ADVERTISEMENT

ದಿನದ ಸೂಕ್ತಿ| ಬೆವರೋ ಕಣ್ಣೀರೋ

ಎಸ್.ಸೂರ್ಯಪ್ರಕಾಶ ಪಂಡಿತ್
Published 5 ಏಪ್ರಿಲ್ 2021, 1:36 IST
Last Updated 5 ಏಪ್ರಿಲ್ 2021, 1:36 IST
ಸಂಪತ್ತು
ಸಂಪತ್ತು   

ಸ್ವಲ್ಪಾಪಿ ಸಾಧುಸಂಪದ್ಭೋಜ್ಯಾ

ಮಹತಾಂ ನ ಪೃಥ್ವ್ಯಪಿ ಖಲಶ್ರೀಃ ।

ಸಾರಸಮೇವ ಪಯಸ್ತೃಷಮಪನಯತಿ

ADVERTISEMENT

ನ ಯಾದಸಾಂ ಪತ್ಯುಃ ।।

ಇದರ ತಾತ್ಪರ್ಯ ಹೀಗೆ:

‘ಸಜ್ಜನರ ಸಂಪತ್ತು ಸ್ವಲ್ಪವೇ ಇದ್ದರೂ, ಅದು ಮಹಾತ್ಮರು ಅನುಭವಿಸಲು ಅರ್ಹವಾದುದು. ದುಷ್ಟರ ಐಶ್ವರ್ಯ ಅಪಾರವಾಗಿದ್ದರೂ ಅದು ಹಾಗೆ ಅರ್ಹವಲ್ಲ. ಸರೋವರದ ನೀರು ಬಾಯಾರಿಕೆಯನ್ನು ಕಳೆಯುತ್ತದೆ. ಆದರೆ ಸಮುದ್ರದ ನೀರು ಹಾಗೆ ಕಳೆಯದು.’

ಗಾತ್ರ ಮುಖ್ಯವಲ್ಲ, ಗುಣವೇ ಮುಖ್ಯ ಎಂಬುದನ್ನು ಸುಭಾಷಿತ ಇಲ್ಲಿ ಹೇಳುತ್ತಿದೆ.

ನಾವು ಸಮುದ್ರದ ಮಧ್ಯೆ ಇರುತ್ತೇವೆ. ನಮಗೆ ಬಾಯಾರಿಕೆಯಾಗಿದೆ. ಎಲ್ಲೆಲ್ಲೂ ನೀರು ನೀರು. ಆದರೆ ಕುಡಿಯಲು ಮಾತ್ರ ನೀರಿಲ್ಲ. ಸಮುದ್ರದ ನೀರು ಅಪಾರ. ಆದರೂ ಅದು ನಮ್ಮ ಬಾಯಾರಿಕೆಯನ್ನು ಕಳೆಯುವುದಿಲ್ಲವಷ್ಟೆ. ಆದರೆ ಚಿಕ್ಕ ಕೊಳವೋ ಅಥವಾ ಬಾವಿಯೋ ನಮ್ಮ ಬಾಯರಿಕೆಯನ್ನು ಕಳೆಯುತ್ತದೆ. ಈ ಉದಾಹರಣೆಯನ್ನು ಬಳಸಿಕೊಂಡು ಸುಭಾಷಿತ ಅರ್ಥಗರ್ಭಿತವಾದ ಸಂದೇಶವೊಂದನ್ನು ನೀಡುತ್ತಿದೆ.

ಸಜ್ಜನರು ಕಷ್ಟಪಡುತ್ತಾರೆ; ಜೀವನವನ್ನು ಆದರ್ಶದ ದಾರಿಯಲ್ಲಿ ನಡೆಸುತ್ತಾರೆ. ಇವರ ಸಂಪಾದನೆ ಕಡಿಮೆ ಇರಬಹುದು. ಆದರೆ ಅವರು ಒಂದೊಂದು ಕಾಸನ್ನು ಕೂಡ ತಮ್ಮ ಬೆವರನ್ನು ಸುರಿಸಿ ಸಂಪಾದಿಸಿರುತ್ತಾರೆ, ನ್ಯಾಯಮಾರ್ಗದಲ್ಲಿ ಸಂಪಾದಿಸಿರುತ್ತಾರೆ. ಇದಕ್ಕೆ ವಿರುದ್ಧವಾದ ಸಂಪಾದನೆ ದುಷ್ಟರ ಸಂಪತ್ತು. ಅವರು ರಾಶಿ ರಾಶಿ ಸಂಪತ್ತನ್ನು ಸಂಪಾದಿಸಿರುತ್ತಾರೆ; ಆದರೆ ಅವರ ಸಂಪಾದನೆಯೆಲ್ಲವೂ ಅನ್ಯಾಯಮಾರ್ಗದಲ್ಲಿಯೇ.

ಸುಭಾಷಿತ ಹೇಳುತ್ತಿದೆ, ಸಜ್ಜನರ ಸಂಪತ್ತು ಅಲ್ಪಪ್ರಮಾಣದ್ದು ಇರಬಹುದು; ಅದು ನ್ಯಾಯವಾಗಿ ಸಂಪಾದಿಸಿರುವುದು. ಆದುದರಿಂದ ಅದು ಅನುಭವಿಸಲು ಅರ್ಹವಾಗಿರುತ್ತದೆ. ಆದರೆ ದುಷ್ಟರ ಸಂಪತ್ತು ಅಪಾರವಾಗಿದ್ದರೂ ಅದು ಅನ್ಯಾಯಮಾರ್ಗದ್ದು. ಹೀಗಾಗಿ ಅದು ಅನುಭವಿಸಲು ಅನರ್ಹವಾದುದು. ಮಂಕುತಿಮ್ಮನ ಕಗ್ಗದ ಸಾಲುಗಳು ಇಲ್ಲಿ ನೆನ‍ಪಾಗುತ್ತವೆ:

ಅನ್ನವುಣುವಂದು ಕೇಳ್; ಅದನು ಬೇಯಿಸಿದ ನೀರ್ ।
ನಿನ್ನ ದುಡಿತದ ಬೆಮರೊ, ಪೆರರ ಕಣ್ಣೀರೋ? ।।

ನಾವು ಕೂಡ ದಿನವೂ ಅನ್ನವನ್ನು ತಿನ್ನುವ ಮೊದಲು ನಮ್ಮನ್ನು ನಾವೇ ಕೇಳಿಕೊಳ್ಳಬೇಕು: ನಾವು ತಿನ್ನುತ್ತಿರುವ ಅನ್ನ, ಅದು ನಮ್ಮ ಬೆವರಿನ ಫಲವೋ ಅಥವಾ ಇತರರ ಕಣ್ಣೀರಿನ ಫಲವೋ ಎಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.