ADVERTISEMENT

ಸೂರ್ಯ ನಮಸ್ಕಾರ: ನ್ಯಾಯಾಂಗದ ಬಗ್ಗೆ ಅನ್ಯಾಯದ ಟೀಕೆ ಬೇಡ

ರಾಜಕೀಯ ಉದ್ದೇಶಗಳಿಗಾಗಿ ನಮ್ಮ ನ್ಯಾಯಾಂಗವನ್ನು ನಾವೇ ಲಘುವಾಗಿ ಕಂಡರೆ...?

ಎ.ಸೂರ್ಯ ಪ್ರಕಾಶ್
Published 25 ಏಪ್ರಿಲ್ 2021, 18:19 IST
Last Updated 25 ಏಪ್ರಿಲ್ 2021, 18:19 IST
   

ಈಚಿನ ದಿನಗಳಲ್ಲಿ ದೇಶದ ನ್ಯಾಯಾಂಗವು ತೀವ್ರ ಟೀಕೆಗಳಿಗೆ ಗುರಿಯಾಗಿದೆ. ನಾಗರಿಕರ ಸ್ವಾತಂತ್ರ್ಯವನ್ನು ಹಾಗೂ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವ ವಿಚಾರದಲ್ಲಿ ಹೆಬ್ಬಂಡೆಯಂತೆ ನಿಂತಿದ್ದ ನ್ಯಾಯಾಂಗವು ಈಗ ಸ್ವತಂತ್ರವಾಗಿ, ವಿಶ್ವಾಸಾರ್ಹವಾಗಿ ಉಳಿದಿಲ್ಲ ಎಂದು ಭಾವಿಸಿದವರು ಟೀಕೆಗಳನ್ನು ಮಾಡುತ್ತಿದ್ದಾರೆ.

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ನ್ಯಾಯಾಂಗದ ನಿಷ್ಪಕ್ಷಪಾತ ಧೋರಣೆಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ. ಇಂತಹ ಪ್ರಶ್ನೆಗಳು ಬೇರೆ ಹಲವು ‍ಪ್ರಜಾತಂತ್ರ ವ್ಯವಸ್ಥೆಗಳಲ್ಲೂ ಮೂಡಿದ್ದಿದೆ. ಅಮೆರಿಕದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸುವ ಡೆಮಾಕ್ರಟಿಕ್‌ ಪಕ್ಷದವರ ನಡೆಯ ಬಗ್ಗೆ ಈ ಹೊತ್ತಿನಲ್ಲಿ ದೊಡ್ಡ ಚರ್ಚೆ ನಡೆದಿದೆ. ಕೋರ್ಟ್‌ನಲ್ಲಿರಿಪಬ್ಲಿಕನ್ನರೇ ಹೆಚ್ಚಿದ್ದಾರೆ ಎಂದು ಡೆಮಾಕ್ರಟಿಕ್ ಪಕ್ಷದವರು ನಂಬಿದ್ದಾರೆ! ಹಾಗಾದರೆ, ಅಮೆರಿಕದ ಈಗಿನ ಸುಪ್ರೀಂ ಕೋರ್ಟ್‌ ವಿಶ್ವಾಸಾರ್ಹವಲ್ಲದ ಸಂಸ್ಥೆಯಾಗುತ್ತದೆಯೇ? ಇಂತಹ ಚರ್ಚೆಗಳು ನಡೆಯುವುದುಪ್ರಜಾತಂತ್ರ ವ್ಯವಸ್ಥೆಗಳಲ್ಲಿ ಮಾತ್ರ. ಚೀನಾದ ನ್ಯಾಯಾಲಯ ಗಳ ಬಗ್ಗೆ ಇಂತಹ ತೀಕ್ಷ್ಣ ಮಾತುಗಳು ಕೇಳಿಸುತ್ತವೆಯೇ?

ಸಾಮಾಜಿಕ ಮಾಧ್ಯಮಗಳಲ್ಲಿ ಯಾರು, ಏನು ಬೇಕಿದ್ದರೂ ಹೇಳಬಹುದು ಎಂಬುದು ಫ್ಯಾಷನ್ ಆಗಿದೆ. ಬೇಜವಾಬ್ದಾರಿಯ, ಹಿಂದೆ–ಮುಂದೆ ಆಲೋಚಿಸದ ಹಲವು ಮಾತುಗಳನ್ನು ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಆಡಲಾಗುತ್ತಿದೆ. ಇಂತಹವುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗಿದೆ.

