ADVERTISEMENT

ದಿನದ ಸೂಕ್ತಿ: ಸಮಸ್ಯೆಗೆ ತಕ್ಕ ಪರಿಹಾರ

ಎಸ್.ಸೂರ್ಯಪ್ರಕಾಶ ಪಂಡಿತ್
Published 26 ಜನವರಿ 2021, 10:25 IST
Last Updated 26 ಜನವರಿ 2021, 10:25 IST
ಮನಸ್ಸು
ಮನಸ್ಸು   

ಪ್ರಜ್ಞಯಾ ಮಾನಸಂ ದುಃಖಂ ಹನ್ಯಾಚ್ಛಾರೀರಮೌಷಧೈಃ ।

ಏತದ್ವಿಜ್ಞಾನಸಾಮರ್ಥ್ಯಂ ನ ಬಾಲೈಃ ಸಮತಾಮಿಯಾತ್‌ ।।

ಇದರ ತಾತ್ಪರ್ಯ ಹೀಗೆ:

ADVERTISEMENT

’ಮಾನಸಿಕವಾದ ದುಃಖವನ್ನು ವಿಚಾರಶಕ್ತಿಯಿಂದ ಹೋಗಲಾಡಿಸಿಕೊಳ್ಳಬೇಕು. ದೇಹಕ್ಕೆ ಬಂದ ಆಪತ್ತನ್ನು ಔಷಧಗಳಿಂದ ಗುಣಪಡಿಸಿಕೊಳ್ಳಬೇಕು. ಬುದ್ಧಿಸಾಮರ್ಥ್ಯ ಎಂದರೆ ಇದೇ. ಇದನ್ನು ಬಿಟ್ಟು ಬಾಲಿಶವಾಗಿ ವರ್ತಿಸಬಾರದು.’

ಸಮಸ್ಯೆಯ ಮೂಲವನ್ನು ಸರಿಯಾಗಿ ಅರ್ಥಮಾಡಿಕೊಂಡು, ಅದಕ್ಕೆ ತಕ್ಕ ರೀತಿಯಲ್ಲಿ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸುಭಾಷಿತ ಹೇಳುತ್ತಿದೆ.

ನಮಗೆ ಮುಖ್ಯವಾಗಿ ಸಮಸ್ಯೆಗಳು ಎರಡು ರೂಪದಲ್ಲಿ ಬರುತ್ತವೆ. ಒಂದು ದೈಹಿಕವಾಗಿ, ಮತ್ತೊಂದು ಮಾನಸಿಕವಾಗಿ. ಈ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬುದನ್ನೂ ಸುಭಾಷಿತ ಹೇಳುತ್ತಿದೆ.

ದೈಹಿಕವಾದ ಸಮಸ್ಯೆಗಳು ಎಂದರೆ ರೋಗಗಳು. ಈ ರೋಗಗಳಿಗೂ ಹಲವು ಕಾರಣಗಳು ಇರಬಹುದೆನ್ನಿ! ಕೆಲವೊಂದು ರೋಗಗಳನ್ನು ನಾವಾಗಿ ತಂದುಕೊಳ್ಳುತ್ತೇವೆ. ನಮ್ಮ ಅಶಿಸ್ತಿನ ಜೀವನಶೈಲಿಯೇ ನಮ್ಮ ಹಲವು ರೋಗಗಳಿಗೆ ಕಾರಣವಾಗಬಲ್ಲದು ಎಂಬುದನ್ನು ನಾವು ಮರೆಯಬಾರದು. ಇನ್ನು ಕೆಲವು ರೋಗಗಳು ನಮಗೆ ಸಹಜವಾಗಿಯೇ, ಎಂದರೆ ರಕ್ತಗತವಾಗಿ ಬರಬಹುದು. ರೋಗಗಳು ಹೇಗೆ ಬಂದರೂ ಅದಕ್ಕೆ ಪರಿಹಾರ ಎಂದರೆ ಔಷಧಗಳನ್ನು ತೆಗೆದುಕೊಳ್ಳುವುದೇ ಹೌದು. ಎಂದರೆ ದೈಹಿಕ ಸಮಸ್ಯೆಗಳಿಗೆ ನಾವು ವೈದ್ಯರು, ಔಷಧಗಳಂಥವುಗಳಿಂದ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ.

ಇನ್ನೊಂದು ವಿಧದ ಸಮಸ್ಯೆ ಎಂದರೆ ಅದು ಮಾನಸಿಕ ಸಮಸ್ಯೆ. ಮನಸ್ಸಿನ ಕಾಯಿಲೆಗಳನ್ನು ಔಷಧಗಳಿಂದ ಗುಣಪಡಿಸಲು ಸಾಧ್ಯವಿಲ್ಲ. ಹಾಗಾದರೆ ಅವುಗಳಿಂದ ಬಿಡುಗಡೆಯನ್ನು ಪಡೆಯವುದು ಹೇಗೆ? ಮನಸ್ಸಿಗೆ ಕಾಯಿಲೆ ಬರುವುದೇ ಅದರ ವಿಚಾರಶಕ್ತಿ ದಿಕ್ಕು ತಪ್ಪಿದಾಗ. ಹೀಗಾಗಿ ಆ ವಿಚಾರಶಕ್ತಿಯನ್ನು ಮತ್ತೆ ತುಂಬಬೇಕಾದರೆ ವಿಚಾರಶಕ್ತಿಯನ್ನೇ ಅದಕ್ಕೆ ಉಣಬಡಿಸಬೇಕು. ಮನಸ್ಸು ದುಃಖದಲ್ಲಿದ್ದಾಗ, ಆ ದುಃಖಕ್ಕೆ ಸರಿಯಾದ ಕಾರಣವನ್ನು ತಿಳಿದುಕೊಳ್ಳಲು ಅದು ವಿಫಲವಾದಾಗ ಅದಕ್ಕೆ ಖಿನ್ನತೆ ಆವರಿಸುವ ಸಾಧ್ಯತೆ ಇರುತ್ತದೆ. ಖಿನ್ನತೆಯಲ್ಲಿ ಮನಸ್ಸು ಎಂಥ ದುಡುಕಿನ ನಿರ್ಧಾರವನ್ನೂ ತೆಗೆದುಕೊಳ್ಳಬಹುದು. ಹೀಗಾಗಿ ಮನಸ್ಸಿಗೆ ಆಗ ಸರಿಯಾದ ಕಾರಣವನ್ನು ತಿಳಿಸಿಕೊಡಬೇಕಾಗುತ್ತದೆ. ಇದೇ ವಿಚಾರಶಕ್ತಿ.

ಹೀಗೆ ನಮ್ಮ ಶರೀರಕ್ಕೂ ಮನಸ್ಸಿಗೂ ಎದುರಾಗುವ ಸಮಸ್ಯೆಗಳ ನಿಜವಾದ ಸ್ವರೂಪವನ್ನೂ ಕಾರಣವನ್ನೂ ತಿಳಿದುಕೊಂಡು ಅದಕ್ಕೆ ತಕ್ಕ ರೀತಿಯಲ್ಲಿ ಪರಿಹಾರದ ದಾರಿಗಳನ್ನು ಹುಡುಕಬೇಕು. ಇದೇ ವಿಚಾರಶಕ್ತಿ. ಹೀಗಲ್ಲದೆ ಚಿಕ್ಕ ಮಕ್ಕಳಂತೆ ನಡೆದುಕೊಳ್ಳಬಾರದು. ಎಂದರೆ ವಿವೇಚನೆ ಇಲ್ಲದೆ, ಅವಿವೇಕದಿಂದ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.