ADVERTISEMENT

ದಿನದ ಸೂಕ್ತಿ: ಇವರು ದುರ್ಲಭರು

ಎಸ್.ಸೂರ್ಯಪ್ರಕಾಶ ಪಂಡಿತ್
Published 19 ಜನವರಿ 2021, 1:03 IST
Last Updated 19 ಜನವರಿ 2021, 1:03 IST
   

ಶ್ರೀಮಾನಜನನಿಂದ್ಯಶ್ಚ ಶೂರಾಶ್ಚಾಪ್ಯವಿಕತ್ಥನಃ ।
ಸಮದೃಷ್ಟಿಃ ಪ್ರಭುಶ್ಚೈವ ದುರ್ಲಭಾಃ ಪುರುಷಾಸ್ತ್ರಯಃ ।।

ಇದರ ತಾತ್ಪರ್ಯ ಹೀಗೆ:‘ಜನರ ನಿಂದೆಗೆ ಗುರಿಯಾಗದ ಶ್ರೀಮಂತ, ಆತ್ಮಪ್ರಶಂಸೆ ಮಾಡಿಕೊಳ್ಳದ ಶೂರ, ಸಮದೃಷ್ಟಿಯುಳ್ಳ ರಾಜ – ಈ ಮೂವರು ಸಿಗುವುದು ಕಷ್ಟ.‘

ಸಮಾಜದ ಗುಣ ಮತ್ತು ಮನುಷ್ಯರ ಸ್ವಭಾವ – ಇವೆರಡನ್ನೂ ಈ ಸುಭಾಷಿತ ನಿರೂಪಿಸುತ್ತಿದೆ.

ADVERTISEMENT

ಜನರಿಗೆ ಯಾವಾಗಲೂ ಧನಿಕರ ಬಗ್ಗೆ ಗುಮಾನಿ. ಅವರು ಎಷ್ಟೇ ಪ್ರಾಮಾಣಿಕವಾಗಿ ಸಂಪತ್ತನ್ನು ಸಂಪಾದಿಸಿದ್ದರೂ ಜನರಿಗೆ ಅವರ ಮೇಲೆ ಸಂಶಯ; ಮೋಸದಿಂದಲೇ ಹಣವನ್ನು ಸಂಪಾದಿಸಿದ್ದಾರೆ ಎಂಬ ಅನುಮಾನ ಜನರಿಗೆ. ಹೌದು, ಸಂಪತ್ತನ್ನು ಸಂಪಾದಿಸುವುದು ಸುಲಭವಲ್ಲ. ಹೀಗೆಂದು ಎಲ್ಲ ಧನಿಕರೂ ಅದನ್ನು ಅಡ್ಡದಾರಿಯಲ್ಲಿಯೇ ಸಂಪಾದಿಸಿರುತ್ತಾರೆ ಎಂದೇನಿಲ್ಲ; ಹಲವರು ನ್ಯಾಯಮಾರ್ಗದಲ್ಲಿಯೇ ಹಣವನ್ನು ಸಂಪಾದಿಸಿರುತ್ತಾರೆ. ಆದರೆ ಸಿರಿವಂತರಿಗೆ ಮಾತ್ರ ಯಾವಾಗಲೂ ಜನರಿಂದ ನಿಂದೆ ತಪ್ಪುವುದಿಲ್ಲ; ಧನಿಕರು ಮೋಸಗಾರರು ಎಂಬ ನಿಂದೆ.

