ADVERTISEMENT

ನಿರಂಜನಾರಾಧ್ಯ ವಿ.ಪಿ. ಲೇಖನ: ನಾಳಿನ ಪ್ರಜೆಗಳ ಇಂದಿನ ಹಕ್ಕು

‘ಹಕ್ಕು ಆಧಾರಿತ’ ಚಿಂತನಾ ಕ್ರಮವು ಮಕ್ಕಳ ಅಭಿವೃದ್ಧಿಗೆ ಹೊಸ ಆಯಾಮ ಒದಗಿಸಿದೆ

ಡಾ.ನಿರಂಜನಾರಾಧ್ಯ ವಿ.ಪಿ
Published 13 ನವೆಂಬರ್ 2020, 19:47 IST
Last Updated 13 ನವೆಂಬರ್ 2020, 19:47 IST
ಮಕ್ಕಳ ಹಕ್ಕುಗಳು
ಮಕ್ಕಳ ಹಕ್ಕುಗಳು   
""

ಮಕ್ಕಳ ದಿನಾಚರಣೆಯ (ನ. 14) ಈ ಸಂದರ್ಭದಲ್ಲಿ, ಲಭ್ಯವಿರುವ ಮಾಹಿತಿ ಹಾಗೂ ಅಂಕಿ-ಅಂಶಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ, ಮಕ್ಕಳಿಗೆ ಸಿಗಲೇಬೇಕಾದ ಆರೈಕೆ, ಆರೋಗ್ಯ, ರಕ್ಷಣೆ, ಪೋಷಣೆ ಹಾಗೂ ಗುಣಾತ್ಮಕ ಶಿಕ್ಷಣ ಇಂದಿಗೂ ಸವಾಲಾಗಿಯೇ ಉಳಿದಿರುವುದು
ತಿಳಿದುಬರುತ್ತದೆ. ಎಂಬತ್ತರ ದಶಕದ ಕೊನೆ ಭಾಗದವರೆಗೆ ಮಕ್ಕಳನ್ನು ಹೆಚ್ಚುಕಡಿಮೆ ಬರೀ ಒಂದು ಆಸ್ತಿ ಅಥವಾ ವಸ್ತುವೆಂಬಂತೆ ನೋಡುವ ಪರಿಪಾಟವಿತ್ತು. ತೊಂಬತ್ತರ ದಶಕದ ಪ್ರಾರಂಭದಲ್ಲಿ ಈ ಆಲೋಚನಾ ಕ್ರಮಕ್ಕೆ ಪರ್ಯಾಯವಾಗಿ, ಮಕ್ಕಳ ಬೆಳವಣಿಗೆ ಹಾಗೂ ಅಭಿವೃದ್ಧಿಯನ್ನು ಮಾನವ ಹಕ್ಕುಗಳ ನೆಲೆಯಲ್ಲಿ ಅರ್ಥೈಸುವ ‘ಹಕ್ಕು ಆಧಾರಿತ’ ಚಿಂತನಾ ಕ್ರಮವು ಒಡಮೂಡಿತು.

ಪ್ರತಿಯೊಬ್ಬ ಮಾನವ ಜೀವಿಗೂ ತನ್ನದೇ ಆದ ಸ್ವಂತಿಕೆ, ಬದುಕು, ಅಭಿಪ್ರಾಯ ಮತ್ತು ಆಶೋತ್ತರಗಳಿವೆ. ಅವುಗಳನ್ನು ಗುರುತಿಸಿ, ಗೌರವಿಸಿ, ಸಾಕಾರಗೊಳಿಸಲು ಅವಶ್ಯವಾದ ಒಂದು ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಂರಚನೆಯನ್ನು ಸೃಷ್ಟಿಸುವುದು ಸರ್ಕಾರಗಳ ಆದ್ಯ ಕರ್ತವ್ಯ ಎಂಬುದನ್ನು ಬಲವಾಗಿ ಪ್ರತಿಪಾದಿಸಿದ್ದು ಈ ಚಿಂತನಾ ಕ್ರಮದ ಒಂದು ಮುಖ್ಯಾಂಶ.