ADVERTISEMENT

18 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ಯಾವುದೇ ವ್ಯಕ್ತಿ ತನ್ನ ಇಚ್ಛೆಯ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹೊಂದಿದ್ದಾನೆ ಎಂದು ಈಚೆಗೆ ಸುಪ್ರೀಂ ಕೋರ್ಟ್‌ ಘೋಷಿಸಿತು. ಮತಾಂತರವನ್ನು ನಿರ್ಬಂಧಿಸು ವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂಬ ಅರ್ಜಿಯನ್ನು ತಿರಸ್ಕರಿಸಿತು. ವಾಸ್ತವದಲ್ಲಿ, ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಮೂರ್ತಿಗಳ ಪೀಠಕ್ಕೆ ಮನಸ್ಸೇ ಇರಲಿಲ್ಲ. ಈ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬೇಕು ಎಂಬ ಒತ್ತಾಯ ಮುಂದುವರಿಸಿದರೆ ದಂಡ ವಿಧಿಸುವುದಾಗಿ ನ್ಯಾಯಪೀಠ ಹೇಳಿತು. ಧಾರ್ಮಿಕ ಸ್ವಾತಂತ್ರ್ಯವನ್ನು ಖಾತರಿಪಡಿಸುವ, ವ್ಯಕ್ತಿಯು ತನಗೆ ಇಷ್ಟವಾದ ಧರ್ಮವನ್ನು ಪಾಲಿಸುವ, ಪ್ರಚಾರ ಮಾಡುವ ಹಕ್ಕು ಇದೆ ಎನ್ನುವ ಸಂವಿಧಾನದ 25ನೆಯ ವಿಧಿಯಲ್ಲಿ ಹೇಳಿರುವ ಮಾತುಗಳನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿಯಿತು.

ಇದಾದ ನಂತರ, ಕುರ್‌ಆನ್‌ನಲ್ಲಿನ ಕೆಲವು ಸಾಲು ಗಳನ್ನು ತೆಗೆದುಹಾಕಬೇಕು ಎಂಬ ಅರ್ಜಿಯೊಂದನ್ನು ಕೂಡ ಸುಪ್ರೀಂ ಕೋರ್ಟ್‌ ತಿರಸ್ಕರಿಸಿತು. ಈ ಸಾಲುಗಳನ್ನು ಮುಂದಿಟ್ಟುಕೊಂಡು ಎಳೆಯ ವಯಸ್ಸಿನವರ ಮನಸ್ಸಿನಲ್ಲಿ ಕೆಟ್ಟ ವಿಚಾರ ಬಿತ್ತಲಾಗುತ್ತಿದೆ, ಭಯೋತ್ಪಾದಕರು ಮುಸ್ಲಿಮೇತರರ ಮೇಲೆ ನಡೆಸುವ ದಾಳಿಗಳನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ ಎಂದು ಅರ್ಜಿದಾರರು ವಾದಿಸಿದ್ದರು. ಅರ್ಜಿಯು ‘ಅವಿವೇಕತನದ್ದು’ ಎಂದು ಹೇಳಿದ ನ್ಯಾಯಪೀಠವು, ಅರ್ಜಿದಾರ ಸೈಯದ್ ವಸೀಂ ರಿಜ್ವಿ ಅವರಿಗೆ ₹ 50 ಸಾವಿರ ದಂಡ ವಿಧಿಸಿತು. ರಿಜ್ವಿ ಅವರು ಶಿಯಾ ವಕ್ಫ್‌ ಮಂಡಳಿಯ ಮಾಜಿ ಅಧ್ಯಕ್ಷ ಕೂಡ ಹೌದು.

ಕೋರ್ಟ್‌ ಈಚೆಗೆ ನೀಡಿದ ಇನ್ನೊಂದು ತೀರ್ಪು ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಿತು. ‘ಶಿಲ್ಲಾಂಗ್‌ ಟೈಮ್ಸ್‌’ನ ಸಂಪಾದಕ ಪ್ಯಾಟ್ರಿಸಿಯಾ ಮುಖಿಂ ವಿರುದ್ಧ ದಾಖಲಾದ ಎಫ್‌ಐಆರ್‌ ರದ್ದುಪಡಿಸುವುದಕ್ಕೆ ಸಂಬಂಧಿಸಿದ ಅರ್ಜಿ ಇದು. ಮೇಘಾಲಯದ ಒಂದೆಡೆ ಆದಿವಾಸಿಗಳು, ಆರು ಜನ ಇತರರ ಮೇಲೆ ಹಲ್ಲೆ ನಡೆಸಿದ್ದಾರೆ, ಹಲ್ಲೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಮುಖಿಂ ಅವರು 2020ರಲ್ಲಿ ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಆದರೆ, ಎರಡು ಗುಂಪುಗಳ ನಡುವೆ ದ್ವೇಷ ಬಿತ್ತುತ್ತಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಆದಿವಾಸಿ ನಾಯಕರು ಮುಖಿಂ ವಿರುದ್ಧ ದೂರು ನೀಡಿದ್ದರು. ಮುಖಿಂ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.

