ADVERTISEMENT

ವಿಶ್ವದ ಹಲವೆಡೆ ಗಣೇಶ ಚತುರ್ಥಿ ಆಚರಣೆ: ಯಾವ ದೇಶದಲ್ಲಿ ಹೇಗೆ?

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 19:31 IST
Last Updated 9 ಸೆಪ್ಟೆಂಬರ್ 2021, 19:31 IST
   

ಭಾರತದಲ್ಲಷ್ಟೇ ಅಲ್ಲ. ವಿಶ್ವದಾದ್ಯಂತ ವಿವಿಧ ದೇಶಗಳಲ್ಲಿರುವ ಹಿಂದೂಗಳು ಗಣೇಶ ಚತುರ್ಥಿಯನ್ನು ಭಕ್ತಿ –ಭಾವದಿಂದ ಆಚರಿಸುತ್ತಾರೆ.

ಮಾರಿಷಸ್‌

ದ್ವೀಪ ರಾಷ್ಟ್ರವಾದ ಮಾರಿಷಸ್‌ನ ಜನಸಂಖ್ಯೆಯಲ್ಲಿ ಶೇ 52ರಷ್ಟು ಹಿಂದೂಗಳೇ ಇದ್ದಾರೆ. ಹೀಗಾಗಿ ಇಲ್ಲಿ ಗಣೇಶ ಚತುರ್ಥಿಯನ್ನು ಭಾರಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಚತುರ್ಥಿಯಂದು ರಾಷ್ಟ್ರೀಯ ರಜೆ ನೀಡಲಾಗುತ್ತದೆ. ಆದರೆ ಇಲ್ಲಿ ಸಾರ್ವಜನಿಕವಾಗಿ ಗಣೇಶನ ಮೂರ್ತಿ ಕೂರಿಸುವ ಪದ್ಧತಿ ಇಲ್ಲ. ಬದಲಿಗೆ ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ಗಣಪತಿಯ ಮಣ್ಣಿನ ಮೂರ್ತಿಯನ್ನು ಕೂರಿಸಿ ಹಬ್ಬ ಆಚರಿಸಲಾಗುತ್ತದೆ. ಮೂರರಿಂದ ಐದು ದಿನಗಳವರೆಗೆ ಗಣೇಶನ ಹಬ್ಬ ಆಚರಿಸಲಾಗುತ್ತದೆ.

ADVERTISEMENT

ಕೆನಡಾ

ಕೆನಡಾದ ರಾಜಧಾನಿ ಟೊರಾಂಟೋದಲ್ಲಿ ಗಣೇಶನ ಹಬ್ಬ ಆಚರಿಸಲಾಗುತ್ತದೆ. ಟೊರಾಂಟೋದಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿಯೂ ಗಣೇಶನ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುವುದಿಲ್ಲ. ಯಾರಾದರೊಬ್ಬರ ಮನೆಯನ್ನು ಆಯ್ಕೆ ಮಾಡಿ, ಅಲ್ಲಿ ಗಣೇಶನ ಮೂರ್ತಿಯನ್ನು ಕೂರಿಸಲಾಗುತ್ತದೆ. ಅಲ್ಲಿಯೇ ಅಕ್ಕಪಕ್ಕದವರೆಲ್ಲರೂ ಸೇರಿ ಹಬ್ಬ ಆಚರಿಸುತ್ತಾರೆ. ಸಾಮೂಹಿಕವಾಗಿ ಪೂಜೆ ಸಲ್ಲಿಸುತ್ತಾರೆ. ಎಲ್ಲರೂ ಸೇರಿ ನೈವೇದ್ಯ ಸಿದ್ಧಪಡಿಸಿ ಹಂಚುತ್ತಾರೆ.

ಅಮೆರಿಕ

ಅಮೆರಿಕದ ಹಲವು ರಾಜ್ಯಗಳಲ್ಲಿ ಭಾರತೀಯರು ದೊಡ್ಡ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಹೀಗಾಗಿ ಇಲ್ಲಿ ಗಣೇಶನ ಚತುರ್ಥಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿನ ಭಾರತೀಯ ಸಮುದಾಯದವರು ಮುಂಬೈನಿಂದ ದೊಡ್ಡ ಗಣೇಶನ ಮೂರ್ತಿಗಳನ್ನು ಆಮದು ಮಾಡಿಕೊಳ್ಳುತ್ತಾರೆ. ಸಾರ್ವಜನಿಕವಾಗಿ, ಕ್ರೀಡಾಂಗಣಗಳಲ್ಲಿ, ಪಾರ್ಟಿ ಹಾಲ್‌ಗಳಲ್ಲಿ ಗಣೇಶನ ಉತ್ಸವ ನಡೆಸಲಾಗುತ್ತದೆ. ಕೆಲವೆಡೆ 10,000ಕ್ಕೂ ಹೆಚ್ಚು ಜನರು ಸೇರುತ್ತಾರೆ. ಇಲ್ಲಿ ಒಟ್ಟು 11 ದಿನ ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ.

