ADVERTISEMENT

ದಿನದ ಸೂಕ್ತಿ: ನಿಜವಾದ ಮಕ್ಕಳು

ಎಸ್.ಸೂರ್ಯಪ್ರಕಾಶ ಪಂಡಿತ್
Published 17 ಫೆಬ್ರುವರಿ 2021, 1:48 IST
Last Updated 17 ಫೆಬ್ರುವರಿ 2021, 1:48 IST
ಅಪ್ಪ ಮಗ
ಅಪ್ಪ ಮಗ   

ಕಿಂ ತಯಾ ಕ್ರಿಯತೇ ಧೇನ್ವಾ ಯಾ ನ ಸೂತೇ ನ ದುಗ್ಧದಾ ।

ಕೋsರ್ಥಃ ಪುತ್ರೇಣ ಜಾತೇನ ಯೋ ನ ವಿದ್ವನ್ನ ಭಕ್ತಿಮಾನ್‌ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಕರುವನ್ನು ಹಾಕದ ಅಥವಾ ಹಾಲನ್ನು ಕೊಡದ ಹಸುವಿನಿಂದ ಏನು ತಾನೇ ಮಾಡಲಾದೀತು? ಇತ್ತ ವಿದ್ವಾಂಸನೂ ಆಗಿರದೆ, ಅತ್ತ ಭಕ್ತಿವಂತನೂ ಆಗದ ಮಗನು ಹುಟ್ಟಿದರೆ ಅವನಿಂದ ಏನು ತಾನೆ ಸಾರ್ಥಕ?‘

ನಾವು ಹುಟ್ಟಿದ ಮೇಲೆ ಪ್ರಯೋಜಕರು ಆಗಬೇಕು; ಪ್ರಯೋಜಕರಾಗದವರ ಹುಟ್ಟೇ ವ್ಯರ್ಥ ಎಂದು ಸುಭಾಷಿತ ಹೇಳುತ್ತಿದೆ.

ಹಸುವನ್ನು ಸಾಕುವುದು ನಾವು ಏಕೆ? ಅದು ನಮಗೆ ಪ್ರಯೋಜನಕಾರಿ ಎಂದು ತಾನೆ? ಹಸುವು ಕರುವನ್ನು ಹಾಕುತ್ತದೆ; ಅ ಬಳಿಕ ಅದು ನಮಗೆ ಹಾಲನ್ನು ಕೊಡುತ್ತದೆ; ಸಗಣಿಯನ್ನೂ ಕೊಡುತ್ತಲೇ ಇರುತ್ತದೆ. ಈ ಎಲ್ಲ ಕಾರಣಗಳಿಂದಲೇ ನಾವು ಅದನ್ನು ಪೋಷಿಸುವುದು ತಾನೆ? ಹೀಗಲ್ಲದೆ ನಾವು ಹಸು ಒಂದು ಸಾಧುಪ್ರಾಣಿ; ಅದನ್ನು ಸಾಕುವುದು ನಮ್ಮ ಧರ್ಮ ಎಂದು ಸಾಕುತ್ತಿಲ್ಲವಲ್ಲವೆ?

ಇದು ಕೇವಲ ಹಸುವಿನ ವಿಷಯದಲ್ಲಿ ಮಾತ್ರವಲ್ಲ, ನಮ್ಮ ಎಲ್ಲ ಚುವಟಿಕೆಗಳಲ್ಲೂ ಈ ಮನೋಧರ್ಮವನ್ನೇ ಕಾಣುವಂಥದ್ದು.

