ADVERTISEMENT

ದೈವೋಪಾಸನೆಯೇ ಭಕ್ತಿಯಲ್ಲ: ಪ್ರೊ.ಎಂ.ಜಿ. ಮಂಜುನಾಥ್‌

ಶಾಸನಗಳಲ್ಲಿ ಭಕ್ತಿಯ ರೂಪಗಳ ಅನಾವರಣ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 2:22 IST
Last Updated 6 ಆಗಸ್ಟ್ 2021, 2:22 IST
ವೆಬಿನಾರ್‌ನಲ್ಲಿ ಪ್ರೊ.ಎಂ.ಜಿ.ಮಂಜುನಾಥ್‌ ಮಾತನಾಡಿದರು
ವೆಬಿನಾರ್‌ನಲ್ಲಿ ಪ್ರೊ.ಎಂ.ಜಿ.ಮಂಜುನಾಥ್‌ ಮಾತನಾಡಿದರು   

ಮೈಸೂರು: ‘ಭಕ್ತಿ ಎಂಬುದು ದೈವೋಪಾಸನೆಯಷ್ಟೇ ಮಾತ್ರವಲ್ಲ. ಅದು ವೈವಿಧ್ಯ ಮಯ ರೂಪಕ. ದೇವರು, ರಾಜ, ಗುರು ಹಾಗೂ ಪತಿ ಭಕ್ತಿಯ ನಿದರ್ಶನಗಳು ಶಾಸನಗಳಲ್ಲಿ ಹೇರಳವಾಗಿವೆ’ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಂ.ಜಿ. ಮಂಜುನಾಥ್‌ ಹೇಳಿದರು.

ನಗರದ ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್‌) ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರವು ಏರ್ಪಡಿಸಿ ರುವ ಸರಣಿ ವೆಬಿನಾರ್‌ನಲ್ಲಿ ಗುರುವಾರ ‘ಶಾಸನಗಳಲ್ಲಿ ಭಕ್ತಿಯ ವೈವಿಧ್ಯತೆ’ ಕುರಿತು ಅವರು ಮಾತನಾಡಿದರು.

‘ಮೋಕ್ಷ ಪಡೆಯುವ ಮಾರ್ಗ ವಾಗಿ ಭಕ್ತಿಯು ಶಾಸನಗಳಲ್ಲಿ ಉಲ್ಲೇಖ ಗೊಂಡಿದೆ. ಕನ್ನಡದ ರಾಜವಂಶಗಳ ಶಾಸನಗಳು ಇಷ್ಟ ದೈವದ ಸ್ತುತಿಯೊಂದಿಗೆ ಆರಂಭವಾಗುತ್ತವೆ. ಪ್ರಾಕೃತ ಭಾಷೆಯ ಲ್ಲಿರುವ ಶಿವಮೊಗ್ಗದ ಮಳವಳ್ಳಿ ಶಾಸನವು ಭಕ್ತಿಯನ್ನು ಉಲ್ಲೇಖಿಸಿದ ಮೊದಲ ಶಾಸನ. ಹಲ್ಮಿಡಿ ಶಾಸನದಲ್ಲೂ ವಿಷ್ಣು ಸ್ತುತಿಯಿದೆ’ ಎಂದರು.

ADVERTISEMENT

‘ಶಾಸನಗಳಲ್ಲಿ ಸರ್ವಧರ್ಮ ಸಮನ್ವಯವೂ ಇದೆ. ಹೊಯ್ಸಳರ ಬೇಲೂರು ಶಾಸನವು ಶಿವ– ವಿಷ್ಣು ಇಬ್ಬರೂ ಒಂದೇ ಎಂದರೆ, ತುಮಕೂರು ಜಿಲ್ಲೆಯ ಕೈದಾಳ ಗ್ರಾಮದ ಶಾಸನವು ಶಿವ, ಬ್ರಹ್ಮ, ವಿಷ್ಣು, ಜಿನ ಹಾಗೂ ಬುದ್ಧನನ್ನು ಸ್ತುತಿ ಸುತ್ತದೆ. ಭಿನ್ನ ದೈವನಿಷ್ಠೆಯಲ್ಲಿ ಭಕ್ತಿಯ ಸಂಘರ್ಷ ಗಳೂ ಶಾಸನಗಳಲ್ಲಿವೆ’ ಎಂದರು.

