ADVERTISEMENT

ಎ. ಸೂರ್ಯ ಪ್ರಕಾಶ್‌ ಅಂಕಣ | ಮರೆಯಬಾರದು, ಕ್ಷಮಿಸಲೂ ಆಗದು!

ತುರ್ತು ಪರಿಸ್ಥಿತಿಯ ಪರಿಣಾಮವನ್ನು ಮರೆಮಾಚುವ ಯಾವುದೇ ಯತ್ನವನ್ನು ವಿರೋಧಿಸಬೇಕು

ಎ.ಸೂರ್ಯ ಪ್ರಕಾಶ್
Published 25 ಜೂನ್ 2021, 1:27 IST
Last Updated 25 ಜೂನ್ 2021, 1:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ದೇಶದಲ್ಲಿ ‘ಅಘೋಷಿತ ತುರ್ತು ಪರಿಸ್ಥಿತಿ’ ಇದೆ ಎಂದು ಅವರ ವಿರೋಧಿಗಳು ಮತ್ತೆ ಮತ್ತೆ ಹೇಳುತ್ತಾರೆ. 1975ರ ಜೂನ್‌ 25ರಿಂದ 21 ತಿಂಗಳ ಕಾಲ ಜಾರಿಯಲ್ಲಿದ್ದ, ಇಂದಿರಾ ಗಾಂಧಿ ಅವರು ಜಾರಿಗೊಳಿಸಿದ ತುರ್ತು ಪರಿಸ್ಥಿತಿಯನ್ನು ಕಂಡವರಿಗೆ, ಅದರ ವಿರುದ್ಧ ಹೋರಾಡಿದವರಿಗೆ, ಈಗಿನ ಪರಿಸ್ಥಿತಿಯನ್ನು ಅಂದಿನ ಪರಿಸ್ಥಿತಿ ಜೊತೆ ಹೋಲಿಸುವುದೇ ಅಸಹ್ಯವೆಂದು ಅನಿಸುತ್ತದೆ. ಅಷ್ಟೇ ಅಲ್ಲ, ಇಂದಿರಾ ಗಾಂಧಿ ಅವರ ಸರ್ವಾಧಿಕಾರವನ್ನು ಎದುರಿಸಿ ನಿಂತು, ಸಂವಿಧಾನ ಮತ್ತು ನಮ್ಮ ಪ್ರಜಾತಾಂತ್ರಿಕ ಜೀವನ ಕ್ರಮದ ಪುನರ್‌ಸ್ಥಾಪನೆಗೆ ಧೈರ್ಯದಿಂದ ಹೋರಾಡಿದ ಲಕ್ಷಾಂತರ ಜನರ ತ್ಯಾಗವನ್ನು ಕುಬ್ಜಗೊಳಿಸಿದಂತೆಯೂ ಆಗುತ್ತದೆ.

ಹಲವರು ಬಣ್ಣಿಸಿರುವಂತೆ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟವು ನಿಜಕ್ಕೂ ‘ಎರಡನೆಯ ಸ್ವಾತಂತ್ರ್ಯ ಹೋರಾಟ’. ಏಕೆಂದರೆ, ತುರ್ತು ಪರಿಸ್ಥಿತಿ ಹೇರಿಯೂ ತಪ್ಪಿಸಿಕೊಳ್ಳಲು ಇಂದಿರಾ ಅವರಿಗೆ ಅವಕಾಶ ನೀಡಿದ್ದಿದ್ದರೆ ದೇಶದ ಪ್ರಜಾತಂತ್ರವು ಶಾಶ್ವತವಾಗಿ ಹಳಿತಪ್ಪಿರುತ್ತಿತ್ತು. ಇಂದಿರಾ ಗಾಂಧಿ ಅವರ ಸರ್ವಾಧಿಕಾರದ ಕರಾಳ ಛಾಯೆಯನ್ನು ವಿವರಿಸುವ ನೂರಾರು ನಿದರ್ಶನಗಳು ಇವೆ. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಒಂದು ಪ್ರಸಂಗವು ಆಗ ಆಡಳಿತ ನಡೆಸುತ್ತಿದ್ದುದು ಸರ್ವಾಧಿಕಾರಿ ಸರ್ಕಾರವಷ್ಟೇ ಅಲ್ಲ ಅದು ಫ್ಯಾಸಿಸ್ಟ್ ಸರ್ಕಾರವೂ ಹೌದು ಎಂಬುದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಟ್ಟಿತು.

