ADVERTISEMENT

ಸೂರ್ಯ-ನಮಸ್ಕಾರ | ಕೋವಿಡ್: ರಾಜ್ಯಗಳ ಉತ್ತರದಾಯಿತ್ವ ಏನು?

ಆಸ್ಪತ್ರೆಗಳಲ್ಲಿ ನಡೆಯುವ ದುರ್ಘಟನೆಗಳಿಗೆ ಪ್ರಾಥಮಿಕ ಹೊಣೆಯನ್ನು ಹೊರಬೇಕಿರುವುದು ರಾಜ್ಯ ಸರ್ಕಾರಗಳು

ಎ.ಸೂರ್ಯ ಪ್ರಕಾಶ್
Published 28 ಮೇ 2021, 19:30 IST
Last Updated 28 ಮೇ 2021, 19:30 IST
   

ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಆಗಿದೆ. ಹೀಗಿದ್ದರೂ, ದೆಹಲಿ ಮತ್ತು ಹಲವು ರಾಜ್ಯಗಳ ಆಸ್ಪತ್ರೆಗಳಲ್ಲಿ ಕಳೆದ ಕೆಲವು ವಾರಗಳಲ್ಲಿ ಆಮ್ಲಜನಕದ ಕೊರತೆಯಿಂದಾಗಿ, ಹಾಸಿಗೆಗಳು ಇಲ್ಲದೆ, ಕೋವಿಡ್‌ ಚಿಕಿತ್ಸೆಗೆ ಅಗತ್ಯವಾದ ಔಷಧಗಳು ಸಿಗದೆ ರೋಗಿಗಳು ಮೃತಪಟ್ಟಿದ್ದು ದೇಶದ ಅಂತಃಸಾಕ್ಷಿಯನ್ನು ಕಲಕಿದೆ. ಸಿಬ್ಬಂದಿಯ ಅಕ್ಷಮ್ಯ ನಿರ್ಲಕ್ಷ್ಯದಿಂದಾಗಿ ಕೋವಿಡ್‌ ರೋಗಿಗಳಿಗೆ ಆಮ್ಲಜನಕ ಸರಿಯಾಗಿ ಸಿಗದೆ ಅವರು ಮೃತಪಟ್ಟ ಭಯಾನಕ ಘಟನೆಗಳು ದೇಶದ ಬೇರೆ ಬೇರೆ ಕಡೆಗಳಿಂದ ವರದಿಯಾಗಿವೆ.

ಕರ್ನಾಟಕದ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಮೇ 2 ಮತ್ತು 3ರಂದು ಆಮ್ಲಜನಕ ಸಿಗದ ಕಾರಣ ಒಟ್ಟು 23 ಜನ ಪ್ರಾಣ ಕಳೆದುಕೊಂಡರು. ಈ ದುರಂತದ ಬಗ್ಗೆ ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್‌ ನೇಮಿಸಿದ್ದ ಮೂವರು ಸದಸ್ಯರ ಸಮಿತಿಯು ಜಿಲ್ಲಾ ಆಡಳಿತದ ಮೇಲೆ, ಆಸ್ಪತ್ರೆಯ ಅಧಿಕಾರಿಗಳ ಮೇಲೆ ದೋಷ ಹೊರಿಸಿದೆ. ಇವರು ಬಿಕ್ಕಟ್ಟಿನ ಮೇಲೆ ನಿಗಾ ಇರಿಸದೆ, ಬೇರೆ ಬೇರೆ ಹಂತಗಳಲ್ಲಿ ಉಡಾಫೆಯ ಧೋರಣೆ ಪ್ರದರ್ಶಿಸಿದ ಕಾರಣದಿಂದಾಗಿ ಹೀಗಾಗಿದೆ ಎಂದು ಹೇಳಿದೆ.

ಆಮ್ಲಜನಕ ಲಭ್ಯವಾಗದ ಕಾರಣ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 80ಕ್ಕೂ ಹೆಚ್ಚು ರೋಗಿಗಳು ಜೀವ ಕಳೆದುಕೊಂಡಿದ್ದಾರೆ ಎಂಬ ವರದಿಗಳಿವೆ. ಈ ಎಲ್ಲ ಸಾವುಗಳಿಗೆ ಕಾರಣ ಆಮ್ಲಜನಕದ ಕೊರತೆ ಅಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಈ ಸಂಸ್ಥೆಯಲ್ಲಿನ ಆಮ್ಲಜನಕ ಪೂರೈಕೆ ವ್ಯವಸ್ಥೆ ತೀರಾ ಹಳತಾಗಿತ್ತು, ಅಗತ್ಯ ಪ್ರಮಾಣದಲ್ಲಿ ಆಮ್ಲಜನಕ ಸಂಗ್ರಹಕ್ಕೆ ಕೂಡ ವ್ಯವಸ್ಥೆ ಇರಲಿಲ್ಲ ಎಂಬ ಮಾತುಗಳಿವೆ. ಈ ಪ್ರಕರಣದಲ್ಲಿ, ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ನಾಗರಿಕರ ಪರವಾಗಿ ಮಧ್ಯಪ್ರವೇಶ ಮಾಡಬೇಕಾಯಿತು.

