ADVERTISEMENT

ವೇದವ್ಯಾಸ: ಭಾರತೀಯ ಸಂಸ್ಕೃತಿಯ ಮಹಾಗುರು

ಇಂದು ಗುರುಪೂರ್ಣಿಮಾ

ಎಸ್.ಸೂರ್ಯಪ್ರಕಾಶ ಪಂಡಿತ್
Published 23 ಜುಲೈ 2021, 19:58 IST
Last Updated 23 ಜುಲೈ 2021, 19:58 IST
ವೇದವ್ಯಾಸ
ವೇದವ್ಯಾಸ   

ವ್ಯಾಸಾಯ ವಿಷ್ಣುರೂಪಾಯ

ವ್ಯಾಸರೂಪಾಯ ವಿಷ್ಣವೇ

ನಮೋ ವೈ ಬ್ರಹ್ಮನಿಧಯೇ

ADVERTISEMENT

ವಾಸಿಷ್ಠಾಯ ನಮೋ ನಮಃ

ಭಗವಾನ್‌ ವೇದವ್ಯಾಸರನ್ನು ಕುರಿತು ಪರಂಪರೆ ಸಲ್ಲಿಸುತ್ತಿರುವ ನಮನ ಇದು. ವಿಷ್ಣುವನ್ನೂ ವ್ಯಾಸರನ್ನೂ ಇಲ್ಲಿ ಅಭೇದವಾಗಿ ನೋಡಲಾಗಿದೆ. ವಿಷ್ಣು ಎಂದರೆ ಸರ್ವವ್ಯಾಪಕನಾದವನು ಎಂದು ಅರ್ಥ. ವೇದವ್ಯಾಸರೂ ಹೀಗೆ ಸರ್ವವ್ಯಾಪಕತೆಯನ್ನು ಪಡೆದವರು ಎಂಬುದು ಪರಂಪರೆಯ ಒಕ್ಕಣೆ.ಪ್ರತಿವರ್ಷ ಆಷಾಢ ಶುಕ್ಲ ಹುಣ್ಣಿಮೆಯಂದು ವ್ಯಾಸರ ಜಯಂತಿಯನ್ನು ಆಚರಿಸುತ್ತೇವೆ. ಇದೇ ವ್ಯಾಸಪೂರ್ಣಿಮಾ. ಇದನ್ನು ಗುರು ಪೂರ್ಣಿಮಾ ಎಂದೂ ಆಚರಿಸಲಾಗುತ್ತದೆ.

ಭಾರತೀಯ ಸಂಸ್ಕೃತಿಗೆ ವ್ಯಾಸರ ಕೊಡುಗೆ ತುಂಬ ಮಹತ್ವವಾದುದು. ಭಾರತಕ್ಕೆ ಮಹಾಭಾರತವನ್ನು ಕೊಟ್ಟವರು ಅವರು; ಜೊತೆಗೆ ವೇದ ಗಳನ್ನು ವಿಂಗಡಿಸಿದರು; ಹದಿನೆಂಟು ಪುರಾಣಗಳನ್ನು ರಚಿಸಿದರು; ಉಪನಿಷತ್ತುಗಳ ಸಾರವಾದ ಬ್ರಹ್ಮಸೂತ್ರಗಳನ್ನೂ ರಚಿಸಿದರು. ಹೀಗೆ ಭಾರತೀಯ ಪ್ರಜ್ಞಾವಾಹಿನಿಗೆ, ವೈಚಾರಿಕ ನಿಲವಿಗೆ, ಸಾಂಸ್ಕೃತಿಕ ಶ್ರೀಮಂತಿಕೆಗೆ, ಸಾಹಿತ್ಯಿಕ ವೈಭವಕ್ಕೆ ವ್ಯಾಸರ ಕೊಡುಗೆ ಅಪಾರ. ಆದುದರಿಂದಲೇ ಅವರು ಭಾರತೀಯ ಸಂಸ್ಕೃತಿಗೇ ಗುರುವಾದರು. ವ್ಯಾಸರಲ್ಲಿ ನಮ್ಮ ಎಲ್ಲ ಗುರುಪರಂಪರೆಯನ್ನೂ ಕಾಣಲಾಗುತ್ತದೆ.

ವ್ಯಾಸರ ಹಿರಿಮೆಯನ್ನು ಎತ್ತಿ ಹಿಡಿಯಲು ಮಹಾಭಾರತ ಒಂದೇ ಸಾಕು; ಗಾತ್ರದಲ್ಲಿಯಾಗಲೀ ಗುಣದಲ್ಲಿಯಾಗಲೀ ಇದಕ್ಕೆ ಸಾಟಿಯಾದ ಇನ್ನೊಂದು ಗ್ರಂಥಜಗತ್ತಿನಲ್ಲಿಯೇ ಇಲ್ಲ ಎಂದು ವಿಶ್ವದ ಹಲವರು ವಿದ್ವಾಂಸರು ಘೋಷಿಸಿದ್ದಾರೆ. ’ಮಹತ್ತ್ವಾದ್‌ ಭಾರವತ್ತ್ವಾಚ್ಚ ಮಹಾಭಾರತಮುಚ್ಯತೇ‘ – ಮಹತ್ತ್ವದಿಂದಲೂ ಗಾತ್ರದಿಂದಲೂ ತೂಕವಾಗಿರುವುದರಿಂದಲೇ ಮಹಾಭಾರತ ಎಂಬ ಹೆಸರು ಇದ್ದಕ್ಕೆ ಸಂದಿರುವುದು. ಮಹಾಭಾರತದ ಬಗ್ಗೆ ಇನ್ನೊಂದು ಮಾತಿದೆ:

