ADVERTISEMENT

ಬಸವಜಯಂತಿ ಪ್ರಜಾವಾಣಿ ವಚನ ಸ್ಪರ್ಧೆ: ಆಯ್ದ ವಚನಗಳು, ಬಹುಮಾನಿತರ ವಿವರ ಇಲ್ಲಿದೆ

ಪ್ರಜಾವಾಣಿ ವಿಶೇಷ
Published 21 ಮೇ 2021, 12:14 IST
Last Updated 21 ಮೇ 2021, 12:14 IST
ವಚನಕಾರ ಬಸವಣ್ಣ–ಸಾಂದರ್ಭಿಕ ಚಿತ್ರ
ವಚನಕಾರ ಬಸವಣ್ಣ–ಸಾಂದರ್ಭಿಕ ಚಿತ್ರ   

‘ಎಲ್ಲಿಂದ ಬಂತೊ ಈ ಕರೋನವಯ್ಯಾ
ಇದರಿಂದ ನಾ ಪಾರಾಗೋದು ಹೇಗಯ್ಯಾ'

ಈ ಬಸವಜಯಂತಿಯಂದು, ವಿಶಿಷ್ಟ ರೀತಿಯಲ್ಲಿ ವಚನಗಳನ್ನು ಬರೆದು ವಚನ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು. ಅತ್ಯುತ್ತಮ ಎನಿಸಿದ 34ರಲ್ಲಿ 20 ವಿಜೇತರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಲಾಗಿದೆ.ಆಯ್ದ ವಚನಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಅವರನ್ನು ಸಂಪರ್ಕಿಸಿ, ₹500 ಮೌಲ್ಯದ ಗಿಫ್ಟ್‌ ವೌಚರ್‌ ತಲುಪಿಸಲಾಗುತ್ತದೆ.

ಪ್ರಸಕ್ತ ಕೊರೊನಾ ಸಮಸ್ಯೆ, ಅದರ ಬಗ್ಗೆ ಯಾವುದೇ ಉಪಯುಕ್ತ ಮಾಹಿತಿಗಳು, ದೇಶದಲ್ಲಿನ ಕೋವಿಡ್‌–19 ಪರಿಸ್ಥಿತಿ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು, ಜನಜೀವನದ ಮೇಲೆ ಆಗಿರುವ ಪರಿಣಾಮಗಳು,..ಹೀಗೆ ಸಾಕಷ್ಟು ವಿಷಯಗಳನ್ನು ಪ್ರಸ್ತಾಪಿಸಿ, ಆ ಯಾವುದರ ಬಗ್ಗೆಯಾದರೂ ಕನಿಷ್ಠ 4 ಸಾಲುಗಳನ್ನು ವಚನ ಶೈಲಿಯಲ್ಲಿ ಬರೆದು ಮೇ 15ರೊಳಗೆ ಕಳುಹಿಸುವಂತೆ ಕೇಳಲಾಗಿತ್ತು.

ADVERTISEMENT

20 ಅದೃಷ್ಟಶಾಲಿಗಳು ಮತ್ತು ಆಯ್ದ ವಚನಗಳು ಇಲ್ಲಿವೆ–

1. ಪ್ರಶಾಂತ್ ಕೆ ಸಿ, ಚಾಮರಾಜನಗರ

ಕೊರೊನಾದ ಮೂಲ ಕುತಂತ್ರಿ ಚೀನಾವಯ್ಯ,
ಉಲ್ಬಣಿಸಿದುದು ಸರಕಾರದ ಅನೀತಿವಯ್ಯ,
ವ್ಯಾಪಿಸಿದುದು ಜನರ ನಿರ್ಲಕ್ಷ್ಯತೆಯಿಂದಯ್ಯ,
ಒಂದು - ಎರಡು - ಮುಂದೆ ಮೂರನೇ ಅಲೆ ಎಂದು ವಿಭಜಿಸಿದುದು ತಙೢರಿಂದಯ್ಯ,
ಸಾರ್ವತ್ರಿಕ ಲಸಿಕಾಕರಣದಿಂದ ಇದರ ಕೊನೆಕಾಣಬಹುದಯ್ಯ,
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ ಮಾಡಲೇಬೇಕಾದ ಕಾರ್ಯವಯ್ಯ

2. ಗೌರೀಶ ನಾಯಕ ಶಿರಗುಂಜಿ, ಅಂಕೋಲಾ, ಉತ್ತರ ಕನ್ನಡ

ಕೊರೊನವೆಂದು ಆಸ್ಪತ್ರೆ ಸೇರಿ ಸತ್ತರೆ ಮೂರು ಲಕ್ಷ ಕೋಡದೆ ಹೆಣ ಬಿಡೆವೆಂದರು
ಹದಿನೈದು ಸಾವಿರ ಕೊಡದೇ ವಾಹನವಿಲ್ಲವೆಂದರು
ಮೂವತ್ತು ಸಾವಿರ ಕೊಡದೇ ಮಣ್ಣ ಮಾಡೆವೆಂದರು
ಹೆಣದ ಮೇಲೆ ಹಣ ಮಾಡುವ ನೀಚಾತಿನೀಚರ ಕಾಲ
ಕಲಿಗಾಲ ಕಡುಕಷ್ಟಕಾಲ ದಿಟವಯ್ಯಾಶ್ರೀ ಶಿರಗುಂಜಿ ಭಕ್ತಪ್ರಿಯ ಪರಮೇಶ್ವರ.

3. ಸುಪ್ರೀತಾ ಆರ್ ಇಂಗಳಳ್ಳಿ, ಗದಗ (ತಾ), ಗದಗ(ಜಿಲ್ಲೆ)

ಅತ್ತ ಇತ್ತ ಹೋಗದಂತೆ ಮನಸನು ಗಟ್ಟಿ ಮಾಡಯ್ಯ ತಂದೆ ,
ಅನಾವಶ್ಯಕ ತಿರುಗಿ ಕೊರೋನಾ ಹಚ್ಚಿಕೊಳ್ಳದಂತೆ ಮಾಡಯ್ಯ ತಂದೆ ,
ತಪ್ಪದೆ ಮಾಸ್ಕನು ಧರಿಸುವ ಬುದ್ಧಿಯನು ಕೊಡಯ್ಯ ತಂದೆ ,
ನಮ್ಮ ಮನೆಯೇ ಗುಡಿಯಲ್ಲದೇ ,ಅನ್ಯ ಸ್ಥಳಕ್ಕೆ ಹೋಗದಂತೆ ಇರಿಸು ತಂದೆ ,
ಲಸಿಕೆ ಹಾಕಿಸಿ ಕೊಂಡು ಕ್ರೂರಿ ಕರೋನಾದಿಂದ ಪಾರಾಗುವಂತೆ ಮಾಡಯ್ಯ ತಂದೆ .

4. ನಯನಾ ಜಿ.ಎಂ., ಶಿವಮೊಗ್ಗ

ರೋಗವ ಹರಡುವವರು ನಾವೇ.
ಅದ ನಾವು ತಡೆಯದಿದ್ದರೆ ಸಾವೇ.
ಅನವಶ್ಯಕವಾಗಿ ಹೋಗದಿರೋಣ ಹೊರಗೆ.
ತರದಿರೋಣ ವ್ಯೆರಸ್ ನ ಒಳಗೆ.
ಅಂತರ-ಮಾಸ್ಕು-ಶುಚಿತ್ವ.
ಆಗಲಿ ದೈನಂದಿನ ಜೀವನ ತತ್ವ.
ಪಾಲಿಸೋಣ ಸರ್ಕಾರದ ಎಲ್ಲ ನಿಯಮ.
ಹಾಕೋಣ ಸಾಂಕ್ರಾಮಿಕಕ್ಕೆ ಪೂರ್ಣವಿರಾಮ.