ADVERTISEMENT

ಮಹಾರಾಷ್ಟ್ರ ಮತ್ತು ಹರಿಯಾಣದ ಹಲವು ಸಣ್ಣ ನಗರಗಳಿಂದ, ಆಸ್ಪತ್ರೆಗಳಲ್ಲಿ ರೋಗಿಗಳು ಇದೇ ರೀತಿ ಮೃತಪಟ್ಟ ಬಗ್ಗೆ ವರದಿಗಳು ಬಂದಿವೆ.

ಆಮ್ಲಜನಕದ ಕೊರತೆಯಿಂದ ರೋಗಿಗಳು ಮೃತಪಟ್ಟ ಘಟನೆಗಳು ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಉತ್ತರಾಖಂಡ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಗೋವಾ ರಾಜ್ಯಗಳಿಂದ ವರದಿಯಾಗಿವೆ. 14 ರಾಜ್ಯಗಳಲ್ಲಿ, ಅಂದರೆ, ದೇಶದ ಅರ್ಧದಷ್ಟು ರಾಜ್ಯಗಳಲ್ಲಿ ಹೀಗಾಗಿದೆ. ಈ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವುದು ಬಿಜೆಪಿ, ಕಾಂಗ್ರೆಸ್, ಎಎಪಿ, ಶಿವಸೇನೆ, ವೈಎಸ್‌ಆರ್‌ ಕಾಂಗ್ರೆಸ್, ಟಿಆರ್‌ಎಸ್‌, ಡಿಎಂಕೆ ಪಕ್ಷಗಳು. ಮಹಾರಾಷ್ಟ್ರ ಸರ್ಕಾರವನ್ನು ನಡೆಸುತ್ತಿರುವುದು ಶಿವಸೇನಾ, ಕಾಂಗ್ರೆಸ್, ಎನ್‌ಸಿಪಿ, ಸಮಾಜವಾದಿ ಪಕ್ಷ ಸೇರಿ ಒಟ್ಟು ಎಂಟು ಪಕ್ಷಗಳು ಇರುವ ಮೈತ್ರಿಕೂಟ. ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಿರುವ ಡಿಎಂಕೆ ನೇತೃತ್ವದ ಮೈತ್ರಿಕೂಟವು ಕಾಂಗ್ರೆಸ್, ಸಿಪಿಐ, ಸಿಪಿಎಂ, ಎಂಡಿಎಂಕೆ ಹಾಗೂ ಇತರ ಕೆಲವು ಪಕ್ಷಗಳನ್ನು ಒಳಗೊಂಡಿದೆ. ಹಾಗಾಗಿ, ದೇಶದ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳೂ ಈ ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿವೆ.

ಈಗ ಎಲ್ಲರೂ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಆದರೆ, ಸಂವಿಧಾನದ ಪ್ರಕಾರ ಆಸ್ಪತ್ರೆಗಳು ಹಾಗೂ ಅಲ್ಲಿ ನಡೆಯುವ ದುರ್ಘಟನೆಗಳಿಗೆ ಪ್ರಾಥಮಿಕ ಹೊಣೆಯನ್ನು ಹೊರಬೇಕಿರುವುದು ರಾಜ್ಯ ಸರ್ಕಾರಗಳು ಎಂಬುದನ್ನು ಗಮನಿಸಬೇಕು. ಕೇಂದ್ರ ಹಾಗೂ ರಾಜ್ಯಗಳ ನಡುವಿನ ಅಧಿಕಾರ ಹಂಚಿಕೆಯು ಸಂವಿಧಾನದ ಏಳನೆಯ ಪರಿಚ್ಛೇದದಲ್ಲಿ ಉಲ್ಲೇಖವಾಗಿದೆ. ರಾಜ್ಯಗಳ ಹಾಗೂ ಕೇಂದ್ರದ ಅಧಿಕಾರ ವ್ಯಾಪ್ತಿಯಲ್ಲಿ ಯಾವ ವಿಷಯಗಳು ಬರುತ್ತವೆ ಎಂಬುದನ್ನು ಅದರಲ್ಲಿ ಹೇಳಲಾಗಿದೆ.

