ADVERTISEMENT

ಪ್ರಜಾವಾಣಿ ದಿನದ ಸೂಕ್ತಿ: ಲಕ್ಷ್ಮೀಪೂಜೆ

ಎಸ್.ಸೂರ್ಯಪ್ರಕಾಶ ಪಂಡಿತ್
Published 19 ಆಗಸ್ಟ್ 2021, 4:03 IST
Last Updated 19 ಆಗಸ್ಟ್ 2021, 4:03 IST
ಲಕ್ಷ್ಮೀಪೂಜೆ
ಲಕ್ಷ್ಮೀಪೂಜೆ   

ವಕ್ತ್ರಾಬ್ಜೇ ಭಾಗ್ಯಲಕ್ಷ್ಮೀಃ ಕರತಲಕಮಲೇ ಸರ್ವದಾ ಧ್ಯಾನಲಕ್ಷ್ಮೀಃ

ದೋರ್ದಂಡೇ ವೀರಲಕ್ಷ್ಮೀಃ ಹೃದಯಸರಸಿಜೇ ಭೂತಕಾರುಣ್ಯಲಕ್ಷ್ಮೀಃ ।

ಖಡ್ಗಾಗ್ರೇ ಶೌರ್ಯಲಕ್ಷ್ಮೀಃ ನಿಖಿಲಗುಣಗಣಾಡಂಬರೇ ಕೀರ್ತಿಲಕ್ಷ್ಮೀಃ

ADVERTISEMENT

ಸರ್ವಾಂಗೇ ಸೌಮ್ಯಲಕ್ಷ್ಮೀಃ ಸಪದಿ ಭವತು ಮೇ ಧರ್ಮಮೋಕ್ಷಾರ್ಥಸಿದ್ಧೇ ।।

ಇದರ ತಾತ್ಪರ್ಯ ಹೀಗೆ:

‘ನನ್ನ ಮುಖಕಮಲವನ್ನು ಭಾಗ್ಯಲಕ್ಷ್ಮಿಯೂ ಕರಕಮಲದಲ್ಲಿ ಧಾನ್ಯಲಕ್ಷ್ಮಿಯೂ ತೋಳುಗಳಲ್ಲಿ ವೀರಲಕ್ಷ್ಮಿಯೂ ಹೃದಯಕಮಲದಲ್ಲಿ ಭೂತದಯಾಲಕ್ಷ್ಮಿಯೂ ಖಡ್ಗದ ತುದಿಯಲ್ಲಿ ಶೌರ್ಯಲಕ್ಷ್ಮಿಯೂ ಎಲ್ಲ ಗುಣಗಳನ್ನು ಅಭಿವ್ಯಕ್ತಿಸುವಾಗ ಕೀರ್ತಿಲಕ್ಷ್ಮಿಯೂ ಎಲ್ಲ ಅಂಗಗಳಲ್ಲಿಯೂ ಸೌಮ್ಯಲಕ್ಷ್ಮಿಯೂ ನನಗೆ ಒಡನೆ ಒದಗಲಿ; ಅಲ್ಲೆಲ್ಲ ಸದಾ ನೆಲಸುವಂತಾಗಲಿ; ಅವುಗಳಿಂದ ಧರ್ಮವೂ ಮೋಕ್ಷವೂ ಸಿದ್ಧಿಸಲಿ‘.

ಹಬ್ಬಗಳ ಸಾಲು ಆರಂಭವಾಗುತ್ತಿದೆ. ವರಮಹಾಲಕ್ಷ್ಮೀವ್ರತ ಬಂದಿದೆ. ಈ ಸಂದರ್ಭದಲ್ಲಿ ಲಕ್ಷ್ಮೀತತ್ತ್ವದ ಬಗ್ಗೆ ಅನುಸಂಧಾನ ಮಾಡಿದರೆ, ಹಬ್ಬದ ನಿಜವಾದ ಆಚರಣೆಗೆ ಸ್ಫೂರ್ತಿ ಒದಗಬಹುದು.