5. ಭರಮೇಶಗೌಡ ಪಾಟೀಲ, ಹಾವೇರಿ

ಜಗದ ಮೂಲೆಯೊಂದರಲ್ಲಿ ಹುಟ್ಟಿತಲ್ಲೋ !
ವೈರಾಣು ಈ ಕರೋನಾ.
ಕಾಣದೇ ಜಗಜಗವೆಲ್ಲಾ ಹರಡಿತಲ್ಲೋ !
ಹೈರಾಣು ಈ ಜೀವನಾ.

ಈ ನೆರವಿಯ ಗೊಡವಿ ಬಿಡ, ಮನೆಯೇ ದೇವರ ಗುಡಿಯ ನೋಡ !
ಈ ಬದುಕು ಸುಂದರ ಇದ್ದರೆ ಅಂತರ , ಇದುವೇ ಸತ್ಯ ಇರಲಿ ನಿತ್ಯ !

ಭರದಲ್ಲಿರೋ ರೋಗ ಭಾರದಂತಿರಬೇಕೇ!
ಧರಿಸಬೇಕಲ್ಲವೇ ಮುಖಗವಚ !
ಹಾಕಿಸಿಕೋ ಸಂಜೀವಿನಿ ಲಸಿಕೆ
ಪಾಲಿಸಬೇಕು ಸರಕಾರಿ ನಿಯಮ !

ಹೇ ಮನುಜ ಹೆದರಿ ಎದೆಗುಂದಬೇಡಾ, ಹೋರಾಟ ಮನದಿಂದ ಇರಬೇಕ ನೋಡ !
ಹೇಳಿದ್ದು ಮನವಿಟ್ಟು ಮಾಡಿನೋಡ,ಕಾಣದ ಕರೋನಾ ಕಾಣೆಯಾಗುತ್ತ ನೋಡ !

6. ಪೂರ್ಣಿಮಾ ಗುರುದೇವ್ ಭಂಡಾರ್ಕರ್, ಹೊಸನಗರ (ಶಿವಮೊಗ್ಗ ಜಿಲ್ಲೆ)

ಉಳ್ಳವರು ಸೇರುವರಯ್ಯ ಸುಸಜ್ಜಿತ ದವಾಖಾನೆಗೆ ಈ ಕೊರೋನ ಕಾಲದಿ
ನಾನೇನು ಮಾಡಲಿ ಕೂಲಿ ನಾಲಿ ಮಾಡುವ
ಬಡವನಯ್ಯ?
ಎನ್ನ ದೈನಂದಿನ ಕಾಯಕವೇ ಮನೆಗೆ ಆಧಾರ
ಸ್ತಂಭ;ಮನೆಯೇ ದೇಗುಲ

ಸಂಸಾರದ ನೊಗ ಹೊತ್ತ ಶಿರವೇ ಹೊನ್ನ
ಭೂಷಣ ವಯ್ಯ!

ಓ ಮಾನವ ಜೀವಿ ಕೇಳಯ್ಯ
ಇಳೆಗಳಿವುಂಟು ಭೂ ಮಂಡಲದಿ ಜೀವಿಗಳಿವಿಲ್ಲ!

7. ಮುರಿಗೆಪ್ಪ ರಾ ಕುಬಸದ, ಬೆಂಗಳೂರು ಉತ್ತರ ಜಿಲ್ಲೆ

‌ಎಲ್ಲರ ಜೀವ ಜೀವನಕೆ ಭಯ ತರಿಸಿದೆ ಕರೋನ
ಪರಿಸರ ಹಾಳು ಮಾಡಿದವರ್ ಉಸಿರು ಕಸಿಯುವ ಕರೋನ

ಸಂತಸದ ಸಮಾರಂಭ ಗಳಿಗೆಲ್ಲ ಶಿವಾರ್ಪಣ
ದ್ವಿತೀಯ ಅಲೆಯಲ್ಲಿ ತಂದಿದೆ ನಿರಂತರ ಭಯ ಆಕ್ರೋಶ ಎಲ್ಲರಿಗೂ ಗೃಹಬಂಧನ
ತಿರುಗಾಟಕ್ಕೆ ನಿಯಂತ್ರಣ,ವ್ಯವಹಾರ
ಪುರೋಹಿತಶಾಹಿಗೆ ಕಡಿವಾಣ.
ರಸ್ತೆಗಳಲ್ಲಿ ಇಲ್ಲ ವಾಹನಗಳ ಆರ್ಭಟ
ಕೇವಲ ಸ್ಮಶಾನದಲ್ಲಿ ಸರದಿಯ ನಿಯಂತ್ರಣ.
ಜನಪ್ರಿನಿಧಿಗಳಿಗೆ ಅಧಿಕಾರಿಗಳಿಗೆ ತಂದಿದೆ ಎಚ್ಚರಿಕೆ.
ಕಳೆದೆರಡು ವರ್ಷಗಳಿಂದ ನಿರಂತರ ಅನ್ವೇಷಣ,ಆದ್ರೂ ನಿನಗಿಲ್ಲ ಕಡಿವಾಣ.

ಸತ್ತವರ ಕುಟುಂಬವರ್ಗ ಕ್ಕಿರಲಿ ಸಮಾಧಾನ. ಎಲ್ಲ್ಲಾರ್ ಮೂಗಿಗಿರಲಿ
ಮಾಸ್ಕಿನ ಮತ್ತು ಸಾನಿಟ್ಟಿ ಜರಿನ ರಕ್ಷನೇ.
ಲಸಿಕೆ ಹಾಕುವ ವರೆಗೆ ಇರಲಿ ಜಾಗ್ರತೆ.

ಕರೋನ ಎಚ್ಚರ, ಎಚ್ಚರ ಬರ್ತಿವೆ ಲಸಿಕೆ ಸಾಲು ಸಾಲಾಗಿ
ಅಮರೇಶ್ವರ ನಾಣೆ. ಕಳಿಸಲು ನಿನ್ನನು ಶಾಶ್ವತವಾಗಿ.

