ADVERTISEMENT

ವಿಜ್ಞಾನ ವಿಶೇಷ: ಬಿಸಿಲ್ಗುದುರೆಯೆ, ತಂಪೆರೆಯುವ ತೆರೆಯೆ?

ತಾಪಮಾನ ನಿಯಂತ್ರಣಕ್ಕೆಂದು ಸ್ಕಾಟ್ಲೆಂಡಿನಲ್ಲಿ ಇನ್ನೊಂದು ಜಾಗತಿಕ ಸಮಾವೇಶ ನಡೆಯಲಿದೆ. ನಮ್ಮ ಸಿದ್ಧತೆ ಏನು?

ನಾಗೇಶ ಹೆಗಡೆ
Published 13 ಅಕ್ಟೋಬರ್ 2021, 19:31 IST
Last Updated 13 ಅಕ್ಟೋಬರ್ 2021, 19:31 IST
   

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ನೀರು ಮಡುಗಟ್ಟಿದ್ದರಿಂದ ಪ್ರಯಾಣಿಕರು ಟ್ರ್ಯಾಕ್ಟರ್‌ ಸವಾರಿ ಮಾಡುತ್ತಿದ್ದ ಚಿತ್ರಗಳು ನಿನ್ನೆ ಪ್ರಸಾರವಾದವು. ಹೇಳಿಕೇಳಿ ನಿನ್ನೆಯೇ (ಅ. 13) ‘ಅಂತಾರಾಷ್ಟ್ರೀಯ ಡಿಸಾಸ್ಟರ್‌ ರಿಡಕ್ಷನ್‌ ಡೇ’ ಆಗಿತ್ತು. ದಿನೇ ದಿನೇ ಹೆಚ್ಚುತ್ತಿರುವ ನೈಸರ್ಗಿಕ ದುರಂತಗಳಿಂದ ಮನುಕುಲವನ್ನು (ಮತ್ತು ಇತರ ಕುಲಗಳನ್ನೂ) ಪಾರುಮಾಡಲು ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವುದು ಹೇಗೆಂಬುದನ್ನು ಚಿಂತಿಸಬೇಕಾದ ದಿನ ಅದು.

ಟ್ರ್ಯಾಕ್ಟರ್‌ಗಳ ಸಹಾಯದಿಂದ ವಿಮಾನವನ್ನೂ ಎಳೆದು ಹೊರಡಿಸಬೇಕಾದ ಇನ್ನೊಂದು ಸಂದರ್ಭ ನೆನಪಿಗೆ ಬರುತ್ತದೆ. ವಾಷಿಂಗ್ಟನ್‌ನ ರೇಗನ್‌ ವಿಮಾನ ನಿಲ್ದಾಣದಿಂದ ಮೇಲೇರಲು ತಯಾರಾಗಿದ್ದ ವಿಮಾನದ ಚಕ್ರಗಳು ಕರಗಿದ ಡಾಂಬರಿನಲ್ಲಿ ಹೂತುಹೋಗಿದ್ದವು. ಏಕೆಂದರೆ ಬಿಸಿಲಿನ ಝಳ ಅಂದು ಅಷ್ಟು ತೀವ್ರವಾಗಿತ್ತು. ಆಸೀನರಾಗಿದ್ದ ಪ್ರಯಾಣಿಕರನ್ನೆಲ್ಲ ಇಳಿಸಿ, ಎಂಜಿನ್ನಿಗೆ ಅದೆಷ್ಟೇ ನೂಕುಬಲ ಕೊಟ್ಟರೂ ವಿಮಾನ ಮಿಸುಕಲಿಲ್ಲ. ಟ್ರ್ಯಾಕ್ಟರಿನಿಂದ ಜಗ್ಗಿದರೂ ಚಕ್ರ ಮೇಲೇಳಲಿಲ್ಲ. ಬಲಿಷ್ಠ ಜಗ್ಗುಯಂತ್ರಗಳ ನೆರವಿನಿಂದ ಕೊನೆಗೂ ವಿಮಾನ ಕದಲಿ ಆಕಾಶಕ್ಕೇರಿತು ಎನ್ನಿ. ಬಂಡವಾಳಶಾಹಿ ಜಗತ್ತನ್ನು ಕಟುವಾಗಿ ಟೀಕಿಸುವ ಕೆನಡಾದ ಪ್ರಸಿದ್ಧ ಲೇಖಕಿ ನವೊಮಿ ಕ್ಲೇನ್‌ 2012ರ ಆ ಘಟನೆಯಿಂದಲೇ ತಮ್ಮ ‘ದಿಸ್‌ ಚೇಂಜಸ್‌ ಎವ್ರಿಥಿಂಗ್‌’ ಹೆಸರಿನ ಗ್ರಂಥವನ್ನು ಆರಂಭಿಸಿದ್ದಾರೆ. ಭೂತಾಪ ಏರಿಕೆ ಜಗತ್ತಿನ ಎಲ್ಲವನ್ನೂ ಬದಲಿಸಲಿದೆ ಎಂದು ವಾದಿಸುವ ಆಕೆ ಈ ಟ್ರ್ಯಾಕ್ಟರ್‌ ಘಟನೆಯನ್ನು ಓದುಗರ ಮುಂದಿಡುತ್ತ, ‘ಭೂಮಿಯ ಮೇಲಿನ ನಾವೆಲ್ಲರೂ ಅಂಥ ವಿಮಾನದ ಪ್ರಯಾಣಿಕರೇ ಆಗಿದ್ದೇವೆ’ ಎಂದು ಬರೆದಿದ್ದಾರೆ.