ಹೇಬಿಯಸ್ ಕಾರ್ಪಸ್ ಪ್ರಕರಣ ಎಂದೇ ಖ್ಯಾತವಾಗಿರುವುದಕ್ಕೆ ಸಂಬಂಧಿಸಿದ್ದು ಇದು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿತ್ತು. ನ್ಯಾಯಮೂರ್ತಿಗಳಾದ ಎ.ಎನ್. ರೇ (ಸಿಜೆಐ), ಎಚ್.ಆರ್. ಖನ್ನಾ, ಎಚ್.ಎಂ. ಬೇಗ್, ವೈ.ವಿ. ಚಂದ್ರಚೂಡ್ ಮತ್ತು ‍ಪಿ.ಎನ್. ಭಗವತಿ ಅವರಿದ್ದ ನ್ಯಾಯಪೀಠ ಈ ವಿಚಾರಣೆ ನಡೆಸಿತ್ತು. ತುರ್ತು ಪರಿಸ್ಥಿತಿ ಘೋಷಣೆಯಾದ ನಂತರದಲ್ಲಿ ರಾಷ್ಟ್ರಪತಿಯವರು, ಸರ್ಕಾರದ ನಿರ್ದೇಶನ ಆಧರಿಸಿ ಜೂನ್‌ 27ರಂದು ಆದೇಶವೊಂದನ್ನು ಹೊರಡಿಸಿದರು. ಸಂವಿಧಾನ ನೀಡಿರುವ ಕೆಲವು ಮೂಲಭೂತ ಹಕ್ಕುಗಳನ್ನು ಅಮಾನತಿನಲ್ಲಿ ಇರಿಸುವ ಆದೇಶ ಅದು. ಕಾನೂನಿನ ಎದುರು ಎಲ್ಲರೂ ಸಮಾನರು (ಸಂವಿಧಾನದ 14ನೆಯ ವಿಧಿ), ಜೀವಿಸುವ ಸ್ವಾತಂತ್ರ್ಯದಂತಹ (21ನೆಯ ವಿಧಿ) ಮೂಲಭೂತ ಹಕ್ಕುಗಳು ಕೂಡ ಅಮಾನತು ಆದವು. ಆಂತರಿಕ ಭದ್ರತೆಯ ನಿರ್ವಹಣೆ ಕಾಯ್ದೆಯ (ಮೀಸಾ) ಅಡಿಯಲ್ಲಿ ಬಂಧಿತರಾಗಿದ್ದವರು, ಈ ಆದೇಶವು ಸಂವಿಧಾನದ ಚೌಕಟ್ಟನ್ನೂ ಮೀರಿದ್ದು, ಇದನ್ನು ರದ್ದುಪಡಿಸಬೇಕು ಎಂದು ವಾದಿಸಿದರು.

