ADVERTISEMENT

ಗಣೇಶ ಹಬ್ಬದ ಸಂಭ್ರಮ: ಬೆನಕ ಮೊಗೆದಷ್ಟೂ ಮುಗಿಯದ ದೇವ

ನವೀನ ಗಂಗೋತ್ರಿ
Published 9 ಸೆಪ್ಟೆಂಬರ್ 2021, 19:31 IST
Last Updated 9 ಸೆಪ್ಟೆಂಬರ್ 2021, 19:31 IST
ಗಣೇಶ ಹಬ್ಬದ ಸಂಭ್ರಮ
ಗಣೇಶ ಹಬ್ಬದ ಸಂಭ್ರಮ   

ಭಾರತೀಯ ಹಬ್ಬಗಳೆಲ್ಲವಕ್ಕೂ ಒಂದೊಂದು ಅಧಿದೇವತೆ ಯಿದ್ದಾರಷ್ಟೆ. ಹಬ್ಬಕ್ಕೊಂದು ದೇವತೆ, ಆ ದೇವತೆಯ ಹಿನ್ನೆಲೆಗೆ ಕಥೆಗಳು, ಅದರ ಸುತ್ತ ಹಬ್ಬಿಕೊಂಡ ಆಚರಣೆಗಳು; ಆಯಾ ಋತುವಿನಲ್ಲಿ ಬರುವ ಹಬ್ಬಕ್ಕಾಗಿ ಮತ್ತು ಆ ಹಬ್ಬದ ದೇವತೆಗಾಗಿ ಸಿದ್ಧವಾಗುವ ನಾನಾ ವಿಧದ ದೇಸೀ ಪಾಕ – ಹೀಗೆ ಹಬ್ಬಗಳೆಂದರೆ ಭಾರತೀಯ ಬದುಕಿನ ಚತುರ್ವಿಧ ಪುರುಷಾರ್ಥವನ್ನೂ ಸೋಕುವಂಥ ನಲ್ಮೆಯ ಕಾಲಭಾಗ. ಹಾಗೇ ಆಯಾ ಹಬ್ಬಗಳ ಅಂತಸ್ಸತ್ತ್ವವಾಗಿರುವ ದೇವತೆಗಳಾದರೂ ಮಾನವಜೀವನದ ವಿವಿಧ ಮಜಲುಗಳನ್ನು ಪ್ರತಿನಿಧಿಸುವಂಥವು. ಮನೆಮನೆಯಲ್ಲಾಡುವ ಪುಟ್ಟ ತುಂಟ ಮಗುವು ತರಬಲ್ಲ ಆನಂದವನ್ನು ತರುವುದು ಕೃಷ್ಣಜನ್ಮಾಷ್ಟಮಿಯ ಹಬ್ಬವಾದರೆ, ಪೊರೆಯುವೊಂದು ಮಾತೃಶಕ್ತಿಯ ಭಾವವನ್ನು ತುಂಬುವಂಥದು ನವರಾತ್ರಿ. ಅದೇ ರೀತಿ ಪರಶಿವನ ಆದರ್ಶ ಸಂಸಾರದಲ್ಲಿನ ಅಮ್ಮ ಮತ್ತು ಮಗನನ್ನು ಒಟ್ಟಿಗೆ ಕರೆದು ಆದರಿಸಿ ಉಪಚರಿಸಿ ಕಳುಹಿಸಿಕೊಡುವ ಹಬ್ಬ ಗಣೇಶ ಚತುರ್ಥಿ. ಕೃಷ್ಣಾಷ್ಟಮಿಯಲ್ಲಿ ಕೃಷ್ಣನೆಡೆಗೆ ಇರುವ ಭಾವಕ್ಕೂ ಗಣೇಶ ಚತುರ್ಥಿಯಲ್ಲಿ ಗಣಪನ ಕುರಿತಾಗಿರುವ ಭಾವಕ್ಕೂ ವ್ಯತ್ಯಾಸವಿದೆ. ದೇವತೆಯಿಂದ ದೇವತೆಗೆ ಬದಲಾಗುವ ಭಾರತೀಯ ಭಾವಸಂಚಾರಕ್ಕಿದು ಉದಾಹರಣೆ.

