ADVERTISEMENT

ದಿನದ ಸೂಕ್ತಿ: ಏಳಿಗೆ ಅವನತಿ ನಮ್ಮಿಂದಲೇ

ಎಸ್.ಸೂರ್ಯಪ್ರಕಾಶ ಪಂಡಿತ್
Published 22 ಜನವರಿ 2021, 1:23 IST
Last Updated 22 ಜನವರಿ 2021, 1:23 IST
life
life   

ವ್ರಜತ್ಯಧೋsಧೋ ಯಾತ್ಯುಚ್ಚೈಃ ನರಃ ಸ್ವೈರೇವ ಕರ್ಮಭಿಃ ।

ಖನಿತೇವ ಹಿ ಕೂಪಸ್ಯ ಪ್ರಾಸಾದಸ್ಯೇವ ಕಾರಕಃ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಮನುಷ್ಯನು ಜೀವನದಲ್ಲಿ ಕೆಳಕೆಳಗೆ ಇಳಿಯುವುದಾಗಲಿ ಅಥವಾ ಮೇಲೆಮೇಲೆಕ್ಕೆ ಏರುವುದಾಗಲಿ ಅವನು ಮಾಡುವ ಕರ್ಮಗಳಿಗೆ ಅನುಗುಣವಾಗಿ ನಡೆಯುತ್ತದೆ. ಇದು ಹೇಗೆಂದರೆ, ಬಾವಿಯನ್ನು ತೆಗೆಯುವವನು ನೆಲವನ್ನು ಅಗೆಯುತ್ತ ಕೆಳಗೆ ಹೋಗುತ್ತಾನೆ; ಉಪ್ಪರಿಗೆಯನ್ನು ಕಟ್ಟುವವನು ಮೇಲೆಮೇಲೆಕ್ಕೆ ಏರುತ್ತ ಹೋಗುತ್ತಾನೆ.’

ನಮ್ಮ ಏಳಿಗೆಗೂ ಅವನತಿಗೂ ನಮ್ಮ ಕೆಲಸಗಳೇ ಕಾರಣ ಎನ್ನುತ್ತಿದೆ ಸುಭಾಷಿತ.

ನಮಗೆ ಏನಾದರೂ ಒಳ್ಳೆಯದು ನಡೆದರೆ ಅಥವಾ ಯಶಸ್ಸು ದೊರೆತರೆ ಅದಕ್ಕೆ ಕಾರಣ ನಾವೇ ಎಂದು ಸಂಭ್ರಮಿಸುತ್ತೇವೆ; ಅದರ ಶ್ರೇಯಸ್ಸನ್ನು ನಾವೇ ಪಡೆದುಕೊಳ್ಳುತ್ತೇವೆ. ಅದೇ ಕೆಟ್ಟದ್ದು ನಡೆದರೆ ಅಥವಾ ನಾವು ಅಂದುಕೊಂಡಂತೆ ಯಶಸ್ಸು ಸಿಗದೆಹೋದಾಗ ಅದಕ್ಕೆ ಕಾರಣವನ್ನು ಬೇರೊಬ್ಬರ ಹೆಗಲಿಗೆ ವರ್ಗಾಯಿಸುತ್ತೇವೆ. ಆದರೆ ಸುಭಾಷಿತ ಹೇಳುತ್ತಿದೆ, ನಮ್ಮ ಸೋಲಿಗೂ ಗೆಲವಿಗೂ ನಾವೇ ಕಾರಣ ಎಂದು.

ಸದ್ಯದ ವಿದ್ಯಮಾನವನ್ನೇ ಉದಾಹರಣೆಯಾಗಿ ನೋಡಬಹುದು. ಕೋವಿಡ್‌ ಇಷ್ಟೊಂದು ಹರಡಲು ಕಾರಣ ಏನು? ನಾವೇ ಅಲ್ಲವೆ? ಯಾರಿಗೆ ಮೊದಲು ಕೊರೊನಾ ವೈರಸ್‌ ಅಂಟಿತೋ ಅವರು ಜನರ ನಡುವೆ ಓಡಾಡಿದರು; ಅದರ ಪರಿಣಾಮ ಹತ್ತಾರು ಜನರಿಗೆ ಅದು ಹರಡಿತು. ಹತ್ತು ಜನರು ನೂರಾರು ಜನರಿಗೆ ಹಬ್ಬಿಸಿದರು. ಕೊನೆಗೆ ಲಕ್ಷಾಂತರ ಜನರಿಗೆ ಸೋಂಕು ಹಬ್ಬಿತು. ಈಗ ಕೊರೊನಾ ಹಾವಳಿ ಕಡಿಮೆ ಆಗುತ್ತಿದೆ ಎಂದರೂ ಅದಕ್ಕೆ ಜನರೇ ಕಾರಣ. ಜನರು ಪಾಲಿಸಿದ ಎಚ್ಚರ, ಶಿಸ್ತು, ಸಂಯಮಗಳೇ ಕೊರೊನಾದ ಇಳಿಕೆಗೆ ಕಾರಣ. ಎಂದರೆ ಹೆಚ್ಚಳಕ್ಕೂ ಇಳಿಕೆಗೂ ಜನರೇ ಕಾರಣ ಎಂಬುದು ಸ್ಪಷ್ಟ.

ಸುಭಾಷಿತ ಇಲ್ಲೊಂದು ಸೊಗಸಾದ ಉದಾಹರಣೆಯನ್ನೂ ನೀಡಿದೆ.

ಬಾವಿಯನ್ನು ಅಗೆಯುತ್ತ ಅಗೆಯುತ್ತ ನಾವು ಕೆಳಕೆಳಗೆ ಹೋಗುತ್ತೇವೆ. ಆದರೆ ಮಹಡಿಯನ್ನು ಕಟ್ಟುತ್ತ ಕಟ್ಟುತ್ತ ಮೇಲೆಮೇಲೆಕ್ಕೆ ಹೋಗುತ್ತೇವೆ. ಇದರ ಅರ್ಥ: ನಾವು ಮಾಡುವ ಕೆಲಸವೇ ನಮ್ಮನ್ನು ಮೇಲಕ್ಕೂ ಅಥವಾ ಕೆಳಕ್ಕೂ ತೆಗೆದುಕೊಂಡುಹೋಗುತ್ತದೆ ಎಂಬುದು.

ಆದುದರಿಂದ ನಮ್ಮ ಸುಖಕ್ಕೂ ದುಃಖಕ್ಕೂ ಬೇರೆಯವರನ್ನು ಕಾರಣವಾಗಿಸುವುದು ಬೇಡ. ನಮ್ಮ ಸುಖ–ಸಂತೋಷಗಳೂ ನೋವು–ದುಃಖಗಳೂ ನಮ್ಮ ವ್ಯಕ್ತಿತ್ವವನ್ನು ಆಶ್ರಯಿಸಿವೆ ಎಂಬುದನ್ನು ಮರೆಯದಿರೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.