ADVERTISEMENT

ಇಂದು ಅಕ್ಷಯ ತೃತೀಯಾ: ಅಕ್ಷಯವಾಗಲಿ ಆರೋಗ್ಯಭಾಗ್ಯ

​ಪ್ರಜಾವಾಣಿ ವಾರ್ತೆ
Published 13 ಮೇ 2021, 19:31 IST
Last Updated 13 ಮೇ 2021, 19:31 IST
   

ಅಕ್ಷಯ ತೃತೀಯಾ ಎಂದ ಕೂಡಲೇ ಇತ್ತೀಚಿನ ವರ್ಷಗಳಲ್ಲಿ ಬಂಗಾರ, ಚಿನ್ನಾಭರಣದ ಅಂಗಡಿಗಳೇ ಕಣ್ಣಮುಂದೆ ಬರುತ್ತಿದ್ದವು. ಆದರೆ ಕಳೆದ ವರ್ಷದಿಂದ ಈ ಚಿತ್ರಣ ಬದಲಾದಂತಿದೆ. ಇದಕ್ಕೆ ಕಾರಣ ಚಿನ್ನವಾಗಲೀ ಅಂಗಡಿಗಳಾಗಲೀ ಅಲ್ಲ‍; ಕೋವಿಡ್‌ನ ಉಪಟಳ. ಲಾಕ್‌ಡೌನ್‌ನ ಕಾರಣದಿಂದಾಗಿ ಈ ಸಲವೂ ಜನರಿಗೆ ಬಂಗಾರವನ್ನು ಕೊಳ್ಳಲಾಗದಿರಬಹುದು! ಆದರೆ ಅಕ್ಷಯ ತೃತೀಯಕ್ಕೂ ಬಂಗಾರಕ್ಕೂ ನೇರ ಸಂಬಂಧವೇನೂ ಇಲ್ಲ. ಈ ದಿನ ನಾವು ಏನನ್ನೂ ಮಾಡಿದರೂ ಅದು ಅಕ್ಷಯವಾಗುತ್ತದೆ ಎಂಬ ನಂಬಿಕೆಯ ಮೇಲೆ ಚಿನ್ನದ ನಂಟು ಗಟ್ಟಿಯಾದದ್ದಷ್ಟೆ. ಚಿನ್ನ ನಮ್ಮ ಭಾಗ್ಯಕ್ಕೆ ಸಂಕೇತ. ನಮ್ಮ ಸಂಪತ್ತು ಅಕ್ಷಯವಾಗಿರಲಿ ಎಂಬುದು ಇದರ ಹಿಂದಿರುವ ಮನೋಭಾವ.

ಇಂದು ನಮಗೆ ಬೇಕಾದ ದಿಟವಾದ ಭಾಗ್ಯ ಎಂದರೆ ಅದು ಆರೋಗ್ಯಭಾಗ್ಯವೇ ಹೌದು ಎಂಬುದು ಸ್ಪಷ್ಟವಾಗುತ್ತಿದೆ. ಇಂಥ ಸಂದರ್ಭದಲ್ಲಿ ನಾವು ಅಕ್ಷಯ ತೃತೀಯಾದ ನಿಜವಾದ ತಾತ್ವಿಕತೆಯನ್ನು ಅನುಸಂಧಾನಿಸಬಹುದು.

ವೈಶಾಖಮಾಸದ ಶುಕ್ಲಪಕ್ಷದ ತೃತೀಯಾದಿನವೇ ‘ಅಕ್ಷಯ ತೃತೀಯಾ’. ಸತ್ಯಯುಗ ಆರಂಭವಾದದ್ದು ‘ಅಕ್ಷಯ ತೃತೀಯಾ’ದಂದು ಎನ್ನುವ ನಂಬಿಕೆ ಉಂಟು. ಅಂದು ಆಚರಿಸುವ ಆಚರಣೆಗಳು ಅಕ್ಷಯವಾದ, ಎಂದರೆ ಮಿತಿಯೇ ಇಲ್ಲದಷ್ಟು ಫಲವನ್ನು ಕೊಡುತ್ತದೆ ಎನ್ನುವುದು ಇದರ ಹೆಗ್ಗಳಿಕೆ. ಆದುದರಿಂದ ಈ ದಿನ ದೇವತಾಪೂಜೆಯನ್ನು ಆಚರಿಸಬೇಕು; ದಾನವನ್ನು ಕೊಡಬೇಕು; ಜಪವನ್ನು ಮಾಡಬೇಕು; ತೀರ್ಥಸ್ನಾನವನ್ನು ಮಾಡಬೇಕು; ಅಧ್ಯಯನವನ್ನು ಆಚರಿಸಬೇಕು – ಎನ್ನುವುದು ಸಂಪ್ರದಾಯದ ನಿಲುವು. ನಮ್ಮ ಆರೋಗ್ಯ ಅಕ್ಷಯವಾಗಿರಲಿ ಎಂಬ ಸಂಕಲ್ಪವನ್ನು ನಾವಿಂದು ಮಾಡೋಣ; ಅದಕ್ಕಾಗಿ ಅಗತ್ಯವಾಗಿರುವ ಸಕಾರಾತ್ಮಕ ನಿರ್ಧಾರಗಳನ್ನು ಕೈಗೊಳ್ಳೋಣ. ಅವುಗಳನ್ನು ಅನುಷ್ಠಾನಕ್ಕೂ ತರೋಣ. ಇವೇ ಈ ಸಲದ ಆಕ್ಷಯ ತೃತೀಯಾ ಆಚರಣೆಗಳಾಗಲಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.