ADVERTISEMENT

ಅರಿವಿನ ಜ್ಯೋತಿ ಹಚ್ಚಿಕೊಳ್ಳಿ: ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 3:31 IST
Last Updated 14 ಆಗಸ್ಟ್ 2021, 3:31 IST
ಮುರುಘರಾಜೇಂದ್ರ ಸ್ವಾಮೀಜಿ
ಮುರುಘರಾಜೇಂದ್ರ ಸ್ವಾಮೀಜಿ   

ಶ್ರಾವಣ ಧಾರ್ಮಿಕ ಆಚರಣೆ, ಚಿಂತನೆಯ ಮಾಸ. ಹಬ್ಬಗಳ ಮೂಲ ಆಶಯ ಮಾನವ ಸಂಬಂಧಗಳ ಬೆಸುಗೆ.

ಸಂಬಂಧಿಕರು, ನೆರೆಹೊರೆಯವರು ಕೂಡಿಕೊಂಡು ಉತ್ತಮ ಚಿಂತನೆಗಳನ್ನು ಮಾಡಿ, ಸಿಹಿ ತಿಂಡಿಗಳನ್ನು ಸೇವಿಸಿ, ಪರಸ್ಪರ ಪ್ರೀತಿ, ವಿಶ್ವಾಸ, ಕಷ್ಟ-ಸುಖಗಳನ್ನು ವಿನಿಮಯ ಮಾಡಿಕೊಳ್ಳುವುದೇ ಹಬ್ಬಗಳ ಆಶಯ.

ಶ್ರವಣ ಎಂದರೆ ಕೇಳುವುದು, ಏನನ್ನು ಕೇಳಬೇಕು? ಶರಣರ, ಮಹಾತ್ಮರ ಸಂದೇಶಗಳನ್ನು ಕೇಳಬೇಕು. ಈ ಸಂದರ್ಭದಲ್ಲಿ ಬಸವಣ್ಣನವರ ಒಂದು ವಚನ ಪ್ರಸ್ತುತವಾಗಿದೆ.

ADVERTISEMENT

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ
ಕೂಡಲಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯ.

ಜಗತ್ತಿನಲ್ಲಿ ಎರಡು ತರದ ಕತ್ತಲೆಗಳಿವೆ. ಒಂದು ಒಳಗಿನ ಕತ್ತಲು, ಮತ್ತೊಂದು ಹೊರಗಿನ ಕತ್ತಲು. ಹೊರಗಿನ ಕತ್ತಲನ್ನು ಹೋಗಲಾಡಿಸಲು ದೀಪ ಹಚ್ಚಿಕೊಳ್ಳುತ್ತೇವೆ. ಹಾಗೆಯೇ ಒಳಗಿನ ಅಜ್ಞಾನದ ಕತ್ತಲನ್ನು ಹೋಗಲಾಡಿಸುವಲ್ಲಿ ನಮ್ಮ ಒಳಗೆ ಅಂದರೆ, ಅಂತರಂಗದಲ್ಲಿ ಅರಿವಿನ ಜ್ಯೋತಿಯನ್ನು ಹಚ್ಚಿಕೊಂಡಾಗ ಒಳಗಿನ ಕತ್ತಲು ದೂರವಾಗಲು ಸಾಧ್ಯ.

ಅಣ್ಣ ಬಸವಣ್ಣನವರು ತಮ್ಮ ವಚನದಲ್ಲಿ ಜ್ಞಾನಕ್ಕೆ ತುಂಬಾ ಮಹತ್ವ ಕೊಟ್ಟಿದ್ದಾರೆ. ಬಾಹ್ಯ ಸಿರಿ-ಸಂಪತ್ತುಗಳನ್ನು ಅಪಹರಿಸಿಕೊಳ್ಳಬಹುದು. ಆದರೆ, ನಮ್ಮೊಳಗಿನ ಜ್ಞಾನದ ಸಂಪತ್ತನ್ನು ಯಾರೂ ಅಪಹರಿಸಲಾಗದು.

ಶ್ರಾವಣ ಮಾಸದಲ್ಲಿ ಜ್ಞಾನವನ್ನು ಸಂಪಾದನೆ ಮಾಡಿಕೊಳ್ಳಬೇಕು. ಆ ಮೂಲಕ ನಮ್ಮ ಜೀವನವು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ.

– ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ,
ಖಾಸಾಮಠ, ಗುರುಮಠಕಲ್ (ಯಾದಗಿರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.