ADVERTISEMENT

ದಿನದ ಸೂಕ್ತಿ| ಒಳ್ಳೆಯವರ ನಿಷ್ಪಕ್ಷಪಾತ

ಎಸ್.ಸೂರ್ಯಪ್ರಕಾಶ ಪಂಡಿತ್
Published 26 ಫೆಬ್ರುವರಿ 2021, 0:56 IST
Last Updated 26 ಫೆಬ್ರುವರಿ 2021, 0:56 IST
ಹೂವು
ಹೂವು   

ಅಂಜಲಿಸ್ಥಾನಿ ಪುಷ್ಪಾಣಿ ವಾಸಯಂತಿ ಕರದ್ವಯಮ್‌ ।

ಅಹೋ ಸುಮನಸಾಂ ಪ್ರೀತಿರ್ವಾಮದಕ್ಷಿಣಯೋಃ ಸಮಾ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಬೊಗಸೆಯಲ್ಲಿರುವ ಹೂಗಳು ಪಕ್ಷಪಾತವಿಲ್ಲದೆ ಎರಡು ಕೈಗಳನ್ನೂ ಸುವಾಸನೆಗೊಳಿಸುತ್ತವೆ. ಇದೇ ರೀತಿಯಲ್ಲಿ, ಒಳ್ಳೆಯ ಮನಸ್ಸನ್ನು ಹೊಂದಿರುವವರು ಕೂಡ ಒಳ್ಳೆಯವರನ್ನೂ ಕೆಟ್ಟವರನ್ನೂ ಭೇದಮಾಡದೆ ಪ್ರೀತಿಸುತ್ತಾರೆ.’

ನಿಷ್ಪಕ್ಷಪಾತ ಹೇಗಿರುತ್ತದೆ ಎಂಬುದನ್ನು ಸುಭಾಷಿತ ಹೇಳುತ್ತಿದೆ.

ಒಬ್ಬ ತಾಯಿಗೆ ನಾಲ್ಕು ಮಂದಿ ಮಕ್ಕಳು ಎಂದಿಟ್ಟುಕೊಳ್ಳಿ. ಈ ನಾಲ್ವರೂ ಬುದ್ಧಿಯಲ್ಲೂ ಶಕ್ತಿಯಲ್ಲೂ ಒಬ್ಬರಿಗಿಂತ ಇನ್ನೊಬ್ಬರು ವ್ಯತ್ಯಾಸವಾಗಿಯೇ ಇರುತ್ತಾರೆ. ಆ ತಾಯಿ ಈ ಮಕ್ಕಳನ್ನು ಅವರ ಬುದ್ಧಿ–ಶಕ್ತಿಗೆ ಅನುಗುಣವಾಗಿ ಪ್ರೀತಿಸಬೇಕೆ? ಹಾಗೆ ಅವಳು ವಾತ್ಸಲ್ಯದಲ್ಲಿ ತಾರತಮ್ಯವನ್ನು ಮಾಡಿದರೆ ಅವಳದ್ದು ತಾಯಿಪ್ರೀತಿ ಎಂದೆನಿಸಿಕೊಳ್ಳುತ್ತದೆಯೆ?

ಹೀಗೆ ಸಮಾಜದಲ್ಲಿಯೂ ನಿಸರ್ಗದಲ್ಲಿಯೂ ನಿಷ್ಪಕ್ಷಪಾತ ಎನ್ನುವುದು ಹಲವು ಸ್ಥಳಗಳಲ್ಲಿ ಸಹಜವಾಗಿಯೇ ಇರುತ್ತದೆ.

