ADVERTISEMENT

ದಿನದ ಸೂಕ್ತಿ: ಜ್ಞಾನದ ಬೆಳಕು

ಗಾಣಧಾಳು ಶ್ರಿಕಂಠ
Published 18 ಏಪ್ರಿಲ್ 2021, 4:38 IST
Last Updated 18 ಏಪ್ರಿಲ್ 2021, 4:38 IST
‍ಪ್ರಾತಿನಿಧಿಕ ಚಿತ್ರ
‍ಪ್ರಾತಿನಿಧಿಕ ಚಿತ್ರ   

ಜ್ಞಾನೇನ ತು ತದಜ್ಞಾನಂ ಯೇಷಾಂ ನಾಶಿತಮಾತ್ಮನಃ ।

ತೇಷಾಮಾದಿತ್ಯವಜ್ ಜ್ಞಾನಂ ಪ್ರಕಾಶಯತಿ ತತ್ ಪರಮ್ ॥೧೬॥

ಈ ಶ್ಲೋಕದ ತಾತ್ಪರ್ಯ ಹೀಗಿದೆ

ADVERTISEMENT

****

ಜ್ಞಾನದ ಬೆಳಕು ಅಜ್ಞಾನವನ್ನು ನಾಶ ಮಾಡುತ್ತದೆ. ಅಂಥ ಜ್ಞಾನದ ಬೆಳಕನ್ನು ಮನುಷ್ಯ ಪಡೆದುಕೊಂಡಾಗ, ಹಗಲಿನಲ್ಲಿ ಸೂರ್ಯ ಇಡೀ ಜಗತ್ತನ್ನೇ ಬೆಳಗುವಂತೆ, ಅವನು ತನ್ನ ಜ್ಞಾನದಿಂದ ಎಲ್ಲರನ್ನೂ ಪ್ರಕಾಶಿಸುತ್ತಾನೆ.

****

ಗೀತೆಯ ಬೋಧನೆಯಲ್ಲಿ ಶ್ರೀಕೃಷ್ಣ ಜ್ಞಾನದ ಬೆಳಕು ಸೂರ್ಯನ ಪ್ರಕಾಶಕ್ಕಿಂತ ದೊಡ್ಡದು ಎನ್ನುತ್ತಾನೆ. ಸೂರ್ಯ ಹೊರ ಪ್ರಪಂಚವನ್ನು ಬೆಳಗುವಂತೆ ಈ ಜ್ಞಾನದ ಬೆಳಕು ನಮ್ಮೊಳಗಿನ ಅಂತರಂಗದ ಪ್ರಪಂಚವನ್ನು ಬೆಳಗಿಸುತ್ತದೆ.

ಜ್ಞಾನ ಎಂದರೆ ಬೆಳಕು. ಅಜ್ಞಾನ ಎಂದರೆ ಕತ್ತಲೆ. ಜ್ಞಾನ ಸಂಪಾದನೆಗೆ ಹಲವು ಮಾರ್ಗಗಳಿವೆ. ಅರಿವಿನಿಂದ ಬರುವ ಜ್ಞಾನ, ಅಕ್ಷರದಿಂದ ಕಲಿಯುವ ಜ್ಞಾನ, ಧ್ಯಾನದಿಂದ ಕಲಿಯುವ ಜ್ಞಾನ, ಅನುಭವದಿಂದ ದೊರಕುವ ಜ್ಞಾನ... ಹೀಗೆ ಹಲವು ಮಾರ್ಗಗಳಿವೆ. ಇವೆಲ್ಲದರ ಉದ್ದೇಶ ನಮ್ಮ ಅಂತರಂಗದ ಪ್ರಪಂಚವನ್ನು ಜ್ಞಾನದ ಬೆಳಕಿನಿಂದ ಬೆಳಗಿಸುವುದು.

ಪ್ರತಿಯೊಬ್ಬ ವ್ಯಕ್ತಿಯ ಅಂತರಂಗದಲ್ಲಿ ಜ್ಞಾನವೆಂಬುದು ಜೀವ ಸ್ವರೂಪದಲ್ಲಿರುತ್ತದೆ. ಆದರೆ, ಅದರ ಮೇಲೆ ಅಜ್ಞಾನವೆಂಬ ಪರದೆ ಕವಿದಿರುತ್ತದೆ. ಆ ಪರದೆ ಸರಿಸುವುದೇ ಜ್ಞಾನ ಸಂಪಾದನೆ. ಇದನ್ನೇ ಮೇಲಿನ ಶ್ಲೋಕದಲ್ಲಿ ಹೇಳಿರುವುದು.

ಇಂಥ ಜ್ಞಾನದ ಬೆಳಕಿನೊಂದಿಗೆ ಬುದ್ಧ, ಬಸವಣ್ಣನವರು, ಶಂಕರರು, ರಾಮಾನುಜಚಾರ್ಯರು, ಮಧ್ವಾಚಾರ್ಯರು, ಸರ್ವಜ್ಞ, ಕನಕ, ಪುರಂದರರಂತಹ ದಾಸವರೇಣ್ಯರು, ಸಂತ ಕಬೀರ, ಸ್ವಾಮಿ ವಿವೇಕಾನಂದ, ಅಂಬೇಡ್ಕರ್‌, ರವೀಂದ್ರನಾಥ ಟ್ಯಾಗೋರ್ ಅವರಂತಹ ದಾರ್ಶನಿಕರು, ಅರಿಸ್ಟಾಟಲ್‌ನಂತಹ ತತ್ವಜ್ಞಾನಿಗಳು, ಜನಪದರು, ತತ್ವಪದಕಾರರು ಜಗತ್ತನ್ನು ಬೆಳಗಿದ್ದಾರೆ.

ಇಂಥವರು ತೋರಿದ ಜ್ಞಾನ ದೀವಿಗೆಯ ಬೆಳಕಲ್ಲೇ ಜಗತ್ತು ಸಾಗಿ ಬಂದಿದೆ. ಇಂಥ ದಾರ್ಶನಿಕರು, ಜ್ಞಾನದ ಹಣತೆಯನ್ನು ಪೀಳಿಗೆಯಿಂದ ಪೀಳಿಗೆ ಸಾಗಿಸಿ ತಂದಿದ್ದಾರೆ. ಅದನ್ನು ಮತ್ತಷ್ಟು ಪ್ರಕಾಶಮಾನವಾಗಿಸಿ ಮುಂದಿನ ಪೀಳಿಗೆಗೂ ದಾಟಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.