ಈ ಪರಿಚ್ಛೇದದಲ್ಲಿನ ರಾಜ್ಯಗಳ ಪಟ್ಟಿಯಲ್ಲಿನ ಆರನೆಯ ಅಂಶವು, ‘ಸಾರ್ವಜನಿಕ ಆರೋಗ್ಯ ಮತ್ತು ನೈರ್ಮಲ್ಯ, ಆಸ್ಪತ್ರೆಗಳು ಮತ್ತು ಔಷಧಾಲಯಗಳು’ ಎಂದು ಹೇಳುತ್ತದೆ. ಅಂದರೆ, ಸಾರ್ವಜನಿಕರ ಆರೋಗ್ಯ, ಆಸ್ಪತ್ರೆಗಳು ಹಾಗೂ ಔಷಧಾಲಯಗಳ ನಿರ್ವಹಣೆಯು ಸಂಪೂರ್ಣವಾಗಿ ರಾಜ್ಯಗಳ ಹೊಣೆಗಾರಿಕೆ. ರಾಜ್ಯಗಳು ಇನ್ನೊಬ್ಬರ ಕಡೆ ಬೆರಳು ತೋರಿಸಿ ತಮ್ಮ ಹೊಣೆಯಿಂದ ಜಾರಿಕೊಳ್ಳುವಂತೆ ಇಲ್ಲ. ಒಬ್ಬರಿಂದ ಒಬ್ಬರಿಗೆ ಅಂಟಿಕೊಳ್ಳುವ ರೋಗದ ಹರಡುವಿಕೆಯನ್ನು ತಡೆಯುವ ಹೊಣೆ ರಾಜ್ಯಗಳ ಮೇಲೆಯೂ ಇದೆ (ಸಮವರ್ತಿ ಪಟ್ಟಿಯ 29ನೇ ಅಂಶ). ಹಾಗಾಗಿ, ಈ ವಿಚಾರಗಳಲ್ಲಿ ತಾನು ನಿಸ್ಸಹಾಯಕ, ತನ್ನಲ್ಲಿ ಅಧಿಕಾರ ಇಲ್ಲ ಎಂದು ಯಾವ ರಾಜ್ಯವೂ ಇಂದು ಹೇಳುವಂತಿಲ್ಲ.

ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಕಳೆದ ತಿಂಗಳಿನಿಂದ ಆರೋಪಗಳನ್ನು ತಪ್ಪಾಗಿ, ಉದ್ದೇಶಪೂರ್ವಕವಾಗಿ ಹೊರಿಸಲಾಗುತ್ತಿದೆ. ಆದರೆ, ಈ ಬಿಕ್ಕಟ್ಟಿನಿಂದ ಹೊರಬಂದ ನಂತರ ನಾವು, ವರ್ಷದ ಮೊದಲ ಮೂರು ತಿಂಗಳ ಅವಧಿಯಲ್ಲಿ ಇತರರೆಲ್ಲರೂ ಏನು ಮಾಡಿದರು ಅಥವಾ ಏನು ಮಾಡಲಿಲ್ಲ ಎಂಬ ಬಗ್ಗೆ ಅವಲೋಕನ ನಡೆಸಬೇಕು. ಕೇಂದ್ರ ಸರ್ಕಾರ, ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿ ಮಾತ್ರವೇ ಅಲ್ಲದೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಗಳ ಆರೋಗ್ಯ ಸಚಿವರು, ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳು, ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು, ಎಲ್ಲ ಪ್ರಮುಖ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಆಡಳಿತ ನೋಡಿಕೊಳ್ಳುವವರು ಏನು ಮಾಡಿದರು ಎಂಬುದನ್ನು ಗಮನಿಸಬೇಕು. ಕೋವಿಡ್ ರೋಗಿಗಳಿಗೆ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತಿವೆ ಎಂಬುದು ಇಡೀ ವಿಶ್ವಕ್ಕೆ ಗೊತ್ತಿತ್ತು. ಖಾಸಗಿ ಆಸ್ಪತ್ರೆಗಳ ಆಡಳಿತಗಾರರು ಈಗ ಎಲ್ಲರ ಮೇಲೆಯೂ ದೋಷ ಹೊರಿಸುತ್ತ ಒಂದು ಟಿ.ವಿ. ಸ್ಟುಡಿಯೊದಿಂದ ಇನ್ನೊಂದು ಟಿ.ವಿ. ಸ್ಟುಡಿಯೊಗೆ ಓಡಾಡುತ್ತಿದ್ದಾರೆ. ಅವರು ಆಮ್ಲಜನಕದ ಸಂಗ್ರಹ ಹಾಗೂ ಪೂರೈಕೆ ವ್ಯವಸ್ಥೆಯನ್ನು ಒಂದು ವರ್ಷದಲ್ಲಿ ಉತ್ತಮಪಡಿಸಿದರೇ?