ನವೀನ ಗಂಗೋತ್ರಿ

ಹಬ್ಬ ಅಥವಾ ಪೂಜೆ, ಯಜ್ಞ, ಕ್ರತು, ಸತ್ರ ಯಾವುದೇ ದೇವತೆಯದಾಗಿದ್ದರೂ ಅದರ ಆದಿಯಲ್ಲಿ ಪೂಜೆ ಸಲ್ಲುವುದು ಮಾತ್ರ ವಿಘ್ನನಿವಾರಕ ಗಣೇಶನಿಗೆ. ಹಾಗೆ ಪೂಜಿತನಾಗುವ ಗಣೇಶನಿಗೆ ಅವನ ಗುಣ ಮತ್ತು ರೂಪವನ್ನಾಧರಿಸಿ ಸಾವಿರಾರು ಹೆಸರುಗಳು. ಕಾರ್ಯಕಲಾಪಗಳಲ್ಲಿ ಒದಗುವ ವಿಘ್ನವನ್ನು ದೂರಮಾಡುವ ಗಣೇಶನು ಕಲಾಭಿಮಾನಿ ದೇವತೆಯೂ ಹೌದು, ಕಲಾತ್ಮಕನಾದ ದೇವನೂ ಹೌದು. ವಸ್ತುತಃ ಭಾರತೀಯವಾದ ಅನೇಕ ಕಲೆಗಳಿಗೆ, ಅದರಲ್ಲೂ ನೃತ್ಯಾದಿ ರಂಗಕಲೆಗೆ ಶಿವನು ಅಧಿಷ್ಠಾತೃ ದೇವತೆ. ಆದರೆ ಚಿತ್ರವೇ ಮೊದಲಾದ ರೇಖಾಪ್ರಧಾನ ಕಲೆಯ ವಿಚಾರ ಬಂದಾಗ ಆ ಕಲೆಗೆ ಅತ್ಯಂತ ಸಹಜವಾಗಿ ಒದಗಿಬರುವ ದೇವತಾವಸ್ತುವೆಂದರೆ ಶಿವನ ಮಗನಾದ ಗಣೇಶನೇ. ಎಷ್ಟೆಷ್ಟು ಬಗೆಯಲ್ಲಿ ಚಿತ್ರಿಸಿ ತೋರಿಸಿದ ಬಳಿಕವೂ ಮತ್ತೆ ಮತ್ತೆ ಹೊಸ ಅವತಾರಗಳಲ್ಲಿ ಕಲಾವಿದನ ಕಲ್ಪನೆಗೆ ಒದಗುವ, ಮೊಗೆದಷ್ಟೂ ಮುಗಿಯದ ಕಲಾವಂತಿಕೆಯ ದೇವನಿವ. ಇದೆಲ್ಲದರ ಜೊತೆಗೆ ಗಣಪತಿಗೆ ಒದಗುವಷ್ಟು ವಿಸ್ತೃತವಾದ ಸಿಹಿತಿನಿಸು ಹಾಗೂ ಇನ್ನಿತರ ಖಾದ್ಯಪದಾರ್ಥಗಳ ನೈವೇದ್ಯ ಬಹುಶಃ ಭಾರತದ ಇನ್ನ್ಯಾವ ದೇವತೆಗೂ ಒದಗಲಾರದು. ದಕ್ಷಿಣ ಭಾರತದಲ್ಲಂತೂ ಭೋಜನಪ್ರಿಯವಾದ ದೇವತೆಯೆಂದರೆ ಲಂಬೋದರನೇ.

ಕಲಾಪ್ರಸ್ತುತಿಯ ಸಂದರ್ಭವನ್ನು ನೋಡುವುದಾದರೆ ಭಾರತೀಯವಾದ ಎಲ್ಲ ಶಾಸ್ತ್ರೀಯ ಕಲಾಪ್ರಸ್ತುತಿಗಳೂ ಆರಂಭವಾಗುವುದು ಗಣೇಶವಂದನೆಯೊಂದಿಗೆ. ಯಕ್ಷಗಾನದಂಥ ದೇಸೀ ಶಾಸ್ತ್ರೀಯ ಕಲೆಯಿಂದ ಹಿಡಿದು ಉತ್ತರಾದಿ-ದಕ್ಷಿಣಾದಿ ಸಂಗೀತದಷ್ಟು ಭಾರತವ್ಯಾಪಿಯಾದ ಕಲೆಯವರೆಗೂ ಗಣಪನಿಗೊಂದು ಆದಿಪೂಜೆಯೋ ನುಡಿನಮನವೋ ಇದ್ದೇ ಇದೆ. ವಿಶೇಷವೆಂದರೆ ಈ ಎಲ್ಲ ಕಲೆಗಳಿಗೂ ಆಯಾ ಕಲೆಯ ಜಾಡಿನಲ್ಲಿಯೇ ಗಣಪನು ನಿರ್ವಿಘ್ನ ದೇವತೆಯಾಗಿ ಒದಗುತ್ತಾನೆ ಎನ್ನುವುದು.

