ADVERTISEMENT

ಸತ್ಯ ಸಂದೇಶ: ನೇಗಿಲ ದೈವ ರೈತ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 11 ಜೂನ್ 2021, 19:31 IST
Last Updated 11 ಜೂನ್ 2021, 19:31 IST
ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಗಣಪತಿ ಸಚ್ಚಿದಾನಂದ ಸ್ವಾಮೀಜಿ   

‘ಬೆಳಗಾಗೆದ್ದು ಯಾರ್ಯಾರ ನೆನೆಯಲಿ’ ಅಂತ ಜನಪದಹಾಡಲ್ಲಿ ಗೃಹಿಣಿಯೊಬ್ಬಳು ತನಗೆ ನೆರವಾದವರ ಬಗ್ಗೆ ಕೃತಜ್ಞತೆಯಿಂದ ಸ್ಮರಿಸುತ್ತಾಳೆ. ಭಾರತೀಯ ಸಂಸ್ಕೃತಿಯೇ ಹಾಗೇ, ನಿಷ್ಠೆಯ ನೆತ್ತಿಯ ಮೇಲೆ ಕೂತು ಉಪಕಾರದ ಸ್ಮರಣೆ ಮಾಡುತ್ತದೆ. ನಾಲ್ಕು ಜನಕ್ಕೆ ಒಳ್ಳೆಯದಾಗುವುದಾದರೆ ಯಾವ ತ್ಯಾಗಕ್ಕೂ ಸಿದ್ಧ ವಾದ ಜನರ ದೊಡ್ಡ ಪಟ್ಟಿಯೇ ಭಾರತೀಯ ಪರಂಪರೆಯಲ್ಲಿದೆ. ‘ಉಪ್ಪುಂಡ ಮನೆಗೆ ದ್ರೋಹ ಬಗೆಯಬೇಡ‘ ಎನ್ನುವುದು ನಮ್ಮ ಸಂಸ್ಕೃತಿ. ತ್ಯಾಗದ ಪ್ರತಿರೂಪವೇ ಭಾರತೀಯರು ಅನ್ನುವುದರಲ್ಲೂ ಅತಿಶಯೋಕ್ತಿಯಿಲ್ಲ. ಊರಿಗೆ ಉಪಕಾರವಾಗುವುದಾದರೆ ಪ್ರಾಣತ್ಯಾಗಮಾಡಿ ‘ಕೆರೆಗೆ ಹಾರ’ವಾದ ಭಾಗೀರಥಿಯರು ಬಹಳಷ್ಟಿದ್ದಾರೆ.

ಜಗದಲ್ಲಿ ಜೀವವೈವಿಧ್ಯ ಇರುವಂತೆ ಭಾರತದಲ್ಲಿ ಭಾವವೈವಿಧ್ಯವಿದೆ. ಜಗತ್ತಿನ ಯಾವ ಭೂಭಾಗದಲ್ಲೂ ಇಲ್ಲದಷ್ಟು ಜಾತಿ-ಧರ್ಮ-ಭಾಷೆ-ಸಂಸ್ಕೃತಿಗಳು ಇಲ್ಲಿ ಮೇಳೈಸಿವೆ. ಇಲ್ಲಿ ನೂರಾರು ಕೋಟಿ ಜನರು ನೂರಾರು ಸಂಸ್ಕೃತಿ-ಭಾಷೆಯೊಂದಿಗೆ ಸಾಮರಸ್ಯದಿಂದ ಬದುಕುತ್ತಾ ಬಂದಿದ್ದಾರೆ. ಇಲ್ಲಿ ಎಲ್ಲರೂ ಬದುಕಲು ನೆರವು ನೀಡುತ್ತಿರುವುದೇ ರೈತ. ಈ ದೇಶ ಮಾತ್ರವಲ್ಲ, ಇಡೀ ಜಗತ್ತಿಗೇರೈತನೇ ಅನ್ನದಾತ. ತಾನು ಹಸಿದಿದ್ದರೂ, ಹಸಿದವರ ಹೊಟ್ಟೆಗೆ ಅನ್ನ ತಿನ್ನಿಸಲು ರೆಟ್ಟೆ ಮುರಿಯೇ ದುಡಿಯುವ ರೈತ ನನ್ನ ದೃಷ್ಟಿಯಲ್ಲಿ ಪ್ರತ್ಯಕ್ಷ ದೈವ. ಇಂಥ ತ್ಯಾಗಮಯಿ ರೈತನನ್ನ ಮಹಾಕವಿ ಕುವೆಂಪು ‘ನೇಗಿಲ ಯೋಗಿ’ ಎಂದರು. ನಾನು ಆ ರೈತದೇವರನ್ನ ‘ನೇಗಿಲ ದೈವ’ ಅಂತ ಕರೆಯುತ್ತೇನೆ.

