ADVERTISEMENT

ಸಿರಿಗೌರಿ ಎಂಬ ಮನೆಮಗಳು

ಮಂಜುನಾಥ ಕೊಳ್ಳೇಗಾಲ
Published 9 ಸೆಪ್ಟೆಂಬರ್ 2021, 1:15 IST
Last Updated 9 ಸೆಪ್ಟೆಂಬರ್ 2021, 1:15 IST
ಗೌರಿ
ಗೌರಿ   

ಗೌರೀಹಬ್ಬ ನಮ್ಮ ಹಬ್ಬಗಳಲ್ಲೆಲ್ಲಾ ಬಹಳ ವಿಶಿಷ್ಟವಾದುದು. ಸಾಮಾನ್ಯವಾಗಿ ಹಬ್ಬವೆಂದರೆ ದೇವಪೂಜೆ, ಅದಕ್ಕೆ ತಕ್ಕ ಭಯ-ಭಕ್ತಿ ಇತ್ಯಾದಿಗಳು ಸಲ್ಲುತ್ತವೆ. ಗೌರೀಹಬ್ಬವೂ ಇದಕ್ಕೆ ಹೊರತಲ್ಲವಾದರೂ ಗೌರಿಯ ಕರೆಯುವ ಸಡಗರ, ಶಾಸ್ತ್ರಗಳಾಚೆಗೂ ಹಬ್ಬಿದೆ. ಇಲ್ಲಿ ಗೌರಿ ಕೇವಲ ಶ್ರದ್ಧಾಭಕ್ತಿಗಳ ಕೇಂದ್ರವಾದ ದೇವಿಯಲ್ಲ - ದೂರದ ಕೈಲಾಸದಿಂದ ತವರಿಗೆ ಬರುತ್ತಿರುವ ಮಗಳೇ ಅವಳು. ಅವಳನ್ನು ಸ್ವಾಗತಿಸಲು ಎಲ್ಲಿಲ್ಲದ ಸಡಗರ - ವಾರದಿಂದಲೇ ತಯಾರಿ. ಮನೆ ಗುಡಿಸುವುದೇನು, ಸಾರಣೆ-ಕಾರಣೆ ಮಾಡುವುದೇನು, ಹಸೆಯಿಕ್ಕುವುದೇನು! ಮನೆಮಗಳನ್ನು ಎದುರುಗೊಳ್ಳುವ ಸಡಗರ ಎಲ್ಲ ಕೆಲಸಗಳಲ್ಲೂ ಒಡೆದು ಕಾಣುತ್ತಿರುತ್ತದೆ.

ಗೌರಿ ಬರುವ ದಿನವಂತೂ ಬೆಳಕೊಡೆಯುವ ಮುನ್ನವೇ ಮನೆಯಲ್ಲಿ ಸಂಭ್ರಮ. ಬೇಗಲೇ ಮಿಂದು, ಮನೆಯ ಮುಂದೆ ಚೆಂದದ ರಂಗೋಲಿಯಿಟ್ಟು, ಬಾಗಿಲನ್ನು ತೋರಣದಿಂದ ಅಲಂಕರಿಸಿ, ಒಳಗೆ ಮಂಟಪ ಸಿದ್ಧಪಡಿಸಿ, ಅಕ್ಕಿ ತುಂಬಿದ ತಟ್ಟೆಯಲ್ಲಿ ಗೌರಿಯನ್ನಿಟ್ಟು ಅಲಂಕರಿಸಿ, ಒಳಗೆ ಅಡುಗೆಗೆ ಶುರು. ಈ ತೋರಣ ಕಟ್ಟುವ ಕೆಲಸ, ಮಂಟಪಕ್ಕೆ ಬಾಳೆಕಂದು ಕಟ್ಟುವ ಕೆಲಸ ಮೊದಲಾದ ’ಒಡ್ಡು’ಕೆಲಸಗಳು ಮನೆಯ ಗಂಡುಮಕ್ಕಳ ಪಾಲು. ’ಗಂಡಸಿಗ್ಯಾಕೆ ಗೌರೀ ದುಃಖ’ ಎನ್ನುವ ವೇದವಾಕ್ಯದಿಂದ (ಗಾದೆಮಾತು ವೇದವಾಕ್ಯ ತಾನೆ?) ಅಷ್ಟುಮಟ್ಟಿಗೆ ಅವರಿಗೆ ವಿನಾಯಿತಿ. ಮರುದಿನ ಗಣೇಶನ ಹಬ್ಬವನ್ನು ಗಂಡುಮಕ್ಕಳು ಇಷ್ಟು ಸಡಗರದಿಂದ ಮಾಡುತ್ತಾರೋ ಇಲ್ಲವೋ, ಆದರೆ ಮನೆಯ ಹೆಂಗಳೆಯರ ಈ ದಿನದ ಸಡಗರ ಮಾತ್ರ ಅವರಲ್ಲೂ ಹುರುಪುದುಂಬುವುದಂತೂ ದಿಟ.