ನಮ್ಮ ವ್ಯಕ್ತಿತ್ವಕ್ಕೆ ಬೇಕಾದ ಎಲ್ಲ ವಿಧದ ಏಳಿಗೆಯನ್ನೂ ಸಂಪತ್ತನ್ನೂ ಲಕ್ಷ್ಮಿಯಲ್ಲಿ ಕಂಡಿರುವುದು ಇಲ್ಲಿ ಎದ್ದುಕಾಣುವ ವಿವರ. ಇಹಕ್ಕೂ ಪರಕ್ಕೂ ಬೇಕಾದ ಸಂಪತ್ತೆಲ್ಲವನ್ನೂ ನೀಡುವವಳು ಅವಳೇ ಎಂಬುದು ಇಲ್ಲಿಯ ನಿಲವು. ನಮ್ಮ ಎಲ್ಲ ಬಯಕೆಗಳನ್ನು, ಎಂದರೆ ಕಾಮವನ್ನು, ಪೂರೈಸಿಕೊಳ್ಳಲು ಬೇಕಾಗುವ ಸಾಧನಗಳೆಲ್ಲವನ್ನೂ, ಎಂದರೆ ಅರ್ಥವನ್ನು ದಯಪಾಲಿಸುವವಳು ಅವಳೇ; ಅದನ್ನು ಸರಿಯಾದ ದಾರಿಯಲ್ಲಿ ವಿನಿಯೋಗಿಸಿಕೊಳ್ಳುವಂಥ ಬುದ್ಧಿಯನ್ನು, ಎಂದರೆ ಧರ್ಮವನ್ನು ಎಚ್ಚರಿಸುವವಳೂ ಅವಳೇ. ಹೀಗೆ ಅವಳು ಲೌಕಿಕ ಸುಖ–ಸಂತೋಷಗಳಿಗೆ ಮಾತ್ರವೇ ಒಡತಿಯಲ್ಲ; ಅವಳು ಅಲೌಕಿಕ ಆನಂದ, ಎಂದರೆ ಮೋಕ್ಷಕ್ಕೂ ಕಾರಣಳು. ಹೀಗಾಗಿ ನಾವು ಮೊದಲಿಗೆ ಲಕ್ಷ್ಮೀತತ್ತ್ವವನ್ನು ನಮ್ಮ ಸಂಕುಚಿತ ವ್ಯಾಖ್ಯಾನದಿಂದ ಬಿಡುಗಡೆಗೊಳಿಸಬೇಕಾಗಿದೆ! ನಮಗೆ ಲಕ್ಷ್ಮೀ ಎಂದರೆ ಕೇವಲ ದುಡ್ಡು ದುಡ್ಡು ದುಡ್ಡು!!

ಇಂದು ಕೋವಿಡ್‌ ನಮ್ಮನ್ನೆಲ್ಲ ಕಾಡುತ್ತಿದೆ. ನಮ್ಮ ಜೀವನದ ಎಲ್ಲ ಚಟುವಟಿಕೆಗಳೂ ಕೋವಿಡ್‌ನ ಕ್ರೂರಸ್ಪರ್ಶದಿಂದಾಗಿ ನಲುಗುತ್ತಿದೆ. ನಮ್ಮ ಪ್ರಾಣಗಳಿಗೇ ಆಪತ್ತು ಎದುರಾಗಿದೆ; ಭವಿಷ್ಯ ಹೇಗೆ ಎಂಬುದರ ಬಗ್ಗೆ ನಮಗೆ ಏನೂ ಸುಳಿವಿಲ್ಲ. ಇಂಥ ಸಂದರ್ಭದಲ್ಲೂ ಕೆಲವರು ದುಡ್ಡು ದುಡ್ಡು ದುಡ್ಡು – ಎಂದೇ ಕೂಗಾಡುತ್ತಿದ್ದಾರೆ. ಆರೋಗ್ಯವೂ ಸಂಪತ್ತು ಎಂಬ ಅರಿವು ನಮಗೆ ಮೂಡಬೇಕಿದೆ. ಅಷ್ಟೇಕೆ, ಒಳ್ಳೆಯ ಬುದ್ಧಿ ಕೂಡ ಶ್ರೀ, ಸಂಪತ್ತೇ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.