ADVERTISEMENT

Muharram 2021: ಐತಿಹಾಸಿಕ ಹಿನ್ನೆಲೆಯ ಮೊಹರಂ

ಆರ್‌.ಎಂ.ಸಿದ್ದೀಕ್
Published 19 ಆಗಸ್ಟ್ 2021, 22:30 IST
Last Updated 19 ಆಗಸ್ಟ್ 2021, 22:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಇಸ್ಲಾಮಿಕ್‌ ಕ್ಯಾಲೆಂಡರಿನ ಮೊದಲ ತಿಂಗಳೇ ಮೊಹರಂ. ಐತಿಹಾಸಿಕ ಹಿನ್ನೆಲೆ ಹೊಂದಿದ ತಿಂಗಳು ಇದು. ಪ್ರವಾದಿ ಮುಹಮ್ಮದ್‌ ಅವರು ಮಕ್ಕಾದಿಂದ ಮದೀನಕ್ಕೆ ವಲಸೆ ಹೋದದ್ದು, ಕರ್ಬಲಾ ಯುದ್ಧ, ಪ್ರವಾದಿ ಮೂಸಾ (ಮೋಸೆಸ್‌) ಅವರನ್ನು ಫರೋಹನ ದಬ್ಬಾಳಿಕೆಯಿಂದ ಮುಕ್ತಿಗೊಳಿಸಿದ್ದು ಸೇರಿದಂತೆ ಹಲವು ಘಟನೆಗಳು ಈ ಮಾಸದಲ್ಲಿ ಸಂಭವಿಸಿವೆ.

ಪ್ರವಾದಿ ಮುಹಮ್ಮದ್‌ ಅವರು ಮಕ್ಕಾದಿಂದ ವಲಸೆಹೋದ ದಿನ ಇಸ್ಲಾಮೀ ಇತಿಹಾಸದ ಪ್ರಮುಖ ಘಟನೆಯಾದ್ದರಿಂದ ಅದನ್ನು ಹಿಜರಿ ಶಕೆಯಾಗಿ ಆರಿಸಿಕೊಳ್ಳಲಾಯಿತು. ಮಾನಸಿಕ, ದೈಹಿಕ ಹಿಂಸೆಗಳ ನಂತರ ವಿರೋಧಿಗಳು ತನ್ನನ್ನು ಕೊಲ್ಲುವ ಸಂಚು ಹೆಣೆದಿರುವುದನ್ನು ಅರಿತ ಪೈಗಂಬರರು ಸತ್ಯ, ಮಾನವೀಯತೆ ಹಾಗೂ ಶಾಂತಿಯ ಜೀವನ ವ್ಯವಸ್ಥೆಯ ಸ್ಥಾಪನೆಗಾಗಿ ಮನೆ ಹಾಗೂ ನಾಡನ್ನು ತೊರೆದು ಮದೀನಕ್ಕೆ ವಲಸೆ ಹೋದರು.

ಕರ್ಬಲಾ ಯುದ್ಧ: ಮೊಹರಂ ಮಾಸದಲ್ಲಿ ನಡೆದ ಇನ್ನೊಂದು ಪ್ರಮುಖ ಘಟನೆ ಕರ್ಬಲಾ ಯುದ್ಧ. ಪ್ರವಾದಿ ಮುಹಮ್ಮದ್‌ ಅವರ ಮರಣದ ಬಳಿಕ ಅವರ ಸಂಗಾತಿಗಳಾದ ಅಬೂಬಕರ್‌, ಉಮರ್‌, ಉಸ್ಮಾನ್‌ ಮತ್ತು ಅಲಿ ಅವರು ಅರೇಬಿಯಾದಲ್ಲಿ ಆಳ್ವಿಕೆ ನಡೆಸುವರು. ಆ ಬಳಿಕ ಮುಆವಿಯಾ ಎಂಬವರು ಅಧಿಕಾರಕ್ಕೆ ಬರುವರು. ಇವರೆಲ್ಲರೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಡಳಿತ ನಡೆಸಿದ್ದರು.

ADVERTISEMENT

ಆದರೆ ಮುಆವಿಯಾ ತನ್ನ ಅಧಿಕಾರಾವಧಿಯ ಬಳಿಕ ಮಗ ಯಝೀದ್‌ಗೆ ಪಟ್ಟ ಕಟ್ಟುತ್ತಾರೆ. ಅದುವರೆಗೂ ಇದ್ದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಬದಲಾಗಿ, ವಂಶಾಡಳಿತಕ್ಕೆ ಅವಕಾಶ ಮಾಡಿಕೊಡುವರು. ಪ್ರವಾದಿ ಮತ್ತು ಸಂಗಡಿಗರಿಂದ ಸ್ಥಾಪಿತವಾದ ಆಡಳಿತವು ವಂಶಾಡಳಿತದೆಡೆಗೆ ಹೋಗುವುದನ್ನು ಪ್ರವಾದಿಯವರ ಮೊಮ್ಮಗ ಹುಸೈನ್ ವಿರೋಧಿಸುವರು.