ಈ ಹಕ್ಕು ಆಧಾರಿತ ಪರಿಕಲ್ಪನೆಯ ಮತ್ತೊಂದು ಪ್ರಮುಖ ಆಯಾಮವೆಂದರೆ, ಮಾನವ ಹಕ್ಕುಗಳ ಸಾರ್ವತ್ರಿಕತೆ ಮತ್ತು ಸಾಮಾಜಿಕ ಒಳಗೊಳ್ಳುವಿಕೆ. ಹಲವಾರು ಶತಮಾನಗಳಿಂದ ಮಾನವ ಹಕ್ಕುಗಳ ಪರಿಧಿಯ ಹೊರಗಿದ್ದ ಮಕ್ಕಳು ಈ ಬದಲಾವಣೆಯ ಫಲವಾಗಿ ಇಂದು ಈ ಪರಿಧಿಯ ಕೇಂದ್ರ ಬಿಂದುವಿನಲ್ಲಿದ್ದಾರೆ. ಸಾಮಾಜಿಕ ಒಳಗೊಳ್ಳುವಿಕೆಯ ದೃಷ್ಟಿಯಿಂದ ‘ಹಕ್ಕು ಆಧಾರಿತ’ ಅಭಿವೃದ್ಧಿ ಮಾದರಿಯು ಮಕ್ಕಳ ಹಕ್ಕುಗಳನ್ನು ಸಾಕಾರಗೊಳಿಸುವ ಕಾರ್ಯಕ್ಕೆ ಹೊಸ ಆಯಾಮ ನೀಡಿದೆ.

ADVERTISEMENT

ಈ ನವೀನ ಚಿಂತನೆಯ ತಕ್ಷಣದ ಒಂದು ಫಲಿತಾಂಶವೆಂದರೆ, ಮಕ್ಕಳಿಗೆ ಸಂಬಂಧಿಸಿದಂತೆ ಹಲವಾರು ವರ್ಷಗಳ ನಿರಂತರ ಮತ್ತು ಸುಧಾರಿತ ಪ್ರಕ್ರಿಯೆಯ ಭಾಗವಾಗಿ ರೂಪಿಸಲಾದ ‘ಮಕ್ಕಳ ಹಕ್ಕುಗಳ ಒಡಂಬಡಿಕೆ’ಯನ್ನು ವಿಶ್ವಸಂಸ್ಥೆಯು 1989ರಲ್ಲಿ ಅಂಗೀಕರಿಸಿ ಅದನ್ನು ಸದಸ್ಯ ರಾಷ್ಟ್ರಗಳ ಒಪ್ಪಿಗೆಗಾಗಿ ತೆರೆದಿಟ್ಟಿದ್ದು. ಜಗತ್ತಿನ ಹಲವು ರಾಷ್ಟ್ರಗಳು ಅನುಮೋದಿಸಿರುವ ಈ ಒಡಂಬಡಿಕೆಯನ್ನು ಭಾರತ 1992ರ ಡಿಸೆಂಬರ್‌ನಲ್ಲಿ ಅಂಗೀಕರಿಸಿದೆ. ಇದರ ಭಾಗವಾಗಿ, ಒಡಂಬಡಿಕೆಯಲ್ಲಿನ ವಿವಿಧ ಅವಕಾಶಗಳನ್ನು ಜಾರಿ
ಗೊಳಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಐದು ವರ್ಷಗಳಿಗೊಮ್ಮೆ ವಿಶ್ವಸಂಸ್ಥೆಗೆ ಲಿಖಿತ ವರದಿ ಸಲ್ಲಿಸಬೇಕಾಗಿದೆ.

ಮಕ್ಕಳು ಅಲ್ಪಮಾನವರಲ್ಲ, ಎಲ್ಲರಂತೆ ಸಮಾನರು ಎಂಬ ಮೂಲ ಕಲ್ಪನೆಯನ್ನು ಇದು ಆಧರಿಸಿದೆ. ಜೊತೆಗೆ, ಎಲ್ಲಾ ಮಕ್ಕಳಿಗೆ ತಾರತಮ್ಯರಹಿತ ಸಮಾನತೆ, ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ಮಗುವಿನ ಹಿತಾಸಕ್ತಿಯೇ ಅಂತಿಮ, ಬದುಕುಳಿಯುವ ಮತ್ತು ಅಭಿವೃದ್ಧಿ ಹೊಂದುವ ಅವಕಾಶ, ತಮಗೆ ಸಂಬಂಧಿಸಿದ ವಿಷಯಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುವ ಮತ್ತು ದಾಖಲಿಸುವ ನಾಲ್ಕು ಪ್ರಮುಖ ತತ್ವಗಳ ಆಧಾರದ ಮೇಲೆ ಮಕ್ಕಳ ಅಭಿವೃದ್ಧಿಗೆ ಪೂರಕವಾದ ಹಲವು ಹಕ್ಕುಗಳನ್ನು ಕೊಡಮಾಡುತ್ತದೆ.