ಧರ್ಮೇ ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ

ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್‌ ಕ್ವಚಿತ್‌

‘ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ವಿಷಯವಾಗಿ ಮಹಾಭಾರತದಲ್ಲಿ ಏನೆಲ್ಲ ಉಂಟೋ ಅವೆಲ್ಲವೂ ಬೇರೆಡೆಯಲ್ಲೂ ಇವೆ; ಇದರಲ್ಲಿ ಏನೇನಿಲ್ಲವೋ ಅವು ಇನ್ನೆಲ್ಲಿಯೂ ಇರಲು ಸಾಧ್ಯವಿಲ್ಲ’ ಎಂಬುದು ಈ ಮಾತಿನ ಸಾರಾಂಶ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳನ್ನೇ ‘ಪುರುಷಾರ್ಥ’ ಎಂದು ಕರೆದಿರುವುದು. ಇದೇ ನಮ್ಮೆಲ್ಲರ ಜೀವನವನ್ನು ಆವರಿಸಿರುವ ಮಹಾತತ್ತ್ವ. ಇದರ ಬಗ್ಗೆ ಮಹಾಭಾರತ ಅತ್ಯಂತ ಸಮಗ್ರವಾದ ಚರ್ಚೆಯನ್ನು ನಡೆಸಿದೆ. ಹೀಗೆ ನಮ್ಮ ಜೀವನಕ್ಕೆ ಬೇಕಾದ ವಿವೇಕವನ್ನು ಇದು ತಿಳಿಸಿಕೊಡುತ್ತದೆ; ಜೀವನಕ್ಕೆ ಬೇಕಾದ ಬೆಳಕನ್ನು ನೀಡುತ್ತದೆ. ಇಂಥ ಮಹಾಕೃತಿಯನ್ನು ನೀಡಿರುವ ವ್ಯಾಸಮಹರ್ಷಿಗಳ ಸ್ಮರಣೆಯಲ್ಲಿ ಗುರುಪೂರ್ಣಿಮಾ ಆಚರಣೆ ನಡೆಯುತ್ತಿರುವಂಥದ್ದು ಅತ್ಯಂತ ಉಚಿತವಾಗಿದೆ.

ಮಹಾಭಾರತ ಕಟ್ಟಿಕೊಡುವ ಜೀವನಮೀಮಾಂಸೆಯಷ್ಟು ಆಳ –ವಿಸ್ತಾರಗಳನ್ನು ಇನ್ನೊಂದು ಕೃತಿ ಕಟ್ಟಿಕೊಡದು ಎಂಬುದು ಉತ್ಪ್ರೇಕ್ಷೆಯ ಮಾತಾಗದು. ಮಹಾಭಾರತದ ಭಾಗವೇ ಆಗಿರುವ ಭಗವದ್ಗೀತೆಯ ಅಪೂರ್ವತೆಯನ್ನು ಕಂಡುಕೊಂಡರೂ ಸಾಕು, ಮಹಾಭಾರತದ ಮಹಿಮೆ ಅರಿವಿಗೆ ಬರುತ್ತದೆ. ಭಗವದ್ಗೀತೆಯಲ್ಲಿರುವಂಥ ಪುರುಷಾರ್ಥಗಳ ಜಿಜ್ಞಾಸೆಯನ್ನು ಮಹಾಭಾರತದುದ್ದಕ್ಕೂ ಕಾಣಬಹುದು. ’ಸೂಕ್ಷ್ಮಾ ಗತಿರ್ಹಿ ಧರ್ಮಸ್ಯ ಬಹು ಶಾಖಾ ಹ್ಯನಂತಿಕಾ‘. ಇದು ಧರ್ಮ ವನ್ನು ಕುರಿತು ಮಹಾಭಾರತದ ಮಾತು; ಧರ್ಮದ (ಧರ್ಮ, ಇಲ್ಲಿ ‘ರಿಲೀಜನ್‌’ ಅಲ್ಲ) ನಡೆಯು ಅತ್ಯಂತ ಸೂಕ್ಷ್ಮವಾಗಿದೆ; ಮಾತ್ರವಲ್ಲ, ಅದರ ಹರಹು ಕೂಡ ವಿಸ್ತಾರವಾಗಿದೆ, ಅದು ಅನಂತವೂ ಆಗಿದೆ – ಇದು ಈ ಮಾತಿನ ತಾತ್ಪರ್ಯ. ಹೀಗೆ ಧರ್ಮದ ಹಲವು ಆಯಾಮಗಳನ್ನು ಮಹಾಭಾರತ ಅತ್ಯಂತ ಸೂಕ್ಷ್ಮವಾಗಿಯೂ ಗಹನ ವಾಗಿಯೂ, ಮನಮುಟ್ಟುವಂತೆ ವಿಶ್ಲೇಷಿಸುತ್ತದೆ. ಇಂಥ ಮಹಾಕೃತಿಯ ಕರ್ತೃವಾದ ಮಹರ್ಷಿ ವೇದವ್ಯಾಸರು ನಮ್ಮ ಸಂಸ್ಕೃತಿಗೆ ಗುರುವಲ್ಲದೆ ಮತ್ತೇನು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.