ADVERTISEMENT

ದಿನದ ಸೂಕ್ತಿ: ಹಣವೇ ಎಲ್ಲ!

ಎಸ್.ಸೂರ್ಯಪ್ರಕಾಶ ಪಂಡಿತ್
Published 1 ಆಗಸ್ಟ್ 2021, 3:56 IST
Last Updated 1 ಆಗಸ್ಟ್ 2021, 3:56 IST
ದುಡ್ಡು ದುಡ್ಡು
ದುಡ್ಡು ದುಡ್ಡು   

ಪೂಜ್ಯತೇ ಯದಪೂಜ್ಯೋಪಿ ಯದಗಮ್ಯೋsಪಿ ಗಮ್ಯತೇ ।

ವಂದ್ಯತೇ ಯದವಂದ್ಯೋsಪಿ ಸ ಪ್ರಭಾವೋ ಧನಸ್ಯ ಚ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಪೂಜೆಗೆ ಅನರ್ಹನಾದವನನ್ನು ಪೂಜೆ ಮಾಡಿದರೆ, ಯಾರಲ್ಲಿಗೆ ಹೋಗಬಾರದೋ ಅವನಲ್ಲಿಗೆ ಹೋದರೆ, ಯಾರಿಗೆ ನಮಿಸಬಾರದೋ ಅವರಿಗೆ ನಮಿಸಿದರೆ ಅದಕ್ಕೆ ಹಣದ ಪ್ರಭಾವ ಕಾರಣ.’

ಹಣ ನಮ್ಮಿಂದ ಏನೆಲ್ಲ ಕೆಲಸಗಳನ್ನೂ ಮಾಡಿಸಬಲ್ಲದು ಎಂಬುದನ್ನು ಈ ಸುಭಾಷಿತ ಹೇಳುತ್ತಿದೆ. ನಮ್ಮ ಸ್ವಾಭಿಮಾನವನ್ನೇ ಅದು ಕಳೆದುಬಿಡುತ್ತದೆ; ನಮಗೆ ಇಷ್ಟವಿಲ್ಲದ ಕೆಲಸಗಳನ್ನೆಲ್ಲ ಮಾಡಿಸುತ್ತದೆ. ನಮ್ಮ ವ್ಯಕ್ತಿತ್ವವನ್ನೇ ಕೊಂದುಬಿಡುತ್ತದೆ ಅದು.

ನಮ್ಮ ಸಮಾಜದ ಆಗುಹೋಗುಗಳನ್ನು ಗಮನಿಸಿದರೆ ಈ ಸುಭಾಷಿತ ಚೆನ್ನಾಗಿ ಅರ್ಥವಾಗುತ್ತದೆ. ನಮ್ಮ ಸಮಾಜ ಯಾವಾಗಲೂ ಹಣ ಇದ್ದವರನ್ನೇ ಹಿಂಬಾಲಿಸುವುದು. ಹಣ ಇದ್ದವರಷ್ಟೆ ಚುನಾವಣೆಗೆ ನಿಲ್ಲಲು ಸಾಧ್ಯ. ಹಣ ಇದ್ದವರಿಗಷ್ಟೆ ಮೆಡಿಕಲ್‌ ಸೀಟು ಸಿಗುವುದು. ಹಣ ಇದ್ದವರಿಗಷ್ಟೆ ಒಳ್ಳೆಯ ತರಕಾರಿ–ಹಣ್ಣು ಸಿಗುವುದು. ಕೊನೆಗೆ ದೇವರ ದರ್ಶನ ಕೂಡ ಹಣವಿದ್ದವರಿಗೆ ಮಾತ್ರವೇ ಎಂಬಂತಾಗಿದೆ.

ಇದನ್ನೇ ಸುಭಾಷಿತ ಹೇಳುತ್ತಿರುವುದು: ‘ಪೂಜೆಗೆ ಅನರ್ಹನಾದವನನ್ನು ಪೂಜೆ ಮಾಡುತ್ತೇವೆ’. ಇದಕ್ಕೆ ಕಾರಣ ಹಣ. ಹಣ ಇದ್ದವರು ನಮ್ಮ ಪಾಲಿಗೆ ಸಾಕ್ಷಾತ್‌ ದೇವರೇ ಆಗಿಬಿಡುತ್ತಾರೆ.

‘ಯಾರಲ್ಲಿಗೆ ಹೋಗಬಾರದೋ ಅವರಲ್ಲಿಗೆ ಹೋಗುತ್ತೇವೆ‘. ಇದಕ್ಕೂ ಹಣವೇ ಕಾರಣ. ಹಣ ಇದ್ದರೆ ಸಾಕು ಎಂಥವನಿಗೂ ನಾವು ಗೌರವ ಕೊಡಲು ತೊಡಗುತ್ತೇವೆ.

’ಯಾರಿಗೆ ನಮಿಸಬಾರದೋ ಅವರಿಗೆ ನಮಿಸುತ್ತೇವೆ.’ ಇದಕ್ಕೂ ಹಣದ ಪ್ರಭಾವವೇ ಕಾರಣ. ಹಣ ಇದ್ದವರ ಮುಂದೆ ನಾವು ದಾಸರಾಗಿಬಿಡುತ್ತೇವೆ.

ಹಾಗಾದರೆ ಹಣ ಅಷ್ಟೊಂದು ಕೆಟ್ಟದ್ದೆ? ಖಂಡಿತ ಅಲ್ಲ; ಅದು ನಮ್ಮ ಆವಶ್ಯಕತೆಗಳನ್ನು ಪೂರೈಸುವಂಥ ಸಾಧನವಾಗಿದ್ದರೆ ಒಳ್ಳೆಯದೇ. ಆದರೆ ಅದು ನಮ್ಮ ಮೇಲೆ ಸವಾರಿ ಮಾಡಬಾರದು; ಹಣವೊಂದೇ ಜೀವನ ಎಂಬಂತೆ ನಾವು ಅದಕ್ಕೆ ದಾಸರಾಗಬಾರದು; ನಮ್ಮೆಲ್ಲರ ಗುಣವಾಗುಣಗಳನ್ನು ನಿರ್ಧರಿಸಲು ಅದು ಮಾನದಂಡವಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.