ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ: ಜನರ ಮನಸ್ಸು ಗೆದ್ದ ಬುದ್ಧ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 21 ಮೇ 2021, 19:30 IST
Last Updated 21 ಮೇ 2021, 19:30 IST
   

ಜಗದ ಸೃಷ್ಟಿ ಬಗ್ಗೆ ಭಾರತೀಯ ದಾರ್ಶನಿಕರು ಬಹಳಷ್ಟು ಹೇಳಿದ್ದಾರೆ. ಹಲವರು ಅನೇಕ ರೀತಿ ವ್ಯಾಖ್ಯಾನಿಸಿದ್ದಾರೆ. ಇದರಿಂದ ಜೀವಿಯ ಹುಟ್ಟು ಮತ್ತು ಅಂತ್ಯದ ಕುರಿತು ಅದ್ಭುತ ಅಧ್ಯಾತ್ಮಜ್ಞಾನ ಲೋಕವೇ ಭಾರತದಲ್ಲಿ ಸೃಷ್ಟಿಯಾಗಿದೆ. ಜೀವ ಹುಟ್ಟುವುದೇಕೆ? ಅದು ಸಾಯುವುದೇಕೆ? ಸಾವಿನ ನಂತರ ಆ ಜೀವ ಎಲ್ಲಿ ಹೋಗುತ್ತದೆ? ದಿಗಂತದ ಅಸಂಖ್ಯ ನಕ್ಷತ್ರ-ಆಕಾಶ ಕಾಯಗಳ ಕಾಯುತ್ತಿರುವ ಒಡೆಯನಾರು? ಜೀವಾತ್ಮ-ಪರಮಾತ್ಮಗಳ ಸಂಯೋಗವಾಗುತ್ತಾ? ಇಲ್ಲವಾ? ಹೀಗೆ ಸಾವಿನಾಚೆಗಿನ ಪಾರಮಾರ್ಥಿಕ ಚಿಂತನೆಗಳು ಸಾವಿರಾರು ವರ್ಷಗಳಿಂದ ನಡೆಯುತ್ತಲೇ ಇವೆ. ಆದರೆ ಯಾವುದೂ ಸಾವಿನಾಚೆಗಿನ ನಿಖರ ಸತ್ಯ ತಿಳಿಯಲು ಸಾಧ್ಯವಾಗಿಲ್ಲ.
ಏಕೆಂದರೆ, ಬ್ರಹ್ಮಾಂಡ ಒಂದು ಮಾಯಾಲೋಕ. ಇಲ್ಲಿ ಸತ್ಯ ಸುಳ್ಳಾಗುತ್ತದೆ, ಸುಳ್ಳು ಸತ್ಯ ಅನಿಸುತ್ತದೆ. ಇಂಥ ಭ್ರಮಾಪ್ರಪಂಚದಲ್ಲಿ ಸತ್ಯ-ಮಿಥ್ಯೆಗಳ ಪತ್ತೆ ಹಚ್ಚುವುದು ಸುಲಭವಲ್ಲ. ಅದಕ್ಕೆ ಭಗವತ್‍ಜ್ಞಾನ ಬೇಕು. ಇಂಥ ಭಗವತ್‌ಜ್ಞಾನ ಪಡೆಯಲು ಅಧ್ಯಾತ್ಮದ ಸಾಗರದಲ್ಲಿ ಮಂಥನ ನಡೆಸಬೇಕು. ಅಧ್ಯಾತ್ಮಮಂಥನ ನಡೆಸುವುದು ಅಷ್ಟು ಸುಲಭವಲ್ಲ. ಅಡಿಗಡಿಗೆ ಭ್ರಮಾವಿಷ ಆರ್ಭವಿಸಿ ಬರುತ್ತದೆ. ಅದನ್ನು ಹೀರಿ ಶಿವಶಕ್ತಿ ಪಡೆವ ಯುಕ್ತಿ ಬೇಕು. ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು, ಅಧ್ಯಾತ್ಮ ಮಂಥಿಸುವಾಗಲು ಬುದ್ಧಿ ಮಂಕಾಗುತ್ತದೆ. ಮನಸ್ಸಿನ ತುಂಬಾ ಶೂನ್ಯ ಆವರಿಸಿಕೊಳ್ಳುತ್ತದೆ. ಇಂಥ ಭ್ರಮಾಮಯವನ್ನು ನಿಗ್ರಹಿಸಿ, ಮಾಯಾ ಕತ್ತಲನ್ನು ಭೇದಿಸಿದಾಗ ಭಗವತ್ ಜ್ಞಾನದ ಬೆಳಕು ಕಾಣಿಸುತ್ತದೆ.