8. ವಿಜಯಕುಮಾರ ಕೆ.ಎನ್, ಶಿಕಾರಿಪುರ

ಕೊರೋನವೆಂಬ ಕಾಣದಣುವೊಂದು ಕಾಯಗಳಾ ಕಾಯಿಲೆಗೆ ಕೆಡಹಿತ್ತು ಕಾಣಾ

ಸೋಂಕಿನ ಸಂಕೋಲೆಗೆ ಸಕಲವೂ ಸಿಲುಕಿ ಸಾವಿನ ಸಂಕಟವು ಸುಳಿದಿತ್ತು ನೋಡಾ

ದಿಗ್ಭಂದನದ ದಿನಮಾನ ನಿರ್ಬಂಧಗಳ ನಿಟ್ಟುಸಿರು ನಾಡಿನಾ ನೆಮ್ಮದಿಯು ನೀಗಿತ್ತು ನೋಡಾ

ಅಲೆಯಲೆಯ ಕಾಯಿಲೆಗೆ ಅಲುಗಾಡಿ ಜೀವಗಳು
ಪ್ರಾಣವಾಯುವಿಗಾಗಿ ಪರದಾಡಿದವು ಕಾಣಾ

ಹಿರಿಕಿರಿಯರೆನ್ನದೆ ಧರ್ಮಜಾತಿಗಳೆನದೆ ರೋಗಾಣು ರೌರವವ ರಚಿಸಿತ್ತು ನೊಡಾ

ದೇಗುಲಗಳು ಮುಚ್ಚಿದವು ಮಸೀದಿಗಳು ಬೆಚ್ಚಿದವು ಚರ್ಚಿನಲಿ ಬೇಡಿಕೆಯ ಚರ್ಚೆಯಿಲ್ಲ

ದವಾಖಾನೆಗಳು ಮಾತ್ರ ದಿನಗಳನು ದೂಡಿದವು ಮದ್ದುಗಳ ಸದ್ದುಗಳ ದರ್ದಿನಲ್ಲಿ

ಆಳುವರ ಆಲಕ್ಷ್ಯ ನಿಲುವುಗಳ ನಿರ್ಲಕ್ಷ್ಯ ಲಕ್ಷಲಕ್ಷಕೆ ಸೋಂಕು ಸಿಡಿದಾಯಿತು

ಉಳ್ಳವರು ಉಳಿಯರು ಬಲ್ಲಿದರು ಬಲಿಯರು ಮಾನವತೆ ಮಾತ್ರವೇ ಮದ್ದಾಗಿ ಮಿಡಿಯಲಿ

ಜಾತಿಧರ್ಮವ ಮೀರಿ ಜಾಗೃತಿಯ ಜತೆಯೇರಿ ಜೊತೆಯಾಗಿ ನಿಲ್ಲೋಣ ಜಟಿಲತೆಯಲಿ

ತನುವೊಳಗೆ ಎಚ್ಚರಿಕೆ ಮನದೊಳಗೆ ವಿಜ್ಞಾನ ಭರವಸೆಯ ಬದುಕಿನ ವಿಶ್ವಾಸವಿಟ್ಟಿರಲು

ಸೃಷ್ಟಿಯ ಸಣ್ಣಕಣ ವೈರಾಣುವನ್ನು ವಿಸರ್ಗದೆಡೆಗೆ ವಿಮುಕ್ತಗೊಳಿಸಬಹುದೆಂದ ವಿಜಯಶಿಕಾರಿ.

9. ನರೇಶ ಪವಾರೆ, ಬೆಂಗಳೂರು

ಉಳ್ಳವರು ಹಾಸ್ಪಿಟಲ್ ಬೆಡ್ ಗಿಟ್ಟಿಸುವರು,
ನಾನೇನು ಮಾಡಲಿ ಬಡವನಯ್ಯಾ?
ನನ್ನ ಮನೆಯ ಚಾಪೆಯೇ ಬೆಡ್ಡ್, ಹರಿದ ಕರ್ಚೀಪೇ ಮಾಸ್ಕು,
ಮನೆ ಹೊರಗಿನ ಹೊಂಗೆ ಮರವೇ oxygen ಸಿಲಿಂಡರ್ ಕಣಯ್ಯ,
ಅಯ್ಯೋ ನಮೋ ಕೇಳಯ್ಯ, ನಿಮ್ಮ ಭಕ್ತರ ನರಳಾಟದ ಪರಿ..

10. ಶಾರದಾ ಅನಿಲಕುಮಾರ, ಕಲಬುರಗಿ

ಜಗವ ಸುತ್ತಿರುವದು ಕರೋನ ವಯ್ಯಾ,
ನಿಮ್ಮ ಸುತ್ತಿರುವದು ಎನ್ನ ಮನ ನೋಡಯ್ಯಾ,
ಎರಡು ಡೋಸ್ ಲಸಿಕೆ ಪಡೆದಿರುವೆನಯ್ಯಾ,
ಹೊರಗೆ ಅಡಿ ಇಟ್ಟಾಗ ಮಾಸ್ಕ್ ಹಾಕುವೆನಯ್ಯಾ,
ಅಂತರ ಕಾಪಾಡುವೆನಯ್ಯಾ,
ವೈಯಕ್ತಿಕ ಸಾಮಾಜಿಕ ಸ್ವಚ್ಛತೆ ಪಾಲಿಸುವೆನಯ್ಯಾ,
ಜೊತೆಗೆ ನಿಮ್ಮ ಕರುಣೆ ನನ್ನ ಮೇಲಿರುವಾಗ ಈ ಕರೋನಕ್ಕೆ ನಾನೇಕೆ ಅಂಜಲಯ್ಯಾ,
ನನ್ನ ಮುದ್ದಿನ ಬಸವಯ್ಯಾ.

11. ಶಿವನಗೌಡ, ಬೆಳಗಾವಿ ಜಿಲ್ಲೆ

ಜಗ ಹೊತ್ತಿ ಉರಿಯುತಿದೆ ಜ್ಯೋತಿಯ ಕಿಡಿಯಿಂದಲ್ಲ,
ಮಹಾಮಾರಿಯ ದಿಟ್ಟತನದ ಪ್ರಕೃತಿಯ ಸೇಡಿನಿಂದ...
ಜಗ ಅಳಿದು ಹೋಗುತಿದೆ ಯಾರದೋ ಕೆಡಕಿನಿಂದಲ್ಲ,
ಎನ್ ಮಾನವ ಕುಲ ಎಸಗಿದ
ಹೇಸಿಗೆ ಕೃತ್ಯ ಕರ್ಮಗಳ ಪಾಪದಿಂದ!!
ರಕ್ಷಕರ ಹಣಾಹಣಿಗೆ ಸ್ಪಂದಿಸುವ ತಾಳ್ಮೆ ಇಲ್ಲದಿದ್ದೊಡೆ..
ತನ್ ಮನದ ಅರಿವು ಮರೆತು
ಸಂಸಾರದ ಉಳಿವು ಅಳಿವಿನ ಚಿಂತೆ ಮಾಡದಿದ್ದೊಡೆ..
ಇಂತಿ ಅಸಹಜ ಸಮಯದೊಳ್
ಪರಸ್ಪರ ಸಹಾಯ ಮಾಡದಿದ್ದೊಡೆ..
ನರಕ ಬಿಟ್ಟಿದ್ದಲ್ಲ ನಿನ್ನ ಬೆನ್ನ ಹತ್ತಲು
ಇನ್ನಾದರೂ ಬದಲಾಗೋ ಬುದ್ಧಿಗೇಡಿ ನರಪೇತನೇ...
ಕೈಗೂಡಿಸು ನೀನು ಧೈರ್ಯದಿಂದ
ಎತ್ತಂಗಡಿ ಮಾಡೋಣ ಕೊರೋನವ ಜಗದಿಂದ..
ನಾ ನಿನ್ನಲ್ಲಿ ಬೇಡುವೆನು ಕೈಮುಗಿದು
ಇವೆಲ್ಲ ಕವಭಕ್ಷಗಳ ಕೃತ್ಯಗಳ ನಿನ್ನ ಒಡಲೊಳಗೆ ಅಡಗಿಸಿಕೊಂಡು,
ಸಕಲ ಜೀವಂಗಳ ಜೀವ ಉಳಿಸಿ
ಸುಂದರ ಪ್ರಕೃತಿಯ ಮರಳಿ ಕೊಡು
ಎನ್ ಮನದ ದೈವ ಪರಮೇಶ್ವರ!!!

12. ಗಾಯತ್ರಿ ಶ್ರೀಧರ್, ಚಿಕ್ಕಮಗಳೂರು.

ರವಿ ಕಾಣದ ಕವಿ ಕಾಣದ ಅಣುವಯ್ಯ ಈ ಕೋರೋನಾ!
ಮುಖ ಮುಚ್ಚದೆ, ಕೈ ತೊಳೆಯದೆ ಇಲ್ಲವಯ್ಯ
ಮುಂದಿನ ಜೀವನ!
ಅಂತರ ಕಾಪಾಡುವುದು, ಸರಕಾರಕ್ಕೆ ಸಹಕರಿಸುವುದು
ಬದುಕುವ ಲಕ್ಷಣವಯ್ಯ,
ಅಲಕ್ಷಿಸಿದರೆ, ಶಿಕ್ಷೆ ಖಚಿತ, ನಾವಾಗುವೆವು ಈ
ಕೋರೋನಾಕ್ಕೆ ಭಕ್ಷಣವಯ್ಯ!!!