ಎಫ್‌ಐಆರ್‌ ರದ್ದುಪಡಿಸಿದ ಎಲ್. ನಾಗೇಶ್ವರ ಮತ್ತು ಎಸ್. ರವೀಂದ್ರ ಭಟ್ ಅವರಿದ್ದ ಪೀಠವು, ‘ಕ್ರಿಮಿನಲ್ ಪ್ರಕರಣ ದಾಖಲಿಸಿ ಈ ದೇಶದ ನಾಗರಿಕರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸಾಧ್ಯವಿಲ್ಲ’ ಎಂದು ಹೇಳಿತು. ‘ಭಾರತವು ಬಹುತ್ವದ, ಬಹುಸಂಸ್ಕೃತಿಗಳ ನಾಡು. ಸಂವಿಧಾನದ ಪೀಠಿಕೆಯಲ್ಲಿ ಹೇಳಿರುವ ಸ್ವಾತಂತ್ರ್ಯವು ಅಭಿವ್ಯಕ್ತಿ ಸ್ವಾತಂತ್ರ್ಯ, ಸಂಚಾರದ ಸ್ವಾತಂತ್ರ್ಯ ಸೇರಿದಂತೆ ಹಲವು ರೂಪಗಳಲ್ಲಿ ವ್ಯಕ್ತವಾಗುತ್ತದೆ’ ಎಂದು ಕೂಡ ಪೀಠವು ಹೇಳಿದೆ.

ಸುಪ್ರೀಂ ಕೋರ್ಟ್‌ ಮಾತ್ರವೇ ಅಲ್ಲ, ಹೈಕೋರ್ಟ್‌ಗಳು ಕೂಡ ಮಹತ್ವದ ಆದೇಶಗಳನ್ನು ಈಚೆಗೆ ನೀಡಿವೆ. ಅಲಹಾಬಾದ್ ಹೈಕೋರ್ಟ್‌ ಈಚೆಗೆ ಪ್ರಕಟಿಸಿದ ಕೆಲವು ಮಹತ್ವದ ಆದೇಶಗಳನ್ನು ಇಲ್ಲಿ ಉಲ್ಲೇಖಿಸಬಹುದು. ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿಯಾದ ನಂತರ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಯಶವಂತ್ ಸಿಂಗ್ ಎನ್ನುವವರು ಮಾಡಿದ್ದ ಟ್ವೀಟ್‌ಗೆ ಎಫ್‌ಐಆರ್‌ ದಾಖಲಿಸಲಾಗಿತ್ತು. ಉತ್ತರ ಪ್ರದೇಶದಲ್ಲಿ ‘ಜಂಗಲ್ ರಾಜ್‌’ ಇದೆ ಎಂದುಸಿಂಗ್ ಹೇಳಿದ್ದರು. ಈ ಎಫ್‌ಐಆರ್‌ ಅನ್ನು ಕಳೆದ ಡಿಸೆಂಬರ್‌ನಲ್ಲಿ ರದ್ದುಪಡಿಸಿದ ಅಲಹಾಬಾದ್ ಹೈಕೋರ್ಟ್‌, ‘ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಭಿನ್ನಾಭಿಪ್ರಾಯ ದಾಖಲಿಸುವುದು ನಮ್ಮಂತಹ ಉದಾರವಾದಿ ಪ್ರಜಾತಂತ್ರ ವ್ಯವಸ್ಥೆಗಳ ಆತ್ಮವಿದ್ದಂತೆ’ ಎಂದು ಹೇಳಿತು.

ಉತ್ತರ ಪ್ರದೇಶದ ಜಿಲ್ಲಾ ಮ್ಯಾಜಿಸ್ಟ್ರೇಟರೊಬ್ಬರು ದಾಖಲಿಸಿದ ಪ್ರಕರಣಗಳ ಬಗ್ಗೆ ದಿನಪತ್ರಿಕೆಯೊಂದು ಈಚೆಗೆ ತನಿಖೆ ನಡೆಸಿತು. ಕೆಲವು ವ್ಯಕ್ತಿಗಳನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿಯಲ್ಲಿ ಮುಂಜಾಗ್ರತೆಯ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದ ಪ್ರಕರಣ ಇದು. ಅಲಹಾಬಾದ್ ಹೈಕೋರ್ಟ್‌ನಲ್ಲಿ ದಾಖಲಾದ 120 ಹೇಬಿಯಸ್ ಕಾರ್ಪಸ್ ಅರ್ಜಿಗಳ ಪೈಕಿ 94 ಅರ್ಜಿಗಳ ವಿಚಾರದಲ್ಲಿ ಕೋರ್ಟ್‌, ಬಂಧಿತರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ ಎಂದು ವರದಿ ಹೇಳಿದೆ.

