ADVERTISEMENT

ದಿನದ ಸೂಕ್ತಿ: ಉತ್ಸಾಹವೇ ಬಲ, ಅದೇ ದಾರಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 15 ಮಾರ್ಚ್ 2021, 1:44 IST
Last Updated 15 ಮಾರ್ಚ್ 2021, 1:44 IST
ಉತ್ಸಾಹ
ಉತ್ಸಾಹ   

ಕಾಷ್ಠಾದಗ್ನಿರ್ಜಾಯತೇ ಮಥ್ಯಮಾನಾತ್

ಭೂಮಿಸ್ತೋಯಂ ಖನ್ಯಮಾನಾ ದದಾತಿ |

ಸೋತ್ಸಾಹಾನಾಂ ನಾಸ್ತ್ಯಸಾಧ್ಯಂ ನರಾಣಾಂ

ADVERTISEMENT

ಮಾರ್ಗಾರಬ್ಧಾಃ ಸರ್ವಯತ್ನಾಃ ಫಲನ್ತಿ ।।

ಇದರ ತಾತ್ಪರ್ಯ ಹೀಗೆ:

‘ಮರದ ತುಂಡಿನಿಂದ ಬೆಂಕಿ ಹುಟ್ಟುತ್ತದೆ. ಭೂಮಿಯನ್ನು ಅಗೆದರೆ ನೀರು ಲಭಿಸುತ್ತದೆ. ಉತ್ಸಾಹಶಾಲಿಗಳಾದ ಮನುಷ್ಯರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸರಿಯಾದ ದಾರಿಯಲ್ಲಿ ಆರಂಭಿಸಿದ ಪ್ರಯತ್ನಗಳು ಫಲವನ್ನು ಕೊಡುವುದರಲ್ಲಿ ಅನುಮಾನವಿಲ್ಲ.’

ಪ್ರಯತ್ನ, ಅದೂ ಸರಿಯಾದ ದಾರಿಯಲ್ಲಿ ಪ್ರಯತ್ನವನ್ನು ನಡೆಸಬೇಕು; ಆಗ ನಾವು ಆರಂಭಿಸಿದ ಕೆಲಸ ಫಲವನ್ನು ಕೊಡುವುದು ನಿಶ್ವಯ ಎನ್ನುತ್ತಿದೆ ಸುಭಾಷಿತ.

ಮರದ ತುಂಡಿನಲ್ಲಿ ಬೆಂಕಿ ಇದೆ ಎಂದು ಮೇಲ್ನೋಟಕ್ಕೆ ತಿಳಿಯವುದೇ ಇಲ್ಲ; ಆದರೆ ಅದನ್ನು ಮಥಿಸಿದಾಗ ಬೆಂಕಿ ಹುಟ್ಟಿಕೊಳ್ಳುತ್ತದೆ. ಹೀಗೆಯೇ ಭೂಮಿಯ ಒಳಗೆ ನೀರಿರುವುದು ಕಣ್ಣಿಗೆ ಕಾಣುವುದಿಲ್ಲ; ಆದರೆ ಅದನ್ನು ಅಗೆಯುತ್ತಹೋದಾಗ ನೀರು ಸಿಕ್ಕುತ್ತದೆ. ಎಂದರೆ ಎಲ್ಲಿ ಏನಿದೆ – ಎಂದು ಸರಿಯಾಗಿ ತಿಳಿದು, ಪ್ರಯತ್ನಶೀಲರಾದಾಗ ಸಫಲತೆ ಸಹಜವಾಗಿಯೇ ಸಿದ್ಧಿಸುತ್ತದೆ. ಕಷ್ಟ ಪಟ್ಟರೆ ಸುಖ ಉಂಟು, ಹೌದು; ಆದರೆ ಸುಮ್ಮನೆ ಕಷ್ಟಪಟ್ಟರೂ ಪ್ರಯೋಜವಿರುವುದಿಲ್ಲ. ಸರಿಯಾದ ದಾರಿಯಲ್ಲಿ ಪ್ರಯತ್ನವನ್ನು ಮಾಡಬೇಕು.

