ADVERTISEMENT

ದಿನದ ಸೂಕ್ತಿ ಕೃತಕತೆ

ಎಸ್.ಸೂರ್ಯಪ್ರಕಾಶ ಪಂಡಿತ್
Published 23 ಸೆಪ್ಟೆಂಬರ್ 2021, 8:47 IST
Last Updated 23 ಸೆಪ್ಟೆಂಬರ್ 2021, 8:47 IST
ಕಮಲ
ಕಮಲ   

ಸೌವರ್ಣಾನಿ ಸರೋಜಾನಿ ನಿರ್ಮಾತುಂ ಸಂತಿ ಶಿಲ್ಪಿನಃ ।

ತತ್ರ ಸೌರಭನಿರ್ಮಾಣೇ ಚತುರಶ್ಚತುರಾನನಃ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಬಂಗಾರದ ಕಮಲಗಳನ್ನು ನಿರ್ಮಿಸಬಲ್ಲಂಥ ಶಿಲ್ಪಿಗಳೇನೋ ಇದ್ದಾರೆ. ಆದರೆ ಅವುಗಳಲ್ಲಿ ಸುಗಂಧವನ್ನು ನಿರ್ಮಿಸಲು ಚತುರ್ಮುಖನಾದ ಬ್ರಹ್ಮನಿಗೆ ಮಾತ್ರವೇ ಸಾಧ್ಯ.’

ಈ ಸುಭಾಷಿತವನ್ನು ಹಲವು ನೆಲೆಗಳಿಂದ ನೋಡಬಹುದಾಗಿದೆ. ಕೃತಕತೆ ಮತ್ತು ಸಹಜತೆ, ಮಾನವನ ಶಕ್ತಿ ಮತ್ತು ಮಿತಿ, ಲೌಕಿಕ ಮತ್ತು ಅಲೌಕಿಕ – ಹೀಗೆ ಹಲವು ವಿವರಗಳಿಂದ ವಿಶ್ಲೇಷಿಸಬಹುದಾಗಿದೆ.

ನಮ್ಮ ಜೀವನ ಈಗ ಹೆಚ್ಚೆಚ್ಚು ಕೃತಕವಾಗುತ್ತಲಿದೆ. ತಿನ್ನುವ ಆಹಾರದಿಂದ ಮೊದಲುಗೊಂಡು ಕಲಿಯುವ ವಿದ್ಯೆಯವರೆಗೂ ಎಲ್ಲವೂ ಕೃತಕವಾಗುತ್ತಿದೆ. ರಾಸಾಯನಿಕಗಳನ್ನು ಬಳಸಿ, ತಂತ್ರಜ್ಞಾನದ ನೆರವಿನಿಂದ ಬೆಳೆಗಳನ್ನು ಬೇಗ ಮತ್ತು ಹೆಚ್ಚು ಬೆಳೆಯುತ್ತಿದ್ದೇವೆ. ಆದರೆ ಹೀಗೆ ಬೆಳೆದ ಹಣ್ಣು ತರಕಾರಿ ಹೂವು ಎಷ್ಟರ ಮಟ್ಟಿಗೆ ಸಹಜವಾಗಿವೆ? ನಮ್ಮ ಆರೋಗ್ಯಕ್ಕೆ ಪೂರಕವಾಗಿವೆ?

ನಗರಗಳಲ್ಲಿ ಹಳ್ಳಿತಿಂಡಿ, ಹಳ್ಳಿಮನೆ ಎಂಬ ಹೆಸರುಗಳಿಂದ ಹೋಟೆಲ್‌ಗಳು ತಲೆ ಎತ್ತಿವೆ; ಕೃತಕವಾದ ಹೆಂಚಿನ ಮನೆ ಅಥವಾ ಗುಡಿಸಲುಗಳ ಆಕಾರದಲ್ಲೂ ಹೋಟೆಲಿನ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಆದರೆ ಈ ಹೋಟೆಲ್‌ಗಳಲ್ಲಿ ಸಿಗುವ ಆಹಾರ ಎಷ್ಟರ ಮಟ್ಟಿಗೆ ನಿಜವಾದ ಹಳ್ಳಿಯ ಊಟವಾಗಿದೆ?

ರಾಜಕಾರಣಿಗಳು ದೇಶೋದ್ಧಾರದ ಮಾತುಗಳನ್ನು ಸಮೃದ್ಧಿಯಾಗಿ ಆಡುತ್ತಲೇ ಇರುತ್ತಾರೆ. ನೂರಾರು ಯೋಜನೆಗಳಿಗೆ ಉದ್ಧಾರದ ಉದ್ದುದ್ದದ ಹೆಸರಗಳನ್ನೂ ಕೊಡುತ್ತಾರೆ. ಆದರೆ ಈ ಯೋಜನೆಗಳಲ್ಲಿ ಯಾವ ಪ್ರಮಾಣದಲ್ಲಿ ಪ್ರಾಮಾಣಿಕತೆ, ಕಾಳಜಿ, ಪಾರದರ್ಶಕತೆಗಳು ಇರುತ್ತವೆ?

ಹೀಗೆ ಸಮಾಜದ ಹಲವು ಚಟುವಟಿಕೆಗಳು ವಂಚನೆಯ ನೆಲೆಯಲ್ಲಿಯೇ ನಡೆಯುತ್ತಿರುತ್ತವೆ. ಇವೆಲ್ಲವೂ ಜೀವವೇ ಇಲ್ಲದ ದೇಹದಂತೆ, ನೀರನ್ನು ಕಳೆದುಕೊಂಡ ಸಮುದ್ರದಂತೆ, ತಿನ್ನುವುದಕ್ಕೆ ಒದಗದ ಪ್ಲಾಸ್ಟಿಕ್‌ ಅಕ್ಕಿಯಂತೆ ವ್ಯರ್ಥ, ವ್ಯರ್ಥ. ಇಂಥ ವ್ಯರ್ಥಪ್ರಯಾಸವನ್ನು ಕುರಿತೇ ಸುಭಾಷಿತ ಮಾತನಾಡುತ್ತಿರುವುದು. ಎಲ್ಲಿ ಮನುಷ್ಯತ್ವ ಇಲ್ಲವೋ ಅಲ್ಲಿ ಕೃತಕತೆಯೇ ಕುಣಿಯುತ್ತಿರುತ್ತದೆ; ಎಲ್ಲಿ ದಿಟವಾದ ಮಾನವತೆ ಇಲ್ಲವೋ ಅಲ್ಲಿ ದೈವತ್ವವೂ ಇರುವುದಿಲ್ಲ. ದೈವತ್ವದ ಸ್ಪರ್ಶ ಇಲ್ಲದ ನಮ್ಮ ಸೃಷ್ಟಿಯೆಲ್ಲವೂ ನಿಷ್ಪ್ರಯೋಕಜವಷ್ಟೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.