ADVERTISEMENT

ದಿನದ ಸೂಕ್ತಿ: ಪ್ರಾಣಿ ಪಕ್ಷಿಗಳಿಂದಲೂ ಶಿಕ್ಷಣ

ಎಸ್.ಸೂರ್ಯಪ್ರಕಾಶ ಪಂಡಿತ್
Published 31 ಜನವರಿ 2021, 1:05 IST
Last Updated 31 ಜನವರಿ 2021, 1:05 IST
ಸಿಂಹ
ಸಿಂಹ   

ಸಿಂಹಾದೇಕಂ ಬಕಾದೇಕಂ ಷಟ್‌ ಶುನಸ್ತ್ರೀಣಿ ಗರ್ದಭಾತ್‌ ।

ವಾಯಸಾತ್‌ ಪಂಚ ಶಿಕ್ಷೇಚ್ಚ ಚತ್ವಾರಿ ಕುಕ್ಕುಟಾದಪಿ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಸಿಂಹದಿಂದ ಒಂದು ಗುಣವನ್ನೂ, ಕೊಕ್ಕರೆಯಿಂದ ಒಂದನ್ನೂ, ನಾಯಿಯಿಂದ ಆರನ್ನೂ, ಕತ್ತೆಯಿಂದ ಮೂರನ್ನೂ, ಕಾಗೆಯಿಂದ ಐದು ಗುಣಗಳನ್ನೂ, ಕೋಳಿಯಿಂದ ನಾಲ್ಕು ಗುಣಗಳನ್ನೂ ಮನುಷ್ಯನು ಕಲಿಯತಕ್ಕದ್ದು.’

ನಾವು ವಿದ್ಯೆಯನ್ನು ಕಲಿಯಲೆಂದು ಶಾಲೆಗೆ ಹೋಗುತ್ತೇವೆ; ಅಕ್ಷರಗಳ ಮೂಲಕ ವಿದ್ಯೆಯನ್ನು ಕಲಿಯುವ ಉದ್ದೇಶ ನಮ್ಮದು. ಆದರೆ ಸುಭಾಷಿತ ಹೇಳುತ್ತಿದೆ, ನಾವು ಶಾಲೆಯಲ್ಲಿ ಮಾತ್ರವೇ ಅಲ್ಲ, ನಮ್ಮ ಸುತ್ತಮುತ್ತಲಿನ ಪರಿಸರದಿಂದಲೂ ಶಿಕ್ಷಣವನ್ನು ಪಡೆಯಬಹುದು; ಅದು ಪ್ರಾಣಿ–ಪಕ್ಷಿಗಳಿಂದಲೂ ಆಗಬಹುದು ಎನ್ನುತ್ತಿದೆ ಸುಭಾಷಿತ. ಅಂಥ ಕೆಲವನ್ನು ಅದು ಗುರುತಿಸಿದೆ ಕೂಡ.

ಸಿಂಹ ಮನಸ್ಸಿಟ್ಟು ಬೇಟೆಯನ್ನಾಡುವುದಂತೆ; ಚಿಕ್ಕ ಪ್ರಾಣಿಯನ್ನು ಬೇಟೆಯಾಡಬೇಕಾದರೂ ದೊಡ್ಡ ಪ್ರಾಣಿಯನ್ನು ಬೇಟೆಯಾಡಬೇಕಾದರೂ ಅದು ಸ್ವಲ್ಪವೂ ಉಪೇಕ್ಷೆ ತೋರದೆ ಒಂದೇ ಮನಸ್ಸಿನಿಂದ, ಒಂದೇ ವೇಗದಿಂದ ಬೇಟೆಯಾಡುತ್ತದೆ.

ಕೊಕ್ಕರೆ ಏಕಾಗ್ರವಾಗಿ ಮೀನನ್ನು ಹಿಡಿಯಲು ನಿಲ್ಲುತ್ತದೆ. ಅದು ಸ್ವಲ್ಪವೂ ಅಲ್ಲಾಡುವುದಿಲ್ಲ.

ನಾಯಿಯಿಂದ ಆರು ಗುಣಗಳನ್ನು ಕಲಿಯಬೇಕಂತೆ. ಅಲ್ಪಾಹಾರಸೇವನೆ, ಏನು ಸಿಕ್ಕುವುದೋ ಅದರಲ್ಲಿಯೇ ತೃಪ್ತಿಪಡುವುದು, ಚೆನ್ನಾಗಿ ನಿದ್ರಿಸುವುದು, ಚುರುಕತನ, ಸ್ವಾಮಿಭಕ್ತಿ ಮತ್ತು ಶೌರ್ಯ. ಇವೇ ಆರು ಗುಣಗಳು.

