ADVERTISEMENT

ದಿನದ ಸೂಕ್ತಿ| ಪ್ರಬುದ್ಧತೆ

ಎಸ್.ಸೂರ್ಯಪ್ರಕಾಶ ಪಂಡಿತ್
Published 26 ಮಾರ್ಚ್ 2021, 3:04 IST
Last Updated 26 ಮಾರ್ಚ್ 2021, 3:04 IST
ಪ್ರಬುದ್ಧತೆ
ಪ್ರಬುದ್ಧತೆ   

ಅದೌ ಚಿತ್ತೇ ತತಃ ಕಾಯೇ ಸತಾಂ ಸಂಪದ್ಯತೇ ಜರಾ ।

ಅಸತಾಂ ತು ಪುನಃ ಕಾಯೇ ನೈವ ಚಿತ್ತೇ ಕದಾಚನ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಸಜ್ಜನರ ವಿಷಯದಲ್ಲಿ ಮೊದಲು ಮನಸ್ಸಿನಲ್ಲಿ ಮತ್ತು ತದನಂತರ ಶರೀರದಲ್ಲಿ ಮುಪ್ಪು ಮೈದೋರುತ್ತದೆ. ಆದರೆ ಇತರರಿಗೆ ಶರೀರದಲ್ಲಿ ಮುಪ್ಪು ತೋರಿದರೂ ಚಿತ್ತದಲ್ಲಿ ಎಂದೂ ಮುಪ್ಪು ಉಂಟಾಗುವುದೇ ಇಲ್ಲ.’

ಪ್ರಬುದ್ಧತೆ ಎಂದರೆ ಏನು ಎಂಬುದನ್ನು ಸುಭಾಷಿತ ಹೇಳುತ್ತಿದೆ.

ನಮಗೆ ವಯಸ್ಸಾದಂತೆಲ್ಲ ಪಕ್ವತೆ ಬರುತ್ತದೆ ಎಂಬುದು ಒಂದು ನಂಬಿಕೆ. ಈ ನಂಬಿಕೆಯನ್ನು ಅನುಸರಿಸಿ ಈ ಸುಭಾಷಿತ ಮಾತನಾಡುತ್ತಿದೆ. ಮುಪ್ಪು ಎಂಬುದು ಇಲ್ಲಿ ಪಕ್ವತೆಗೆ ಸಂಕೇತ.

ಸಜ್ಜನರಲ್ಲಿ ಮೊದಲಿಗೆ ಮನಸ್ಸಿನಲ್ಲಿ ಮುಪ್ಪು ಮೂಡುತ್ತದೆಯಂತೆ. ಎಂದರೆ ಅವರಲ್ಲಿ ಮನಸ್ಸು ಮೊದಲಿಗೆ ಪ್ರಬುದ್ಧತೆಯನ್ನು ಪಡೆಯುತ್ತದೆ; ವಯಸ್ಸಾದಮೇಲೆ ಬರುವ ಪಾಕ ಇದಲ್ಲ; ಅವರು ಎಳೆಯ ವಯಸ್ಸಿನಲ್ಲೇ ಪ್ರಬುದ್ಧತೆಯನ್ನು ಸಂಪಾದಿಸಿಕೊಂಡಿರುತ್ತಾರೆ.

ಶರೀರಕ್ಕೆ ವಯಸ್ಸಾಗಿದೆ ಎಂದು ಹೇಳುವುದು ನಿಃಶಕ್ತಿಯನ್ನು ತೋರಿಸುತ್ತದೆ. ಆದರೆ ಮನಸ್ಸಿಗೆ ಮುಪ್ಪಾಗಿದೆ ಎನ್ನುವುದು ಮನಸ್ಸು ಸಾಧಿಸಿರುವ ಪ್ರೌಢತೆಗೆ ಸೂಚಕವಾಗುತ್ತದೆ.

ಇಲ್ಲಿ ಇನ್ನೊಂದು ಸುಭಾಷಿತವನ್ನು ನೋಡಬಹುದು:

ನ ಸಭಾ ಯತ್ರ ನ ಸಂತಿ ವೃದ್ಧಾ

ನ ತೇ ವೃದ್ಧಾ ಯೇ ನ ವದಂತಿ ಧರ್ಮಮ್‌ ।

ನಾಸೌ ಧರ್ಮೋ ಯತ್ರ ನ ಸತ್ಯಮಸ್ತಿ

ನ ತತ್‌ ಸತ್ಯಂ ಯತ್‌ ಛಲೇನಾಭ್ಯುಪೇತಮ್‌ ।।

ಎಂದರೆ ’ಎಲ್ಲಿ ವೃದ್ಧರಿಲ್ಲವೋ ಅದು ಸಭೆಯಲ್ಲ. ಯಾರು ಧರ್ಮವನ್ನು ನುಡಿಯವುದಿಲ್ಲವೋ ಅವರು ವೃದ್ಧರಲ್ಲ. ಎಲ್ಲಿ ಸತ್ಯವಿಲ್ಲವೋ ಅದು ಧರ್ಮವಲ್ಲ. ಯಾವುದು ಹಟದಿಂದ ಕೂಡಿರುವುದೋ ಅದು ಸತ್ಯವಲ್ಲ‘.

ಇಲ್ಲಿ ಸಭೆ ಎಂಬುದು ನಮ್ಮ ವಿಧಾಸಸಭೆ, ಲೋಕಸಭೆಗಳಿಗೂ ಅನ್ವಯವಾಗುತ್ತದೆ.

ಎಲ್ಲಿ ವೃದ್ಧರಿಲ್ಲವೋ ಅದು ಸಭೆಯೇ ಅಲ್ಲ ಎಂದು ಘೋಷಿಸಿದೆ ಸುಭಾಷಿತ. ಆದರೆ ಇಲ್ಲಿ ಗಮನಿಸಬೇಕಾದ್ದು ವೃದ್ಧತ್ವ ಎಂಬುದು ಸುಭಾಷಿತದ ಪ್ರಕಾರ ವಯಸ್ಸಿನಿಂದ ಒದಗುವಂಥದ್ದು ಅಲ್ಲ; ಯಾರು ಧರ್ಮವನ್ನು ನುಡಿಯುತ್ತಾರೋ ಅವರು ವೃದ್ಧರು ಎಂದೂ ಅದು ಸಮೀಕರಿಸಿದೆ. ಎಂದರೆ ಧರ್ಮವನ್ನು ಹೇಳಲು ನಮ್ಮ ವಯಸ್ಸು ಕಾರಣವಾಗದು; ನಮ್ಮ ಮನಸ್ಸಿನ ಪ್ರಬುದ್ಧತೆ, ಪಕ್ವತೆಗಳೇ ನಮಗೆ ಅಂಥ ಶಕ್ತಿಯನ್ನೂ ವಿವೇಕವನ್ನೂ ನೀಡಬಲ್ಲದು.

ನಮ್ಮ ವ್ಯಕ್ತಿತ್ವಕ್ಕೆ ಮೆರುಗು ಕೊಡುವುದು ವಯಸ್ಸು ಅಲ್ಲ, ನಮ್ಮ ಅಂತರಂಗದ ಪಕ್ವತೆಯೇ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.