13. ಮನು.ಸಿ.ಆರ್, ಬೆಂಗಳೂರು

ಕಳಬೇಡ, ಕೊಲಬೇಡ
ಮಾಸ್ಕ್ ಧರಿಸದೆ ಹೊರಬರಬೇಡ,
ಸಾಮಾಜಿಕ ಅಂತರವ ಮಾರಿಬೇಡ,
ಗುಂಪಿನಲ್ಲಿ ಸೇರಬೇಡ,
ಸ್ಯಾನಿಟೈಸರ್ ಬಳಸುವುದ ಮಾರಿಬೇಡ,
ಸಕಾ೯ರದ ಸೂಚನೆಗಳ ಗಾಳಿಗೆ ತೂರಬೇಡ,
ವೈದರ ಸಲಹೆಗಳ ನಿಲ೯ಕ್ಷಿಸಬೇಡ,
ಲಸಿಕೆ ಹಾಕಿಸುವುದ ತೊರಿಬೇಡ,
ಸುಮ್ಮನೆ ಹೊರಗೆ ತಿರುಗಬೇಡ,
ವಾರಿಯಸ್೯ಗಳ ಶ್ರಮವ ವ್ಯಾಥ೯ ಮಾಡಬೇಡ,
ಅಶಕ್ತರಿಗೆ ಸಹಾಯ ಮಾಡುವುದ ಬಿಡಬೇಡ,
ಸೂಚನೆಗಳ ಪಾಲಿಸುವುದೇ ಅಂತರಂಗ ಶುದ್ಧಿ,
ಸ್ಯಾನಿಟೈಸರ್ ಬಳಸುವುದೇ ಬಹಿರಂಗ ಶುದ್ಧಿ ,
ಇದೆ ಕೊರೊನಾವನ್ನು ಓಡಿಸುವ ಪರಿ.

14. ಶ್ರೇಯಸ್ ಟಿ ಎಸ್, ತುಮಕೂರು.

ಕಾಣದ ಕ್ರಿಮಿಗಂಜಿದೊಡೆ – ಕರದ್ರವ್ಯ, ವದನವಸ್ತ್ರ,
ಅಂತೆಯೇ ದೂರದಂತರ, ಲಸಿಕೆಯುಂಟಯ್ಯಾ.
ಆದರೆ ಕಾಡುವ ರೋಗಕ್ಕೆ ಮದ್ದು, ಇಳಿವ ಉಸಿರ್ಗೆ ವಾಯು,
ಕೊನೆಗಳಿವ ಕಾಯಕ್ಕೆ ಸಂಸ್ಕಾರ, ನೊಂದ ಜೀವಕ್ಕೆ ಸಾಂತ್ವಾನವೆಲ್ಲಯ್ಯಾ?

ಲಜ್ಜೆ ಬಿಸುಟ ಕಾಳಕೋರರಿಗೆ ತಿಳಿಯ ಹೇಳುವವರಾರು?
ಬರಿದಾದ ಒಡಲ್ಗೆ ಚೈತನ್ಯ ತುಂಬುವವರಾರು?
ಒಡೆದಂತಃಕರಣದ ಚೂರುಗಳ ಪೇರಿಸುವವರಾರು?
ಮಾನವತೆಯೇ ಮಡಿಯೆ ಸಂಜೀವಿನಿ ತರುವವರಾರು?

ರೋಗ – ನರಳಾಟ, ಸಾವು – ನೋವು, ನಾವು – ನೀವುಗಳು ಶಾಶ್ವತವಲ್ಲ;
ಉಪಕಾರ ಮಾಡದೊಡೆ ಸರಿಯೇ, ಉಪಟಳ – ಅಪಕಾರಗಳು ಮಾತ್ರ ತರವಲ್ಲ.
ಅಜ್ಞಾನ ಅಳೆದು, ಜ್ಞಾನ – ವಿಜ್ಞಾನ - ಕಾರುಣ್ಯ ಬೆಳೆಯಲಯ್ಯಾ;
ಸರ್ವರಾತ್ಮದ ಒಡೆಯ ಮನುಕುಲಕೆ ಸತ್ಪಥವ ತೋರಿಸಯ್ಯಾ

15. ವೀಣಾ ಕುಂಬಾರ, ವಿಜಯನಗರ ಜಿಲ್ಲೆ

ಜನರ ಸ್ವಾತಂತ್ರವನ ಕಸಿದಿದೆಯಯ್ಯ
ಇದ ನೋಡಿಸಲು ಸರಕಾರದ ಲಾಕ್ ಡೌನಯ್ಯ
ಮದುವೆ ಎಂಬ ಜೀವನಕೆ ಕಾಲಿಡಲು ಪರದಾಟವಯ್ಯ
ಇದರಿಂದ ನಮಗೆಂದು ಮುಕುತಿ ನೀ ಹೆಳಯ್ಯ

16. ಮಲ್ಲೇಶ್ ಎನ್ ಕುಂಬಾರ, ಬೆಳಗಾವಿ

ಗ್ರಾಮೀಣ ಆಶಾ ಕಾರ್ಯಕರ್ತೆಯರು ಪ್ರಾರಂಭದಲ್ಲಿ
ಮನೆ ಮನೆಗೆ ಬಂದು ಕರೆದರಯ್ಯ
ಕೊವಿಡ್ ಲಸಿಕೆ ಬಂದಿದೆ ಹಾಕಿಸಿ ಕೊಳ್ಳಿ ಎಂದರಯ್ಯ
ನಮ್ಮ ಉದಾಸೀನವೇ ನಮಗೆ ಮುಳುವಾಯಿತಯ್ಯ
ಅಣ್ಣ ಬಸವಣ್ಣ ಇದು ಎಂಥಾ ರೋಗವಣ್ಣ
ಬಡವ ಬಲ್ಲಿದ ಎಣ್ಣದಯ್ಯ
ಅಲೆ ಅಲೆಯಾಗಿ ಅಪ್ಪಳಿಸಿ ಜನರ ಉಸಿರು ನಿಲ್ಲಿಸುವ
ಕಣ್ಣಿಗೆ ಕಾಣದ ಈ ರೋಗವಯ್ಯ
ಇದು ಬಂತಾದರೂ ಹೇಗಾಯ್ತು ದೂರವಾಗೂವದೂ ಎಂದರಯ್ಯ
ನೀ ಪರಿಹರಿಸು ಕೂಡಲಸಂಗಯ್ಯ.

17. ವಿಶೇಷ ಬಿ., ಬಾಗಲಕೋಟೆ ಜಿಲ್ಲೆ.

ಭೂಮಿಗೆ ಭಾರವೆಂದು ಕರೋನ ಕರೆಸಿದಳಾ ಪ್ರಕೃತಿ
ಬರಬೇಕಾದ್ದೇ ಗಿಡ ಕಡಿದ ಪಾಪಿಗಳಿಗೀ ದುರ್ಗತಿ
ಕಲಿತೇವೇ ಇನ್ನಾದರೂ ನಿಸರ್ಗ ಪಾಠ ಸಂಸ್ಕೃತಿ
ಗುರುದೇವ ಆಟ ನಿಲಿಸು ಇಲ್ಲಾ ಮುಗಿಸು ಕೊಡು ಮುಕ್ತಿ.