ವಿಶ್ರಾಂತಿಯನ್ನು ತೆಗೆದುಕೊಳ್ಳದೆ ಕೆಲಸವನ್ನು ನಿರಂತರ ಮಾಡುವುದು, ಚಳಿಗೂ ಸೆಕೆಗೂ ಜಗ್ಗದಿರುವುದು, ಯಾವಾಗಲೂ ಒಂದೇ ರೀತಿಯಲ್ಲಿ, ಎಂದರೆ ನೆಮ್ಮದಿಯಲ್ಲಿರುವುದು – ಇವು ಮೂರು ಗುಣಗಳನ್ನು ಕತ್ತೆಯಿಂದ ಕಲಿಯಬೇಕು.

ಇಂದು ಶೃಂಗಾರಚೇಷ್ಟೆಗಳಿಗೆ ಸಮಯ–ಸ್ಥಳಗಳ ಎಚ್ಚರಿಕೆಯೇ ಇಲ್ಲವಾಗುತ್ತಿದೆ. ಆದರೆ ಕಾಗೆ ಎಂದಿಗೂ ಪ್ರಣಯಚೇಷ್ಟೆಯನ್ನು ಜನರಿಗೆ ಕಾಣುವಂತೆ ಮಾಡುವುದಿಲ್ಲ; ಗೌಪ್ಯವಾಗಿಯೇ ನಡೆಸುತ್ತದೆ. ಈ ಗೂಢತೆಯ ಜೊತೆಗೆ ಅದು ಇನ್ನೂ ಹಲವು ಗುಣಗಳನ್ನು ಮೈಗೂಡಿಸಿಕೊಂಡಿದೆ. ಧೈರ್ಯದಿಂದ ಮುನ್ನುಗ್ಗಿ ಕೆಲಸವನ್ನು ಸಾಧಿಸುವುದು, ಸಮಯಕ್ಕೆ ತಕ್ಕಂತೆ ವಾಸಸ್ಥಳವನ್ನು ಸಿದ್ಧಪಡಿಸಿಕೊಳ್ಳುವುದು, ಸದಾ ಎಚ್ಚರಿಕೆಯಿಂದಿರುವುದು ಮತ್ತು ಆಲಸ್ಯ ಇಲ್ಲದಿರುವುದು – ಈ ಐದು ಗುಣಗಳನ್ನು ನಾವು ಕಾಗೆಯಿಂದ ಕಲಿಯಬೇಕು.

ಕೊಳಿಯಿಂದ ನಾಲ್ಕು ಗುಣಗಳನ್ನು ಕಲಿಯಬೇಕಂತೆ. ಬೆಳಗ್ಗೆ ಬೇಗನೇ ಏಳುವುದು, ವೈರಿಯೊಡನೆ ಹಿಂಜರಿಯದೆ ಹೋರಾಟ ನಡೆಸುವುದು, ಊಟವನ್ನು ಬಂಧು–ಮಿತ್ರರೊಂದಿಗೆ ಹಂಚಿಕೊಂಡು ಸವಿಯುವುದು, ಹೆಣ್ಣನ್ನು ಸದಾ ಆಪತ್ತಿನಿಂದ ರಕ್ಷಿಸಲು ಸನ್ನದ್ಧವಾಗಿರುವುದು – ಇವೇ ಆ ನಾಲ್ಕು ಗುಣಗಳು.

ನಾವು ಎಷ್ಟೆಲ್ಲ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂಬುದನ್ನೂ ಈ ಸುಭಾಷಿತ ಸೂಚಿಸುತ್ತದೆ. ಜಗತ್ತಿನಲ್ಲಿ ಎಲ್ಲರಿಂದಲೂ ನಾವು ಕಲಿಯವುದು ಸಾಕಷ್ಟು ಇದೆ. ಈಗ ನಾವು ನೋಡಿರುವ ಪ್ರಾಣಿಗಳ ಈ ವಿಶಿಷ್ಟ ಗುಣಗಳನ್ನು ಅವು ಯಾರಿಂದಲೋ ಎಲ್ಲಿಂದಲೋ ಕಲಿತಿರುವಂಥವಲ್ಲ; ಇವು ಅವುಗಳ ಸಹಜಸ್ವಭಾವಗಳು. ಅಂತೆಯೇ ನಾವು ಕೂಡ ಜೀವನವನ್ನು ಸಮಗ್ರವಾಗಿ ಕಟ್ಟಿಕೊಳ್ಳಲು ಆವಶ್ಯಕವಾಗಿರುವ ಗುಣಗಳನ್ನು ರಕ್ತಗತಮಾಡಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.