ADVERTISEMENT

ಅದಷ್ಟಲ್ಲದೆ ಗಣಪತಿಯಷ್ಟು ಸಲೀಸಾಗಿ ಬೇರೆ ಬೇರೆ ಸಂದರ್ಭಗಳಿಗೆ, ವರ್ತಮಾನದ ಸ್ಥಿತಿಗತಿಗಳಿಗೆ, ಭಿನ್ನ ಭಿನ್ನ ಕಲಾಪ್ರಕಾರಗಳಿಗೆ ಒದಗಿಬರಬಲ್ಲ ಇನ್ನೊಬ್ಬ ದೇವನಿಲ್ಲ. ನೃತ್ಯಗಣಪತಿ ಎಂಬ ಹೆಸರಿನಲ್ಲಿ ನರ್ತಿಸುತ್ತಿರುವಂತೆಯೂ, ವಾದ್ಯಗಣಪತಿ ಎಂಬ ಹೆಸರಿನಲ್ಲಿ ಹಲವಾರು ವಾದ್ಯಗಳನ್ನು ನುಡಿಸುತ್ತಿರುವಂತೆಯೂ, ಗಾನಗಣಪತಿ ಎಂಬ ಹೆಸರಲ್ಲಿ ಹಾಡುತ್ತಿರುವಂತೆಯೂ, ವಿದ್ಯಾಗಣಪತಿ ಎಂದು ವಿದ್ಯಾದಾಯಕನನ್ನಾಗಿಯೂ ಇನ್ಯಾವ ದೇವರನ್ನಾಗಲೀ ಕಲಾವಿದರು ಚಿತ್ರಿಸಿದ್ದಿಲ್ಲ. ಪಾರಂಪರಿಕವಾಗಿ ತೋರುವ ಈ ರೂಪಗಳಷ್ಟೇ ಅಲ್ಲದೆ ನಾವು ಬದುಕುತ್ತಿರುವ ಕಾಲದ ವಿದ್ಯಮಾನಗಳಲ್ಲಿಯೂ ಒಳಿತಿನ ಪ್ರತಿನಿಧಿಯಾಗಿ ಗಣಪನಿಗೆ ಸ್ಥಾನವಿದೆ. ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪ್ರತಿವರ್ಷವೂ ಗಣಪತಿಯು ಧರಿಸುವ ನಾನಾ ವಿಧದ ರೂಪಗಳನ್ನು ನೋಡುವಾಗ ಇದು ಸ್ಪಷ್ಟವಾಗುತ್ತದೆ. ಕಲೆಯ ಕಣ್ಣಿನಿಂದ ದೇವತೆಯನ್ನು ನೋಡುವ ಮತ್ತು ಚಿತ್ರಿಸುವ ಸನಾತನ ಸ್ವಾತಂತ್ರ್ಯಕ್ಕೆ ಗಣಪನೊಂದು ಅತ್ಯಂತ ಸಹಜವಾದ ಉದಾಹರಣೆಯಾಗುತ್ತಾನೆ. ಧಾರ್ಮಿಕ ಆಚರಣೆಗಳು ಮತ್ತು ಕಲೆಗಳು ಭಾರತದಲ್ಲೆಂದಿಗೂ ಪರಸ್ಪರ ಘನಿಷ್ಠ ಸಂಬಂಧವಿರುವ ಸಂಗತಿಗಳು. ಒಂದರ್ಥದಲ್ಲಿ ಭಾರತದ ಹಲವಾರು ಕಲೆಗಳು ರಂಗಪ್ರವೇಶವಾಗುವುದಕ್ಕೂ ಮುಂಚೆ ಜೀವಿಸಿದ್ದಿದ್ದು ಮತ್ತು ಬೆಳೆದುಬಂದಿದ್ದೆಲ್ಲ ಧಾರ್ಮಿಕ ಪರಿವೇಶದಲ್ಲಿಯೇ. ಗಣಪತಿಮೂರ್ತಿಯ ನಿರ್ಮಾಣ ಮತ್ತು ತತ್ಸಂಬದ್ಧವಾದ ಆಚರಣೆಗಳಂತೂ ಕಲೆಯನ್ನೇ ಉಸಿರಾಗಿಸಿಕೊಂಡಿರುವಂಥವು.