ಈಗಿರುವ ತಂತ್ರಜ್ಞಾನದ ಬಿಸಿಲ್ಗುದುರೆಯನ್ನೇರಿ ಹವಾಮಾನ ಸಂಕಟಗಳನ್ನು ಎದುರಿಸಲು ಹೋದಾಗ ಇಂಥ ವೈರುಧ್ಯಗಳು ಎದುರಾಗುತ್ತಿವೆ. ಗಣಿ ಪ್ರದೇಶದಲ್ಲಿ ಸುರಿದ ಅತಿ ಮಳೆಯೇ ಕಲ್ಲಿದ್ದಲ ಗಣಿಗಾರಿಕೆಗೆ ಅಡ್ಡಿಯಾಗಿದೆ ಎನ್ನುತ್ತ, ಅವಸರದಲ್ಲಿ ಹಡಗುಭರ್ತಿ ವಿದೇಶೀ ಕಲ್ಲಿದ್ದಲನ್ನು ತರಿಸಲೆಂದು ಇನ್ನಷ್ಟು ಇಂಧನಗಳನ್ನು ಉರಿಸುತ್ತ ವಿದ್ಯುತ್‌ ಉತ್ಪಾದನೆ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇನ್ನೇನು, ಚಳಿಗಾಲ ಬಂತೆಂದರೆ ಉತ್ತರ ಭಾರತದ ಉದ್ದಗಲಕ್ಕೂ ವಿದ್ಯುತ್‌ ಶಕ್ತಿಗೆ ಬೇಡಿಕೆ ಹೆಚ್ಚುವುದರಿಂದ ಕಲ್ಲಿದ್ದಲನ್ನು ಇನ್ನೂ ಜಾಸ್ತಿ ಉರಿಸಬೇಕಾಗುತ್ತದೆ. ಅದರಿಂದ ಹೊಂಜು (ಹೊಗೆ+ಮಂಜು) ಕವಿದು ಉಸಿರಾಟವೂ ಕಷ್ಟವಾದಾಗ ಕಲ್ಲಿದ್ದಲ ಉಷ್ಣಸ್ಥಾವರಗಳನ್ನು ಸ್ಥಗಿತಗೊಳಿಸುವ ಆದೇಶವನ್ನು ದಿಲ್ಲಿ ಸರ್ಕಾರ ಹೊರಡಿಸುತ್ತದೆ. ಆಗ ವಿದ್ಯುತ್‌ ಕಡಿತದಿಂದಾಗಿ ಮನೆಮನೆಗಳಲ್ಲಿ ಕಲ್ಲಿದ್ದಲನ್ನು ಉರಿಸುವುದರಿಂದ ಹೊಗೆ ಮತ್ತಷ್ಟು ಹೆಚ್ಚಾಗಿ ವಾಹನ ಸಂಚಾರಕ್ಕೂ ಮಿತಿ ಹೇರಬೇಕಾಗುತ್ತದೆ. ಅದೆಲ್ಲ ಗೊತ್ತಿದ್ದರೂ ದಿಲ್ಲಿಗೆ ಇನ್ನೂ ಹೆಚ್ಚು ಕಲ್ಲಿದ್ದಲನ್ನು ಶೀಘ್ರ ಪೂರೈಸುವಂತೆ ಪ್ರಧಾನಿಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪತ್ರ ಬರೆಯುತ್ತಾರೆ. ಸಿಮೆಂಟ್‌ ಉತ್ಪಾದನೆಗೆಂದು ರಾಜ್ಯಕ್ಕೆಲ್ಲ ಸುಣ್ಣದ ಕಲ್ಲನ್ನು ಪೂರೈಸುವ ಕಲಬುರಗಿ ಜಿಲ್ಲೆಯಲ್ಲಿ ಸಿಮೆಂಟ್‌ ಲೇಪವಿಲ್ಲದ ಮನೆಗಳೇ ಭೂಕಂಪನದ ಭಯದಲ್ಲಿ ನಲುಗುತ್ತಿವೆ. ಸಿಮೆಂಟ್‌ ಉತ್ಪಾದನೆಯಲ್ಲಿ ಹೇರಳ ಬಳಕೆಯಾಗುವ ಹೊಗೆಕಕ್ಕುವ ಇಂಧನಗಳೇ ಅತಿಮಳೆಗೂ ಭೂಕಂಪನಕ್ಕೂ ಕಾರಣವಾಗುತ್ತಿವೆ.

