ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ: ಕಷ್ಟ ಕ್ಷಯಿಸಿ ಸುಖ ಅಕ್ಷಯಿಸಲಿ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 14 ಮೇ 2021, 19:31 IST
Last Updated 14 ಮೇ 2021, 19:31 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಭೂಮಿಯ ಮೇಲೆ ಹುಟ್ಟಿದ ಪ್ರತಿ ಜೀವಿಯೂ ಸಾವನ್ನು ಬೆನ್ನಿಗಂಟಿಸಿಕೊಂಡು ಬರುತ್ತದೆ. ಆ ಸಾವು ಬೆನ್ನಿನಿಂದ ಬಾಯಿಗೆ ಬರುವ ಸಮಯವೇ ಜೀವಿಯ ಜೀವಿತಾವಧಿ. ಅದೆಷ್ಟು ಕಾಲ ಸಾವಿನ ಗಂಟನ್ನು ಬೆನ್ನಲ್ಲಿ ಹೊತ್ತಿರುತ್ತೇವೋ, ಅಲ್ಲಿವರೆಗೆ ಪ್ರಾಣವಾಯು ಸರಾಗವಾಗಿ ನಮ್ಮ ದೇಹದಲ್ಲಿ ಹರಿದಾಡುತ್ತಿರುತ್ತೆ. ನಾವು ಭಾರ ಅಂತ ವಿಶ್ರಮಿಸಲು ಸಮಯ ಹಾಳು ಮಾಡಿದಷ್ಟು, ಬೆನ್ನಿನಲ್ಲಿದ್ದ ಸಾವು ನೆತ್ತಿಗೇರಿ, ಬಾಯಿಗಿಳಿಯಲು ಹವಣಿಸುತ್ತಿರುತ್ತದೆ. ಇದಕ್ಕಾಗೇ ನಾವು ಸಾವನ್ನು ದೂರವಿಡಲು ವಿಶ್ರಮಕ್ಕಿಂತ ಪರಿಶ್ರಮಕ್ಕೆ ಹೆಚ್ಚು ಆದ್ಯತೆ ಕೊಡಬೇಕು. ಇದನ್ನೇ ನಮ್ಮ ಹಿರಿಯರು ಬಹಳ ಸರಳವಾಗಿ ಕಷ್ಟಪಟ್ಟರೆ ಸುಖ ಅಂದರು, ಒಂದಿಷ್ಟು ಬುದ್ದಿ ಇರುವ ಪ್ರಾಜ್ಞರು ವಿಸ್ತಾರವಾಗಿ ‘ಪರಿಶ್ರಮದಲ್ಲಿ ಬದುಕಿದೆ’ ಎಂದರು.

