ADVERTISEMENT

ದಿನದ ಸೂಕ್ತಿ: ಸಾಧನೆಗೆ ಗೌರವ

ಎಸ್.ಸೂರ್ಯಪ್ರಕಾಶ ಪಂಡಿತ್
Published 20 ಜುಲೈ 2021, 4:44 IST
Last Updated 20 ಜುಲೈ 2021, 4:44 IST
ಶ್ರೀಕೃಷ್ಣ
ಶ್ರೀಕೃಷ್ಣ   

ಗುಣಾಸ್ಸವರ್ತ್ರ ಪೂಜ್ಯಂತೇ ಪಿತೃವಂಶೋ ನಿರರ್ಥಕಃ ।

ವಾಸುದೇವಂ ನಮಸ್ಯಂತಿ ವಸುದೇವಂ ನ ಕಶ್ಚನ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಪೂಜ್ಯತೆಗೆ ಗುಣ ಮುಖ್ಯವೇ ಹೊರತು ತಂದೆಯ ವಂಶವಲ್ಲ. ವಾಸುದೇವನನ್ನು, ಎಂದರೆ ವಸುದೇವನ ಮಗನಾದ ಶ್ರೀಕೃಷ್ಣನನ್ನು ವಂದಿಸುತ್ತಾರೆಯೇ ವಿನಾ ಯಾರೂ ವಸುದೇವನನ್ನು ವಂದಿಸುವುದಿಲ್ಲ.’

ನಮ್ಮ ಸಮಾಜದಲ್ಲಿ ನಾವು ಪಡೆಯುವ ಗೌರವಕ್ಕೂ ನಮ್ಮ ಹುಟ್ಟಿಗೂ ನೇರ ಸಂಬಂಧವಿಲ್ಲ ಎನ್ನುತ್ತಿದೆ ಸುಭಾಷಿತ.

ನಾವು ಮಾಡುವ ಕೆಲಸದಿಂದ ಸಮಾಜ ನಮ್ಮನ್ನು ಗುರುತಿಸುತ್ತದೆಯೆ ವಿನಾ ನಮ್ಮ ಜಾತಿಯಿಂದಲೋ ವಂಶದಿಂದಲೋ ಅಲ್ಲ ಎಂಬುದನ್ನು ನಾವು ಮರೆಯಬಾರದು. ಹೀಗಾಗಿಯೇ ನಾವು ನಮ್ಮ ಜಾತಿಯ ಕಾರಣದಿಂದಲೋ ಅಂತಸ್ತಿನ ಕಾರಣದಿಂದಲೋ ಮೆರೆಯಲು ಹೋಗಬಾರದು; ಅದು ಅನಾಹುತಕ್ಕೂ ಅಪಹಾಸ್ಯಕ್ಕೂ ಕಾರಣವಾಗುತ್ತದೆ.

ನಾವು ವಾಸುದೇವನನ್ನು ಪೂಜಿಸುತ್ತೇವೆ. ವಾಸುದೇವ ಎಂದರೆ ವಸುದೇವನ ಮಗ, ಶ್ರೀಕೃಷ್ಣ. ವಾಸುದೇವನನ್ನು ಪೂಜಿಸುತ್ತೇವೆಯೇ ವಿನಾ ವಸುದೇವನನ್ನು ನಾವು ಯಾರೂ ಪೂಜಿಸುತ್ತಿಲ್ಲಷ್ಟೆ; ಮಗನನ್ನು ಪೂಜಿಸುತ್ತಿದ್ದೇವೆಯೇ ಹೊರತು ತಂದೆಯನ್ನಲ್ಲ. ಶ್ರೀಕೃಷ್ಣನಿಗೆ ಈ ಪೂಜೆ ಸಲ್ಲುತ್ತಿರುವುದಾದರೂ ಏಕೆ? ಅವನು ವಸುದೇವನ ಮಗ ಎಂಬ ಕಾರಣಕ್ಕೆ ಅಲ್ಲ; ಅವನು ಮಾಡಿದ ಲೋಕೊತ್ತರ ಕಾರ್ಯಗಳಿಂದ ಅವನಿಗೆ ಈ ಗೌರವ ದಕ್ಕಿದೆ.

ಹೀಗಾಗಿ ನಾವು ಕೂಡ, ನಮ್ಮ ಹುಟ್ಟನ್ನೋ ಆಸ್ತಿ–ಅಂತಸ್ತುಗಳನ್ನೋ ನೆಚ್ಚಿಕೊಂಡು ನಮ್ಮ ಭಾಗ್ಯವನ್ನು ನಿರ್ಧಾರಿಸಿಕೊಳ್ಳಬಾರದು. ನಮ್ಮ ಅದೃಷ್ಟವನ್ನು ನಿರ್ಣಯಿಸುವ ಅವಕಾಶವನ್ನು ಈ ಸಂಗತಿಗಳಿಗೆ ನಾವು ಕೊಡಬಾರದು. ನಮ್ಮ ಪರಿಶ್ರಮವೇ ನಮ್ಮ ಸಾಧನೆಯ ಮಾನದಂಡವಾಗಬೇಕು; ಇದೇ ನಮ್ಮ ಸಿದ್ಧಿಗೂ ಪ್ರಸಿದ್ಧಿಗೂ ಮೂಲ ಎಂಬುದನ್ನು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.