ಋಷಿ-ಮುನಿಗಳು ಕಾಡು-ಮೇಡುಗಳನ್ನ ಅಲೆದು, ವರ್ಷಗಟ್ಟಲೇ ತಪಸ್ಸು ಮಾಡಿ ಭಗವಂತನನ್ನು ಒಲಿಸಿಕೊಳ್ಳುವ ಭಗವತ್ ಜ್ಞಾನ ಪಡೆಯುತ್ತಿದ್ದರು. ಲಾಭ-ಲೋಭದ ಲವಲೇಶವೂ ಇಲ್ಲದ ದಿವ್ಯ ಜ್ಞಾನಧಾರಿಗಳಿಗೆ ತಮ್ಮ ಹಿಂದಿನ ಬದುಕು ಅದೆಷ್ಟು ಬಾಲಿಶವಾಗಿತ್ತು. ತಾವೆಂಥ ಮೂರ್ಖ ಮನಃಸ್ಥಿತಿಯಲ್ಲಿದ್ದೆವೆಂಬ ಅರಿವಾಗುತ್ತದೆ. ಹೀಗಾಗಿ ಅವರ್ಯಾರಿಗೂ ಜನಸಮೂಹದ ತಾಮಸ ಬದುಕಲ್ಲಿ ಇರಬೇಕೆನಿಸುವುದಿಲ್ಲ. ಅದಕ್ಕಾಗಿ ಮತ್ತೆ ನಾಡಿಗೆ ಬಾರದೆ ಕಾಡಿನಲ್ಲೇ ಮತ್ತಷ್ಟು ಬ್ರಹ್ಮವಿದ್ಯೆಯ ಅವಲೋಕನದಲ್ಲಿ ಮುಳುಗುತ್ತಾರೆ. ಆದರೆ ಬುದ್ಧನೊಬ್ಬನೇ ತಾನು ತಿಳಿದ ಭಗವತ್ ಜ್ಞಾನ ಅಥವಾ ಲೋಕಜ್ಞಾನವನ್ನು ಲೋಕಕ್ಕೆಲ್ಲಾ ಹಂಚಲು ಹೊರಟ. ಕೊನೆ ಉಸಿರು ನಿಲ್ಲುವವರೆಗೂ ಜ್ಞಾನದ ಸವಿಯನ್ನು ಜನರಿಗೆ ಹಂಚುವುದನ್ನು ನಿಲ್ಲಿಸಲಿಲ್ಲ.

ರಾಜ ಶುದ್ಧೋದನ ಮತ್ತು ರಾಣಿ ಮಾಯಾದೇವಿಯ ಮಗನಾಗಿ ರಾಜಕುಮಾರನಂತೆ ಸುಖವಾಗಿದ್ದ ಸಿದ್ಧಾರ್ಥನಿಗೆ ಬುದ್ಧನಾಗಲು ಪ್ರೇರೇಪಿಸಿದ್ದು ಸಾವು-ನೋವು. ಭಗವಂತನ ಸೃಷ್ಟಿಯಲ್ಲಿ ಕಷ್ಟಗಳೇಕಿವೆ? ಇರುವಷ್ಟು ಸುಖ ಎಲ್ಲರಿಗೂ ಸಮನಾಗಿ ಏಕಿಲ್ಲ? ಯಾಕಿಂಥ ತಾರತಮ್ಯ? ಸುಖ-ದುಃಖಗಳು ಜೀವಾತ್ಮಗಳಿಗೇ ಏಕೆ ಬಾಧಿಸುತ್ತವೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಲು ಅರ್ಧರಾತ್ರಿಯಲ್ಲಿ ಹೊರಟ. ಇಡೀ ಜಗತ್ತು ಇದ್ಯಾವ ಚಿಂತೆಯೂ ಮಾಡದೆ ಮಲಗಿರುವಾಗ, ಎದ್ದು ಕೂತ. ಹತ್ತಾರು ವರ್ಷಗಳ ಕಾಲ ಬೋಧಿವೃಕ್ಷದ ಕೆಳಗೆ ತಪಸ್ಸು ಮಾಡಿ ಜ್ಞಾನದ ಬೆಳಕು ಕಂಡ. ಆ ಬೆಳಕಿನ ದೀಪ ಹಿಡಿದು ಎಲ್ಲರ ಮನದ ಕತ್ತಲೇ ಬೆಳಗಿದ. ತಾನು ತಿಳಿದ ಜೀವ-ಜೀವನದ ಸತ್ಯವನ್ನು ಹಂಚಿದ.

ADVERTISEMENT

ಬುದ್ಧ ನೀಡಿದ ಸರಳ ಜ್ಞಾನಾಮೃತವಾದ ‘ಆಸೆಯೇ ದುಃಖಕ್ಕೆ ಮೂಲ’ ಅನ್ನುವುದರಲ್ಲಿ ಬ್ರಹ್ಮಾಂಡದಷ್ಟು ಅರ್ಥವಿದೆ. ಇಂದು ನಾವು ಅನುಭವಿಸುತ್ತಿರುವ ಎಲ್ಲಾ ದುಃಖಗಳಿಗೂ ಆಸೆಗಳೇ ಕಾರಣವಾಗಿವೆ. ಕೊರೊನಾದಂಥ ಕ್ರಿಮಿ ಜಗತ್ತನ್ನೇ ಆವರಿಸುವುದರಲ್ಲೂ ಆಸೆಯ ನೆರಳಿದೆ. ಇಂಥ ಆಸೆಗಳೇ ಮನುಕುಲಕ್ಕೆ ದುಃಖತರುತ್ತಿದೆ. ತಾನು-ತನ್ನದು ಎಂಬ ಲೋಭ ಮೋಹದಲ್ಲಿ ಮುಳುಗಿರುವ ಮಾನವರಿಗೆ ಬುದ್ಧನ ಬುದ್ಧಿವಂತಿಕೆ ಮಾತುಗಳು ಅರ್ಥವಾಗುವುದಿಲ್ಲ. ನಿಃಸ್ವಾರ್ಥವಾದ ‘ಸಚ್ಚಿದಾನಂದ’ ಮನಸ್ಸುಗಳು ಮಾತ್ರ ಬುದ್ಧತತ್ವವನ್ನು ಅರಿತು, ಉಲ್ಲಸಿತ ಭಾವದಲ್ಲಿ ಪ್ರಫುಲ್ಲವಾಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.