‘ದುಡ್ಡೇ ದೊಡ್ಡಪ್ಪ, ದುಡಿಮೆ ಅದರಪ್ಪ’ ಅಂತ ಸುಮ್ಮನೆ ಅನುಭಾವಿ ಜನ ಹೇಳಿಲ್ಲ. ಶ್ರಮವಿಲ್ಲದೆ ಯಾವ ಸಾಧನೆಯೂ ಆಗೊಲ್ಲ, ಕಷ್ಟವಿಲ್ಲದೆ ಯಾವ ಸುಖವೂ ಅರಸಿ ಬರೊಲ್ಲ. ಹುಟ್ಟಿದ ಪ್ರತಿ ಜೀವಿಯೂ ಶ್ರಮ ಪಟ್ಟೇ ಆಹಾರವನ್ನು ಹುಟ್ಟಿಸಿಕೊಳ್ಳಬೇಕು, ಕಷ್ಟಪಟ್ಟೇ ಬದುಕನ್ನು ಕಟ್ಟಿಕೊಳ್ಳಬೇಕು. ಸೃಷ್ಟಿಯ ಈ ನಿಯಮಕ್ಕೆ ಮನುಷ್ಯನೂ ಅತೀತನಲ್ಲ. ಕಷ್ಟಪಟ್ಟರೆ ಸುಖ, ಸುಖವಷ್ಟೆ ಅನುಭವಿಸಿದರೆ ಕಷ್ಟ. ಏಕೆಂದರೆ ಭಗವಂತ ಸುಖದ ಗೂಡಲ್ಲಿ ರೋಗದ ಮೊಟ್ಟೆ ಇಟ್ಟಿದ್ದಾನೆ. ಸುಖ ಬಯಸಿದಷ್ಟು ರೋಗದ ಮೊಟ್ಟೆಗಳು ಹೆಚ್ಚಾಗುತ್ತವೆ. ಸುಖದ ಕಾವು ಹೆಚ್ಚಾದಷ್ಟು ರೋಗದ ಮೊಟ್ಟೆಗಳು ಒಡೆದು ಮರಿಗಳು ಹೊರಬರುತ್ತವೆ. ಹುಳುಗಳು ಬಲಿತಷ್ಟು ದೇಹ ರೋಗದ ಗೂಡಾಗಿ, ಸಾವಿಗೆ ಹತ್ತಿರವಾಗುತ್ತೇವೆ.

ಜೀವಿಗಳೆಲ್ಲ ಕಷ್ಟ ಪಡಲಿ ಅಂತ ಭಗವಂತ ಭೂಮಿಯನ್ನು ಸೃಷ್ಟಿಸಿಲ್ಲ. ಕಷ್ಟ-ಸುಖಗಳನ್ನು ಸಮನಾಗಿ ಅನುಭವಿಸಿ, ಉತ್ತಮ ಜೀವನ ಸಾಗಿಸಲಿ ಅಂತ ಹಗಲು-ರಾತ್ರಿ ಸೃಷ್ಟಿಸಿದ್ದಾನೆ. ಸೂರ್ಯನ ಕಣ್ಗಾವಲಿನಲ್ಲಿ ಶ್ರಮಪಡುತ್ತಾ, ಚಂದ್ರನ ಅಂಗಳದಲ್ಲಿ ವಿಶ್ರಮಿಸುತ್ತಾ ಬದುಕಲು, ಕಷ್ಟ-ಸುಖ ಎರಡನ್ನೂ ಅಳತೆ ಮಾಡಿಕೊಟ್ಟಿದ್ದಾನೆ. ಭಗವಂತನ ಈ ಕಾಲನಿಯಮವನ್ನು ಮನುಷ್ಯನ ಹೊರತು, ಭೂಮಿ ಮೇಲಿರುವ ಎಲ್ಲಾ ಜೀವಿಗಳು ಅನುಸರಿಸುತ್ತವೆ. ಹೀಗಾಗಿ ಅವುಗಳಿಗೆ ಯಾವ ರೋಗಬಾಧೆಯು ಬಡಿಯುವುದಿಲ್ಲ. ಆದರೆ ಭಗವಂತನಿಗೇ ಬುದ್ಧಿ ಹೇಳುವ ಮಹಾಬುದ್ಧಿವಂತ ಮಾನವ ಮಾತ್ರ; ಶ್ರಮಪಡುವ ಕಾಲದಲ್ಲಿ ವಿಶ್ರಮಿಸುತ್ತಾ, ವಿಶ್ರಮಿಸುವ ಕಾಲದಲ್ಲಿ ಶ್ರಮಪಡುತ್ತ ರೋಗವನ್ನು ಬರಿಸಿಕೊಳ್ಳುತ್ತಾನೆ.