ADVERTISEMENT

ಬರಲಿರುವ ದುರಂತಗಳನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅನೇಕ ಜಾಗತಿಕ ಸಮಾವೇಶಗಳಾಗಿವೆ. ಜಪಾನಿನ ಸೆಂಡಾಯ್‌ ನಗರದಲ್ಲಿ 2016ರ ಅಕ್ಟೋಬರ್‌ 13ರಂದು ವಿಶ್ವಸಂಸ್ಥೆಯ ಅಧ್ಯಕ್ಷರು ‘ಸೆಂಡಾಯ್‌ ಸೆವೆನ್‌: ಏಳು ಗುರಿಗಳು, ಏಳು ವರ್ಷ’ ಎಂಬ ಘೋಷಣೆ ಹೊರಡಿಸಿದ್ದರು (ನೆನಪಿದೆಯೆ 2011ರಲ್ಲಿ ಸೆಂಡಾಯ್‌ ನಗರ ಮತ್ತು ಸಮೀಪದ ಫುಕುಶಿಮಾ ಪರಮಾಣು ಸ್ಥಾವರಗಳು ಭೀಕರ ಭೂಕಂಪನ ಮತ್ತು ಸುನಾಮಿಗೆ ಸಿಕ್ಕು ನೆಲಕಚ್ಚಿ, ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನ ಗತಿಸಿದರು). ವ್ಯಂಗ್ಯ ಏನೆಂದರೆ ಪ್ರತಿವರ್ಷವೂ ಎಂಬಂತೆ ಅಕ್ಟೋಬರ್‌ 13ರ ಆಸುಪಾಸಿನಲ್ಲೇ ಬೆಂಗಳೂರಿನಲ್ಲಿ ಅತಿವೃಷ್ಟಿಯ ಅನಾಹುತಗಳಾಗುತ್ತಿವೆ. ಸೆಂಡಾಯ್‌ ಗುರಿಗಳು ಯಾರಿಗೆ ನೆನಪಿದೆಯೊ, ನಮ್ಮ ಸರ್ಕಾರವಂತೂ ದುರಂತ ತಡೆಯುವತ್ತ ನಾಗರಿಕರನ್ನು ಸಜ್ಜುಗೊಳಿಸುವ ಯಾವ ಜನಜಾಗೃತಿ ಕಾರ್ಯಕ್ರಮಗಳನ್ನೂ ನಿನ್ನೆ ಹಾಕಿ ಕೊಂಡಂತಿಲ್ಲ. ಈಗ ಇನ್ನೊಂದು ಜಾಗತಿಕ ಸಮಾವೇಶಕ್ಕೆ ಸಿದ್ಧತೆ ಭರದಿಂದ ನಡೆದಿದೆ.