ADVERTISEMENT

ಈ ಪ್ರಕರಣದ ವಿಚಾರಣೆ ವೇಳೆ ಅಂದಿನ ಅಟಾರ್ನಿ ಜನರಲ್ ನೀರೆನ್ ಡೇ ಅವರು, ‘ತುರ್ತು ಪರಿಸ್ಥಿತಿ ಜಾರಿಯಲ್ಲಿರುವಷ್ಟು ಕಾಲ ಯಾವ ಪ್ರಜೆಯೂ ಸಂವಿಧಾನದ 21ನೆಯ ವಿಧಿಯು ನೀಡಿರುವ ಹಕ್ಕುಗಳ ಜಾರಿಗೆ ಆಗ್ರಹಿಸಿ ನ್ಯಾಯಾಲಯದ ಕದ ತಟ್ಟುವಂತಿಲ್ಲ’ ಎಂದು ವಾದಿಸಿದರು. ಇಂತಹ ವಾದ ಕೇಳಿದಾಗ ಪ್ರಜಾತಂತ್ರದ ಪರ ಇರುವ ಯಾರಿಗೇ ಆದರೂ ಆಘಾತವಾಗುತ್ತಿತ್ತು. ಆದರೆ, ನ್ಯಾಯಮೂರ್ತಿ ಖನ್ನಾ ಅವರನ್ನು ಹೊರತುಪಡಿಸಿ ಇತರ ನಾಲ್ವರು ನ್ಯಾಯಮೂರ್ತಿಗಳು ಅಟಾರ್ನಿ ಜನರಲ್ ವಾದವನ್ನು ಮೌನವಾಗಿ ಆಲಿಸಿದರು. ಆ ಸಂದರ್ಭದ ಬಗ್ಗೆ ನ್ಯಾಯಮೂರ್ತಿ ಖನ್ನಾ ಅವರು ತಮ್ಮ ಆತ್ಮಕಥೆಯಲ್ಲಿ (Neither Roses nor Thorns) ಬರೆದಿದ್ದಾರೆ. ಮಾನವ ಹಕ್ಕುಗಳ ಬಗ್ಗೆ ಬಹಳ ಮಾತನಾಡುತ್ತಿದ್ದ ತಮ್ಮ ಕೆಲವು ಸಹೋದ್ಯೋಗಿಗಳು ‘ನಾಲಿಗೆ ಕಟ್ಟಿದಂತೆ ಕುಳಿತಿದ್ದರು’, ‘ಅವರ ಮೌನವು ಭಯ ಮೂಡಿಸುವಂತೆ ಇತ್ತು’ ಎಂದು ಹೇಳಿದ್ದಾರೆ. ನೀರೆನ್ ಡೇ ವಾದಕ್ಕೆ ಅವರು ಪ್ರತಿಕ್ರಿಯಿಸದೆ ಇದ್ದುದು, ಬಹುಮತವು ಯಾವ ಕಡೆ ಇದೆ ಎಂಬುದನ್ನು ಸೂಚಿಸುವಂತಿತ್ತು. ಹೀಗಿದ್ದರೂ ಖನ್ನಾ ಅವರು ಅಟಾರ್ನಿ ಜನರಲ್ ಅವರ ವಾದಕ್ಕೆ ವಿರುದ್ಧವಾಗಿ ಪ್ರಶ್ನೆ ಹಾಕಲು ನಿರ್ಧರಿಸಿದರು. ನ್ಯಾಯಮೂರ್ತಿ ಖನ್ನಾ ಅವರು, ನೀರೆನ್ ಡೇ ಅವರನ್ನು ಪ್ರಶ್ನಿಸಿದರು. ‘ಪೊಲೀಸ್ ಅಧಿಕಾರಿಯೊಬ್ಬ ವೈಯಕ್ತಿಕ ದ್ವೇಷದಿಂದಾಗಿ ಇನ್ನೊಬ್ಬನನ್ನು ಕೊಂದರೆ ನ್ಯಾಯ ಸಿಗುತ್ತದೆಯೇ’ ಎಂದು ಕೇಳಿದರು. ಇದಕ್ಕೆ ನೀರೆನ್ ಡೇ ಉತ್ತರ ಸ್ಪಷ್ಟವಾಗಿತ್ತು ಎಂದು ಖನ್ನಾ ನೆನಪಿಸಿಕೊಂಡಿದ್ದಾರೆ. ‘ಇಂತಹ ಪ್ರಕರಣಗಳಲ್ಲಿ, ತುರ್ತು ಪರಿಸ್ಥಿತಿ ಇರುವಷ್ಟು ಕಾಲ ನ್ಯಾಯಾಂಗದ ಮೂಲಕ ನ್ಯಾಯ ಕೇಳುವಂತಿಲ್ಲ’ ಎಂದು ಉತ್ತರಿಸಿದರು ಡೇ! ಅಲ್ಲದೆ, ‘ಈ ಮಾತು ನಿಮ್ಮ ಆತ್ಮಸಾಕ್ಷಿಯನ್ನು ಕಲಕಬಹುದು. ನನ್ನ ಆತ್ಮಸಾಕ್ಷಿಯನ್ನು ಕಲಕಿದೆ ಇದು. ಆದರೆ, ಆ ವಿಚಾರವಾಗಿ ನ್ಯಾಯಾಲಯದಲ್ಲಿ ಯಾವುದೇ ವಿಚಾರಣೆ ನಡೆಯುವಂತಿಲ್ಲ’ ಎಂದು ಅವರು ಉತ್ತರಿಸಿದರು.

ಇದು ಅಟಾರ್ನಿ ಜನರಲ್ ಅವರ ಆತ್ಮಸಾಕ್ಷಿಗೆ ಆಘಾತ ಉಂಟುಮಾಡಿದ್ದರೂ, ಅದು ನ್ಯಾಯಪೀಠದ ಬಹುತೇಕರ ಆತ್ಮಸಾಕ್ಷಿಯನ್ನು ಕಲಕಲಿಲ್ಲ. ಸಿಜೆಐ ರೇ, ನ್ಯಾಯಮೂರ್ತಿಗಳಾದ ಬೇಗ್, ಚಂದ್ರಚೂಡ್ ಮತ್ತು ಭಗವತಿ ಅವರು, ಜೀವಿಸುವ ಸ್ವಾತಂತ್ರ್ಯವನ್ನು ಅಮಾನತಿನಲ್ಲಿ ಇರಿಸುವ ಸರ್ಕಾರದ ಆದೇಶವನ್ನು ಎತ್ತಿಹಿಡಿದರು. ಬಂಧಿತರಿಗೆ ‘ಒಳ್ಳೆಯ ಆಹಾರ ಕೊಡಲಾಗುತ್ತದೆ, ಚೆನ್ನಾಗಿ ನೋಡಿಕೊಳ್ಳಲಾಗುತ್ತದೆ. ಅವರಿಗೆ ಸರಿಸುಮಾರಾಗಿ ಮಾತೃ ಸಮಾನ ಕಾಳಜಿ ತೋರಲಾಗುತ್ತದೆ’ ಎಂದು ನ್ಯಾಯಮೂರ್ತಿ ಬೇಗ್ ಹೇಳಿದ್ದರು.