ಆದರೆ, ಈ ಮೊದಲೇ ಹೇಳಿದಂತೆ ಹೀಗೆ ಕೇಳುವ ಸಮಯ ಇದಲ್ಲ. ದಿನಪತ್ರಿಕೆಯೊಂದಕ್ಕೆ ಬರೆದಿರುವ ಲೇಖನವೊಂದರಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಹೇಳಿರುವಂತೆ, ‘ನಾವು ಈ ಕಠಿಣ ಸಮರದಲ್ಲಿ ಒಟ್ಟಾಗಿ ಹೋರಾಡಬೇಕಿದೆ. ಎಲ್ಲ ಕೈಗಳೂ ಕೆಲಸಕ್ಕೆ ಸನ್ನದ್ಧವಾಗಿ ಇರಬೇಕು’.

ಕೇಂದ್ರ ಸರ್ಕಾರವು ಈ ವಿಕೋಪ ಎದುರಿಸಲು ಮೊದಲೇ ಸನ್ನದ್ಧವಾಗಿ ಇರಬೇಕಿತ್ತು ಎಂಬುದು ನಿಜ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇದನ್ನು ಒಂದೇ ಮಾತಿನಲ್ಲಿ, ‘ಕೋವಿಡ್‌ನ ಮೊದಲ ಅಲೆಯ ನಂತರ ಸರ್ಕಾರ, ಆಡಳಿತ ಮತ್ತು ಸಾರ್ವಜನಿಕರು ಮೈಮರೆತಿದ್ದು ಈ ಪರಿಸ್ಥಿತಿಯನ್ನು ತಂದಿದೆ’ ಎಂದು ಹೇಳಿದ್ದಾರೆ. ಅದೇನೇ ಇದ್ದರೂ, ಇದು ಇನ್ನೊಬ್ಬರ ಮೇಲೆ ಬೆರಳು ತೋರಿಸಬೇಕಾದ ಸಮಯ ಅಲ್ಲ. ‘ಕೋವಿಡ್ ನಮ್ಮಿಂದ ದೂರ ಇರಬೇಕು ಎಂದಾದಲ್ಲಿ ನಾವು ಸಕಾರಾತ್ಮಕವಾಗಿರಬೇಕು’ ಎಂದು ಭಾಗವತ್ ಅವರು ಹೇಳಿದ್ದಾರೆ. ಜನ ಸಕಾರಾತ್ಮಕ ಚಿಂತನೆಗಳನ್ನು ಹೊಂದಿರಬೇಕು ಎಂಬುದನ್ನು ಒತ್ತಿಹೇಳಲು ಭಾಗವತ್ ಅವರು, ಎರಡನೆಯ ವಿಶ್ವಯುದ್ಧದ ಸಂದರ್ಭದ ಪರಿಸ್ಥಿತಿಯೊಂದನ್ನು ವಿವರಿಸಿದ್ದಾರೆ. ಇಂಗ್ಲೆಂಡ್ ಸೋಲಿನತ್ತ ಸಾಗುತ್ತಿದೆ ಎಂದು ಅನ್ನಿಸುತ್ತಿದ್ದಾಗಲೂ ಪ್ರಧಾನಿ ವಿನ್‌ಸ್ಟನ್‌ ಚರ್ಚಿಲ್ ಅವರ ಮೇಜಿನ ಮೇಲೆ, ‘ಇಲ್ಲಿ ನಿರಾಶಾವಾದಕ್ಕೆ ಜಾಗವಿಲ್ಲ. ಸೋಲಿನ ಸಾಧ್ಯತೆಗಳಲ್ಲಿ ನಮಗೆ ಆಸಕ್ತಿ ಇಲ್ಲ. ಅಂಥದ್ದೊಂದು ಸಾಧ್ಯತೆ ಅಸ್ತಿತ್ವದಲ್ಲೇ ಇಲ್ಲ’ ಎಂಬ ಮಾತನ್ನು ಬರೆಯಲಾಗಿತ್ತು. ಇದನ್ನು ಉಲ್ಲೇಖಿಸಿ ಭಾಗವತ್ ಅವರು, ಭಾರತವು ಕೋವಿಡ್‌ ಕಾಯಿಲೆಯನ್ನು ಸೋಲಿಸಬೇಕು ಎಂದಾದರೆ ಈ ಬಗೆಯ ಧೈರ್ಯ ಬೇಕು ಎಂದಿದ್ದಾರೆ.

ಭಾಗವತ್ ಹೇಳಿದ್ದು ಸರಿ. ಕೋವಿಡ್‌ ಕಾಯಿಲೆ ಅಥವಾ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವಿನಿಂದ ಯಾವ ಕುಟುಂಬವೂ ಹೊರತಾಗಿಲ್ಲ. ಹೀಗಿದ್ದರೂ ಈ ಪೀಡೆಯನ್ನು ನಿವಾರಿಸಲು ನಾವು ಅಸಾಧಾರಣ ಧೈರ್ಯ, ಸಕಾರಾತ್ಮಕತೆ, ದೃಢ ನಿಶ್ಚಯ ಪ್ರದರ್ಶಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.