ತಾಪಮಾನ ನಿಯಂತ್ರಣ ಕುರಿತ 2015ರ ಪ್ಯಾರಿಸ್‌ ಶೃಂಗಸಭೆಯ ನಂತರದ ಅತಿ ದೊಡ್ಡ ಸಮಾವೇಶ (ಸಿಓಪಿ26) ಸ್ಕಾಟ್ಲೆಂಡಿನ ಗ್ಲಾಸ್ಗೋ ನಗರದಲ್ಲಿ ಈ ಅಕ್ಟೋಬರ್‌ 31ರಿಂದ ಎರಡು ವಾರಗಳ ಕಾಲ ನಡೆಯಲಿದೆ. 196 ದೇಶಗಳ ಮುತ್ಸದ್ದಿಗಳು, ಬಹು ರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರು, ಪರಿಸರವಾದಿ ಗಳು, ತಂತ್ರವಿದ್ಯಾ ವಿಶಾರದರು ಮತ್ತು ಹೂಡಿಕೆದಾರ ಸಂಸ್ಥೆಗಳು ಭಾಗವಹಿಸುವ ಈ ಚರ್ಚಾಮೇಳದ ಅಧ್ಯಕ್ಷತೆ ಬ್ರಿಟನ್ನಿನ ಸಂಸತ್‌ ಸದಸ್ಯ ಅಲೋಕ್‌ ಶರ್ಮಾ ಹೆಗಲಿಗೆ ಬಂದಿದೆ. ಕಾಲೇಜಿನಲ್ಲಿ ಫಿಸಿಕ್ಸ್‌ ಓದಿದ್ದರೂ ಮುಂದೆ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಮೆರೆದು, ಕಳೆದ 15 ವರ್ಷಗಳಿಂದ ಸಂಸದರಾಗಿ, ಜನಪ್ರಿಯ ಸಚಿವರಾಗಿ (ಭಾರತೀಯ ಮೂಲದ ಶರ್ಮಾ ಮತ್ತು ಹಣಕಾಸು ಸಚಿವ ರಿಷಿ ಸುನಕ್‌ ಇಬ್ಬರೂ ಬೈಬಲ್‌ ಬದಲು ಭಗವದ್ಗೀತೆ ಹಿಡಿದು ಸಂಸತ್ತಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು) ಈಗ ಜಾಗತಿಕ ಮೇಳದ ಸರ್ವಾಧ್ಯಕ್ಷರಾಗಿದ್ದಾರೆ. ‘ಭೂತಾಪ ತಡೆಗೆ ಪ್ಯಾರಿಸ್‌ ಸಮಾವೇಶದಲ್ಲಿ ಪ್ರತಿಜ್ಞೆ ಮಾಡಿದೆವು; ಈಗ ಕ್ರಿಯಾಶೀಲರಾಗೋಣ’ ಎಂಬ ಘೋಷಣೆ ಹೊರಡಿಸಿರುವ ಶರ್ಮಾ, ಬದಲೀ ತಂತ್ರಜ್ಞಾನವನ್ನು ಬೆಂಬಲಿಸುವಂತೆ ಹೂಡಿಕೆದಾರರಿಗೆ ಮತ್ತು ರಾಷ್ಟ್ರನಾಯಕರಿಗೆ ಕರೆ ನೀಡಿದ್ದಾರೆ. ಗ್ಲಾಸ್ಗೋ ನಗರದಲ್ಲಿ ಒಂದೆರಡಲ್ಲ, ಮೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸೀಪ್ಲೇನ್‌ ನಿಲ್ದಾಣಗಳಿದ್ದು ಅವೆಲ್ಲವೂ ನವೆಂಬರ್‌ ಆರಂಭದಲ್ಲಿ ವಿಶ್ವನಾಯಕರಿಂದ ಧುಮುಧುಮಿಸಲಿವೆ.

