ADVERTISEMENT

ದಿನದ ಸೂಕ್ತಿ: ಒಳ್ಳೆಯವರಾಗುವುದು ಸುಲಭವಲ್ಲ

ಎಸ್.ಸೂರ್ಯಪ್ರಕಾಶ ಪಂಡಿತ್
Published 21 ಜನವರಿ 2021, 0:53 IST
Last Updated 21 ಜನವರಿ 2021, 0:53 IST
ಹೂವುಗಳು
ಹೂವುಗಳು   

ಖಲ ಕುರ್ಯಾತ್‌ ಖಲಂ ಲೋಕಂ ಸಂತಮನ್ಯಂ ನ ಕಶ್ಚನ ।

ನ ಹಿ ಶಕ್ಯಂ ಪದಾರ್ಥಾನಾಂ ಭಾವನಂ ಚ ವಿನಾಶವತ್‌ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಕೆಟ್ಟ ಮನುಷ್ಯನು ಇನ್ನೊಬ್ಬನನ್ನು ಕೆಟ್ಟವನನ್ನಾಗಿ ಮಾಡಬಲ್ಲ. ಆದರೆ ಕೆಟ್ಟವನು ಯಾವನೂ ಒಳ್ಳೆಯವನನ್ನಾಗಿ ಮಾಡಲಾರ. ವಸ್ತುಗಳನ್ನು ಹಾಳುಮಾಡುವಷ್ಟು ಸುಲಭವಾಗಿ ಉತ್ಪಾದನೆ ಮಾಡಲು ಸಾಧ್ಯವಿಲ್ಲ.’

ಒಡೆದ ಕನ್ನಡಿಯನ್ನು ಮತ್ತೆ ಜೋಡಿಸಲಾಗದು ಎಂದು ಸುಭಾಷಿತ ಹೇಳುತ್ತಿದೆ.

ಒಂದು ಬುಟ್ಟಿಯಲ್ಲಿ ಕೆಲವೊಂದು ಹಣ್ಣುಗಳಿವೆ. ಅದರಲ್ಲಿ ಒಂದು ಹಣ್ಣು ಕೊಳೆತಿದೆ ಎಂದಿಟ್ಟುಕೊಳ್ಳಿ. ಆ ಹತ್ತು ಒಳ್ಳೆಯ ಹಣ್ಣುಗಳ ಜೊತೆಗೆ ಈ ಒಂದು ಕೊಳೆತ ಹಣ್ಣು ಇದ್ದರೆ ಏನಾಗುತ್ತದೆ? ಒಳ್ಳೆಯ ಹಣ್ಣುಗಳೂ ಬೇಗ ಕೊಳೆತಹೋಗುತ್ತವೆ. ಹೀಗಲ್ಲದೆ ಆ ಕೊಳೆತ ಹಣ್ಣನ್ನು ಬುಟ್ಟಿಯಿಂದ ತೆಗೆದು ಹೊರಗೆ ಎಸೆದರೆ, ಆಗ ಒಳ್ಳೆಯ ಹಣ್ಣುಗಳು ಹೆಚ್ಚು ದಿನ ಉಳಿಯುತ್ತವೆ, ಅಲ್ಲವೆ?

ಕೊಳೆತ ಹಣ್ಣು ಸುಮ್ಮನೆ ತನ್ನಷ್ಟಕ್ಕೆ ತಾನು ಇರುವುದಿಲ್ಲ; ಅದು ಪಕ್ಕದಲ್ಲಿರುವ ಹಣ್ಣನ್ನೂ ಕೆಡಿಸುತ್ತದೆ.

ಇದು ಕೆಟ್ಟತನದ ಸ್ವಭಾವ.