ಈ ಅಂಶಗಳನ್ನು ವಿಸ್ತರಿಸಿ ನೋಡುವುದಾದರೆ, ಎಲ್ಲಾ ಮಕ್ಕಳು ತಮ್ಮ ಹಕ್ಕುಗಳನ್ನು ಪಡೆಯುವಂತಾಗಬೇಕು ಮತ್ತು ಯಾವುದೇ ತಾರತಮ್ಯಕ್ಕೆ ಒಳಗಾಗಬಾರದು. ಮಕ್ಕಳಿಗೆ ಸಮಾನ ಅವಕಾಶಗಳನ್ನು ಒದಗಿಸುವ ಹೊಣೆಗಾರಿಕೆಯನ್ನು ಆಯಾ ರಾಷ್ಟ್ರಗಳು ಹೊರಬೇಕು. ಮಗುವಿನ ಹಿತಾಸಕ್ತಿ, ವಿಶೇಷವಾಗಿ ಅವರು ಚಿಕ್ಕವರು, ದುರ್ಬಲರಾಗಿದ್ದಾಗ ಅವರ ಹಕ್ಕುಗಳನ್ನು ಸಂಪೂರ್ಣವಾಗಿ ಸಾಕಾರಗೊಳಿಸಲು ವಿಶೇಷ ಬೆಂಬಲ ಕಲ್ಪಿಸಬೇಕಾಗುತ್ತದೆ. ಸರ್ಕಾರಿ ಅಥವಾ ಖಾಸಗಿ ಸಮಾಜ ಕಲ್ಯಾಣ ಸಂಸ್ಥೆಗಳು, ಆಡಳಿತಾತ್ಮಕ ಸಂಸ್ಥೆಗಳು ಮತ್ತು ಅಧಿಕಾರಿಗಳು, ನ್ಯಾಯಾಲಯಗಳು ಹಾಗೂ ಶಾಸಕಾಂಗ ಸಂಸ್ಥೆಗಳು ಕೈಗೊಳ್ಳುವ ಯಾವುದೇ ತೀರ್ಮಾನವು ಮಗುವಿನ ಹಿತಾಸಕ್ತಿ ತತ್ವವನ್ನು ಪ್ರಧಾನವಾಗಿ ಪರಿಗಣಿಸಬೇಕಾಗುತ್ತದೆ.

ಮಕ್ಕಳ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಕ್ಕುಗಳನ್ನು ಜೀವಿಸುವ ಹಕ್ಕಿನ ಭಾಗವಾಗಿ ರೂಪಿಸಲಾಗಿದೆ. ಒಡಂಬಡಿಕೆ ಪ್ರತಿಪಾದಿಸುವಂತೆ, ತಮ್ಮ ಮೇಲೆ ಪರಿಣಾಮ ಬೀರುವ ಎಲ್ಲ ವಿಷಯಗಳಲ್ಲೂ ಮಕ್ಕಳು ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ಇರಬೇಕು. ಮಗುವಿನ ವಯಸ್ಸು ಮತ್ತು ಪರಿಪಕ್ವತೆಗೆ ಅನುಗುಣವಾಗಿ ಅದನ್ನು ಗೌರವಿಸಬೇಕು. ಮಕ್ಕಳ ಹಕ್ಕುಗಳ ಈ ಮಹತ್ವದ ಒಡಂಬಡಿಕೆಯು ಮಕ್ಕಳ ಬದುಕು, ಆರೈಕೆ, ಅಭಿವೃದ್ಧಿ, ರಕ್ಷಣೆ ಮತ್ತು ಅವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯುತ್ತದೆ. ಮಕ್ಕಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸದಸ್ಯ ರಾಷ್ಟ್ರಗಳು ಜಾರಿಗೊಳಿಸಬೇಕಾದ ಕ್ರಮಗಳ ಬಗ್ಗೆ ವಿಸ್ತೃತವಾಗಿ ತಿಳಿಸುತ್ತದೆ.