ಕರೋತಿ ಸಫಲಂ ಜಂತೋಃ ಕರ್ಮ ಯಚ್ಚ ಕರೋತಿ ಸಃ ।

ತಸ್ಮಾದನಿರ್ವೇದಕರಂ ಯತ್ನಂ ಕುರ್ಯಾದನುತ್ತಮಮ್ ।।

‘ಮನುಷ್ಯನು ಯಾವ ಕೆಲಸವನ್ನು ಮಾಡುತ್ತಾನೋ ಅದೇ ಸಾಫಲ್ಯವನ್ನು ಉಂಟುಮಾಡುತ್ತದೆ. ಆದುದರಿಂದ ಉತ್ಸಾಹಯುಕ್ತವಾದ ಉತ್ತಮ ಪ್ರಯತ್ನವನ್ನು ಮಾಡಬೇಕು’ ಎಂಬುದು ಇದರ ತಾತ್ಪರ್ಯ.

ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುವುದರಿಂದ ನಾವು ಸರಿಯಾದ ದಾರಿಯಲ್ಲಿ ಕ್ರಮಿಸಬೇಕು.

ಸರಿಯಾದ ದಾರಿ ಯಾವುದೆಂದು ಗೊತ್ತಾದಮೇಲೆ ಉತ್ಸಾಹದಿಂದ ಕೆಲಸವನ್ನು ಮಾಡಬೇಕು. ಏಕೆಂದರೆ,

ಉತ್ಸಾಹಸಂಪನ್ನಂ ಅದೀರ್ಘಸೂತ್ರಂ

ಕ್ರಿಯಾವಿಧಿಜ್ಞಂ ವ್ಯಸನೇಷ್ವಸಕ್ತಮ್‌ ।

ಶೂರಂ ಕೃತಜ್ಞಂ ದೃಢಸೌಹೃದಂ ಚ

ಲಕ್ಷ್ಮೀಃ ಸ್ವಯಂ ಯಾತಿ ನಿವಾಸಹೇತೋಃ ।।

‘ಉತ್ಸಾಹದಿಂದ ಕೂಡಿದವನೂ ಸೋಮಾರಿಯಲ್ಲದವನೂ ಕೆಲಸಮಾಡುವ ವಿಧಾನವನ್ನು ಅರಿತವನೂ ಕೆಟ್ಟ ಅಭ್ಯಾಸಗಳಲ್ಲಿ ಆಸಕ್ತಿ ಇಲ್ಲದವನೂ ಶೂರನೂ ಕೃತಜ್ಞನೂ ಸ್ಥಿರವಾದ ಸ್ನೇಹಸ್ವಭಾವವನ್ನು ಉಳ್ಳವನೂ ಆದವನಲ್ಲಿ ಲಕ್ಷ್ಮಿಯು ತಾನಾಗಿಯೇ ನೆಲಸಲು ಧಾವಿಸುತ್ತಾಳೆ.’

ಉತ್ಸಾಹೋ ಬಲವನ್ನ್ಯಾಯ್ಯೋ ನಾಸ್ತ್ಯುತ್ಸಾಹಾತ್ಪರಂ ಬಲಮ್‌ ।

ಉತ್ಸಾಹರಂಭಮಾತ್ರೇಣ ಜಾಯಂತೇ ಸರ್ವಸಂಪದಃ ।।

’ಉತ್ಸಾಹದಲ್ಲಿ ಬಲವಿದೆ; ಅದು ನ್ಯಾಯವಾದುದು ಕೂಡ. ಉತ್ಸಾಹಕ್ಕಿತಂಲೂ ಮಿಗಿಲಾದ ಬಲ ಮತ್ತೊಂದಿಲ್ಲ; ಉತ್ಸಾಹದಿಂದ ಆರಂಭಮಾಡಿದರೆ ಸಾಕು ಸಕಲ ಸಂಪತ್ತುಗಳೂ ಉಂಟಾಗುತ್ತವೆ.‘

ನಾವು ಎಂಥ ಸಂದರ್ಭದಲ್ಲೂ ಉತ್ಸಾಹವನ್ನು ಕಳೆದುಕೊಳ್ಳಬಾರದು; ಅದೊಂದು ಇದ್ದರೆ ಎಂಥ ಕೆಲಸದಲ್ಲೂ ಸಾಫಲ್ಯವನ್ನು ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.