ಹೀಗೆಯೇ ಕೆಟ್ಟವರು ಕೂಡ. ಅವರ ಸ್ವಭಾವವೇ ಇತರರಿಗೆ ಕೇಡನ್ನು ಉಂಟುಮಾಡುವುದು. ಹೀಗಿರುವಾಗ ಅವರು ಇನ್ನೊಬ್ಬರನ್ನು ಒಳ್ಳೆಯವರನ್ನಾಗಿಸುವ ಕೆಲಸಕ್ಕೆ ಏಕಾದರೂ ಮುಂದಾಗುತ್ತಾರೆ? ಬೇರೊಬ್ಬರನ್ನು ಒಳ್ಳೆಯವರನ್ನಾಗಿಸುವ ಮೊದಲು ಅವರು ಒಳ್ಳೆಯವರಾಗಬೇಕಾಗುತ್ತದೆ. ಇದು ಅವರಿಗೆ ಒಪ್ಪಿಗೆಯಿಲ್ಲದ ಸಂಗತಿ!

ಸುಭಾಷಿತ ಇದನ್ನೇ ಹೇಳುತ್ತಿದೆ. ಕೆಟ್ಟವನು ಇನ್ನೊಬ್ಬನನ್ನು ಕೆಟ್ಟವನನ್ನಾಗಿ ಮಾಡಬಲ್ಲನೆ ಹೊರತು ಒಳ್ಳೆಯವನನ್ನಾಗಿ ಮಾಡಲಾರ. ಇದಕ್ಕೆ ಅದು ಉಪಯೋಗಿಸಿಕೊಂಡಿರುವ ಉದಾಹರಣೆಯಿಂದ ಈ ಸ್ವಭಾವ ಇನ್ನಷ್ಟು ಸ್ಪಷ್ಟವಾಗುತ್ತದೆ.

ಒಂದು ವಸ್ತುವನ್ನು ನಾಶ ಮಾಡುವಷ್ಟು ಸುಲಭವಾಗಿ ಅದನ್ನು ತಯಾರು ಮಾಡಲು ಆಗದು. ಇದನ್ನೇ ’ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ‘ ಎಂಬ ಗಾದೆ ಕೂಡ ಹೇಳುವುದು. ಈ ಮಾತು ದೇಶಕ್ಕೂ ಸಲ್ಲುತ್ತದೆ, ಕುಟುಂಬಕ್ಕೂ ಸಲ್ಲುತ್ತದೆ; ನಮ್ಮ ವ್ಯಕ್ತಿತ್ವಕ್ಕೂ ಸಲ್ಲುತ್ತದೆ.

ನಮ್ಮ ಸ್ವಾರ್ಥದಿಂದ ಸಮಾಜವನ್ನು, ದೇಶವನ್ನು ಅಥವಾ ನಮ್ಮ ಕಚೇರಿಯನ್ನು, ಕಾರ್ಖಾನೆಯನ್ನು, ಮನೆಯನ್ನು ನಾಶ ಮಾಡುವುದು ಸುಲಭ. ಆದರೆ ಮತ್ತೆ ದೇಶವನ್ನು ಕಟ್ಟುವುದು, ಸಮಾಜವನ್ನು ಕಟ್ಟುವುದು ಸುಲಭವಲ್ಲ. ಹೀಗೆಯೇ ನಮ್ಮ ಮನೆ, ಕಚೇರಿ – ಯಾವುದನ್ನೂ ನಾಶ ಮಾಡುವುದು ಸುಲಭ. ಆದರೆ ಅವನ್ನು ಮತ್ತೆ ಸುಭದ್ರಗೊಳಿಸುವುದು ಸುಲಭವಲ್ಲ.

ನಾವು ಕೆಟ್ಟವರಾಗುವುದು ಸುಲಭ; ಆದರೆ ಒಳ್ಳೆಯವರಾಗಿ ಸಮಾಜಕ್ಕೂ ಕುಟುಂಬಕ್ಕೂ ಪ್ರಯೋಜಕರಾಗಿ ಒದಗುವುದು ಸುಲಭವಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.