ಈ ಎಲ್ಲಾ ಬೆಳವಣಿಗೆ ಮತ್ತು ಬದಲಾದ ಸನ್ನಿವೇಶದಲ್ಲಿ ಸದಸ್ಯ ರಾಷ್ಟ್ರಗಳು ಮಕ್ಕಳ ಹಕ್ಕುಗಳನ್ನು ಜಾರಿಗೊಳಿಸಲು ದೊಡ್ಡ ಅಭಿಯಾನವನ್ನೇ ಪ್ರಾರಂಭಿಸಬೇಕಿದೆ. ಈ ದಿಸೆಯಲ್ಲಿ, ನಮ್ಮ ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು 10 ವಾರಗಳ ಕಾಲ ಮಕ್ಕಳಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಮ್ಮಿಕೊಂಡಿದೆ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ ನಡೆಸುವಂತೆ ಸೂಚಿಸಿದೆ.

2006ರಲ್ಲಿ ಎಲ್ಲಾ ಪಂಚಾಯಿತಿಗಳು ಮಕ್ಕಳ ಹಕ್ಕುಗಳ ಬಗ್ಗೆ ವಿಶೇಷ ಗ್ರಾಮಸಭೆಯನ್ನು ನಡೆಸಿದವು. ಆ ಮೂಲಕ ಮಕ್ಕಳ ಹಕ್ಕುಗಳನ್ನು ಗುರುತಿಸಿ, ಗೌರವಿಸಿ, ಸಾಕಾರಗೊಳಿಸುವ ದಿಸೆಯಲ್ಲಿ ನವೆಂಬರ್‌ ತಿಂಗಳಿನಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ಆಯೋಜನೆಯು ಅನೂಚಾನವಾಗಿ ನಡೆದುಬಂದಿದೆ. ಹಲವು ಇತಿಮಿತಿಗಳ ನಡುವೆಯೂ ನಡೆದುಬಂದಿರುವ ಈ ಕಾರ್ಯಕ್ರಮವು ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ, ಮಕ್ಕಳು ಅಲ್ಪಮಾನವರಲ್ಲ, ಅವರು ಹುಟ್ಟಿನಿಂದಲೇ ನಾಡಿನ ಪ್ರಜೆಗಳು ಎಂಬ ಹೊಸ ಬಗೆಯ ದೃಷ್ಟಿಕೋನವನ್ನು ಮೂಡಿಸುವಲ್ಲಿ ಯಶಸ್ಸು ಕಂಡಿದೆ.

ನಿರಂಜನಾರಾಧ್ಯ ವಿ.ಪಿ.

ನಮ್ಮ ಸಂವಿಧಾನ ಅಂಗೀಕಾರವಾಗಿ ಏಳು ದಶಕಗಳಿಗೂ ಹೆಚ್ಚು ಮತ್ತು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ ಜಾರಿಯಾಗಿ ಮೂರು ದಶಕಗಳಿಗೂ ಹೆಚ್ಚು ಕಾಲ ಆಗಿರುವ ಈ ಸಂದರ್ಭದಲ್ಲಿ, ಇಂತಹದ್ದೊಂದು ಅಭಿಯಾನ ಹಮ್ಮಿಕೊಂಡಿರುವುದು ಸ್ತುತ್ಯರ್ಹ. ಈ ಅಭಿಯಾನವು ಮಕ್ಕಳ ಪಾಲಿಗೆ ಎರಡು ಮಹತ್ವದ ಸಂದೇಶಗಳನ್ನು ರವಾನಿಸುತ್ತದೆ. ಒಂದು, ಸರ್ಕಾರವು ಮಕ್ಕಳ ಸಂವಿಧಾನಬದ್ಧ ಹಕ್ಕುಗಳನ್ನು ಎತ್ತಿಹಿಡಿದು ಅವುಗಳನ್ನು ಪೂರ್ಣವಾಗಿ ಜಾರಿಗೊಳಿಸಲು ಬದ್ಧವಾಗಿದೆ ಎಂಬುದು. ಎರಡು, ವಿಶ್ವಸಂಸ್ಥೆ ನಿಗದಿಪಡಿಸಿರುವ ಮಕ್ಕಳ ಹಕ್ಕುಗಳ ಜೊತೆಗೆ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಆಧಾರವಾಗಿಟ್ಟುಕೊಂಡು ಮಕ್ಕಳ ಹಕ್ಕುಗಳನ್ನು ಇಡಿಯಾಗಿ ನೋಡುವ ಮೂಲಕ, ಅವರ ಸಮಗ್ರ ಅಭಿವೃದ್ಧಿಗೆ 10 ವಾರಗಳ ಕಾರ್ಯಕ್ರಮ ರೂಪಿಸಿರುವುದು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರಲ್ಲಿ ಹೊಸ ಭರವಸೆ ಮೂಡಿಸಿದೆ.

