ADVERTISEMENT

ದಿನದ ಸೂಕ್ತಿ| ಹೊಗಳಿಕೆಯ ತುತ್ತೂರಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 25 ಫೆಬ್ರುವರಿ 2021, 1:19 IST
Last Updated 25 ಫೆಬ್ರುವರಿ 2021, 1:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕಿಮಿವಾಖಿಲಲೋಕಕೀರ್ತಿತಂ

ಕಥಯತ್ಯಾತ್ಮಗುಣಂ ಮಹಾಮನಾಃ ।

ವದಿತಾ ನ ಲಘೀಯಸೋsಪರಃ

ADVERTISEMENT

ಸ್ವಗುಣಂ ತೇನ ವದತ್ಯಸೌ ಸ್ವಯಮ್‌ ।।

ಇದರ ತಾತ್ಪರ್ಯ ಹೀಗೆ:

‘ಇಡೀ ಲೋಕವು ಹೊಗಳುತ್ತಿರಲು ಮಹಾತ್ಮನು ತನ್ನ ಗುಣಗಳನ್ನು ಹೇಳಿಕೊಳ್ಳಬೇಕಾಗಿರುವುದಿಲ್ಲ. ಆದರೆ ನೀಚನ ಗುಣಗಳನ್ನು ಹೇಳುವವರೇ ಇಲ್ಲ; ಆದುದರಿಂದಲೇ ಅವನು ತಾನೇ ತನ್ನ ಗುಣಗಳನ್ನು ಬೇರೆ ದಾರಿಯಿಲ್ಲದೆ ಹೇಳಿಕೊಳ್ಳಬೇಕಾಗುತ್ತದೆ!’

ನಮ್ಮ ಸಮಾಜದ ಇಂದಿನ ಹಲವು ವಿದ್ಯಮಾನಗಳನ್ನು ಈ ಶ್ಲೋಕ ತುಂಬ ಸೊಗಸಾಗಿ ಧ್ವನಿಸುತ್ತಿದೆ. ಒಳ್ಳೆಯತನಕ್ಕೆ ಪ್ರಚಾರ ಬೇಕಿಲ್ಲ; ಆದರೆ ಕೆಟ್ಟದ್ದು ಮಾತ್ರ ತನ್ನ ಬಗ್ಗೆ ತಾನೇ ಅರಚಿಕೊಳ್ಳಬೇಕಾಗುತ್ತದೆ ಎನ್ನುತ್ತಿದೆ ಸುಭಾಷಿತ.

ನಿಜವಾಗಿಯೂ ಒಳ್ಳೆಯವರು ಅವರು ‘ನಾವು ಒಳ್ಳೆಯವರು‘ ಎಂದು ಹೇಳಿಕೊಳ್ಳುವುದಿಲ್ಲ; ಹೇಳಿಕೊಳ್ಳುವ ಅನಿವಾರ್ಯತೆಯೂ ಬಾರದು. ಅವರ ಒಳ್ಳೆಯತನ ಜನರ ಅನುಭವಕ್ಕೆ ತಾನೇ ತಾನಾಗಿ ದಕ್ಕುತ್ತದೆ. ಹೀಗಾಗಿ ಅವರಿಗೆ ಸಹಜವಾಗಿಯೇ ಪ್ರಶಂಸೆಯೂ ಸಿಕ್ಕುತ್ತದೆ; ಕೀರ್ತಿಯೂ ಲಭಿಸುತ್ತದೆ.