ಸೂರ್ಯ ಏನಾದರೂ ಬೆಳಕನ್ನು ಕೊಡುವುದರಲ್ಲಿ ಪಕ್ಷಪಾತ ಮಾಡಿದರೆ ಆಗ ನಮ್ಮ ಜೀವನ ಹೇಗಿರುತ್ತದೆ? ’ನಾನು ಬೆಳಕನ್ನು ಕೊಡುವುದು ಕೇವಲ ಒಳ್ಳೆಯವರಿಗೆ‘ ಎಂದೋ, ಅಥವಾ ‘ಕೆಟ್ಟವರಿಗೆ‘ ಎಂದೋ ಅಥವಾ ’ಬಿಳಿಬಣ್ಣದವರಿಗೆ ಮಾತ್ರ‘ ಎಂದೋ ಅಥವಾ ’ಕರಿಬಣ್ಣದವರಿಗೆ ಮಾತ್ರ‘ ಎಂದೋ ಅಥವಾ ’ಆ ದೇಶದವರಿಗೆ ಮಾತ್ರ‘ ಅಥವಾ ‘ಈ ದೇಶದವರಿಗೆ ಮಾತ್ರ‘ ಎಂದೋ ಅಥವಾ ’ಈ ಜಾತಿಯವರಿಗೆ ಮಾತ್ರ‘ ಅಥವಾ ’ಆ ಜಾತಿಯವರಿಗೆ ಮಾತ್ರ‘ ಎಂದೋ ಸೂರ್ಯ ನಿರ್ಧಾರ ಮಾಡಿದರೆ ಆಗ ನಮ್ಮ ಪರಿಸ್ಥಿತಿ ಹೇಗಿರುತ್ತದೆ?

ಆದುದರಿಂದಲೇ ನಿಷ್ಪಕ್ಷಪಾತ ಎನ್ನುವುದು ನಮ್ಮ ಜೀವನಕ್ಕೆ ಬೇಕಾದ ಅನಿವಾರ್ಯಗಳಲ್ಲಿ ಒಂದು. ಅದನ್ನು ಸುಭಾಷಿತ ಇಲ್ಲಿ ಧ್ವನಿಪೂರ್ಣವಾಗಿ ಹೇಳಿದೆ.

ನಾವು ಬೊಗಸೆಯ ತುಂಬ ಮಲ್ಲಿಗೆಯನ್ನು ತುಂಬಿಕೊಂಡಿದ್ದೇವೆ ಎಂದಿಟ್ಟುಕೊಳ್ಳಿ; ಘಮಘಮಿಸುತ್ತಿರುವ ಮಲ್ಲಿಗೆ. ಆ ಹೂವಿನ ಪರಿಮಳ ನಮ್ಮ ಎರಡೂ ಕೈಗಳಿಗೆ ಅಂಟಿರುತ್ತದೆಯೋ? ಅಥವಾ ಒಂದೇ ಕೈಗೆ ಅಂಟಿರುತ್ತದೆಯೋ? ನಮ್ಮಲ್ಲಿ ಎಡಗೈ ಕೆಟ್ಟದ್ದು, ಬಲಗ್ಯೆ ಒಳ್ಳೆಯದು – ಎಂದೆಲ್ಲ ಗ್ರಹಿಕೆಗಳೂ ಇವೆಯಲ್ಲವೆ? ಹೀಗೆಯೇ ಆ ಮಲ್ಲಿಗೆಹೂಗಳು ಕೂಡ ಯೋಚಿಸುತ್ತವೆಯೆ? ಎಡಗೈ ಸರಿಯಿಲ್ಲ, ಅದಕ್ಕೆ ಸುವಾಸನೆಯನ್ನು ಕೊಡುವುದಿಲ್ಲ, ಬಲಗೈ ಬಂಗಾರದಂಥ ಕೈ ಅದಕ್ಕೆ ಮಾತ್ರವೇ ಕೊಡುವೆ – ಎಂದೇನೂ ಅವು ಯೋಚಿಸವು ಅಲ್ಲವೆ?

ಹೀಗೆಯೇ ಸಜ್ಜನರು, ಎಂದರೆ ಒಳ್ಳೆಯವರು ಕೂಡ ‘ಇವರು ಕೆಟ್ಟವರು‘, ‘ಇವರು ಒಳ್ಳೆಯವರು’ – ಎಂದು ಭೇದಮಾಡದೆ ಸಮಾನವಾಗಿ ಅವರಲ್ಲಿಯ ಪ್ರೀತಿಯನ್ನು ಹಂಚುತ್ತಾರೆ. ಇದು ನಿಜ, ಆದರೆ ಈ ಪ್ರೀತಿಯನ್ನು ಸ್ವೀಕರಿಸುವ ಸಂಸ್ಕಾರವೂ ಇರಬೇಕೆನ್ನಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.