ನಾವು ಒಂದು ಗಿಡವನ್ನು ನಾಟಿದರೂ, ಅದರಿಂದ ನಮಗೆ ಪ್ರಯೋಜನ ಇದೆ – ಎಂಬ ಚಿಂತನೆಯೇ ಕೆಲಸಮಾಡಿರುತ್ತದೆ. ಅಷ್ಟೇಕೆ, ಆ ಗಿಡವನ್ನು ಕಿತ್ತು ಒಂದು ಜಾಗದಲ್ಲಿ ಸಂಗ್ರಹಿಸುವಾಗಲೂ ಇಂಥ ಚಿಂತನೆಯೇ ನಮ್ಮಲ್ಲಿ ಎಚ್ಚರವಾಗಿರುತ್ತದೆ. ಗಿಡ ಬೆಳೆದಾಗ ಫಲ ಕೊಡುತ್ತದೆ; ಗಿಡ ಕೊಳೆತಾಗ ಗೊಬ್ಬರವಾಗುತ್ತದೆ. ಇದು ನಮ್ಮ ಲೆಕ್ಕಾಚಾರ.

ಹೀಗೆಂದು ಈ ಲೆಕ್ಕಾಚಾರ ತಪ್ಪೆಂದು ಹೇಳಲೂ ಆಗದು. ಈ ಲೆಕ್ಕಾಚಾರ ತಪ್ಪಿದರೆ ಆಗ ಜಗತ್ತಿನ ಚಟುವಟಿಕೆಗಳೇ ಸ್ತಬ್ಧವಾಗಿಬಿಡುತ್ತವೆ. ‘ಪ್ರಯೋಜನಮನುದ್ದಿಶ್ಯ ನ ಮಂದೋಪಿ ಪ್ರವರ್ತತೇ‘ ಎಂಬ ಮಾತೊಂದು ಇದೆ. ಪ್ರಯೋಜನವನ್ನು ಉದ್ದೇಶದಲ್ಲಿಟ್ಟುಕೊಳ್ಳದೆ ದಡ್ಡ ಕೂಡ ಕೆಲಸದಲ್ಲಿ ತೊಡಗುವುದಿಲ್ಲ – ಎಂಬುದು ಇದರ ತಾತ್ಪರ್ಯ.

ಹೀಗೆ ಜಗತ್ತಿನ ಎಲ್ಲ ವಿದ್ಯಮಾನಗಳೂ ಪ್ರಯೋಜನದ ಕಡೆಗೇ ಹೆಜ್ಜೆಹಾಕುತ್ತಿರುವಾಗ ನಾವು ಮಾತ್ರ ಅದಕ್ಕಿಂತಲೂ ವಿರುದ್ಧ ದಿಕ್ಕಿನಲ್ಲಿ ನಡೆಯಲು ಸಾಧ್ಯವೆ? ಅಂತೆಯೇ, ನಮ್ಮ ಮಕ್ಕಳು ಕೂಡ ಪ್ರಯೋಜಕರಾಗಬೇಕು ಎಂದು ನಾವು ಬಯಸುವುದು ತಪ್ಪಲ್ಲವಷ್ಟೆ. ಅದನ್ನೇ ಸುಭಾಷಿತ ಇಲ್ಲಿ ಹೇಳುತ್ತಿರುವುದು.

ನಮ್ಮ ಮಕ್ಕಳು ವಿದ್ಯಾವಂತರಾಗಬೇಕು; ಅದರಿಂದ ಕುಟುಂಬಕ್ಕೂ ಸಮಾಜಕ್ಕೂ ಒಳಿತಾಗುತ್ತದೆ. ಅದಿಲ್ಲದಿದ್ದರೆ ಅವರಿಗೆ ಕುಟುಂಬದ ಬಗ್ಗೆಯಾದರೂ ಅಪರಿಮಿತ ಪ್ರೀತಿ ಇರಬೇಕು; ಇದನ್ನೇ ಸುಭಾಷಿತ ಇಲ್ಲಿ ಭಕ್ತಿ ಎಂದು ಕರೆದಿರುವುದು. ಹೀಗಲ್ಲದೆ ಯಾವುದಕ್ಕೂ ಯಾರಿಗೂ ಪ್ರಯೋಜನಕ್ಕೆ ಬಾರದ ಮಕ್ಕಳು, ಅವರು ಹುಟ್ಟಿಯೂ ವ್ಯರ್ಥವಷ್ಟೆ ಎಂದು ಅದು ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.