18. ಶ್ರೀದೇವಿ ,ಬೆಂಗಳೂರು

ಹೇ ಕರೋನಾ"
ನೀ ಬಂದಿಹೆ ಜಗತ್ತಿಗೆ ಕ್ರೂರಿಯಾಗಿ
ನಿಂದೆಹೆ ಎಲ್ಲೆಡೆ ಕೊಲ್ಲುತ್ತಾ ಮಾರಿಯಾಗಿ
ಅಸಡ್ಡೆ ಮಾಡಿದವಾಗೆ ನೀ ಕೊಡುವೆ ಶಿಕ್ಷೆ.
ಮಾಸ್ಕ ಹಾಕಿದವರಿಗೆ ಇದೆ ಹರನ ರಕ್ಷೆ
ಇಂದಿನಿಂದಲೆ ಆರಂಭವಾಗಲಿ ನಿನ್ನಯ ಕ್ಷಯ
ವಾಕ್ಸಿನ್ ನೀಡಿದೆ ನಮ್ಮೆಲ್ಲರ ಬದುಕಿಗೆ ಅಕ್ಷಯ
ಬಹು ಬೇಗ ಮತ್ತೆ ಬರಲಿ ನಮ್ಮೆಲ್ಲರ ಜಗತ್ತು
ಎಲ್ಲಾ ಕಡೆಗಳಿಂದ ಬರಲಿ ನಿನಗೆ ಕುತ್ತು
ಶುದ್ಧ ಆಹಾರ, ಒಳ್ಳೆಯ ಆರೋಗ್ಯ ಆಗಲಿ ನಮ್ಮ ಸ್ವತ್ತು
ಓ ಕೋವಿಶೀಲ್ಡ್. ನೀ ಒಲಿದರೆ ಈ ಜಗತ್ತು ಸುಂದರ ವಯ್ಯ... ಬೇಗ ನಲಿದು ಬಾಯಾಯ್ಯ...

19. ಶೋಭಾ ಮಲ್ಲಿಕಾರ್ಜುನ್, ಚಿತ್ರದುರ್ಗ

ಕರೋನವೆಂಬುದು ಮಹಾಮಾರಿಯಯ್ಯಾ
ಬಡವ ಬಲ್ಲಿದನೆನ್ನದೆ ಕಾಡುವ ಕ್ರೂರಿಯಯ್ಯಾ
ದಯಮಾಡಿ ಜನರಿಂದ ದೂರವಿರಯ್ಯಾ
ಮುಖವ ಬಂಧಿಸಿ ಸುಖವಾಗಿರಯ್ಯಾ
ಆಗಾಗ ಸ್ಯಾನಿಟೈಜರ್ ಬಳಸುತಿರಯ್ಯ
ಕೆಮ್ಮಿ, ಉಗುಳಿ, ಸೀನದೆ ಸ್ವಚ್ಛತೆ ಕಾಪಾಡಿಕೊಳ್ಳಿರಯ್ಯಾ
ಇದೇ ಕರೋನಾ ಬರದಂತೆ ತಡೆಯುವ ಪರಿ
ಈ ರೀತಿ ಬದುಕುವುದೇ ಈಗ ಸರಿ.

20.ಅನುರಾಧಾ, ದಾವಣಗೆರೆ

ಎಂಥಾ ರೋಗವಯ್ಯಾ
ಇದು ಎಂಥಾ ರೋಗವಯ್ಯಾ
ಕೆಮ್ಮೋ ಹಾಂಗಿಲ್ಲ... ಸೀನುವ ಹಾಂಗಿಲ್ಲ...
ಒಬ್ಬರನ್ನೊಬ್ಬರು ಮುಟ್ಟೋಹಾಂಗಿಲ್ಲ...
ಮುಖವ ಮುಚ್ಚಿ ಓಡಾಡುವ ಕಾಲವಯ್ಯಾ...
'ಕೊರೊನಾ' ಅಂಥಾ ಇದರ ಹೆಸರಯ್ಯ..
ಕೋವ್ಯಾಕ್ಸಿನ್, ಕೋವಿಸೀಲ್ಡ್ ಲಸಿಕೆ ಬಂದೈತಯ್ಯಾ..
ಲಸಿಕೆ ಹಾಕ್ಕೋಳ್ರಿ ಅಂದ್ರೂ ಯೋಚಿಸ್ತಾರಯ್ಯ.
ಒಂದು..ಎರಡು ಅಲೆ ಕೊರೊನಾ ಮಕ್ಕಳಯ್ಯಾ..
ಲಸಿಕೆ ಹಾಕ್ಸೀನೀ ಅಂಥಾ ಯಾಮಾರ ಬೇಡವಯ್ಯಾ...
ಸಾಮಾಜಿಕ ಅಂತರ,ಕೈ ತೊಳ್ದು ಮಾಸ್ಕ ಹಾಕಬೇಕಯ್ಯ.
ಇಲ್ದಿದ್ರೇ...ಆಸ್ಪತ್ರೆಗಳಿಗೆ ಅಲೆಯ ಬೇಕಯ್ಯ...
ಅಲ್ಲೂ ಜೀವ ಉಳಿಯೋದು ಗ್ಯಾರಂಟಿ ಇಲ್ಲವಯ್ಯ..
ಕೊನೆಗೆ ಶಿವನ ಪಾದವೇ ನಮ್ಮ ಪಾಲಿಗಯ್ಯ..
ಇದು ಎಂಥಾ ಕಾಲ ಬಂದೈತಯ್ಯ..
ಕೂಡಲ ಸಂಗಮದೇವ ಕೇಳಯ್ಯ....

21. ಆರತಿ ರಾಜು ಬಾಗೆನ್ನವರ, ಬೆಳಗಾವಿ

ಹೊರಗಡೆ ಬರಬೇಡ,ಬಂದು ಲಾಠಿ ಏಟು ತಿನಬೇಡ.
ಕೈ ತೊಳೆಯದೆ ಉಣಬೇಡ, ಉಂಡು ನೀ ಕೆಮ್ಮಬೇಡ.
ಭಯ ಪಡಬೇಡ ನಿನಗಾಗಿ ಇರುವ ನಿನ್ನ ಕುಟುಂಬವನ್ನು ಮರೆಯಬೇಡ ಅವರಿಗಾಗಿ ನೀನು ಮಾಡಬೇಕಾಗಿರುವು ದನ್ನು ಮರೆಯಬೇಡ.
ನಾವೆಲ್ಲರೂ ಮಾನವರೆ ಹಂಚಿ ತಿನ್ನುವುದ ಬಿಡಬೇಡ. ಇದೇ ಸಧ್ಯಕ್ಕೆ ನಮಗಿರುವ ದಾರಿ ನಮ್ಮೆಲ್ಲರದು ಆಗಲಿ ಒಂದೇ ಗುರಿ.

22.ಸಚಿನ್‌ ಕೆ ತುಕರೆ, ಬೆಳಗಾವಿ

ಕರೋನಾ ಎಂಬುದೊಂದು ದೊಡ್ಡ ರೊಗವಯ್ಯಾ
ಇದಕ್ಕೆ ಒಂದೆ ಅಸ್ತ್ರ ಮಾಸ್ಕ ಸಾನಿಟೈಸರ್ ಸಾಮಾಜಿಕ ಅಂತರವಯ್ಯಾ
ದಯವಿಟ್ಟು ಯಾರು ಹೊರಗಡೆ ಬರಬೇಡಿರಯ್ಯಾ
ಹೋರಗೆ ಬಂದರೆ ಕರೊನೆಶ್ವೇರ ನಿಮ್ಮನ್ನ ಮೇಚ್ಚದೆ ಮೆಲಕ್ಕೆ ವಯ್ಯುವನಯಯ್ಯಾ

23. ಜಿ.ಹೆಚ್.ಸಂಕಪ್ಪ ಚನ್ನಗಿರಿ ಟೌನ್ .ದಾವಣಗೆರೆ ಜಿಲ್ಲೆ .

