ADVERTISEMENT

ದಿನದ ಸೂಕ್ತಿ: ಅರ್ಥಶೌಚ

ಎಸ್.ಸೂರ್ಯಪ್ರಕಾಶ ಪಂಡಿತ್
Published 30 ಜೂನ್ 2021, 3:12 IST
Last Updated 30 ಜೂನ್ 2021, 3:12 IST
ಸ್ನಾನ
ಸ್ನಾನ   

ಸರ್ವೇಷಾಮೇವ ಶೌಚಾನಾಮರ್ಥಶೌಚಂ ಪರಂ ಸ್ಮೃತಮ್‌ ।

ಯೋsರ್ಥೇ ಶುಚಿರ್ಹಿ ಸ ಶುಚಿರ್ನ ಮೃದ್ವಾರಿಶುಚಿಃ ಶುಚಿಃ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಎಲ್ಲ ಶುದ್ಧಿಗಳಲ್ಲಿ ಅರ್ಥಶುದ್ಧಿಯೇ ಶ್ರೇಷ್ಠವಾದದ್ದು; ಅರ್ಥಶುದ್ಧಿಯಿಂದ ಇರುವವನೇ ನಿಜವಾದ ಶುದ್ಧಿ. ಹೀಗಲ್ಲದೆ ಮಣ್ಣು, ನೀರು – ಇವುಗಳಿಂದ ಉಂಟಾಗುವ ಶುದ್ಧಿ ನಿಜವಾದ ಶುದ್ಧಿ ಅಲ್ಲ.’

ನಮ್ಮ ಕಾಲಕ್ಕೇ ಹೇಳಿಮಾಡಿಸಿದಂತಿದೆ ಈ ಸುಭಾಷಿತ.

ಇಂದು ದಿನ ಬೆಳಗಾದರೆ ಸಾಕು, ನಮ್ಮ ಕಣ್ಣ ಮುಂದೆ ನೂರಾರು ಜಾಹೀರಾತುಗಳು ರಾಚುತ್ತಿರುತ್ತವೆ; ಅವುಗಳಲ್ಲಿ ಬಹುಪಾಲು ನಮ್ಮ ’ಸೌಂದರ್ಯ‘ವನ್ನು ಹೆಚ್ಚಿಸುವಂಥವೇ ಹೆಚ್ಚು; ಅವುಗಳಲ್ಲೂ ಸಾಬೂನು–ಶಾಂಪುಗಳ ಕಾರುಬಾರು ಇನ್ನೂ ಹೆಚ್ಚು. ಆ ಸೋಪಿನಿಂದ ನಿಮ್ಮ ಚರ್ಮ ಹೀಗೆ ಶುದ್ಧವಾಗುತ್ತದೆ, ಹಾಗೆ ಮಿಂಚುತ್ತದೆ; ಈ ಸೋಪಿನಿಂದ ಈ ಬ್ಯಾಕ್ಟೀರಿಯಾ ಸಾಯುತ್ತದೆ, ಆ ವೈರಸ್‌ ನಾಶವಾಗುತ್ತದೆ. ಈ ಶಾಂಪು ಬಳಸಿದರೆ ಈ ಹುಡುಗ ನಿಮ್ಮ ಕಡೆಗೆ ಆಕರ್ಷಿತನಾಗುತ್ತಾನೆ, ಆ ಶಾಂಪು ಬಳಸಿದರೆ ಈ ಹುಡುಗಿ ನಿಮ್ಮವಳಾಗುತ್ತಾಳೆ. ಹೀಗೆ ತಲೆಬುಡವಿಲ್ಲದ ನೂರಾರು ಜಾಹೀರಾತುಗಳ ಕಾಟ ಶುರುವಾಗುತ್ತವೆ.

ಸ್ವಾರಸ್ಯ ಎಂದರೆ ನಾವು ಇವನ್ನು ನಂಬುತ್ತೇವೆ! ಈ ಸೋಪು ಮುಂತಾದುವನ್ನು ಬಳಸಿದರೆ ನಾವು ಪರಿಪೂರ್ಣ ಶುದ್ಧಾತ್ಮರಾಗುತ್ತೇವೆ ಎಂದೇ ಭಾವಿಸುತ್ತೇವೆ. ಸುಭಾಷಿತ ಅದನ್ನು ಅಲ್ಲಗಳೆಯುತ್ತಿದೆ; ನಿಜವಾದ ಶುದ್ಧಿ ಎಂದರೆ ಏನು ಎಂಬುದನ್ನು ಹೇಳುತ್ತಿದೆ.

ನಿಜವಾದ ಶುದ್ಧಿ ಎಂದರೆ ಅದು ಅರ್ಥಶುದ್ಧಿಯೇ ಹೌದು ಎಂಬುದು ಸುಭಾಷಿತದ ಖಚಿತ ನಿಲವು. ಅರ್ಥಶುದ್ಧಿ ಎಂದರೆ ದ್ರವ್ಯಶುದ್ಧಿ. ಇದನ್ನು ಇನ್ನೂ ಸರಳಮಾಡಿ ಹೇಳುವುದಾದರೆ ಹಣಕಾಸಿನ ವಿಷಯದಲ್ಲಿ ಒಬ್ಬ ಹೇಗೆ ನಡೆದುಕೊಳ್ಳುತ್ತಾನೆ ಎಂಬುದರಿಂದಲೇ ಅವನು ಶುದ್ಧನೋ ಅಶುದ್ಧನೋ ಎಂಬುದು ತೀರ್ಮಾನವಾಗುವುದು. ಹಣ–ಸಂಪತ್ತನ್ನು ಮೋಸದಿಂದ ಸಂಪಾದಿಸುವವನು, ಬೇರೊಬ್ಬರ ಹಣ–ಆಸ್ತಿಗೆ ಆಸೆ ಪಡುವವನು ಎಷ್ಟು ಕೊಡಗಳ ನೀರಿನಿಂದ ಸ್ನಾನ ಮಾಡಿದರೂ, ಎಷ್ಟೆಲ್ಲ ಸೋಪುಗಳನ್ನು ಹಚ್ಚಿಕೊಂಡರೂ ಅವನು ಶುದ್ಧನಾಗಲಾರ ಎಂದು ಅದು ಘೋಷಿಸುತ್ತಿದೆ.

ಕೋವಿಡ್‌ನಂಥ ಸಂಕಷ್ಟದ ಸಮಯದಲ್ಲೂ ಭ್ರಷ್ಟಾಚಾರದಲ್ಲಿ ತೊಡಗಿರುವ ನಮ್ಮ ಅಧಿಕಾರಿಗಳು, ವ್ಯಾಪಾರಿಗಳು, ರಾಜಕಾರಣಿಗಳು ಈ ಸುಭಾಷಿತದ ಸಂದೇಶದ ಕಡೆಗೆ ದೃಷ್ಟಿಹಾಯಿಸುತ್ತಾರೆಯೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.