ವಿಮಾನ ನಿಲ್ದಾಣಗಳ ಉದಾಹರಣೆ ಪದೇ ಪದೇ ಇಲ್ಲೇಕೆ ಬಂತು ಗೊತ್ತೆ? ಅಲ್ಲಿಗೇನಾದರೂ ಅಪಾಯ ಬಂದರೆ ಶರವೇಗದಲ್ಲಿ ವಿಜ್ಞಾನ, ತಂತ್ರಜ್ಞಾನ, ಧನರಾಶಿ ಅತ್ತ ಧಾವಿಸಿ ಬರುತ್ತವೆ. ಭೂಮಿಗೆ ತಗುಲಿದ ಕಾಯಿಲೆಗಳಿಗೂ ಆ ಮೂಲಕವೇ ಮದ್ದು ತ್ವರಿತವಾಗಿ ರೂಪುಗೊಳ್ಳುತ್ತದೆ. ಕೊರೊನಾ ಕೂಡ ವಿಮಾನದಿಂದ ಬಂದಿದ್ದಕ್ಕೇ ಅಲ್ಲವೆ, ಅಷ್ಟು ಶೀಘ್ರವಾಗಿ ಲಸಿಕೆ ತಯಾರಾಗಿದ್ದು? (ವರ್ಷಕ್ಕೆ ನಾಲ್ಕು ಲಕ್ಷ ಬಡವರನ್ನು ಬಲಿ ತೆಗೆದುಕೊಳ್ಳುವ ಮಲೇರಿಯಾಕ್ಕೆ ಲಸಿಕೆ ತಯಾರಿಸಲು 37 ವರ್ಷ ತಗುಲಿದ್ದು, ಇದೀಗ ಅಕ್ಟೋಬರ್‌ 6ರಂದು ವಿಶ್ವ ಆರೋಗ್ಯ ಸಂಸ್ಥೆ ಆರ್‌ಟಿಎಸ್ಸೆಸ್‌ ಲಸಿಕೆಯ ಜಾಗತಿಕ ಬಳಕೆಗೆ ಸಮ್ಮತಿ ಘೋಷಿಸಿದೆ).