ಮಕ್ಕಳ ಅಭಿವೃದ್ಧಿಯನ್ನು ಹಕ್ಕು ಆಧಾರಿತ ನೆಲೆಯಲ್ಲಿ ರೂಪಿಸಲು ಸಂಕಲ್ಪಿಸಿರುವ ಈ ಇಚ್ಛಾಶಕ್ತಿಯು ಶಕ್ತಿ ಕೇಂದ್ರವೆನಿಸಿರುವ ವಿಧಾನಸೌಧದಿಂದ ಕಟ್ಟಕಡೆಯ ಗ್ರಾಮ ಸೌಧದವರೆಗೆ ತಲುಪಬೇಕಿದೆ. ಮಕ್ಕಳ ಹಕ್ಕುಗಳ ಜಾರಿಗೆ ಹೊಸ ಭಾಷ್ಯ ಬರೆಯಬೇಕಾಗಿದೆ.

ಎಲ್ಲಾ ಮಕ್ಕಳಿಗೆ ಮೂಲಭೂತ ಅವಶ್ಯಕತೆಗಳಾದ ಆರೈಕೆ, ರಕ್ಷಣೆ, ಪೋಷಣೆ, ಪೌಷ್ಟಿಕಾಂಶ, ಆರೋಗ್ಯ, ಗುಣಾತ್ಮಕ ಶಿಕ್ಷಣ, ಆಟ ಮತ್ತು ವಿಶ್ರಾಂತಿ ದೊರೆಯುವಂತೆ ಆಗಬೇಕು. ಜೊತೆಗೆ ದೈಹಿಕ– ಮಾನಸಿಕ ಹಿಂಸೆ ಮತ್ತು ಎಲ್ಲಾ ರೀತಿಯ ಶೋಷಣೆಗಳಿಂದ ಮುಕ್ತಿಯು ಮಕ್ಕಳ ದಿನಾಚರಣೆಯ ಸಂಕಲ್ಪವಾಗಬೇಕು. ಮಕ್ಕಳ ಬಗೆಗೆ ಮೇಲ್ನೋಟದ ಆಡಂಬರದ ಪ್ರೀತಿ-ವಾತ್ಸಲ್ಯಕ್ಕಿಂತ ಅವರ ಬದುಕನ್ನು ಹಸನಾಗಿಸಬಲ್ಲ- ಅರ್ಥಪೂರ್ಣವಾಗಿಸಬಲ್ಲ ನೈಜ ಕಾರ್ಯಕ್ರಮಗಳು ಆಯೋಜನೆಗೊಳ್ಳಬೇಕು. ನಾವು ಮಕ್ಕಳಿಗಾಗಿ ರೂಪಿಸುವ ನೀತಿ, ನಿಯಮ ಮತ್ತು ಕಾನೂನುಗಳು ಮಕ್ಕಳ ಹಕ್ಕುಗಳ ಒಡಂಬಡಿಕೆಯ ಮೂಲ ತತ್ವಗಳನ್ನು ಎತ್ತಿಹಿಡಿಯಬೇಕು ಮತ್ತು ಅವು ಪ್ರಾಮಾಣಿಕವಾಗಿ ಜಾರಿಯಾಗಬೇಕು.

ಲೇಖಕ: ಅಭಿವೃದ್ಧಿ ಶಿಕ್ಷಣ ತಜ್ಞ ಹಾಗೂ ಮಕ್ಕಳ ಹಕ್ಕುಗಳ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.