ಪಾರ್ವತಿ ಪರ್ವತರಾಜನ ಪುತ್ರಿಯಂತೆ. ಇರಬಹುದು, ಆದರೆ ನಮ್ಮ ಗೌರಿಯಂತೂ ಭಕ್ತರೆಲ್ಲರ ಮನೆಮಗಳೇ ಸರಿ. ಅವಳು ಮನೆಮನೆಗಳಲ್ಲೂ ಹುಟ್ಟಿದ್ದಾಳೆ, ಮನಮನಗಳಲ್ಲೂ ಬೆಳೆದಿದ್ದಾಳೆ. ’ಹುಟ್ಯಾಳು ಗೌರಮ್ಮ ಭೂಲೋಕದಲ್ಲಿ’ ಎಂದು ತೊಡಗುವ ಜಾನಪದ ಹಾಡೊಂದು ಗೌರಿಗೆ ಗಂಡು ಹುಡುಕುವ ಪರಿಯನ್ನು ವರ್ಣಿಸುತ್ತದೆ.

ADVERTISEMENT

ಹನ್ನೆರಡು ತುಂಬಿದ ಗೌರಮ್ಮನನ್ನು ಯಾರಿಗೆ ಕೊಡಲೆಂಬ ಪ್ರಶ್ನೆ ತಂದೆಯದು. ಒಬ್ಬೊಬ್ಬ ಗಂಡಿಗೂ ಒಂದೊಂದು ನೆಪ ಹೇಳಿ ಒಲ್ಲೆನೆನ್ನುವ ಗೌರಿ ಕೊನೆಗೆ ’ಶಿವಗಂಗೆ ಮೊದಲಲ್ಲಿ ಸನ್ಯಾಸಿ ಮಠವು, ಸನ್ಯಾಸಿ ಮಠದಲ್ಲಿ ಜಂಗಮನಿರುತಾನೆ, ಜಂಗಮನಿಗೆ ಕೊಟ್ಟೀಗ ಲಗ್ನಾ ಮಾಡಯ್ಯಾ’ ಎನ್ನುತ್ತಾಳೆ. ಅವನಿಗೆ ಉಣ್ಣೋಕೆ ತಣಿಗಿಲ್ಲ, ಹತ್ತೋಕೆ ಕುದುರಿಲ್ಲ, ಮಲಗೋಕೆ ಮಂಚವಿಲ್ಲ ಎಂದು ತಂದೆ ಬುದ್ಧಿ ಹೇಳಿದರೆ ಅವನನ್ನೇ ಕುರಿತು ಹಠಕ್ಕೆ ಬೀಳುತ್ತಾಳೆ ಗೌರಿ. ಅವಳು ಹಿಡಿದ ತಪಸ್ಸು ಶಿವನಿಗೆ ಮುಟ್ಟಿ ’ಗುರು ಧರ್ಮ ಕೋರಣ್ಯಾ ಭಿಕ್ಷಾ ನೀಡೆಂ’ದು ಶಿವ ಜಂಗಮರೂಪಿನಲ್ಲಿ ಮೈದೋರಿ ’ನಡಿಯಾಲೆ ಗೌರಿ ಮಠಕೆ ಹೋಗೋಣ’ ಎಂದು ಕರೆಯೊಯ್ಯುತ್ತಾನೆ. ಇದರಿಂದ ಸಂತಸಗೊಂಡ ತಾಯ್ತಂದೆಯರು ’ಆಕಾಶವೇಣಷ್ಟು ಚಪ್ಪರ ಹಾಕಿ, ಭೂಮಿ ತಾಯಷ್ಟು ಹಸೆ ಜಗುಲಿ ಬರೆದು, ದೇವದೇವೊಕ್ಕಾಲ ಅಲ್ಲಿಗೆ ಕರೆಸಿ’ ಗೌರಿಯನ್ನು ಧಾರೆಯೆರೆದು ಕೊಡುತ್ತಾರೆ. ಹೀಗೆ ಮನೆಮಗಳು ಗೌರಿ ಶಿವನ ಮಡದಿಯಾಗುತ್ತಾಳೆ.