ಆತ್ಮಪ್ರಶಂಸೆಯನ್ನು ಮಾಡಿಕೊಳ್ಳದ ಶೂರನೇ ಇರಲಾರ ಎಂದು ಸುಭಾಷಿತ ಹೇಳುತ್ತಿದೆ. ಇಲ್ಲಿ ಶೂರ ಎಂದರೆ ದೈಹಿಕವಾಗಿ ಬಲಶಾಲಿ, ಮಾನಸಿಕವಾಗಿ ಧೈರ್ಯಶಾಲಿ ಎಂದಷ್ಟೆ ಅಲ್ಲ, ಯಾವುದೇ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಸಾಧಕರನ್ನೂ ಈ ವರ್ಗಕ್ಕೆ ಸೇರಿಸಬಹುದು ಎನಿಸುತ್ತದೆ. ಈ ಸಾಧಕರು ಎಷ್ಟೇ ಸರಳರೂ ವಿನಯವಂತರೂ ಆಗಿದ್ದರೂ ಒಮ್ಮೆಯಾದರೂ ಅವರು ಆತ್ಮಪ್ರಶಂಸೆಯನ್ನು ಮಾಡಿಕೊಂಡೇ ಇರುತ್ತಾರೆ ಎನ್ನುತ್ತಿದೆ ಸುಭಾಷಿತ. ಹೀಗೆ ನಮ್ಮ ಸಾಧನೆಯನ್ನು ಒಮ್ಮೆ ಮೆಲುಕು ಹಾಕಿಕೊಳ್ಳುವುದೇನೂ ಅಪರಾಧವಲ್ಲವಷ್ಟೆ! ಆದರೆ ಅದು ಅಹಂಕಾರವಾಗದಂತೆ ಎಚ್ಚರವಾಗಿರಬೇಕಾಗುತ್ತದೆ.

ಸಮದೃಷ್ಟಿಯುಳ್ಳ ರಾಜನು ಸಿಗುವುದು ಕೂಡ ದುರ್ಲಭ ಎನ್ನುತ್ತಿದೆ ಸುಭಾಷಿತ. ರಾಜನಾದವನು ಪ್ರಜೆಗಳಿಗೆ ತಂದೆಯ ಸಮಾನ. ಇದರ ಅರ್ಥ, ಪ್ರಜೆಗಳನ್ನು ಸಮಾನವಾಗಿ ನೋಡಿಕೊಳ್ಳಬೇಕು ಎಂದು. ಈಗ ರಾಜ ಎಂದಾಗ ಆ ಸ್ಥಾನದಲ್ಲಿ ಮಂತ್ರಿಯನ್ನೋ ಮುಖ್ಯಮಂತ್ರಿಯನ್ನೋ ಅಥವಾ ಇನ್ನಾವುದೇ ಜನಪ್ರತಿನಿಧಿಗಳನ್ನೋ ಕಾಣಬೇಕು. ಪ್ರಜೆಗಳನ್ನು ಸಮದೃಷ್ಟಿಯಿಂದ ನೋಡುವುದು ಎಂದರೆ ಎಲ್ಲರಿಗೂ ಒಂದೇ ರೀತಿಯ ಊಟ, ಬಟ್ಟೆ, ಸಂಬಳ ಮುಂತಾದುವನ್ನು ಕೊಡುವುದು ಎಂದಲ್ಲ; ಅವರವರ ಆವಶ್ಯಕತೆಗಳಿಗೆ ತಕ್ಕ ರೀತಿಯಲ್ಲಿ ಎಲ್ಲರ ಆಗುಹೋಗುಗಳನ್ನು ಪೂರೈಸುವುದು ಎಂದು ಅರ್ಥ. ಇವನು ನಮ್ಮ ಪಕ್ಷದವನು; ಇವನಿಗೆ ಸಹಾಯ ಮಾಡಬೇಕು; ಅವನು ನಮ್ಮ ಪಕ್ಷದವನಲ್ಲ; ಅವನಿಗೆ ಸಹಾಯ ಮಾಡಬಾರದು. ಇವನು ನಮ್ಮ ಜಾತಿಯವನು; ಹೀಗಾಗಿ ಇವನು ನಮ್ಮವನು. ಅವನು ಬೇರೆ ಜಾತಿಯವನು; ಹೀಗಾಗಿ ಅವನು ನಮ್ಮವನಲ್ಲ. ಇಂಥ ಆಲೋಚನೆಗಳೂ ಜನಪ್ರತಿನಿಧಿಗಳಲ್ಲಿ ಬರಬಾರದು. ಇಂಥ ಭೇದಬುದ್ಧಿ ಇಲ್ಲದಿರುವಿಕೆಯೇ ಸಮದೃಷ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.