ನ್ಯಾಯಾಂಗದಲ್ಲಿ ಲೋಪಗಳೇ ಇಲ್ಲ ಎನ್ನಲು ಇವನ್ನೆಲ್ಲ ಹೇಳುತ್ತಿಲ್ಲ. ಅಲ್ಲಿ ಸಮಸ್ಯೆಗಳಿವೆ. ಆದರೆ, ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗದ ನಡುವಿನ ಅಧಿಕಾರ ವ್ಯಾಪ್ತಿ ಸ್ಪಷ್ಟವಾಗಿ ಪ್ರತ್ಯೇಕಿಸಲ್ಪಟ್ಟಿದೆ. ಯಾವ ಅಂಗವೂ ಇನ್ನೊಂದು ಅಂಗದ ಮೇಲೆ ಸವಾರಿ ನಡೆಸದಿರಲಿ ಎಂದು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಾರ್ವಜನಿಕ ರಿಗೆ ಸಂವಿಧಾನದ 21ನೆಯ ವಿಧಿ ಖಾತರಿಪಡಿಸುವ ಸ್ವಾತಂತ್ರ್ಯಗಳು ಇರುವುದಿಲ್ಲ ಎಂಬ ವಾದ ಮುಂದಿಟ್ಟು ನುಣುಚಿಕೊಳ್ಳಲು ಸರ್ಕಾರಕ್ಕೆ ನ್ಯಾಯಾಂಗವು ಅವಕಾಶ ಕಲ್ಪಿಸಿದ್ದನ್ನು ಹೊರತುಪಡಿಸಿದರೆ, ನ್ಯಾಯಾಂಗವು ಯಾವಾಗಲೂ ನಾಗರಿಕರ ಹಕ್ಕುಗಳ ಪರವಾಗಿ ನಿಂತಿದೆ, ಹಕ್ಕುಗಳನ್ನು ರಕ್ಷಿಸಿದೆ.

ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಪೀಠ ಬಹುಮತದ ಆಧಾರದಲ್ಲಿ ನೀಡಿದ ತೀರ್ಪು ದೇಶದಲ್ಲಿ ಪ್ರಜಾತಾಂತ್ರಿಕ ಮೌಲ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ನೀಡಿದ ಅವಿಸ್ಮರಣೀಯ ಕೊಡುಗೆಯೇ ಸರಿ. 1973ರಲ್ಲಿ ನೀಡಿದ ಈ ತೀರ್ಪಿನಲ್ಲಿ ಕೋರ್ಟ್‌, ‘ಸಂವಿಧಾನಕ್ಕೆ ತಿದ್ದುಪಡಿ ತರುವ ಅಧಿಕಾರ ಸಂಸತ್ತಿಗೆ ಇದೆಯಾದರೂ, ಸಂವಿಧಾನದ ಮೂಲ ಸ್ವರೂಪವನ್ನು ಬದಲಾಯಿಸುವಂತೆ ಇಲ್ಲ’ ಎಂದು ಹೇಳಿತು. ಈ ತೀರ್ಪು ಸರಿಸುಮಾರು ಅರ್ಧ ಶತಮಾನದಿಂದ ನಮ್ಮ ಮೂಲಭೂತ ಹಕ್ಕುಗಳನ್ನುರಕ್ಷಿಸುತ್ತಿರುವ ವಜ್ರ ಕವಚವಿದ್ದಂತೆ.

ರಾಜಕೀಯ ಉದ್ದೇಶಗಳಿಗಾಗಿ ನಮ್ಮ ನ್ಯಾಯಾಂಗ ವನ್ನು ನಾವೇ ಲಘುವಾಗಿ ಕಂಡರೆ, ನಮ್ಮ ಹಕ್ಕುಗಳನ್ನು ಕಾರ್ಯಾಂಗ ಅಥವಾ ಶಾಸಕಾಂಗ ಮೊಟಕುಗೊಳಿಸಲು ಮುಂದಾದಾಗ ನಾವು ಹೋಗುವುದೆಲ್ಲಿಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.