ADVERTISEMENT

ದಿನದ ಸೂಕ್ತಿ| ದುಷ್ಟತನ ಮತ್ತು ದ್ವೇಷ

ಎಸ್.ಸೂರ್ಯಪ್ರಕಾಶ ಪಂಡಿತ್
Published 8 ಏಪ್ರಿಲ್ 2021, 2:36 IST
Last Updated 8 ಏಪ್ರಿಲ್ 2021, 2:36 IST
ದ್ವೇಷ
ದ್ವೇಷ   

ಅಕಾರಣಾವಿಷ್ಕೃತವೈದಾರುಣಾತ್‌

ಅಸಜ್ಜನಾತ್ಕಸ್ಯ ಭಯಂ ನ ಜಾಯತೇ ।

ವಿಷಂ ಮಹಾಹೇರಿವ ಯಸ್ಯ ದುರ್ವಚಃ

ADVERTISEMENT

ಸುದುಃಸಹಂ ಸನ್ನಿಹಿತಂ ಸದಾ ಮುಖೇ ।।

ಇದರ ತಾತ್ಪರ್ಯ ಹೀಗೆ:

‘ಕಾರಣವೇ ಇಲ್ಲದೆ ಹಗೆತನವನ್ನು ತೋರುವ ದುಷ್ಟರನ್ನು ಕಂಡರೆ ಯಾರಿಗೆ ತಾನೆ ಹೆದರಿಕೆ ಆಗುವುದಿಲ್ಲ! ಅಂಥವರು ಯಾವಾಗಲೂ ಬಾಯಲ್ಲಿ ಸಹಿಸಲಾಗದ ದುಷ್ಟಮಾತುಗಳನ್ನು ಹಾವಿನ ಬಾಯಲ್ಲಿ ವಿಷವಿರುವಂತೆ ಇಟ್ಟುಕೊಂಡಿರುತ್ತಾರೆ.’

ದುಷ್ಟರ ಸ್ವಭಾವವನ್ನು ಚಿತ್ರಿಸಿದೆ ಸುಭಾಷಿತ.

ದುಷ್ಟರ ಸ್ವಭಾವವೇ ಇನ್ನೊಬ್ಬರನ್ನು ದ್ವೇಷಿಸುವುದು. ಈ ದ್ವೇಷಕ್ಕೆ ಯಾವುದೇ ಕಾರಣ ಬೇಕು ಎಂದೂ ಇಲ್ಲ. ಅವರ ಸ್ವಭಾವವೇ ಜನರನ್ನು ಹಿಂಸಿಸುವುದು. ಹೀಗಾಗಿ ಅವರ ದ್ವೇಷಕ್ಕೆ ಕಾರಣವೇ ಬೇಕಾಗಿಲ್ಲ. ಇದು ಹೇಗೆಂದರೆ, ಹಾವು ಸದಾ ಬಾಯಲ್ಲಿ ವಿಷವನ್ನು ಇಟ್ಟುಕೊಂಡೇ ಇರುತ್ತದೆಯಲ್ಲವೆ? ಅಂತೆಯೇ ದುಷ್ಟರ ಬಾಯಲ್ಲಿ ಯವಾಗಲೂ ಹೊಲಸು ಮಾತುಗಳು ತುಂಬಿರುತ್ತವೆ.

ಪ್ರೀತಿಸುವುದಕ್ಕೆ ಮನಸ್ಸಿನ ಪರಿಪಕ್ವತೆ ಬೇಕು. ಅದು ಅಂತರಂಗದ ಸಂಸ್ಕಾರ. ಆದರೆ ದ್ವೇಷಬುದ್ಧಿಗೆ ಇಂಥ ಯಾವುದೇ ಸಂಸ್ಕಾರ ಬೇಕಿಲ್ಲ, ಬೇಕಿರುವುದೆಲ್ಲ ಮನಸ್ಸಿನ ವಿಕೃತಿ. ಇದು ದುಷ್ಟರಲ್ಲಿ ಸಾಕಷ್ಟು ಇರುತ್ತದೆಯೆನ್ನಿ!

ಪಾಂಡವರ ಮೇಲೆ ಕೌರವರಿಗೆ ವಿನಾ ಕಾರಣ ದ್ವೇಷವಿತ್ತು. ಇಂಥ ದ್ವೇಷಬುದ್ಧಿ ಕೇವಲ ಪುರಾಣಕಾಲದಲ್ಲಿ ಮಾತ್ರವಲ್ಲ, ಸಮಾಜದಲ್ಲಿ ಈಗಲೂ ಯಥೇಚ್ಛವಾಗಿಯೇ ಇದೆ. ನಮ್ಮ ದೇಶದ ಬಗ್ಗೆಯೇ ಯೋಚಿಸಬಹುದು. ಭಾರತ ತಾನಾಗಿ ಯಾವುದೇ ದೇಶದ ಮೇಲೆ ಆಕ್ರಮಣವನ್ನು ಮಾಡಿಲ್ಲ. ಆದರೆ ನಮ್ಮ ದೇಶವನ್ನು ದ್ವೇಷಿಸುವ ರಾಷ್ಟ್ರಗಳಿಗೆ ಕೊರತೆಯೇನಿಲ್ಲ. ಇದು ದುಷ್ಟಬುದ್ಧಿಯಲ್ಲದೆ ಇನ್ನೇನು? ಇತ್ತೀಚೆಗೆ ಚೀನಾದೇಶ ನಮ್ಮ ಮೇಲೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದದ್ದು ಇದಕ್ಕೊಂದು ಉದಾಹರಣೆ. ಇನ್ನು ಪಾಕಿಸ್ತಾನದ ವಿಷಯವನ್ನು ಹೇಳುವುದೇ ಬೇಡ; ಅದರ ಅಸ್ತಿತ್ವ ಇರುವುದೇ ಭಾರತದ ಮೇಲೆ ಅದು ಸದಾ ಕಾರುತ್ತಲೇ ಬಂದಿರುವ ದ್ವೇಷದ ಮೇಲೆ. ಇದಕ್ಕಿಂತಲೂ ದುಷ್ಟತನ ಬಗ್ಗೆ ಇನ್ನೊಂದು ಉದಾಹರಣೆ ಬೇಕಿಲ್ಲವೆನ್ನಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.