ADVERTISEMENT

ದಿನದ ಸೂಕ್ತಿ: ಮಾನುಷಪ್ರೀತಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 25 ಮಾರ್ಚ್ 2021, 2:13 IST
Last Updated 25 ಮಾರ್ಚ್ 2021, 2:13 IST
ಸಖ್ಯ
ಸಖ್ಯ   

ಪಂಚಭಿಃ ಸಹ ಗಂತವ್ಯಂ ಸ್ಥಾತವ್ಯಂ ಪಂಚಭಿಸ್ಸಹ ।

ಪಂಚಭಿಃ ಸಹ ವಕ್ತವ್ಯಂ ನ ದುಃಖಂ ಪಂಚಭಿಸ್ಸಹ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಐದು ಜನರೊಡನೆ ನಡೆಯಬೇಕು; ಐವರೊಡನೆ ನಿಲ್ಲಬೇಕು; ಐವರೊಡನೆ ಮಾತನಾಡಬೇಕು. ಐವರೊಡನೆ ಇದ್ದಾಗ ದುಃಖವಿರದು.’

ಕೂಡಿ ಬಾಳಿದರೆ ಸ್ವರ್ಗಸುಖ – ಎಂಬ ಮಾತಿದೆಯಲ್ಲವೆ? ಈ ಮಾತಿನ ತಾತ್ಪರ್ಯವನ್ನೇ ಈ ಸುಭಾಷಿತ ಹೇಳುತ್ತಿರುವುದು.

ಮನುಷ್ಯ ಸಂಘಜೀವಿ; ಒಂಟಿಯಾಗಿರಲು ಅಸಾಧ್ಯ. ಹೀಗಾಗಿಯೇ ಅವನು ಕುಟುಂಬ, ಸಮಾಜ, ದೇಶ – ಇವೆಲ್ಲವನ್ನೂ ಸೃಷ್ಟಿಸಿಕೊಂಡಿದ್ದು ಎಂದೆನಿಸುತ್ತದೆ. ಅವನೊಂದಿಗೆ ಮಾತನಾಡಲು ಜನರು ಬೇಕು; ಸುಖ–ದುಃಖಗಳನ್ನು ಹಂಚಿಕೊಳ್ಳಲು ಜನರು ಬೇಕು; ಪ್ರೀತಿಗೂ ಅವನಿಗೆ ಜನರು ಬೇಕು, ದ್ವೇಷಕ್ಕೂ ಜನರು ಬೇಕು. ಒಟ್ಟಿನಲ್ಲಿ ಜನರ ಸಂಪರ್ಕ ಮತ್ತು ಸಾಮೀಪ್ಯ ಇಲ್ಲದೆಹೋದರೆ ನಾವು ಯಾರೂ ಆರೋಗ್ಯವಾಗಿರಲು ಸಾಧ್ಯವಾಗದು; ಮನುಷ್ಯರಾಗಿ ಬದುಕಲು ಸಾಧ್ಯವಾಗದು.

ಕಾರಿರುಳೊಳಾಗಸದಿ ತಾರೆ ನೂರಿದ್ದೇನು?।

ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು ॥

ದೂರದಾ ದೈವವಂತಿರಲಿ, ಮಾನುಷಸಖನ ।

ಕೋರುವುದು ಬಡಜೀವ – ಮಂಕುತಿಮ್ಮ ॥

ಕಗ್ಗದ ಈ ಪದ್ಯ ಮನುಷ್ಯನ ಮಾನುಷಪ್ರೇಮದ ಅನಿವಾರ್ಯತೆಯನ್ನು ಸೊಗಸಾಗಿ ನಿರೂಪಿಸಿದೆ.

ಎಲ್ಲೋ ದೂರದಲ್ಲಿರುವ ನಕ್ಷತ್ರಗಳೋ ಗ್ರಹಗಳೋ ಮನುಷ್ಯನ ಸ್ನೇಹಾಭಿಲಾಷೆಯ ತೀವ್ರತೆಯನ್ನು ತಣಿಸದು. ದೇವರೊಂದಿಗಿನ ಸಾಮೀಪ್ಯ ಕೂಡ ಮನುಷ್ಯನ ಸಖ್ಯದ ಹಂಬಲಕ್ಕೆ ಪರ್ಯಾಯವಾಗಲಾರದು. ’ಮಾನುಷಸಖನ ಕೋರುವುದು ಬಡಜೀವ‘ ಎಂಬ ಮಾತು ಇಲ್ಲಿ ಮನನೀಯ. ತನ್ನಂತೆಯೇ ಇರುವ ಇನ್ನೊಂದು ಜೀವವನ್ನು ಮನುಷ್ಯ ಬಯಸುತ್ತಾನೆಯೇ ವಿನಾ ಮತ್ತೊಂದು ಜೀವಿಯನ್ನು ಅಲ್ಲ. ಮನುಷ್ಯನ ಈ ಆವಶ್ಯಕತೆಯನ್ನು ಅರಿತೇ ಸುಭಾಷಿತ ಹೇಳುತ್ತಿರುವುದು, ಜನರೊಂದಿಗೆ ಜನರು ಬಾಳಬೇಕು ಎಂದು.

ಐದು ಜನರೊಡನೆ ನಡೆಯಬೇಕು; ಐವರೊಡನೆ ನಿಲ್ಲಬೇಕು; ಐವರೊಡನೆ ಮಾತನಾಡಬೇಕು. ಐವರೊಡನೆ ಇದ್ದಾಗ ದುಃಖವಿರದು.

ಇಲ್ಲಿ ಐದು ಎಂದು ಹೇಳುತ್ತಿರುವುದು ಜನರೊಂದಿಗೆ ಎಂಬ ಅರ್ಥದಲ್ಲಿ, ಸಮೂಹ ಎಂಬ ಅರ್ಥದಲ್ಲಿ. ಸುಖವನ್ನಾಗಲೀ ದುಃಖವನ್ನಾಗಲೀ ಮನುಷ್ಯ ತಾನೊಬ್ಬನೇ ಅನುಭವಿಸಲಾರ. ಮನುಷ್ಯ ಒಂಟಿಯಾಗಿರಲಾರ; ಒಂಟಿಯಾಗಿದ್ದರೆ ಅವನು ಮನುಷ್ಯನಾಗಿರಲಾರ.

ನಾವು ಆರೋಗ್ಯವಾಗಿ ಬದುಕಬೇಕಾದರೆ ನಮಗೆ ಸಹಮಾನವರ ಸ್ನೇಹ–ವಿಶ್ವಾಸ–ಪ್ರೀತಿ ಬೇಕು. ಈ ಸ್ನೇಹ–ವಿಶ್ವಾಸ–ಪ್ರೀತಿ ನಮಗೆ ಬೇಕಿರುವಂತೆಯೇ ನಮ್ಮ ಸಹಮಾನವರಿಗೂ ಬೇಕಿರುತ್ತದೆಯಲ್ಲವೆ? ನಾವು ಏನನ್ನು ಇತರರಿಗೆ ಕೊಡುತ್ತೇವೆಯೋ ಅದೇ ನಮಗೆ ದಕ್ಕುತ್ತದೆ ಎಂಬುದನ್ನು ನಾವು ಯಾರೂ ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.