ADVERTISEMENT

ಎಲ್ಲಾ ಜೀವಿಗಳಂತೆ ಸೂರ್ಯನ ಶಾಖದಲ್ಲಿ ರೋಗಾಣುವನ್ನು ಕರಗಿಸಿಕೊಂಡು, ಚಂದ್ರನ ತಂಪಲ್ಲಿ ಜೀವಶಕ್ತಿ ಪಡೆಯುವ ಸೃಷ್ಟಿ ನಿಯಮಕ್ಕೆ ಮಾನವ ಹೊಂದಿಕೊಳ್ಳಬೇಕು. ಭಗವಂತ ಕೊಟ್ಟಿರುವ ಒಂದಿಷ್ಟು ಬುದ್ಧಿಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾ, ಪರರನ್ನು ಶೋಷಿಸುತ್ತಾ ಬದುಕಲು ಯತ್ನಿಸಿದರೆ, ದೇಹದೊಳಗಿರುವ ರೋಗಾಣುಗಳು ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಇಂದು ಮಾನವ ಎದುರಿಸುತ್ತಿರುವ ಎಲ್ಲಾ ಪಿಡುಗುಗಳಿಗೂ ಅವನ ಸ್ವಾರ್ಥ-ಸುಖವೇ ಕಾರಣ. ಇನ್ನು ಮುಂದಾದರೂ ಶ್ರಮವಿಲ್ಲದೆ ವಿಶ್ರಮಿಸುವ-ಕಷ್ಟಪಡದೆ ಸುಖಪಡುವ ದುಷ್ಟತನ ಬಿಟ್ಟರೆ, ಮನುಕುಲ ಮತ್ತೊಂದಿಷ್ಟು ಕಾಲ ಬದುಕಬಹುದು. ಇಲ್ಲದಿದ್ದರೆ, ಸುಖದ ಬಯಕೆಯಲ್ಲೇ ಸಾವಿನ ಬಾಯಿಗೆ ಸುಲಭ ತುತ್ತಾಗಬೇಕಾಗುತ್ತದೆ.

ವೈಶಾಖಮಾಸದಲ್ಲಿ ಚಂದ್ರನಿಡುವ ಮೂರನೇ ಹೆಜ್ಜೆಯೆ ಅಕ್ಷಯತೃತೀಯಾ. ಕೈಲಾಸ ನಿರ್ಮಿಸಿಕೊಟ್ಟ ಕುಬೇರ ಧನಾಧಿಪತಿಯಾದ, ಶ್ರೀಕೃಷ್ಣನಿಂದ ಕುಚೇಲ ಸಿರಿವಂತನಾಗಿ, ಪಾಂಡವರು ಅಕ್ಷಯಪಾತ್ರೆ ಪಡೆದಂದೇ ವ್ಯಾಸರು ಗಣಪತಿಯಿಂದ ಮಹಾಭಾರತ ಬರೆಸಿದರು. ಪರಶುರಾಮ, ಬಸವಣ್ಣ ಜನ್ಮ ತಾಳಿದ, ಆದಿತೀರ್ಥಂಕರ ವೃಷಭದೇವ ಉಪವಾಸ ಬಿಟ್ಟ, ಸ್ವರ್ಗದಿಂದ ಗಂಗೇ ಧರೆಗಿಳಿದ ಈ ಶುಭಸಂದರ್ಭದಲ್ಲಿ ಮಾನವರ ಕಷ್ಟ ಕ್ಷಯಿಸಿ-ಸುಖ ಅಕ್ಷಯಿಸಲಿ. ಅದಕ್ಕಾಗಿ ನಾವೆಲ್ಲಾ ಭಗವಂತ ಹಾಕಿಕೊಟ್ಟ ಸೃಷ್ಟಿನಿಯಮ ಮೀರದೆ, ಉತ್ತಮರೀತಿಯಲ್ಲಿ ಬದುಕುವ ಸಂಕಲ್ಪ ಮಾಡಿದರೆ, ‘ಸಚ್ಚಿದಾನಂದ’ದ ನಮ್ಮ ಬದುಕು ಅಕ್ಷಯವಾಗುವುದರಲ್ಲಿ ಸಂದೇಹವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.