ADVERTISEMENT

ದಿನದ ಸೂಕ್ತಿ: ಕೆಲಸ ಶುದ್ಧವಾಗಿರಲಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 27 ಜೂನ್ 2021, 4:52 IST
Last Updated 27 ಜೂನ್ 2021, 4:52 IST
ಮನನ
ಮನನ   

ದೃಷ್ಟಿಪೂತಂ ನ್ಯಸೇತ್ಪಾದಂ ವಸ್ತ್ರಪೂತಂ ಜಲಂ ಪಿಬೇತ್‌ ।

ಸತ್ಯಪೂತಾಂ ವದೇದ್ವಾಚಂ ಮನಃಪೂತಂ ಸಮಾಚರೇತ್‌ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಕಣ್ಣಿನಿಂದ ಸರಿಯಾಗಿ ನೋಡಿ ಹೆಜ್ಜೆಯನ್ನು ಇಡಬೇಕು; ಬಟ್ಟೆಯಿಂದ ಶೋಧಿಸಿಯೇ ನೀರನ್ನು ಕುಡಿಯಬೇಕು; ಸತ್ಯದಿಂದ ಶುದ್ಧಿಯಾದ ಮಾತನ್ನೇ ಆಡಬೇಕು; ಮನಸ್ಸಿನಿಂದ ಪವಿತ್ರವಾದ ಕೆಲಸವನ್ನೇ ಮಾಡಬೇಕು.’

ನಾವು ಮಾಡುವ ಪ್ರತಿ ಕೆಲಸವನ್ನು ಎಚ್ಚರಿಕೆಯಿಂದಲೂ ಮಾಡಬೇಕು; ಹಾಗೆ ಮಾಡಿದ ಕೆಲಸ ಶುದ್ಧವಾಗಿಯೂ ಇರಬೇಕು. ಆಗಲೇ ನಮ್ಮ ಜೀವನಾರೋಗ್ಯ ಚೆನ್ನಾಗಿರಬಲ್ಲದು ಎನ್ನುತ್ತಿದೆ ಸುಭಾಷಿತ.

ದಾರಿಯಲ್ಲಿ ನಡೆದ ಮಾತ್ರಕ್ಕೆ ನಾವು ಗುರಿಯನ್ನು ತಲಪುವುದಿಲ್ಲ; ಆ ದಾರಿಯಲ್ಲಿ ಸರಿಯಾಗಿಯೂ ನಡೆಯಬೇಕು, ನಮಗೆ ಅದು ನಿಷ್ಕಂಟಕವಾಗಿರಬೇಕು. ಅದನ್ನೇ ಸುಭಾಷಿತ ಹೇಳುತ್ತಿರುವುದು ಕಣ್ಣಿನಿಂದ ನೋಡುತ್ತ, ಎಂದರೆ ದಾರಿ ಸರಿ ಇದೆಯೆ ಎಂದು ಪರೀಕ್ಷಿಸುತ್ತ ನಡೆಯಬೇಕು.

ನೀರು ನಮ್ಮ ಆರೋಗ್ಯಕ್ಕೆ ತುಂಬ ಮುಖ್ಯವಾದುದು. ಹೀಗಾಗಿ ಶುದ್ಧವಾದ ನೀರನ್ನೇ ಕುಡಿಯಬೇಕು. ಆದುದರಿಂದ ಬಟ್ಟಯಿಂದ ನೀರನ್ನು ಶೋಧಿಸಿ ಕುಡಿಯಬೇಕು. ಅಶುದ್ಧವಾದ ನೀರು ನಮ್ಮ ಅನಾರೋಗ್ಯಕ್ಕೆ ಕಾರಣವಾಗಬಹುದು.

ನಾವು ಮಾತನ್ನೂ ಶುದ್ಧೀಕರಿಸಿಯೇ ಆಡಬೇಕು. ಮಾತನ್ನು ಹೇಗೆ ಶುದ್ಧಮಾಡುವುದು? ಸತ್ಯವಾದ ಮಾತನ್ನೇ ಆಡಿದರೆ ಆಗ ಆ ಮಾತು ಶುದ್ಧವಾಗಿದೆ ಎಂದೇ ಅರ್ಥ.

ನಾವು ಮಾಡುವ ಕೆಲಸಗಳು ಶುದ್ಧವಾಗಿರಬೇಕು. ಪವಿತ್ರವಾದ, ಎಂದರೆ ಒಳ್ಳೆಯ ಕೆಲಸಗಳೇ ಪವಿತ್ರವಾದ ಕೆಲಸಗಳು. ಅಂಥ ಕೆಲಸಗಳನ್ನೇ ನಾವು ಮಾಡಬೇಕು ಎಂದು ಸುಭಾಷಿತ ಹೇಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.