ADVERTISEMENT

ದಿನದ ಸೂಕ್ತಿ: ಮೂರ್ಖರ ಲಕ್ಷಣ

ಎಸ್.ಸೂರ್ಯಪ್ರಕಾಶ ಪಂಡಿತ್
Published 3 ಆಗಸ್ಟ್ 2021, 4:34 IST
Last Updated 3 ಆಗಸ್ಟ್ 2021, 4:34 IST
ಮೂರ್ಖ
ಮೂರ್ಖ   

ಮೂರ್ಖಸ್ಯ ಪಂಚಚಿಹ್ನಾನಿ ಗರ್ವೀ ದುರ್ವಚನೀ ತಥಾ ।

ಹಠೀ ಚಾಪ್ರಿಯವಾದೀ ಚ ಪರೋಕ್ತಂ ನೈವ ಮನ್ಯತೇ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಮೂರ್ಖರ ಲಕ್ಷಣಗಳು ಐದು: ಗರ್ವ, ದುರ್ವಚನ, ಹಠಮಾರಿತನ, ಅಪ್ರಿಯವಾದ ಮಾತನ್ನು ಆಡುವುದು ಮತ್ತು ಬೇರೆಯವರ ಹಿತವಚನವನ್ನು ಕೇಳದಿರುವುದು.’

ಮೂರ್ಖರನ್ನು ದಿನವೂ ನೋಡುತ್ತಿರುತ್ತೇವೆ. ಆದರೆ ಮೂರ್ಖರು ಹೇಗಿರುತ್ತಾರೆ – ಎಂದರೆ ಹೇಳುವುದು ಕಷ್ಟ. ಆದರೆ ಈ ಸುಭಾಷಿತ ಅಂಥ ಕಷ್ಟದ ಕೆಲಸವನ್ನು ಸುಲಭವಾಗಿ ಮಾಡಿದೆ. ಮೂರ್ಖರು ಹೇಗಿರುತ್ತಾರೆ – ಎಂಬುದಕ್ಕೆ ಉತ್ತರಿಸಿದೆ ಸುಭಾಷಿತ.

ಮೂರ್ಖರ ಐದು ಲಕ್ಷಣವನ್ನು ಹೇಳಿದೆ. ಮೊದಲನೆಯದು ಗರ್ವ. ಯಾರಿಗೂ ಗೌರವ ಕೊಡದಿರುವುದು, ಸೊಕ್ಕಿನಿಂದ ಮೆರೆಯವುದು, ಪ್ರಾಕೃತನಾಗಿ ನಡೆದುಕೊಳ್ಳುವುದು ಗರ್ವ ಎನಿಸಿಕೊಳ್ಳುತ್ತದೆ.

ಎರಡನೆಯ ಲಕ್ಷಣ ದುರ್ವಚನ, ಎಂದರೆ ಕೆಟ್ಟ ಮಾತು. ಮೂರ್ಖರ ಅಸ್ತ್ರವೇ ಕೆಟ್ಟ ಮಾತುಗಳು. ಇವರು ಎಂಥ ಕೆಟ್ಟ ಮಾತನ್ನೂ ಆಡಬಲ್ಲರು. ಮಾತಿನ ಶಕ್ತಿಯ ಬಗ್ಗೆ ಇವರಿಗೆ ಅರಿವೇ ಇರದು; ಸಂಸ್ಕೃತಿಹೀನರಾಗಿ ಮಾತಿನ ಕೆಟ್ಟ ಬಳಕೆಯನ್ನು ಮಾಡುತ್ತಾರೆ ಇವರು.

ಹಠಮಾರಿತನ ಮೂರ್ಖರ ಮೂರನೆಯ ಲಕ್ಷಣ. ನಾವೇ ಸರಿ ಎಂದೋ, ಇದೇ ಬೇಕು ಎಂದೋ – ಏನೋ ಒಟ್ಟಿನಲ್ಲಿ ನಮ್ಮ ಕುದುರೆಯೇ ಗೆಲ್ಲಬೇಕು ಎಂಬಂತೆ ನಡೆದುಕೊಳ್ಳುವುದು ಮೂರ್ಖರ ಲಕ್ಷಣ.

ಅಪ್ರಿಯವಾದ ಮಾತನ್ನು ಆಡುವುದು ಮೂರ್ಖರ ನಾಲ್ಕನೆಯ ಲಕ್ಷಣ. ಕೆಟ್ಟ ಮಾತಿಗೂ ಅಪ್ರಿಯವಾದ ಮಾತಿಗೂ ಏನು ವ್ಯತ್ಯಾಸ ಎಂದು ನಾವಿಲ್ಲಿ ಯೋಚಿಸಬೇಕಾಗುತ್ತದೆ. ಅಪ್ರಿಯವಾದ ಮಾತು ಎಂದರೆ ಅಮಂಗಳಕರವಾದ ಮಾತು, ಅಶುಭವಾದ ಮಾತುಗಳನ್ನು ಆಡುವುದು.

ಮೂರ್ಖರು ತಮಗೆ ತಾವೇ ರಾಜರು, ಬೃಹಸ್ಪತಿಗಳು ಎಂದು ತಿಳಿದುಕೊಂಡಿರುತ್ತಾರೆ. ಹೀಗಾಗಿ ಅವರು ಯಾರ ಹಿತವಚನವನ್ನೂ ಕೇಳುವುದಿಲ್ಲ; ಎಲ್ಲವೂ ತಮಗೆ ಗೊತ್ತಿದೆ ಎಂದೇ ಭಾವಿಸಿಕೊಂಡಿರುತ್ತಾರೆ.

ಈ ಲಕ್ಷಣಗಳಲ್ಲಿ ನಮ್ಮಲ್ಲಿ ಯಾವುದು ಇವೆ ಎಂಬುದನ್ನು ಗುರುತಿಸಿಕೊಂಡರೆ ಆಗ ನಮ್ಮ ಮೂರ್ಖತನ ಮಟ್ಟ ಗೊತ್ತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.