ADVERTISEMENT

ದಿನದ ಸೂಕ್ತಿ| ಆದರ್ಶ ನಾಯಕ

ಎಸ್.ಸೂರ್ಯಪ್ರಕಾಶ ಪಂಡಿತ್
Published 31 ಆಗಸ್ಟ್ 2021, 19:30 IST
Last Updated 31 ಆಗಸ್ಟ್ 2021, 19:30 IST
ಅಧಿಕಾರ
ಅಧಿಕಾರ   

ಅಕೃತಾತ್ಮಾನಮಾಸಾದ್ಯ ರಾಜಾನಮನಯೇ ರತಮ್‌ ।

ಸಮೃದ್ಧಾನಿ ವಿನಶ್ಯಂತಿ ರಾಷ್ಟ್ರಾಣಿ ನಗರಾಣಿ ಚ ।।

ಇದರ ತಾತ್ಪರ್ಯ ಹೀಗೆ:

ADVERTISEMENT

’ಜಿತೇಂದ್ರಿಯನಲ್ಲದವನೂ ದುರ್ನೀತಿಯಲ್ಲಿ ಆಸಕ್ತನಾದವನೂ ಆದ ರಾಜನಿದ್ದರೆ ಆಗ ರಾಷ್ಟ್ರಗಳೂ ನಗರಗಳೂ – ಅವು ಸಮೃದ್ಧವಾಗಿದ್ದರೂ – ಹಾಳಾಗುತ್ತವೆ.’

ರಾಜನಲ್ಲಿ ಇರಬೇಕಾದ ಅರ್ಹತೆಗಳ ಬಗ್ಗೆ ಈ ಸುಭಾಷಿತ ಹೇಳುತ್ತಿದೆ.

ರಾಜತ್ವ ಎಂಬುದು ಸುಖವನ್ನೂ ಭೋಗವನ್ನೂ ಅನುಭವಿಸಲು ದಕ್ಕುವ ಅಧಿಕಾರ ಎನ್ನುವುದನ್ನು ನಮ್ಮ ದೇಶದ ಪ್ರಾಚೀನ ರಾಜನೀತಿ ಒಪ್ಪುವುದಿಲ್ಲ. ಇಂದು ರಾಜರಿಲ್ಲ; ಇರುವವರು ರಾಜಕಾರಣಿಗಳು. ಇಂದಿನ ರಾಜಕಾರಣಿಗಳು ಅಧಿಕಾರಕ್ಕಾಗಿ ತುದಿಗಾಲಿನಲ್ಲಿ ನಿಂತಿರುತ್ತಾರೆ ಎಂಬುದು ಎದ್ದುಕಾಣುವ ವಿದ್ಯಮಾನ. ಇವರು ಅಧಿಕಾರವನ್ನು ಬಯಸುವುದಾದರೂ ಏಕೆ? ಸಂಪತ್ತನ್ನು ಸಂಪಾದಿಸಲು, ಭೋಗವನ್ನು ಅನುಭವಿಸಲು, ದರ್ಪವನ್ನು ಪ್ರದರ್ಶಿಸಲು. ಇಂಥವರನ್ನು ಉದ್ದೇಶದಲ್ಲಿಟ್ಟುಕೊಂಡೇ ಸುಭಾಷಿತ ಹೇಳುತ್ತಿರುವುದು: ಜಿತೇಂದ್ರಿಯನಲ್ಲದವನಿಂದ ರಾಷ್ಟ್ರ ಹಾಳಾಗುತ್ತದೆ.

ಜಿತೇಂದ್ರಿಯತ್ವ ಎಂದರೆ ಇಂದ್ರಿಯಗಳ ಮೇಲೆ ಜಯವನ್ನು ಸಾಧಿಸಿರುವುದು. ಇಂದ್ರಿಯಗಳಿಗೆ ವಶನಾದವನು ಯಾವಾಗಲೂ ಭೋಗದಲ್ಲಿಯೇ ಮುಳುಗಿರುತ್ತಾನೆ. ಏಕೆಂದರೆ ಇಂದ್ರಿಯಗಳ ಸ್ವಭಾವವೇ ಹಾಗೆ. ಕಣ್ಣು, ಕಿವಿ, ನಾಲಗೆ, ಮೂಗು, ಚರ್ಮ – ಇವು ನಮ್ಮನ್ನು ಸುಖಾನುಭವದ ಕಡೆಗೆ ಕರೆದುಕೊಂಡು ಹೋಗುವ ಬಾಗಿಲುಗಳು. ಇವುಗಳಿಗೆ ತೃಪ್ತಿ ಎನ್ನುವುದೇ ಇರದು. ಮಾತ್ರವಲ್ಲ, ಈ ಇಂದ್ರಿಯಗಳಿಗೆ ಸರಿ–ತಪ್ಪುಗಳನ್ನು ವಿವೇಚಿಸುವ ಸಾಮರ್ಥ್ಯವೂ ಇರುವುದಿಲ್ಲ. ಈ ಎಲ್ಲ ಇಂದ್ರಿಯಗಳು ಒದಗಿಸುವ ಅನುಭವಪ್ರಪಂಚ ನಮಗೆ ಬೇಕು, ದಿಟ. ಅದರೆ ಈ ಇಂದ್ರಿಯಗಳನ್ನು ತೃಪ್ತಿಪಡಿಸುವುದೇ ನಮ್ಮ ಗುರಿಯಾಗಬಾರದು. ಏಕೆಂದರೆ ಇವು ತಳವಿಲ್ಲದ ಪಾತ್ರೆಗಳಂತೆ; ಎಷ್ಟು ಸುರಿದರೂ ಅವು ತುಂಬುವುದಿಲ್ಲ. ಈ ಇಂದ್ರಿಯಗಳು ಕೋರುವ ’ಅದು ಬೇಕು, ಇದು ಬೇಕು’ ಎಂಬ ಪ್ರವಾಹದಲ್ಲಿ ಕೊಚ್ಚಿಹೋಗುವಂಥ ಮನಃಸ್ಥಿತಿ ರಾಜನಿಗೆ, ಎಂದರೆ ನಮ್ಮ ಕಾಲದ ಮಂತ್ರಿಗಳಿಗೆ, ಅಧಿಕಾರಿಗಳಿಗೆ, ಎಂದಿಗೂ ಬರಬಾರದು.

ಇಂದ್ರಿಯಗಳಿಗೆ ವಶವಾಗುವುದರ ಜೊತೆಗೆ ದುರ್ನೀತಿ, ಎಂದರೆ ಕೆಟ್ಟ ಆಚಾರ–ವಿಚಾರಗಳೂ ರಾಜಕಾರಣಿಗಳಲ್ಲಿ, ಅಧಿಕಾರಿಗಳಲ್ಲಿ ಸೇರಿಕೊಂಡರೆ, ಆಗ ಇಡಿಯ ರಾಷ್ಟ್ರವೇ ನಾಶವಾಗುವುದರಲ್ಲಿ ಅನುಮಾನವೇ ಇರದು.

ಪ್ರಜೆಗಳಿಗಾಗಿ, ಸಮಾಜಕ್ಕಾಗಿ ತನ್ನ ಹಿತವನ್ನೂ ತ್ಯಾಗಮಾಡಬಲ್ಲಂಥ ಸತ್ವಸಂಪನ್ನಜನನಾಯಕ ಮಾತ್ರವೇ ರಾಷ್ಟ್ರನಿರ್ಮಾಣವನ್ನು ಮಾಡಬಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.