ಶ್ರೀರಾಮ ತಾನು ಒಳ್ಳೆಯವನು ಎಂದು ತಾನೇ ಘೋಷಿಸಿಕೊಳ್ಳಲಿಲ್ಲ. ಅವನ ಧರ್ಮಮಾರ್ಗವನ್ನು ಕಂಡು, ಜಗತ್ತೇ ಅವನನ್ನು ಗೌರವಿಸಿತು; ದೇವರೆಂದೂ ಪೂಜಿಸಿತು. ಹೀಗೆಯೇ ಎಷ್ಟೋ ಜನರು ಮಹಾನುಭಾವರು ನಮ್ಮ ಕಾಲದಲ್ಲೂ ನಮ್ಮ ನಡುವೆಯೂ ಇದ್ದಾರೆ. ಅವರೆಂದಿಗೂ ತಾವು ಮಾಡಿರುವ ಒಳ್ಳೆಯ ಕೆಲಸಗಳನ್ನಾಗಲೀ ಸಾಮಾಜಿಕ ಕೆಲಸಗಳನ್ನಾಗಲೀ ಪ್ರಚಾರ ಮಾಡುವುದಿಲ್ಲ. ಆದರೆ ಕ್ರಮೇಣ ಜನರಿಗೆ ಅವೇ ತಿಳಿಯುತ್ತವೆ. ಆಗ ಜನರು ತಾವಾಗಿಯೇ ಅಂಥವರ ಬಳಿಗೆ ಧಾವಿಸುತ್ತಾರೆ. ಹೂವಿನಲ್ಲಿರುವ ಮಕರಂದ ’ತಾನು ಮಕರಂದ ಸಿಹಿಯಾಗಿರುವೆ, ಇಲ್ಲಿರುವೆ‘ ಎಂದು ಪ್ರಚಾರ ಮಾಡುವುದಿಲ್ಲ; ಆದರೆ ಜೇಣುನೊಣಗಳು ತಾವಾಗಿಯೇ ಅಲ್ಲಿಗೆ ಧಾವಿಸಿ ಬರುತ್ತವೆ, ಅಲ್ಲವೆ?

ಆದರೆ ಪಾಪ, ಕೆಟ್ಟವರ ನೀಚರ ಅಲ್ಪರ ಆಷಾಢಭೂತಿಗಳ ಪಾಡು ಇದಕ್ಕಿಂತಲೂ ಭಿನ್ನ. ಇಂಥವರು ಮಾಡುವ ಕೆಲಸಗಳೆಲ್ಲವೂ ಅನಾಚಾರಗಳೇ ಆದುದರಿಂದ ಸಮಾಜದ ಮುಂದೆ ಇವರು ನಗ್ನರಾಗಬೇಕಾಗುತ್ತದೆ. ಈ ನಗ್ನತೆಯನ್ನು ಮುಚ್ಚಿಟ್ಟುಕೊಳ್ಳಲು ಇವರು ಅನಾಚಾರಗಳನ್ನೇ ಸದಾಚಾರಗಳು ಎಂಬಂತೆ ಪ್ರಚಾರಮಾಡಿಕೊಳ್ಳುತ್ತಾರೆ. ಒಳ್ಳೆಯವರ ಸನ್ನಡತೆಯ ಬಗ್ಗೆ ಜನರೇ ಒಬ್ಬರಿಂದ ಒಬ್ಬರಿಗೆ ಹರಡುತ್ತಿರುತ್ತಾರೆ. ರಾಮನ ಕೀರ್ತಿ ಜನರ ಬಾಯಲ್ಲಿ ನಲಿದಾಡುತ್ತ, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತ ನಾಲ್ಕು ದಿಕ್ಕುಗಳನ್ನು ತಾನೇ ತಾನಾಗಿ ಹಬ್ಬಿತ್ತು ಎಂಬುದನ್ನು ನಾರದಮಹರ್ಷಿಯು ವಾಲ್ಮೀಕಿಮಹರ್ಷಿಗೆ ತಿಳಿಸುತ್ತಾನೆ. ಇದು ಸದ್ಗುಣಗಳ ಶಕ್ತಿ.

ಆದರೆ ದುರ್ಗುಣಗಳನ್ನು ಮುಚ್ಚಿಟ್ಟುಕೊಂಡು, ತಾವು ಸಜ್ಜನರು ಎಂಬ ಮುಖವಾಡದಲ್ಲಿ ಬದುಕುವ ಅಲ್ಪರು ಜನರಲ್ಲಿಗೆ ತೆರಳಿ ತೆರಳಿ ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಿರುತ್ತಾರೆ. ಚುನಾವಣೆಗಳಲ್ಲಿ ಇದರ ನೇರ ಅನುಭವ ನಮಗೆ ಆಗುತ್ತಿರುತ್ತದೆಯೆನ್ನಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.