ಗಣಪತಿಯ ಆರಾಧನೆಯೆನ್ನುವುದು ಭೌಗೋಳಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಭಾರತಕ್ಕೆ ಮಾತ್ರ ಸಂಬಂಧಿಸಿರದೆ ಇಂಡೋನೇಷ್ಯಾ, ಪಿಲಿಪ್ಪೀನ್ಸ್‌, ಬಾಲಿ, ಜಪಾನ್, ಟಿಬೆಟ್, ಥಾಯ್ಲೆಂಡ್‌, ಘಾನಾ ಮೊದಲಾದ ದೇಶಗಳಲ್ಲಿಯೂ ಇರುವುದಾಗಿ ಕಂಡುಬರುತ್ತದೆ. ಇಂಡೊನೇಷ್ಯಾ ಇವತ್ತಿಗೆ ಒಂದು ಮುಸ್ಲಿಂ ಬಾಹುಳ್ಯದ ರಾಷ್ಟ್ರವಾಗಿದ್ದರೂ ತನ್ನ ಕರೆನ್ಸಿಯಲ್ಲಿ ಗಣಪತಿಯ ಚಿತ್ರವನ್ನು ಬಳಸುತ್ತದೆ. ಗಣಪತಿಯ ವಿಶ್ವಪ್ರಿಯತೆಗೆ ಇದು ಸಾಕ್ಷಿ. ವಿಶಾಲ ಸನಾತನದ ಪರಂಪರೆಯಲ್ಲಿ ವೈದಿಕರು ಮಾತ್ರವಲ್ಲದೆ ಬೌದ್ಧರೂ ಜೈನರೂ ಗಣೇಶನನ್ನು ಬೇರೆ ಬೇರೆ ವಿಧದಲ್ಲಿ ಪೂಜಿಸಿರುವರು. ಲೌಕಿಕರು, ವೈದಿಕರು, ಜೈನರು ಮತ್ತು ಬೌದ್ಧರಲ್ಲದೆ ತಾಂತ್ರಿಕರು ಅಥವಾ ಆಗಮಿಕರಲ್ಲಿಯೂ ಗಣೇಶನಿಗೆ ಸ್ಥಾನವಿದೆ.

ಹೀಗೆ ಗಣಪತಿಯ ಆರಾಧನೆಗೆ ದೀರ್ಘವೂ ವಿಶಾಲವೂ ಆದ ಪರಂಪರೆಯಿದೆ. ವೈಶ್ವಿಕವಾಗುತ್ತಲೇ ದೇಸೀ ಅನ್ನಿಸಿಕೊಳ್ಳುವುದು ಸಹ ಗಣಪನ ಹೆಗ್ಗಳಿಕೆಯಲ್ಲೊಂದು. ಕನ್ನಡ ಮಣ್ಣಿಗೆ ಮತ್ತು ನುಡಿಯ ಜಾಡಿಗೆ ಹೊಂದುವಂತೆ ವಿನಾಯಕ ಎನ್ನುವುದೇ ಬೆನಕ ಎಂದು ತದ್ಭವಗೊಂಡಿದೆ. ಈ ಬಗೆಯಲ್ಲಿ ಕನ್ನಡನಾಡು ಗಣೇಶನನ್ನು ತನ್ನ ನುಡಿಯ ದೇಶೀಯತೆಗೆ ಒಗ್ಗಿಸಿಕೊಂಡಿದೆ ಎನ್ನಬಹುದು.

ಲೇಖಕ: ಸಹಾಯಕ ಪ್ರಾಧ್ಯಾಪಕ, ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಸ್ಪಿರಿಚುವಲ್ ಸ್ಟಡೀಸ್‌, ಅಮೃತ ವಿಶ್ವವಿದ್ಯಾಪೀಠ, ಕೊಯಮತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.