ಕೊರೋನಾ ವಚನ

(1) ಕಾಣದಾ ಕೊರೋನಾ ಬಂದಾಯ್ತು ನೋಡಿರಯ್ಯಾ । ಮುಖಗವಸು ಹಾಕಿ ಕರವ ತೊಳಿಯಿರಯ್ಯಾ । ಹಾದಿ ಬೀದಿಯನಲೆಯದೇ ಮನೆಯಲಿರಿರಯ್ಯಾ। ಇದೇ ನಿಮ್ಮ ಜೀವವುಳಿಸುವ ಪರಿಯಯ್ಯಾ ।

(2) ಕೊರೋನಾ ಸಂಗವೂ ಜನರ ಸಂಗವೂ ಬೇಡವಯ್ಯಾ। ಗೃಹಬಂಧನವೇ ಕೊರೋನಾ ಮುಕ್ತಿಗೆ ದಾರಿ ಅಹುದಯ್ಯಾ । ಕರವ ತೊಳೆದು ಮುಖಗವಸು ಧರಿಸಿ ದೂರವಿದ್ದೊಡೆ ನೋಡಯ್ಯಾ। ಕೊರೋನಾ ನಿನ್ನ ಬಳಿ ಸುಳಿಯದಯ್ಯಾ।

(3) ಬದುಕು ಮೂರಾಬಟ್ಟೆ ಆಯಿತಯ್ಯಾ । ಜಗವೆಲ್ಲ ಸಾವುಗಳ ಮರವಣಿಗೆ ನೋಡಯ್ಯಾ। ಎಲ್ಲವೂ ನೀ ಮಾಡಿದಾ ಪಾಪದಾ ಕರ್ಮಫಲವಯ್ಯಾ । ಇನ್ನಾದರು ದಯೆ ಧರ್ಮವ ಉಣಿಸಿ ಪುಣ್ಯದಾಯಿಯಾಗಯ್ಯಾ।

24. ಸಾನ್ವಿ ರಾಜು ಬಾಗೆನ್ನವರ, ಬೆಳಗಾವಿ

ಉಳ್ಳವರು ಖಾಸಗಿ ಆಸ್ಪತ್ರೆಗೆ ಹೋಗುವರಯ್ಯ.
ನಾನೇನು ಮಾಡಲಿ ಬಡವನಯ್ಯ.
ಆಳುವವರಿಗೆ ನಮ್ಮ ಕೂಗು ಕೆಳದಿರುವಾಗ ನನ್ನ ಹೆಂಡತಿಯ YouTube ಮನೆಮದ್ದೇ ಗತಿಯಯ್ಯ.
ವೋಟು ನೀಡುವವಗೆ ಈಗೆಲ್ಲಿ ಬೆಲೆಉಂಟು ನಮ್ಮ ನೋವು ಕಣ್ಣೀರಿಗೆ ಅಳಿವಿಲ್ಲವಯ್ಯ...?

25. ಎಚ್. ಎಸ್. ಮುಕ್ತಿಶ್ರೀ, ಬೆಂಗಳೂರು

ಬೆಡ್ಡಿಲ್ಲ,ಮದ್ದಿಲ್ಲ,ಪ್ರಾಣವಾಯು, ಲಸಿಕೆ ಎಲ್ಲಿಲ್ಲವಯ್ಯ|
ಶವಸಂಸ್ಕಾರಕ್ಕೆ ಕಾಯು ದಿನವೆಲ್ಲ ಅಯ್ಯಯ್ಯೊ|ಕೋರೋನಮಾರಿ,ಚೀನಾ
ರಾಯಭಾರಿ?
ಲೋಕವೆಲ್ಲ ಶೋಕ ಕ್ರೂರಿ ನಿನ್ನಿಂದ|
ಡಿಸ್ಟೆನ್ಸು,ಕ್ವಾರೆಂಟಿನು,ಲಾಕ್ಡೌನಾಯ್ತು
ಹೋದೆಯಾಪಿಶಾಚಿ....ಮತ್ತೆ ಬಂದದೇಕೆ?
ಇಲ್ಲಿಯೇ ಝಾoಡಾ ಊರಿದ್ದೇಕೆ?
ಆಳ್ವವರು ಕಂಗೆಟ್ಟು ಜನರು ದಿಕ್ಕೆಟ್ಟು
ಧರ್ಮ-ದೇವರು ಮೂಕವಾಗಿಟ್ಟು
ದೇಶವೇ ಸುಡುಗಾಡಾಗಿತ್ತು!ನೋಡಾ
ಇದಕೆಲ್ಲಾ ಕೊನೆ ಎಂದು
ಇದರಿಂದ ಮುಕ್ತಿ ಎಂದು ನೀನೆ
ವೃದ್ಧಿಗೊಂಡು ಸಾಂಕ್ರಾಮಿಕನಿಂದ
ಕಾಪಾಡೋ ಮೈ -ಬಲೇಶ್ವರಾ||

26. ರುಚಿತ ಬಿ.ವಿ, ಚಿಕ್ಕಮಗಳೂರು

ಯಾರೋ ಮಾಡಿದ ತಪ್ಪಿನಿಂದ ಕೊರೋನ ಮಾರಿ ವಕ್ಕರಿಸಿತಯ್ಯಾ
ಅಬ್ಬರಿಸಿ, ಬೊಬ್ಬಿರಿದು ನಾಡಿನ ಉಸಿರು ನಿಲ್ಲಿಸಿತಯ್ಯಾ
ಎಲ್ಲೆಲ್ಲು ಚೀತ್ಕಾರ: ಪ್ರಾಣವಾಯುವಿಗೆ ಹಾಹಾಕಾರವಯ್ಯಾ
ಚಿಣ್ಣರಾ ಶಿಕ್ಷಣ, ಬಡವರ ಬದುಕು - ಕೈತುತ್ತು ಕಸಿಯಿತಯ್ಯಾ
ಮುಖಗವುಸು ಧರಿಸಿ ಕೈ ಬಾಯಿ ಶುದ್ಧವಾಗಿರಿಸಯ್ಯಾ
ನಾಡಾಳುವ ದೊರೆಯ ಜೊತೆ ಕೈಜೋಡಿಸಯ್ಯಾ
ಹೆಮ್ಮಾರಿಯ ಓಡಿಸಲು ತನು ಮನ ಧನ ಅರ್ಪಿಸಯ್ಯಾ
ಮಹಾಮಾರಿ ಅಕ್ಷಯಗೊಳ್ಳಲು ಬಿಡಬೇಡಿರಯ್ಯಾ
ಅಜ್ಞಾನಿಗಳ ಕಣ್ಣುತೆರೆಸಿ ಸಾಮಾಜಿಕ ಸ್ವಾಸ್ಥ್ಯ ಉಳಿಸಿರಯ್ಯಾ
ಬಸವಾದಿ ಶರಣರ ಕಾಯಕವೇ ಕೈಲಾಸ ಕಾಣಿರಯ್ಯಾ
ತಲೆಗೊಂದೆರಡು ಅರಳಿ ಆಲ ಬೇವು ನೆಟ್ಟು ಪೋಷಿಸಯ್ಯಾ
ನಾಳೆಯ ಪೀಳಿಗೆಯ ಹಕ್ಕಿನ ಪ್ರಾಣವಾಯು ಉಳಿಸಿರಯ್ಯಾ
ಪ್ರಾಣವನು ಪಣಕ್ಕಿಟ್ಟು ಕಾಯಕಗೈಯುತ್ತಿರುವ
ಶಿಕ್ಷಕ, ಆರಕ್ಷಕ, ವೈದ್ಯ - ದಾದಿಯರಿಗೆ ನಮಿಸಿರಯ್ಯಾ
ಜಾತಿ - ಧರ್ಮ ಮೀರಿ ನಿಂತ ದೇಶ ಉ‌ಳಿಸಿರಯ್ಯಾ
ಇದೇ ನಮ್ಮ ದೇವ - ಅಲ್ಲಾ - ಜೀಸಸ್ ರನ್ನು ಒಲಿಸಿಕೊಳ್ಳುವ ಪರಿ ಕೇಳಿರಯ್ಯಾ.

