ADVERTISEMENT

ನಾಗರ ಪಂಚಮಿ ನಾಡಿಗೆ ದೊಡ್ಡದು

ಇಂದು ನಾಗರ ಪಂಚಮಿ

ತೇಜಸ್ವಿನಿ ಹೆಗಡೆ
Published 13 ಆಗಸ್ಟ್ 2021, 7:01 IST
Last Updated 13 ಆಗಸ್ಟ್ 2021, 7:01 IST
ನಾಗರ ಪಂಚಮಿ
ನಾಗರ ಪಂಚಮಿ   

ಚಿಕ್ಕಂದಿನಲ್ಲಿ ಅಜ್ಜಿ ಆಗೀಗ ಗುನುಗುತ್ತಿದ್ದ ಜನಪದ ಹಾಡೊಂದು ಸದಾ ನೆನಪಿನಲ್ಲಿದೆ. ‘ನಾಗರ ಪಂಚಮಿ ನಾಡಿಗೆ ದೊಡ್ಡದು... ನಾರಿಯಲ್ಲರೂ ನಲಿವರು...’ ಈ ಗೀತೆಯನ್ನು ಈ ದಿನದಂದು ಹಾಡುತ್ತಾ ಅವರು ಕಜ್ಜಾಯ ಮಾಡುತ್ತಿದ್ದಳು. ಶ್ರಾವಣಮಾಸದ ಶುಕ್ಲಪಕ್ಷದ ಪಂಚಮೀ ತಿಥಿಯಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಆದರೆ ಸೌರಾಷ್ಟ್ರ ದೇಶದಲ್ಲಿ ಶ್ರಾವಣಮಾಸದ ಕೃಷ್ಣಪಕ್ಷದ ಪಂಚಮಿಯಂದು ಇದನ್ನು ಆಚರಿಸಲಾಗುತ್ತದೆ.

ನಾಗರ ಪಂಚಮಿಯನ್ನು ದೇಶದ ಎಲ್ಲಾ ಭಾಗಗಳಲ್ಲೂ ವಿವಿಧ ರೀತಿಯ ಆಚರಣೆ, ಸಂಪ್ರದಾಯಗಳ ಮೂಲಕ ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಈ ಹಬ್ಬಕ್ಕೆ ವಿಶೇಷವಾದ ಸ್ಥಾನವಿದೆ. ಇದಕ್ಕೆ ಮುಖ್ಯ ಕಾರಣಗಳು ಎರಡು. ಸುಪ್ರಸಿದ್ಧ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಕರಾವಳಿ–ಮಲೆನಾಡಿನಲ್ಲಿ ಭಾಗಗಳಲ್ಲಿ ನಾಗನಿಗೆ ಇರುವ ಪ್ರಮುಖ ಸ್ಥಾನ.

ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಸಂಪ್ರದಾಯ ಆಚರಣೆಗಳಿರುತ್ತವೆ. ಉತ್ತರ ಕರ್ನಾಟಕದ ಕಡೆ ಇದೊಂದು ಸಾಂಸ್ಕೃತಿಕ ಹಬ್ಬವಾಗಿದೆ. ಸಹೋದರ ಸಹೋದರಿಯರು ಒಂದೆಡೆ ಸೇರಿಕೊಂಡು, ಪ್ರೀತಿ, ವಾತ್ಸಲ್ಯಭಾವದಿಂದ ಸಹೋದರರನ್ನು ಹಾರೈಸುವುದು, ಅವರ ಆಶೀರ್ವಾದಗಳನ್ನು ಪಡೆಯುವುದು ನಡೆಯುತ್ತದೆ. ಹೊಸ ಉಡುಗೆಯನ್ನುಟ್ಟು ಸಂಭ್ರಮದಿಂದ ಹೆಣ್ಮಕ್ಕಳು ಉಯ್ಯಾಲೆ ಜೀಕುತ್ತಾರೆ. ಮನೆಯ ಹೆಣ್ಮಕ್ಕಳಿಗೆ (ಮದುವೆಯಾದ) ಚಕ್ಕುಲಿ, ಚೂಡ, ಅರಳು, ಉಂಡೆ – ಇವೆಲ್ಲವನೂ ಕೊಬ್ಬರಿಯೊಟ್ಟಿಗಿಟ್ಟು ಕುಪ್ಪುಸದ ಕಣದೊಂದಿಗೆ ಬಾಗೀನ ನೀಡಲಾಗುತ್ತದೆ. ಹಳೆಯ ಮೈಸೂರಿನ ಭಾಗದಲ್ಲೂ ಈ ಹಬ್ಬ ಅಣ್ಣ–ತಮ್ಮಂದಿರ ಹಬ್ಬ ಎಂದೇ ಪ್ರಸಿದ್ಧವಾಗಿದೆ. ಸಹೋದರರ ಒಳಿತನ್ನು ಕೋರಿ ಸಹೋದರಿಯರು ಅವರಿಗೆ ಬೆನ್ನುಪೂಜೆಯನ್ನು ಮಾಡುವುದು ಈ ಹಬ್ಬದ ವಿಶೇಷವಾಗಿದೆ.

