಗೊತ್ತಾಗುತ್ತದೆ. ಸಾಂಕ್ರಾಮಿಕದ ಎದುರು ಏಕ ಮನಸ್ಸಿನಿಂದ ಕೆಲಸ ಮಾಡುವಲ್ಲಿ, ವೈರಾಣುವನ್ನು ಮಣಿಸುವ ವಿಶ್ವಾಸ ತೋರಿಸುವಲ್ಲಿ ಅಮೆರಿಕ ಯಶಸ್ಸು ಕಾಣದಿರುವುದು ದುರದೃಷ್ಟಕರ. ಆ ದೇಶದಲ್ಲಿ ಕೋವಿಡ್–19 ನಿಯಂತ್ರಣ ಮೀರಿದೆ.

ಹೊಸ ವರ್ಷದಲ್ಲಿ ಭಾರತದಲ್ಲಿ ಕೋವಿಡ್–19 ಪ್ರಕರಣಗಳು ಕಡಿಮೆ ಆಗುತ್ತವೆ, ಅದಾದ ನಂತರ ವಿಶ್ವಾಸಾರ್ಹ ಲಸಿಕೆಯೊಂದು ಲಭ್ಯವಾಗುತ್ತದೆ ಎಂದು ಆಶಿಸೋಣ. ಹಾಗೆ ಆದ ದಿನ ನಾವು, ನಮ್ಮ ರಾಜಕೀಯ ನಾಯಕತ್ವ ಸಾಧ್ಯವಾಗಿಸಿದ ಏಕತೆಯನ್ನು, ನಮ್ಮ ವೈದ್ಯರು, ದಾದಿಯರು ಮತ್ತು ಆರೋಗ್ಯ ಸೇವಾ ವಲಯದ ಅಷ್ಟೂ ಜನ ನಡೆಸಿದ ಹೋರಾಟವನ್ನು ತುಂಬು ಹೃದಯದಿಂದ ಒಪ್ಪಿಕೊಳ್ಳಬೇಕು. ಅಂತಹ ಹೋರಾಟದ ಕಾರಣದಿಂದಾಗಿ ಈ ದೇಶವು ಈ ಆರೋಗ್ಯ ಬಿಕ್ಕಟ್ಟನ್ನು ಮೆಟ್ಟಿ ನಿಲ್ಲಲು ಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.