ಬ್ರಿಟನ್‌

ಬ್ರಿಟನ್‌ನಲ್ಲಿ ಭಾರತೀಯರು ಆಯೋಜಿಸುವ ಗಣೇಶನ ಉತ್ಸವಕ್ಕೆ ಭಾರಿ ವೈಶಿಷ್ಟ್ಯ ಇದೆ. ಲಂಡನ್‌ನ ಹೌನ್‌ಸ್ಲೋ ಎಂಬಲ್ಲಿನ ಲಕ್ಷ್ಮೀ ನಾರಾಯಣ ದೇವಾಲಯದಲ್ಲಿ ಪ್ರತಿ ವರ್ಷ ಗಣೇಶನ ಮೂರ್ತಿಯನ್ನು ಕೂರಿಸಲಾಗುತ್ತದೆ. ಬಹಳ ವಿಜೃಂಭಣೆಯಿಂದ ನಡೆಯುವ ಈ ಹಬ್ಬದಲ್ಲಿ 5,000ಕ್ಕೂ ಹೆಚ್ಚು ಜನರು ಸೇರುತ್ತಾರೆ. ಲಂಡನ್‌ ಪೊಲೀಸರು ಭಾರಿ ಭದ್ರತೆ ಒದಗಿಸುತ್ತಾರೆ. ದೇವಾಲಯದಲ್ಲಿ ಪ್ರತಿದಿನ ಆರತಿ ನಡೆಸಲಾಗುತ್ತದೆ. ಉತ್ಸವದ ಭಾಗವಾಗಿ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಕೊನೆಯ ದಿನ ಹ್ಯಾಂ ಕೊಳದವರೆಗೆ ಮೆರವಣಿಗೆ ಮೂಲಕ ಗಣೇಶನ ಮೂರ್ತಿಯನ್ನು ಕೊಂಡೊಯ್ದು ವಿಸರ್ಜನೆ ಮಾಡಲಾಗುತ್ತದೆ.

ಫ್ರಾನ್ಸ್‌

ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಗಣೇಶನ ಉತ್ಸವನ್ನು ಹತ್ತು ದಿನಗಳ ಕಾಲ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ಯಾರಿಸ್‌ನ ಮಾಣಿಕ್ಯ ವಿನಾಯಕ ಮಂದಿರದಲ್ಲಿ ಗಣೇಶನ ಮೂರ್ತಿಯನ್ನು ಕೂರಿಸಲಾಗುತ್ತದೆ. ಪ್ರತಿ ದಿನವೂ ವಿಶೇಷ ಆರತಿ ಮತ್ತು ಪೂಜೆ ನಡೆಸಲಾಗುತ್ತದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತದೆ. ಕೊನೆಯ ದಿನ ಗಣೇಶನ ಮೂರ್ತಿಯನ್ನು ಅಲಂಕೃತ ರಥದಲ್ಲಿ ಕೂರಿಸಿ, ಕಿಲೋಮೀಟರ್‌ಗಟ್ಟಲೆ ಮೆರವಣಿಗೆ ನಡೆಸಲಾಗುತ್ತದೆ. ಸಂಪ್ರದಾಯದಂತೆ ಜನರು ರಥವನ್ನು ಎಳೆಯುತ್ತಾರೆ. ಗಣೇಶನ ಮೆರವಣಿಗೆ ಸಾಗುವ ರಸ್ತೆಗಳನ್ನು ಟ್ಯಾಂಕರ್ ನೀರಿನಲ್ಲಿ ತೊಳೆಯಲಾಗುತ್ತದೆ. 15 ಕಿ.ಮೀ.ನ ಮೆರವಣಿಗೆಯ ನಂತರ ಮೂರ್ತಿಯನ್ನು ದೇವಾಲಯಕ್ಕೆ ವಾಪಸ್ ಕರೆತರಲಾಗುತ್ತದೆ. ಅಲ್ಲಿಯೇ ವಿಸರ್ಜನೆ ಮಾಡಲಾಗುತ್ತದೆ.

ನೇಪಾಳ

ಹಿಂದೂ ರಾಷ್ಟ್ರವಾದ ನೇಪಾಳದಲ್ಲಿ ಗಣೇಶನ ಹಬ್ಬವನ್ನು ಭಾರಿ ಜೋರಾಗಿ ಆಚರಿಸಲಾಗುತ್ತದೆ. ಆದರೆ ಇಲ್ಲಿ ದೇವಾಲಯಗಳಲ್ಲಿ ಮತ್ತು ಮನೆಗಳಲ್ಲಿ ಮೂರ್ತಿಯನ್ನು ಕೂರಿಸಲು ಆದ್ಯತೆ ನೀಡಲಾಗುತ್ತದೆ. 11 ದಿನಗಳ ಕಾಲ ಗಣೇಶನ ಹಬ್ಬ ಆಚರಿಸಲಾಗುತ್ತದೆ.

* ಈ ದೇಶಗಳು ಮಾತ್ರವಲ್ಲದೆ ನ್ಯೂಜಿಲೆಂಡ್, ಆಸ್ಟ್ರೇಲಿಯ, ಮಲೇಷ್ಯಾ, ಸಿಂಗಪುರ, ಜಪಾನ್‌ನಲ್ಲಿ ಗಣೇಶನ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ, ಸಾರ್ವಜನಿಕವಾಗಿ ಆಚರಿಸುವ ಪದ್ಧತಿ ಇಲ್ಲ. ದೇವಾಲಯಗಳಲ್ಲಿ ಮತ್ತು ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಕೂರಿಸಿ, ತೊಟ್ಟಿಯಲ್ಲಿಯೇ ವಿಸರ್ಜನೆ ಮಾಡುವ ಪರಿಪಾಟವಿದೆ

ಆಧಾರ: ವಿವಿಧ ಮೂಲಗಳಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.