27. ಬಿಲ್ಕರ್, ಚಾಮರಾಜ ನಗರ

ಕೆಮ್ಮಬೇಡ ಸಿನಲೂಬೇಡ.
ಅನ್ಯರಿಗೆ ಉಸಿರೂ ತಾಗಿಸಿ ಬೇಡ.
ಗುಂಪುಗೂಡ ಬೇಡ. ಮಾಸ್ಕು ಧರಿಸದೆ ಇರಬೇಡ.
ಪದೆ ಪದೆ ಕಣ್ಣು ಮೂಗು ಮುಟ್ಟು ತಿರಬೇಡ
ಸ್ಯಾನಿಟೈಜರ್ ಕೈ ತೊಳೆವುದು ಮರೆಯಬೇಡ.
ಇದೆ ಕರೋನಾ ಅಂತರಂಗ ಸುದ್ದಿ
ಇದೆ ಕರೋನಾ ಬಹಿರಂಗ ಸುದ್ದಿ
ಇದೇ ಕರೋನಾ ಓಡಿಸುವ ಪರಿ

28.ಟಿ.ಆರ್‌.ರಾವ್‌, ದಾವಣಗೆರೆ

ಉಳ್ಳವರು ಕೊರೊನ ಬಂತೆಂದು
ಫೋರ್ಟಿಸ್, ಮಣಿಪಾಲ್ ಗೆ ಸೇರಿದರಯ್ಯ
ಕೂಡಿಟ್ಟ ಹಣ ರೇಮಿಡಿಸಿವರ್, ಬೆಡ್,
ವೆಂಟಿಲೇಟರ್, ಪ್ರಾಣವಾಯುವಿಗೆಂದು
ಹಣ ತೆತ್ತರೂ ತಪ್ಪಲಿಲ್ಲ ಮಣ್ಣು ಸೇರುವುದಯ್ಯ
ನಾನೇನು ಮಾಡಲಿ ಬಡವನಯ್ಯಾ
ಎನ್ನ ಕಾಲ್ನಡಿಗೆಯಲ್ಲಿ ಹೋಗಬೇಕಾಯ್ತು
ಕೋವಿಡ್ ಕೇಂದ್ರದ ದೇಗುಲಕ್ಕಯ್ಯ
ದುಡಿದಿದ್ದು ಹೊಟ್ಟೆ ಬಟ್ಟೆಗಾಯ್ತಯ್ಯ..
ಮತ್ತೇನು, ಸೋಂಕು ಹೆಚ್ಚಾಗಿ ಮಣ್ಣುಪಾಲಾದೆನಯ್ಯ
ಕೂಡಲ ಸಂಗಮದೇವ ಕೇಳಯ್ಯ.

29.ಜಯಂತ್‌ ಗೌಡ ಆರ್‌., ಬೆಂಗಳೂರು

ಮುಖಾರವಿಂದವೆಲ್ಲ ಮುಚ್ಚಬೇಕಯ್ಯಾ,
ಎರಡೆರಡು ಆಡಿ ಅಂತರಯಿರಬೇಕಯ್ಯಾ| |

ವಿಶ್ವವೆಲ್ಲ ಹೋಗಿ ನಿಂತಿತಯ್ಯಾ,
ಹಿರಿಯರ ಹೆಣವೆಲ್ಲ ಬಿದ್ದಿತಯ್ಯಾ| |

ಮೇಲು ಕಿಳುಎನ್ನಬೇಡಯ್ಯಾ,ಕಿಳು ಎಂದು ನೋಡದೇ ಕೊಲ್ಲುತಯ್ಯಾ| |

ರಕ್ಷಕರೆಲ್ಲ ಭಕ್ಷಕರಾಗಿ, ಯಮನ ಸಹೋದರಾಗಿದಯ್ಯಾ| |
ಮನೆಯ ಒಳಗಿರಬೇಕಯ್ಯಾ, ಸಾವಿನ ಧ್ವನಿ ಬಂದಿತೈಯ್ಯಾ| |

ಬಂದಿತಯ್ಯಾ ಕೊರೊನಾ ಬಂದಿತಯ್ಯಾ
ಮುಗಿಸಿತಯ್ಯಾ ಜೀವ ಮುಗಿಸಿತಯ್ಯಾ| |

ವಿಶ್ವವನೆಲ್ಲ ಕೊಚ್ಚಿ , ಕೊಲ್ಲಿತಯ್ಯಾ
ಬಂದಿತಯ್ಯಾ ಕೊರೊನಾ ಬಂದಿತಯ್ಯಾ|೩|

30. ಶಂಕ್ರಪ್ಪ ಚವಡಾಪೂರ ವಿದ್ಯಾಗಿರಿ, ಬಾಗಲಕೋಟೆ

ಕಣ್ಣಿಗೆ ಕಾಣದ ಕ್ಷುದ್ರಜೀವಿಗೆ ಬಲಿಯಾದೆವಯ್ಯಾ
ಮುಖಗವಸು ಧರಿಸಿ ಅಂತರ ಕಾಯ್ದು ದೂರವಾದೆವಯ್ಯಾ
ಬಸವಪ್ರಭು, ಪ್ರಾಣಿಪಕ್ಷಿಗಳಿಗಿಲ್ಲದ ನರಕ ನಮಗೇಕಯ್ಯಾ
ಒಂದರಗಳಿಗೆ ಹಿಂದೆ ಮಾತಾಡಿದವ ಈಗ ಇಲ್ಲವಯ್ಯಾ
ದೇಹ ಭಾವ ಎಲ್ಲವೂ ದೂರ ದೂರವಯ್ಯಾ
ಹಿಂದೆಂದೂ ಕಾಣದ ಲಾಭಕೋರರನ್ನು ಕಾಣುತ್ತಿರುವೆವಯ್ಯಾ
ಮನುಷ್ಯತ್ವವನ್ನು ವಸ್ತುಸಂಗ್ರಹಾಲಯದಲ್ಲಿ ಹುಡುಕುವಂತಾಯಿತಯ್ಯಾ
ಅನುಮತಿ ಪಡೆದು ಮದುವೆಯಾದವರು ವಿಧವೆ-ವಿದುರರಾದರಯ್ಯಾ
ಮಾಸ್ಕ,ಸ್ಯಾನಿಟೈಜರ್,ಸಾಮಾಜಿಕ ಅಂತರ ವ್ಯಾಕ್ಸಿನ್ ಇವೇ ಈಗಿನ ಮಂತ್ರಗಳಯ್ಯಾ
ಸರಕಾರವೆಂದರೇನಯ್ಯಾ? ನಾವೇ ಅಲ್ಲವೇನಯ್ಯಾ
ಮೂರನೆಯ ಅಲೆ ಬೇಡವಯ್ಯಾ;ಮಕ್ಕಳನ್ನು ರಕ್ಷಿಸಯ್ಯಾ
ಕೂಡಲಸಂಗಮದೇವ, ನೀನು ಸೃಜಿಸಿದ ಕರೋನಾ ಹಿಂಪಡೆಯಯ್ಯಾ.

31. ಶರಣಬಸಯ್ಯ ವಿ ನಾಗಯ್ಯನವರ, ಬಾಗಲಕೋಟೆ ಜಿಲ್ಲೆ

ಎಲ್ಲಿಂದ ಬಂತೊ ಈ ಕರೋನಾ ವಯ್ಯ
ಇದರಿಂದ ನಾ ಪಾರಾಗೋದು ಹೇಗಯ್ಯ
ಉಸಿರ ಕೊಟ್ಟ ಮರವ ಕಡಿದು ಉಸಿರು ಉಸಿರು ಎಂದೆನಯ್ಯಾ
ಮಂಗಳಕ್ಕೆ ಕಾಲಿಟ್ಟೆನು ಅಂಗಳಕ್ಕೆ ಕಾಲಿಡಲೊಲ್ಲೆನಯ್ಯ
ಹಣ ಬಲ ಜನ ಬಲ ತೋಳ್ಬಲ ಎಲ್ಲಾ ಬಲಹೀನವಯ್ಯ
ವಿಜ್ಞಾನ ಸುಜ್ಞಾನ ತಂತ್ರಜ್ಞಾನ ಎಲ್ಲಾ ಶೂನ್ಯವಯ್ಯ
ಎಲ್ಲಿಂದ ಬಂತೊ ಈ ಕರೋನವಯ್ಯ
ಇದರಿಂದ ಪಾರಾಗುವುದು ಹೇಗಯ್ಯ

32. ನಿಮ೯ಲಾ ಟಿ ಕವಡಿಮಟ್ಟಿ, ಆನಂದ ನಗರ, ಹಳೇ ಹುಬ್ಬಳ್ಳಿ.