ಲಂಡನ್ನಿನ ಹೀಥ್ರೋ ವಿಮಾನ ನಿಲ್ದಾಣಕ್ಕೆ ಹೊಸದೊಂದು ರನ್‌ ವೇ ಬೇಕೇ-ಬೇಡವೇ ಎಂದು ಕಳೆದ ಒಂಬತ್ತು ವರ್ಷಗಳಿಂದ ನಡೆದ ಹಗ್ಗಜಗ್ಗಾಟದಲ್ಲಿ ಮೊದಮೊದಲು ಬೇಕೆಂದು ಹೋರಾಡಿದ ಇದೇ ಅಲೋಕ್‌ ಶರ್ಮಾ ಕೊನೆಗೆ ಬೇಡವೇ ಬೇಡವೆಂದು ವಾದಿಸಿ ಸಂಸದೀಯ ಚುನಾವಣೆ ಗೆದ್ದು ಸಚಿವರಾಗಿ ಇಂದು ಇಡೀ ಜಗತ್ತಿನ ತಾಪಮಾನ ನಿಯಂತ್ರಣ ಕುರಿತ ಜಾಗತಿಕ ಸಮ್ಮೇಳನಕ್ಕೆ ಚಾಲನೆ ಕೊಡುತ್ತಿದ್ದಾರೆ. ಭಾರೀ ಹೊಗೆಕಕ್ಕುವ ಸೀಮೆಣ್ಣೆಯನ್ನೇ ಬಹುತೇಕ ವಿಮಾನಗಳು ಇದುವರೆಗೆ ಇಂಧನವನ್ನಾಗಿ ಬಳಸುತ್ತಿದ್ದು ಅದರ ಬದಲು ಹೈಡ್ರೊಜನ್‌ ಅನಿಲವನ್ನು ಬಳಸಲೆಂದು ತ್ವರಿತ ಸಂಶೋಧನೆಗಳು ನಡೆಯುತ್ತಿವೆ. ಹವಾಗುಣ ವೈಪರೀತ್ಯಗಳಿಂದ ದೇಶದ ವಿಮಾನ ನಿಲ್ದಾಣಗಳನ್ನು ಹೇಗೆ ರಕ್ಷಿಸಬೇಕೆಂದು ಅಮೆರಿಕದಲ್ಲಿ ತಜ್ಞರ ಸಮ್ಮೇಳನ ನಡೆದಿದೆ. ಅಂಥ ತಂತ್ರಜ್ಞಾನಗಳೆಲ್ಲ ಕ್ರಮೇಣ ಸಾರ್ವತ್ರಿಕ ಬಳಕೆಗೆ ಬರುತ್ತವೆ.

ಇತ್ತ ನಮ್ಮ ಸರ್ಕಾರ 2024ರೊಳಗೆ ನೂರು ಹೊಸ ವಿಮಾನ ನಿಲ್ದಾಣಗಳ ನಿರ್ಮಾಣದ ಯೋಜನೆ ಹಾಕಿಕೊಂಡಿದೆ. ‘ಹವಾಯಿ ಚಪ್ಪಲ್‌ ಹಾಕಿದವರಿಗೂ ಹವಾಯಿ ಜಹಾಜ್‌’ ಎಂಬ ಅದರ ಘೋಷವಾಕ್ಯ ಚುನಾವಣೆಯ ಹೊತ್ತಿಗೆ ಮತ್ತೆ ಮೊಳಗಬಹುದು. ಇತ್ತ ವಿಜ್ಞಾನ ಸಂಶೋಧನೆಗಳು ಭೂಮಿಗೆ ತಂಪೆರೆಯುವತ್ತ ಜಗ್ಗುತ್ತಿದ್ದರೆ ಅತ್ತ ನೇತಾಗಣ ಅಭಿವೃದ್ಧಿಯ ಬಿಸಿಲ್ಗುದುರೆಗೆ ಹಣ ಹೂಡುತ್ತಿದೆ.

ಇನ್ನು 30 ವರ್ಷಗಳಲ್ಲಿ ಕಾರ್ಬನ್‌ ವಿಸರ್ಜನೆಯ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಬೇಕೆಂದು ‘ಶೂನ್ಯದತ್ತ ಸಕಲರ ಓಟ’ ಎಂಬ ಘೋಷಣೆ ಗ್ಲಾಸ್ಗೋದಲ್ಲಿ ಹೊಮ್ಮಲಿದೆ. ಮಾತೆತ್ತಿದರೆ ದಿಲ್ಲಿಗೆ ಧಾವಿಸಲೆಂದು ವಿಮಾನ ನಿಲ್ದಾಣಗಳತ್ತ ಓಟ ಕೀಳುವ ನಮ್ಮ ನಾಯಕರಿಗೆ ಅದು ಕೇಳೀಸೀತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.