ADVERTISEMENT

ದಿನದ ಸೂಕ್ತಿ: ಬ್ರಹ್ಮದ ಹುಡುಕಾಟ

ಎಸ್.ಸೂರ್ಯಪ್ರಕಾಶ ಪಂಡಿತ್
Published 7 ಏಪ್ರಿಲ್ 2021, 1:16 IST
Last Updated 7 ಏಪ್ರಿಲ್ 2021, 1:16 IST
ನಟರಾಜ
ನಟರಾಜ   

ಸಂಗಃ ಸತ್ಸು ವಿಧೀಯತಾಂ ಭಗವತೋ ಭಕ್ತಿರ್ದೃಢಾ ಧೀಯತಾಂ

ಶಾಂತ್ಯಾದಿಃ ಪರಿಚೀಯತಾಂ ದೃಢತರಂ ಕರ್ಮಾಶು ಸಂತ್ಯಜ್ಯತಾಮ್‌ ।

ಸದ್ವಿದ್ವಾನುಪಸೃಪ್ಯತಾಂ ಪ್ರತಿದಿನಂ ತತ್ಪಾದುಕಾ ಸೇವ್ಯತಾಂ

ADVERTISEMENT

ಬ್ರಹ್ಮೈಕಾಕ್ಷರಮರ್ಥ್ಯತಾಂ ಶ್ರುತಿಶಿರೋವಾಕ್ಯಂ ಸಮಾಕರ್ಣ್ಯತಾಮ್‌ ।।

ಇದರ ತಾತ್ಪರ್ಯ ಹೀಗೆ:

‘ಸಜ್ಜನರ ಸಹವಾಸ ಮಾಡು. ಭಗವಂತನಲ್ಲಿ ದೃಢವಾದ ಭಕ್ತಿಯನ್ನು ಇಡು. ಶಾಂತಿ ಮೊದಲಾದ ಗುಣಗಳನ್ನು ತುಂಬಿಕೋ. ಬಲವಾದ ಕರ್ಮಗಳಲ್ಲಿ ಬೇಗ ಕಿತ್ತೊಗೆ. ಒಳ್ಳೆಯ ವಿದ್ವಾಂಸನನ್ನು ದಿನದಿನವೂ ಅನುಸರಿಸು. ಅವನ ಪಾದುಕೆಗಳನ್ನು ಸೇವಿಸು. ವೇದಾಂತವಾಕ್ಯಗಳನ್ನು ಆದರದಿಂದ ಕೇಳು. ’’ಬ್ರಹ್ಮ’’ ಎಂಬ ಒಂದು ಅಕ್ಷರವಸ್ತುವನ್ನು ಹುಡುಕು.’

ಸಗುಣಾರಾಧನೆಯಿಂದ ನಿರ್ಗುಣಾರಾಧನೆಯ ಕಡೆಗೆ ಈ ಪದ್ಯ ಸೂಚಿಸುತ್ತಿದೆ.

ಬ್ರಹ್ಮಾನುಭವ ಆಗಬೇಕಾದರೆ ಅದಕ್ಕಾಗಿ ನಾವು ತುಂಬ ಸಾಧನೆಯನ್ನು ಮಾಡಬೇಕಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಈ ಸಾಧನೆಯ ಕ್ರಮಗಳನ್ನು ಈ ಪದ್ಯ ಹಂತಹಂತವಾಗಿ ನಿರೂಪಿಸುತ್ತಿದೆ.

ಮೊದಲಿಗೆ ಒಳ್ಳೆಯದು ಎಂದರೆ ಏನು ಎಂದು ತಿಳಿಯಬೇಕು. ಅದನ್ನೇ ಸಜ್ಜನರ ಸಹವಾಸ ಎಂದಿರುವುದು. ಬಳಿಕ ದೇವರಲ್ಲಿ ಭಕ್ತಿಯನ್ನಿಡಬೇಕು. ಭಕ್ತಿಯ ಮುಂದಿನ ಹಂತವೇ ಮನಸ್ಸು ನೆಮ್ಮದಿಯನ್ನು ಪಡೆಯುವುದು. ಮುಂದಿನ ಹಂತ ಕರ್ಮಗಳನ್ನು ತ್ಯಾಗ ಮಾಡುವುದು. ಇಲ್ಲಿಯ ತನಕ ಸಗುಣಾರಾಧನೆ ಆಯಿತು. ಇಲ್ಲಿಂದ ಮುಂದಕ್ಕೆ ನಿರ್ಗುಣೋಪಾಸನೆಯ ದಾರಿಯನ್ನು ಸುಭಾಷಿತ ಸೂಚಿಸುತ್ತಿದೆ.

ಅಧ್ಯಾತ್ಮದ ಸಾಧನೆಯಲ್ಲಿ ಗುರುವಿನ ಪಾತ್ರ ದೊಡ್ಡದು. ಒಳ್ಳೆಯ ವಿದ್ವಾಂಸ ಎಂದರೆ ಶಾಸ್ತ್ರಗಳು ನಿರೂಪಿಸುವ ಮೋಕ್ಷಮಾರ್ಗವನ್ನು ನಮಗೆ ಮನದಟ್ಟುಮಾಡಿಸುವವನು. ಪಾದುಕೆಗಳ ಸೇವನೆ ಎಂದರೆ ನಿರ್ಗುಣತತ್ತ್ವದ ಮೊದಲ ಹಂತ; ಉಪಾಸನೆ. ಇದಾದ ಬಳಿಕ ವೇದಾಂತವಾಕ್ಯಗಳನ್ನು ಚೆನ್ನಾಗಿ ಶ್ರವಣ, ಮನನಗಳನ್ನು ಮಾಡಬೇಕು. ಬಳಿಕ ಶಾಸ್ತ್ರಗಳು ಹೇಳುವ ಬ್ರಹ್ಮವಸ್ತುವನ್ನು ಹುಡುಕಬೇಕು.

ನಮ್ಮ ಸಂಸ್ಕೃತಿಯಲ್ಲಿ ಪ್ರವೃತ್ತಿಮಾರ್ಗ ಮತ್ತು ನಿವೃತ್ತಿಮಾರ್ಗ – ಎರಡಕ್ಕೂ ಸಮಾನವಾದ ಆದರವಿದೆ. ಇದನ್ನು ಅರ್ಥಮಾಡಿಸುವಲ್ಲಿ ಈ ಪದ್ಯ ನಮಗೆ ನೆರವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.