ರಾಷ್ಟ್ರದ ಸಂಪತ್ತು ಅಲ್ಲಿನ ಪ್ರಜೆಗಳ ಹಕ್ಕು, ಅದು ಯಾರದೇ ಪಿತ್ರಾರ್ಜಿತ ಸ್ವತ್ತಲ್ಲವೆಂದು
ಬಂಡಾಯವೆದ್ದರು. ತೀವ್ರ ವಿರೋಧದ ಹೊರತಾಗಿಯೂ ಯಝೀದ್ ಅಧಿಕಾರ ತ್ಯಜಿಸದಿದ್ದಾಗ
ಹುಸೈನ್‌ ಯುದ್ಧಸಾರಿದರು. ಕರ್ಬಲಾ ಎಂಬಲ್ಲಿ ನಡೆದ ಯುದ್ಧದಲ್ಲಿ ಹುಸೈನ್‌ ಹುತಾತ್ಮರಾಗುವರು. ಒಂದು ಆದರ್ಶಕ್ಕಾಗಿ ತನ್ನ ಹಾಗೂ ಇಡೀ ಕುಟುಂಬದ ಪ್ರಾಣವನ್ನೇ ನೀಡಿದರು. ಅನ್ಯಾಯದ ವಿರುದ್ಧ ಸದಾ ಹೋರಾಡಬೇಕು ಎಂಬ ಸಂದೇಶವನ್ನು ಜಗತ್ತಿಗೆ ನೀಡಿದರು.

ಪ್ರವಾದಿ ಮೂಸಾ ಪಾರಾದ ಘಟನೆ:
ಪ್ರವಾದಿ ಮೂಸಾ ಮತ್ತು ಅವರ ಅನುಯಾಯಿಗಳನ್ನು ದೇವನು ಪಾರುಗೊಳಿಸಿದ ಇನ್ನೊಂದು ಪ್ರಮುಖ ಘಟನೆಯೂ ಈ ತಿಂಗಳಲ್ಲಿ ನಡೆದಿದೆ. ಈಜಿಪ್ಟ್‌ನ ಸರ್ವಾಧಿಕಾರಿ ಫರೋಹ, ಮೂಸಾ ಅವರ ಬನೀ ಇಸ್ರಾಯೀಲ್ ಸಮುದಾಯವನ್ನು ತನ್ನ ಗುಲಾಮರಾಗಿಸಿಕೊಂಡಿದ್ದನು. ತನ್ನ ಸಮುದಾಯದ ಜನರಿಗೆ ನ್ಯಾಯ ಒದಗಿಸಲು ಮೂಸಾ ಅವರು ಸರ್ವಾಧಿಕಾರಿಯೊಂದಿಗೆ ದೀರ್ಘಕಾಲ ಹೋರಾಡಿಕೊಂಡು ಬಂದಿದ್ದರು. ದಬ್ಬಾಳಿಕೆ ಹೆಚ್ಚಿದಾಗ ಈಜಿಪ್ಟ್‌ ತೊರೆಯುವರು.

ಫರೋಹನ ಸೇನೆ ಅವರನ್ನು ಸಮುದ್ರ ತೀರದವರೆಗೆ ಬೆನ್ನಟ್ಟಿಕೊಂಡು ಬರುತ್ತದೆ. ಹಿಂದಿನಿಂದ ಫರೋಹನ ಸೇನೆ ಬರುತ್ತಿದ್ದರೆ, ಮುಂದೆ ಸಮುದ್ರ. ಮೂಸಾ ಮತ್ತು ಸಂಗಾತಿಗಳಿಗೆ ಅಡಕತ್ತರಿಯಲ್ಲಿ ಸಿಕ್ಕಿಕೊಂಡ ಪರಿಸ್ಥಿತಿ. ಆಗ ಮೂಸಾ ಅವರ ಕೈಯಲ್ಲಿರುವ ಲಾಠಿಯನ್ನು ಸಮುದ್ರಕ್ಕೆ ಸ್ಪರ್ಶಿಸುವಂತೆ ದೇವನಿಂದ ಆದೇಶವಾಗುತ್ತದೆ. ಅದ್ಭುತ ಪವಾಡವಾಗಿ ಸಮುದ್ರ ಎರಡು ಹೋಳಾಗಿ ರಸ್ತೆ ನಿರ್ಮಾಣವಾಗುತ್ತದೆ. ಮೂಸಾ ಹಾಗೂ ಸಂಗಾತಿಗಳು ಆ ರಸ್ತೆ ಮೂಲಕ ಸಮುದ್ರ ದಾಟುವರು. ಅವರನ್ನು ಹಿಂಬಾಲಿಸಿಕೊಂಡು ಬಂದ ಫರೋಹ ಮತ್ತು ಸೇನೆ ಸಮುದ್ರದ ಮಧ್ಯ ತಲುಪಿದಾಗ ಹೋಳಾಗಿದ್ದ ಸಮುದ್ರ ಒಂದಾಗುತ್ತದೆ. ಅವರೆಲ್ಲರೂ ಜಲಸಮಾಧಿಯಾಗುವರು.

ಈ ಘಟನೆಯನ್ನು ವಿವರಿಸುತ್ತಾ ಕುರ್‌ಆನ್‌ನಲ್ಲಿ ‘ಮುಂದಿನ ತಲೆಮಾರಿನ ಜನರಿಗೆ ಎಚ್ಚರಿಕೆಯ ದ್ಯೋತಕವಾಗಿರುವಂತೆ ನಾವು ನಿನ್ನ ಶವವನ್ನು ಮಾತ್ರ ಸುರಕ್ಷಿತರಾಗಿಸುವೆವು’ (10: 90–92) ಎಂದು ಹೇಳಲಾಗಿದೆ. ಈಜಿಪ್ಟ್‌ನ ವಸ್ತುಸಂಗ್ರಹಾಲಯದಲ್ಲಿ ಫರೋಹನ ಮೃತದೇಹ ಇಂದಿಗೂ ಸುರಕ್ಷಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.