ಮನುಷ್ಯ ಬದುಕುವುದಕ್ಕೆ ಗಾಳಿ-ನೀರು-ಆಹಾರ ಬಹಳ ಮುಖ್ಯ. ಗಾಳಿ ಮತ್ತು ನೀರನ್ನು ಕಣ್ಣಿಗೆ ಕಾಣದ ದೇವರು ಕರುಣಿಸಿದ್ದಾನೆ. ಆದರೆ ಆಹಾರವನ್ನ ಕಣ್ಣಿಗೆ ಕಾಣುವ ದೇವರು ರೈತ ಮಾತ್ರ ಕೊಡುತ್ತಾನೆ. ಹೀಗಾಗಿ ರೈತ ಈ ಜಗತ್ತಿನ ಪ್ರತ್ಯಕ್ಷ ದೇವರು. ನನ್ನ ಬಾಲ್ಯದ ದಿನಗಳಲ್ಲಿ ಅನುಭವಿಸಿದ ಹಸಿವನ್ನು ಒಂದಿಷ್ಟು ತಣಿಸಿದ್ದು ರೈತರೇ. ಚಿಕ್ಕ ವಯಸ್ಸಿನಲ್ಲೆ ತಾಯಿಯನ್ನು ಕಳೆದುಕೊಂಡ ನನ್ನ ಮತ್ತು ತಂಗಿಯರನ್ನ ಆದರಿಸಿ ಬೆಳೆಸಿದ್ದು ರೈತರೇ. ಅವರ ಋಣ ನನ್ನ ಹೆತ್ತ ತಾಯಿಯ ಋಣದಷ್ಟೇ ಇದೆ. ಹಸಿದ ನಮ್ಮ ಒಡಲಿಗೆ ರೈತರು ನೀಡುತ್ತಿದ್ದ ಹಣ್ಣುಗಳೆ ಆಧಾರವಾಗಿತ್ತು. ಯಾರ ಮನೆಗೇ ಹೋದರೂ ‘ಬ್ರಾಹ್ಮಣರ ಮಕ್ಕಳು, ನಮ್ಮ ಮನೆ ಅನ್ನ ತಿನ್ನಲಾರ’ರೆಂದು ಹಣ್ಣುಗಳನ್ನು ಕೊಡುತ್ತಿದ್ದರು. ಆದರೆ ನಮ್ಮ ಹಸಿವಿಗೆ ಹಣ್ಣು ಬೇಡ, ಅನ್ನ ಕೊಡಿ ಅಂತ ಕೂಗಿ ಕೇಳಲು ನಮಗೆ ಬಾಯಿ ಬರುತ್ತಿರಲಿಲ್ಲ. ಹಸಿವು ತಣಿಸುವ ಅನ್ನಕ್ಕೆ, ರೋಗ ಗುಣಪಡಿಸುವ ಔಷಧಿಗೆ ಯಾವ ಜಾತಿ? ಯಾವ ಧರ್ಮ?

ADVERTISEMENT

ರೈತನ ಬೆಳೆಗೆ ಯಾರೂ ಬೆಲೆ ಕಟ್ಟಲಾಗದು. ಅದು ನಮಗೆಲ್ಲಾ ನಿತ್ಯ ಚೈತನ್ಯ ನೀಡುವ ದಿವ್ಯೌಷಧ. ಇಂಥ ಹಸಿವು ನೀಗಿಸುವ ನಿತ್ಯ ಸಂಜೀವಿನಿ ನೀಡುವ ರೈತ ನಮ್ಮೆಲ್ಲರ ಪಾಲಿಗೆ ಯಾವತ್ತೂ ಪ್ರತ್ಯಕ್ಷ ದೇವರು. ನನ್ನ ತಾಯಿ ಸಾಯುವ ಕೊನೆ ಘಳಿಗೆಯಲ್ಲೂ ನನಗೆ ಮತ್ತು ನನ್ನ ಸೋದರಿಯರಿಗೆ ಉಪದೇಶಿಸಿದ್ದು ‘ಅನ್ನ ಇಕ್ಕಿದವರ ಕೈ ಕೊನೆ ಉಸಿರಿರುವವರೆಗೂ ಮರೆಯಬೇಡ. ಒಂದು ತೊಟ್ಟು ನೀರು ಕೊಟ್ಟರೂ ಅವರ ಋಣ ತೀರಿಸು’ ಅಂತ. ನಾನು ಅನ್ನವಿಕ್ಕಿದ ಕೈಗಳನ್ನು ಮರೆತಿಲ್ಲ. ನೀರು ಕೊಟ್ಟವರ ಮನೆಗಳನ್ನ ಮರೆತಿಲ್ಲ. ಮೇಕೆದಾಟುವಿನಲ್ಲಿ ಹುಟ್ಟಿ ಮೈಸೂರಿನಲ್ಲಿ ಬೆಳೆಯುವವರೆಗೂ ನನ್ನೀ ದೇಹ ಹಲವರ ಉಪಕಾರದಿಂದ ಬೆಳೆದಿದೆ. ಅದರಲ್ಲಿ ರೈತರ ಸಹಾಯಹಸ್ತವೇ ಹೆಚ್ಚು. ಆ ಅನ್ನ ನೀಡಿದ ಕೈಗಳನ್ನು ಶ್ರೀದತ್ತಾತ್ರೇಯನ ಪಾದದಷ್ಟೆ ಪವಿತ್ರವಾಗಿ ಕಾಣುತ್ತೇನೆ. ಆಗ ಶ್ರೀಸಚ್ಚಿದಾನಂದ ಪದತಲದಲ್ಲಿ ಮಿಂದೆದ್ದ ಆನಂದ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.