ಮನೆಮಗಳು ಗೌರಮ್ಮ ತವರಿನಲ್ಲಿ ಹಲವರಿಗೆ ಅಕ್ಕ, ಕೆಲವರಿಗೆ ತಂಗಿ, ಕೆಲವರಿಗೆ ತಾಯಿ. ಮನೆಮಂದಿಯೆಲ್ಲರೂ ಆಕೆಯನ್ನು ಬೀಳ್ಕೊಡುವ ಪರಿಯೇ ಚಂದ

ಹೋಗ ಗೌರಮ್ಮ ನಿನಗ ನಾ ಒಂದ್ಹೋಳಿಗಿ ಮಾಡಿದೆನs |
ಮಾದೇವನ್ಹೆಂಡತಿ ಮಡದಿ ಗೌರಮ್ಮಗೊಂದಾರತಿ ಬೆಳಗಿದೇನ ||
ಅಕ್ಕ ಗೌರಮ್ಮ ನಿನಗs ನಾ ಒಂದು ಅಕ್ರತಿ ಮಾಡಿದೇನ |
ಅಡಕಿಯ ಹಣ್ಣ ಉಡಿತುಂಬಿ ಮಂಗಳಾರುತಿ ಬೆಳಗಿದನ ||
ತಂಗಿ ಗೌರಮ್ಮ ನಿನಗs ನಾ ಒಂದು ಚೆಂದವ ಮಾಡಿದೆನ |
ನಿಂಬಿಯ ಹಣ್ಣು ಉಡಿತುಂಬಿ ಮಂಗಳಾರುತಿ ಬೆಳಗಿದೇನ ||
ತಾಯಿ ಗೌರಮ್ಮ ನಿನಗs ನಾ ಒಂದು ಛಾಯವ ಮಾಡಿದೆನs |
ಬಾಳಿಯ ಹಣ್ಣು ಉಡಿತುಂಬಿ ಮಂಗಳಾರುತಿ ಬೆಳಗಿದೆನ ||
ಆರುತಿ ಬೆಳಗಿದೇನs ನಾ ಒಂದಾರುತಿ ಬೆಳಗಿದೆನ |
ಮಾದೇನ್ಹೆಂಡತಿ ಮಡದಿ ಗೌರಮ್ಮಗೊಂದಾರುತಿ ಬೆಳಗಿದೆನ ||

ಮನೆಮಗಳು ಸಿರಿಗೌರಿ ನಮ್ಮೆಲ್ಲರ ಮನಗಳಲ್ಲಿ ನಲಿಯುತ್ತಿರಲಿ.

ಗೌರೀಹಬ್ಬ

ಗೌರೀ–ಗಣೇಶ ಹಬ್ಬ ನಮ್ಮ ನಾಡಿನ ಪ್ರಮುಖ ಹಬ್ಬ. ಶಿವನ ಮಡದಿಯೇ ಗೌರಿ; ಅವಳು ಗಣೇಶನ ತಾಯಿಯೂ ಹೌದು. ಅಮ್ಮ ಮತ್ತು ಮಗ ಭೂಲೋಕಕ್ಕೆ ಜೊತೆಯಾಗಿ ಬರುವುದು ವಿಶಿಷ್ಟವಾಗಿದೆ. ಕುಟುಂಬದ ಒಳಿತಿಗಾಗಿ ಗೌರೀವ್ರತವನ್ನು ಆಚರಿಸಲಾಗುತ್ತದೆ. ಇದನ್ನು ಸ್ವರ್ಣಗೌರೀವ್ರತ ಎಂದೂ ಕರೆಯುತ್ತಾರೆ. ಪಾರ್ವತಿ, ಉಮಾ, ಭವಾನಿ, ದುರ್ಗಾ, ಅಂಬಿಕಾ, ಅಪರ್ಣಾ, ಅನ್ನಪೂರ್ಣಾ, ಗಿರಿಜಾ, ಶಾಂಕರೀ – ಹೀಗೆ ಗೌರಿಗೆ ಹಲವು ಹೆಸರುಗಳು.

(ಜಾನಪದಗೀತೆಗಳ ಆಕರ:ಜಾನಪದ ಕಥನ ಗೀತೆಗಳು - ಸಂ. ಕರಾಕೃ; ’ಹಬ್ಬದ ಹಾಡುಗಳು’ (ಸಂಪುಟ 2) - ಸಂ. ಡಿ. ಬಿ. ನಾಯಕ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.