ADVERTISEMENT

ಇಂದು ಪೂಜೆಯ ಭಾಗವಾಗಿ ನಾಗರ ಕಲ್ಲುಗಳಿಗೆ ಎಳನೀರು ಹಾಗೂ ಹಾಲಿನಿಂದ ಅಭಿಷೇಕವನ್ನು ಮಾಡಲಾಗುತ್ತದೆ. ಇದಕ್ಕೆ ‘ತನಿ ಎರೆಯುವುದು‘ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಹೆಚ್ಚು ಬೆಳೆಯುವ ಅರಿಶಿನದ ಎಲೆಗಳಿಂದ ‘ಪಾತೋಳಿ’ ಎನ್ನುವ ಸಿಹಿಗಜ್ಜಾಯವನ್ನು ತಯಾರಿಸಿ ನೈವೇದ್ಯ ಮಾಡಲಾಗುತ್ತದೆ. ನಾಗತಂಬಿಲದ (ಅರಳಿನ ಉಂಡೆ) ಸೇವೆಯನ್ನೂ ನಡೆಸಲಾಗುತ್ತದೆ. ಉತ್ತರ ಕನ್ನಡದ ಕಡೆ ನಾಗನಿಗೆ ಉಪ್ಪು ಹಾಕದ ಚಪ್ಪೆ ಅಕ್ಕಿರೊಟ್ಟಿಯ ನೈವೇದ್ಯ ಹಾಗೂ ಕ್ಷೀರಾಭಿಷೇಕವನ್ನು ಮಾಡಲಾಗುತ್ತದೆ. ಹುತ್ತಗಳಿಗೆ ಪೂಜಿಸುವ ಕ್ರಮ ಉಂಟು. ಆದರೆ ಹಾವುಗಳು ವಾಸಿಸುವ ಹುತ್ತಗಳಿಗೆ ಹಾಲನ್ನು ಬಹಳ ಎರೆದರೆ ಅವುಗಳಿಗೆ ಹಾನಿಯಾಗುವ ಸಂಭವವಿರುವುದರಿಂದ, ಎಚ್ಚರವನ್ನು ವಹಿಸುವುದು ಒಳ್ಳೆಯದು.

ನಮ್ಮಲ್ಲಿ ಅಧ್ಯಾತ್ಮಕ್ಕೂ ನಾಗನಿಗೂ ಅವಿನಾಭಾವದ ನಂಟಿದೆ. ವೇದಗಳಲ್ಲಿ ನಾಗವು ಅಧ್ಯಾತ್ಮಿಕತೆ ಸಂಕೇತ; ಇದು ಭೂಮಿ, ಅಂತರಿಕ್ಷ ಮತ್ತು ದಿವಿ (ಬೆಳಕಿನ ಲೋಕ) - ಈ ಮೂರು ಲೋಕಗಳಲ್ಲೂ ಇವೆ ಎಂದು ಹೇಳಲಾಗಿದೆ. ಭೂಮಿಯಲ್ಲಿ ಸರೀಸೃಪ ರೂಪದಲ್ಲಿ, ಅಂತರಿಕ್ಷದಲ್ಲಿ ಮಿಂಚಿನ ಬಳ್ಳಿಯ ರೂಪದಲ್ಲಿ, ದ್ಯುಲೋಕದಲ್ಲಿ ಸೂರ್ಯರಶ್ಮಿಯ ರೂಪದಲ್ಲಿ ನಾಗವನ್ನು ಯಜುರ್ವೇದ ಮಂತ್ರವೊಂದು ನಿರೂಪಿಸಿದೆ. ಅಲ್ಲದೆ, ಯೋಗಿಗಳ ಪ್ರಾಣಶಕ್ತಿಯಾಗಿರುವ ಕುಂಡಲಿನೀ ಶಕ್ತಿಯು ದೇಹದೊಳಗೆ ಹರಿಯುವುದು ನಾಗಸರ್ಪದಂತೆಯೇ ಎಂದು ಶಾಸ್ತ್ರಗಳು ಹೇಳುತ್ತವೆ. ಎಚ್ಚೆತ್ತ ಫಣೀಂದ್ರನು ಸರ‍್ರನೇ ಮೇಲೇರುವಂತೇ ಮೂಲಾಧಾರಚಕ್ರದಿಂದ ಸಹಸ್ರಾರದವರೆಗೂ ಆವರಿಸಿಕೊಂಡಿರುವಂಥದ್ದು ಈ ಶಕ್ತಿ. ಈ ಕುಂಡಲಿನಿಯು ಮೂಲಾಧಾರದಲ್ಲಿ ಮಲಗಿದ ಸರ್ಪದಂತೇ ಇರುತ್ತದೆ ಎಂದು ನಂಬಲಾಗಿದೆ.

ಶ್ರಾವಣಮಾಸದ ಆರಂಭದಲ್ಲಿಯೇ ಬರುವ ನಾಗರ ಪಂಚಮಿಯು, ಮುಂಬರುವ ಎಲ್ಲಾ ಹಬ್ಬಗಳಿಗೂ ಆದಿಯಾಗಿದೆ. ಇದರ ಆಚರಣೆಯಲ್ಲಿ ಪ್ರಕೃತಿಯ ಆರಾಧನೆ ಇದೆ; ಜೊತೆಗೆ ಮನುಷ್ಯ ಮತ್ತು ಸಕಲ ಜೀವಿಗಳ ಸಾಮರಸ್ಯದ ಸಂಬಂಧದ ಆಶಯವೂ ಇದರಲ್ಲಿ ಅಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.