೧)ಕರುಣೆಯ ತೋರಯ್ಯ,
ಕರೋನಾ ನೀ ದೂರಕೆ ಹೋಗಯ್ಯ,
ಪ್ರಾಣವ ಉಳಿಸಯ್ಯ,
ನೆಮ್ಮದಿಯ ಬದುಕು ನೀಡಯ್ಯ.

೨) ಮುಖಗವಸು ಧರಿಸಯ್ಯ,
ಕೈಗವಸು ಹಾಕಿಕೊಳ್ಳಯ್ಯ,
ಸಾಮಾಜಿಕ ಅಂತರ ಕಾಯ್ದುಕೊಳ್ಳಯ್ಯ,
ಇಲ್ಲದಿದ್ದರೆ ಕರೋನಾ ಮಾರಿ ನಿನ್ನನ್ನು ಒಯ್ಯುವದಯ್ಯ.

33. ವಿಮಲಾ ಮಲ್ಲಪ್ಪ ದಾವಣಗೆರೆ

ಅವತರಿಸಿ 12ನೇ ಶತಮಾನದಿ ದೇಶದ ಉದ್ಧಾರಕೆಂದು ಧರೆಗಿಳಿದು ಬಂದಿಯಯ್ಯಾ ದೇಶಕ್ಕಾಗಿಯೇ ದುಡಿದು ನಾವೆಲ್ಲಾ ಒಂದೇ ಎಂಬ ಭಾವೈಕ್ಯತೆ ಸಾರಿದೆಯಯ್ಯ

ನಲುಗುತಿಹುದುದೇಶ ಕೊನೆ
ಉಸಿರಬಿಡುತಿಹರು ಭಕ್ತರು
ಕರೋನಮಾರಿಯಿಂದ ಬೇಸತ್ತು ಹರಿಸತಿಹರು ನೆತ್ತರು
ದಾರಿಕಾಣದಾಗಿದೆಸಕಲರಿಗ
ಬೇಕುನಿನ್ನ ಅಭಯಹಸ್ತ
ಸುಖ ಶಾಂತಿ ನೆಮ್ಮದಿ ಬೇಕೆಂದು ಕಾಯುತಿಹರುಸತತ

ಜಾತಿ ಕುಲ ಮತವೆಂದು ಜನ ಆಡುತಿಹರುಮೋಸದಾಟ
ನಾನುನನ್ನದು ನಾಹೆಚ್ಚು ನೀಹೆಚ್ಚು ಎಂದಿದೆಳೆದಿಹರು ಹಗ್ಗಜಗ್ಗಾಟ
ಪ್ರೀತಿ-ಪ್ರೇಮ ಸ್ನೇಹಸ್ಪರ್ಶದ ದೀಪ ತೋರುಬಾರಯ್ಯ
ಧಾರ್ಮಿಕತೆಯಕ್ರಾಂತಿ ನೈತಿಕತೆಯನೀತಿ ಜ್ಞಾನಿ
ನೀನಯ್ಯ.

ಕಾತುರದಿಕಾಯುತಿಹೆವು
ಮತ್ತೊಮ್ಮೆ ಹುಟ್ಟಿಬಾರಯ್ಯ.
ರೋಗರುಜಿನವ ಅಳಿಸಿ ಸುಖ
ಸುಖಶಾಂತಿ ನೆಲಸಬಾರಯ್ಯ.

34. ಆಕಾಶ್ ಎಸ್ ಹರಕೂಡೆ, ಮಂಠಾಳ, ಬಸವ ಕಲ್ಯಾಣ ತಾ|| , ಬೀದರ್.

ಬರಬೇಡ ಇರಬೇಡ; ಬೀದಿಯಿದು ಮರಿಬೇಡ
ಬಂದರೂ ಮಾಸ್ಕ್ ಹಾಕದೆ ಇರಬೇಡ
ಜನಜಂಗುಳಿ ಸೇರಬೇಡ
ಮಾನವೀಯತೆ ಮರೆಯಬೇಡ
ಅಧಿಕ ಹೆದರಲು ಬೇಡ; ರೋಗಿಗಳ ಹಳಿಬೇಡ
ಇರಲಿ ಕೈಗಳು ಶುದ್ಧಿ
ಆಗಲಿ ಆರೋಗ್ಯ ವೃದ್ಧಿ
ಇದುವೇ ಕರೋನ ವೈರಾಣು ತೊಲಗಿಸುವ ಪರಿ

ವಿಜೇತರು (ಲಕ್ಕಿ ಡ್ರಾ )

Sl No

ಹೆಸರು

ಜಿಲ್ಲೆ

1

ಬಿಲ್ಕರ್

ಚಾಮರಾಜನಗರ

2

ರುಚಿತ ಬಿ ವಿ

ಚಿಕ್ಕಮಗಳೂರು

3

ಸಾನ್ವಿ ರಾಜು ಬಾಗೆನ್ನವರ

ಬೆಳಗಾವಿ

4

ಜಿ.ಹೆಚ್ .ಸಂಕಪ್ಪ .

ದಾವಣಗೆರೆ ಜಿಲ್ಲೆ

5

ಅನುರಾಧ

ದಾವಣಗೆರೆ

6

ಶೋಭಾ ಮಲ್ಲಿಕಾರ್ಜುನ್

ಚಿತ್ರದುರ್ಗ

7

ಶ್ರೀದೇವಿ

ಬೆಂಗಳೂರು

8

ವಿಶೇಷ ಬಿ.

ಬಾಗಲಕೋಟೆ ಜಿಲ್ಲೆ.

9

ಹೆಸರು: ಮನು.ಸಿ.ಆರ್

ಬೆಂಗಳೂರು

10

ಗಾಯತ್ರಿ ಶ್ರೀಧರ್,

ಚಿಕ್ಕಮಗಳೂರು.

11

ಶಾರದಾ ಅನಿಲಕುಮಾರ

ಕಲಬುರಗಿ.

12

ನರೇಶ ಪವಾರೆ

ಬೆಂಗಳೂರು

13

ಹೆಸರು: ಆಕಾಶ್ ಎಸ್ ಹರಕೂಡೆ

ಬೀದರ್.

14

ಶರಣಬಸಯ್ಯ ವಿ ನಾಗಯ್ಯನವರ.

ಬಾಗಲಕೋಟೆ ಜಿಲ್ಲೆ

15

ಶಂಕ್ರಪ್ಪ ಚವಡಾಪೂರ

ಬಾಗಲಕೋಟೆ

16

ನಿಮ೯ಲಾ ಟಿ ಕವಡಿಮಟ್ಟಿ, .

ಧಾರವಾಡ.

17

ಸಚಿನ್

ಬೆಳಗಾವಿ

18

ನಯನ

ಶಿವಮೊಗ್ಗ

19

ಮುರಿಗೆಪ್ಪ ರಾ ಕುಬಸದ

ಬೆಂಗಳೂರು ಉತ್ತರ ಜಿಲ್ಲೆ

20

ಪೂರ್ಣಿಮಾ ಗುರುದೇವ್ ಭಂಡಾರ್ಕರ್,

ಶಿವಮೊಗ್ಗ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.