ಅಂದರೆ, ತುರ್ತು ಪರಿಸ್ಥಿತಿ ಎನ್ನುವುದು ಈ ರೀತಿ ಇರುತ್ತದೆ. ದೇಶದ ಪ್ರಜೆಗಳು ತಮ್ಮ ಮೂಲಭೂತ ಹಕ್ಕಾಗಿರುವ ಜೀವಿಸುವ ಸ್ವಾತಂತ್ರ್ಯ ಹಾಗೂ ವೈಯಕ್ತಿಕ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದರು. ದುರದೃಷ್ಟದ ಸಂಗತಿಯೆಂದರೆ, ಸುಪ್ರೀಂ ಕೋರ್ಟ್‌ ಇದಕ್ಕೆ ಅನುಮೋದನೆ ನೀಡಿತು! ಇದರ ಅರ್ಥವೇನು ಅಂದರೆ, ತುರ್ತು ಪರಿಸ್ಥಿತಿಯು ಅಧಿಕೃತ ಫ್ಯಾಸಿಸ್ಟ್ ಆಡಳಿತದ ಎಲ್ಲ ಗುಣಲಕ್ಷಣಗಳನ್ನು ಹೊಂದಿತ್ತು. ಹಾಗಾಗಿ, ಪ್ರಧಾನಿ ಮತ್ತು ಅವರ ಸಂಪುಟದ ಸಹೋದ್ಯೋಗಿಗಳ ವಿರುದ್ಧ ಕೆಲವು ನಾಗರಿಕರು, ಕೆಲವು ರಾಜಕಾರಣಿಗಳು ಪ್ರತಿದಿನವೂ ಮಾತು ಮತ್ತು ಬರಹಗಳ ಮೂಲಕ ದಾಳಿ ನಡೆಸುವುದು ಹಾಸ್ಯಾಸ್ಪದ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ತಮಗೆ ತೋಚಿದಂತೆ ಮಾತನಾಡುತ್ತಿದ್ದಾರೆ– ಅಲ್ಲಿ ಯಾವ ಸಭ್ಯತೆಯೂ ಇಲ್ಲವಾಗಿದೆ.

ಈಗ ಮತ್ತೆ ಹೇಬಿಯಸ್ ಕಾರ್ಪಸ್ ಅರ್ಜಿಯ ಕಡೆ ಮರಳೋಣ. ಇಂದಿರಾ ಗಾಂಧಿ ಅವರು ನ್ಯಾಯಮೂರ್ತಿ ಖನ್ನಾ ಅವರ ಸೇವಾ ಹಿರಿತನ ಕಡೆಗಣಿಸಿ, ನ್ಯಾಯಮೂರ್ತಿ ಬೇಗ್ ಅವರನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ನೇಮಕ ಮಾಡಿದರು. ನ್ಯಾಯಮೂರ್ತಿಗಳಾದ ಚಂದ್ರಚೂಡ್ ಹಾಗೂ ಭಗವತಿ ಅವರೂ ದೇಶದ ಸುಪ್ರೀಂ ಕೋರ್ಟ್‌ನ ಅತ್ಯಂತ ಉನ್ನತ ಹುದ್ದೆಯನ್ನು ಅಲಂಕರಿಸಿದರು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇದ್ದವರ ಪಾಲಿಗೆ, ಅದರ ವಿರುದ್ಧ ಹೋರಾಟ ನಡೆಸಿದ್ದವರ ಪಾಲಿಗೆ ಆ ಕಾಲವು ಇದ್ದಿದ್ದು ಹೀಗೆ. ಇತರ ಹಕ್ಕುಗಳ ಬಗ್ಗೆ ಮಾತನಾಡುವುದು ಬದಿಗಿರಲಿ, ಅವರಿಗೆ ಜೀವಿಸುವ ಸ್ವಾತಂತ್ರ್ಯವೂ ಇರಲಿಲ್ಲ. ಹಾಗಾಗಿ, ತುರ್ತು ಪರಿಸ್ಥಿತಿಯ ಪರಿಣಾಮವನ್ನು ಮರೆಮಾಚುವ ಅಥವಾ ಅದರ ಕೆಟ್ಟ ಪರಿಣಾಮಗಳು ಕಡಿಮೆ ಎಂಬಂತೆ ಬಿಂಬಿಸುವ ಯಾವುದೇ ಯತ್ನವನ್ನು ವಿರೋಧಿಸಬೇಕು. ನಾವು ನಮ್ಮ ಪ್ರಜಾತಾಂತ್ರಿಕ ಹಾಗೂ ಸಾಂವಿಧಾನಿಕ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದೇವೆ ಎಂದಾದರೆ ಈ ಕೆಲಸ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.