‘ವಿಜಯನಗರದ ಕೃಷ್ಣದೇವರಾಯ ಗುರುಭಕ್ತಿಯಾಗಿ ವ್ಯಾಸರಾಯರಿಗೆ ಚಿನ್ನದ ಹರಿವಾಣಗಳನ್ನು ಕೊಟ್ಟಿದ್ದನು. ರಾಜರನ್ನು ದೈವಾಂಶ ಸಂಭೂತರೆಂದೇ ಪ್ರಜೆಗಳು ಪರಿಗಣಿಸಿದ್ದರು. ರಾಜ ಸತ್ತಾಗ ಒಂದು ಸಾವಿರಕ್ಕೂ ಅತಿ ಹೆಚ್ಚು ಮಂದಿ ಆತ್ಮಾಹುತಿ ಮಾಡಿಕೊಂಡಿದ್ದರೆಂಬುದು ಕೆ.ಆರ್‌.ಪೇಟೆ ತಾಲ್ಲೂಕಿನ ಅಗ್ರಹಾರ ಬಾಚಹಳ್ಳಿ ಶಾಸನದಲ್ಲಿ ಉಲ್ಲೇಖಗೊಂಡಿದೆ. ಇದು ರಾಜ ಭಕ್ತಿಯ ಅತಿರೇಕ’ ಎಂದು ಅವರು ವಿಶ್ಲೇಷಿಸಿದರು.

‘ಭಕ್ತಿ ಅತಿರೇಕದ ರೂಪವೂ ಹೌದು!’: ‘ಸಿಡಿದಲೆ, ಉರಿಯ ಉಯ್ಯಾಲೆ, ಜಲ– ಅಗ್ನಿ ಪ್ರವೇಶಗಳ ಮೂಲಕ ಹರಕೆ ಕಟ್ಟಿಕೊಂಡು ಭಕ್ತರು ಆತ್ಮಾಹುತಿ ಮಾಡಿಕೊಂಡಿದ್ದಾರೆ. ಕಠಾರಿಯಿಂದ ಕತ್ತರಿಸಿಕೊಳ್ಳುವ ದೃಶ್ಯ ಕೋಲಾರ ಜಿಲ್ಲೆಯ ಕ್ಯಾಸಂಬಳ್ಳಿಯ ಶಾಸನದಲ್ಲಿದೆ’ ಎಂದು ಪ್ರೊ.ಎಂ.ಜಿ. ಮಂಜುನಾಥ್‌ ವಿವರಿಸಿದರು.

‘ಭಕ್ತಿಯೆಂದು ದೇವದಾಸಿ, ಸಹಗಮನ, ಅನುಗಮನದಂಥ ಪದ್ಧತಿಗಳನ್ನು ಹೇರಲಾಗಿದೆ. ಎಚ್‌.ಡಿ.ಕೋಟೆ ತಾಲ್ಲೂಕಿನ ಬೆಳತೂರಿನ ದೇಕಬ್ಬೆ ಶಾಸನ ಅನುಗಮನ ಪದ್ಧತಿಯಿಂದ ಅಗ್ನಿಪ್ರವೇಶ ಮಾಡಿದ ಪತಿ ಭಕ್ತಿಯ ಅತಿರೇಕವನ್ನು ಹೇಳುತ್ತದೆ’ ಎಂದರು.

ಸಿಐಐಎಲ್‌ ಯೋಜನಾ ನಿರ್ದೇಶಕ ಪ್ರೊ.ಬಿ.ಶಿವರಾಮಶೆಟ್ಟಿ, ಸಹಾಯಕ ಫೆಲೋ ಡಾ.ಎಂ.ಭೈರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.