ADVERTISEMENT

ಮರಳಿ ನರಳಿದ ಯುಗಾದಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 19:30 IST
Last Updated 10 ಏಪ್ರಿಲ್ 2021, 19:30 IST
ಚಿತ್ರಗಳು: ತಾಜುದ್ದೀನ್‌ ಆಜಾದ್‌
ಚಿತ್ರಗಳು: ತಾಜುದ್ದೀನ್‌ ಆಜಾದ್‌   

ಯಾರ ಅಳುವಿಗೂ ಅಳವಿಗೂ ನಿಲುಕದಂತೆ ಪರಿವರ್ತನೆಯ ಚಕ್ರ ಸುತ್ತುತ್ತಲೇ ಇದೆ. ಅಸ್ತವ್ಯಸ್ತವಾಗಿದ್ದ ಜನಜೀವನ ಈ ಯುಗಾದಿಗಾದರೂ ಸರಿದಾರಿಗೆ ಹೊರಳಲಿದೆ ಎಂದುಕೊಳ್ಳುವಾಗ ಕೊರೊನಾದ ಎರಡನೇ ಅಲೆ ಹೊರಳಿ ಮೇಲೆದ್ದಿದೆ. ಹಾಗಾದರೆ ಯುಗಾದಿ ಮರಳಿ ಬರುವಾಗ ಹೊಸ ವರುಷ, ಹೊಸ ಹರುಷ ತರುತ್ತದೆ ಎನ್ನುವುದು ಕಾವ್ಯದ ಸಾಲು ಮಾತ್ರವೇ?

2020, ಮಾರ್ಚ್ ತಿಂಗಳು. ಯುಗಾದಿಯ ಪರ್ವ ಎದುರಿಗಿತ್ತು. ದೇಶದಾದ್ಯಂತ ಘೋಷಣೆಯಾದ ಲಾಕ್‌ಡೌನ್‌ಗೆ ಹಬ್ಬವನ್ನು ಬರದಂತೆ ತಡೆಯಲು ಸಾಧ್ಯವಿರಲಿಲ್ಲ. ಆದರೆ, ಅದರ ಚೈತನ್ಯವನ್ನು ಸಂಪೂರ್ಣವಾಗಿ ಉಡುಗಿಸಿಬಿಡುವ ತಾಕತ್ತಿತ್ತು. ಬೆಲ್ಲವೇನೋ ಮನೆಯಲ್ಲಿತ್ತು. ಬೇವನ್ನೆಲ್ಲಿಂದ ತರುವುದು ಎಂಬ ಪ್ರಶ್ನೆ ಉದ್ಭವಿಸಿತ್ತಾದರೂ ಸಾವಿನ ಸುಳಿಯಲ್ಲಿ ಜೀವಗಳನ್ನು ಸುತ್ತಿಸಿ ಸುತ್ತಿಸಿ ಸೆಳೆದೊಯ್ಯುತ್ತಿದ್ದ ಕೋವಿಡ್‌ನ ಮುಂದೆ ಅದು ಅಷ್ಟೇನೂ ದೊಡ್ಡದಾಗಿರಲಿಲ್ಲ.

ಬಿಡು, ಈ ಬಾರಿ ಕಹಿಯಿಲ್ಲದೇ ಬರಿ ಸಿಹಿಸಿಹಿಯಾಗಿಯೇ ಹಬ್ಬದೂಟ ಮಾಡಿದರಾಯಿತು ಎಂಬ ಉಡಾಫೆ, ಬರಲಿರುವ ವರ್ಷ ಸಿಹಿಯನ್ನೇ ಉಣಬಡಿಸಲಿಕ್ಕಿದೆ, ತಗೋ ಎಂಬ ಲಘುಭಾವ. ಇದು ಈ ಕ್ಷಣ ಹೇಗೋ ಏಗಿ ದಾಟಿಬಿಡಬೇಕಾದ ಕೇಡುಗಾಲ, ಲೋಕಕ್ಕೆ ಲೋಕವೇ ನರಳುತ್ತಿದೆ. ನಮ್ಮ ಬೇಸರ, ಹಳಹಳಿಕೆಗಳನ್ನೆಲ್ಲ ಕೆಲಕಾಲ ಗಂಟುಕಟ್ಟಿ ಮೇಲೆಸೆದರಾಯಿತು ಎಂಬ ಉಮೇದು, ಮತ್ತೆ ಬದುಕು ನಳನಳಿಸುತ್ತದೆ, ಶತಮಾನಗಳ ಕಾಲದ ಬೆಲ್ಲದ ಸಾಂಗತ್ಯದಿಂದ ಬೇವು ಎಷ್ಟು ದಿನ ದೂರವಿದ್ದೀತು ಎಂದು ನೆಚ್ಚಿಕೊಂಡ ನಂಬಿಕೆ. ಯಾವುದೂ ಖುಷಿಖುಷಿ ಗಂಟಲಲ್ಲಿಳಿಯದೇ ಊಟವೊಂದು ಶಾಸ್ತ್ರವಾಗಿ, ಹಬ್ಬದ ಸಂಪ್ರದಾಯ ಮಾತ್ರವಾಗಿ, ಆಪ್ತೇಷ್ಟರ ಬರುವಿಕೆ ಹೋಗಲಿ, ಎಷ್ಟೋ ಮನೆಗಳಲ್ಲಿ ಮನೆಜನರೇ ಜೊತೆಗಿಲ್ಲದೆ ಹೇಗೋ ಬಣಬಣ ಕಳೆದುಹೋಯಿತು.

ADVERTISEMENT

ಏನೋ ಸಮಯ ಸರಿಯಿಲ್ಲ, ಸಹಿಸಿಕೊಂಡರಾಯಿತು. ಕಾದು ನೋಡಿದರಾಯಿತು ಅಂದುಕೊಂಡಿದ್ದೇ ಬಂತು. ಮುಂದೆ ಕಾದಿದ್ದೇ ಬೇರೆ ಎನ್ನುವ ಆಲೋಚನೆಯ ಲವಲೇಶವೂ ಆಗ ನಮಗಿರಲಿಲ್ಲ. ಚಿಂತೆ, ಚಿಂತನೆಗಳನ್ನೆಲ್ಲ ಮೀರಿ ಬಂದೆರಗಿದ ಬಿಕ್ಕಟ್ಟು, ಅದು ತಂದಿಟ್ಟ ಇಕ್ಕಟ್ಟೇ ಬೇರೆ. ಕಲ್ಪನೆಗೂ ಮೀರಿದ ಆಗುಹೋಗುಗಳು. ಕನಸಿನಲ್ಲೂ ಕಾಣದ ಆಘಾತಗಳ ಸಾಲುಸಾಲು. ವರ್ಷವಿಡೀ ಉಂಡಿದ್ದು ರೋಗ, ರೋಗಭಯ, ಆತಂಕ, ಸಾವುನೋವಿನ ಕಹಿ ಉಣಿಸು. ಕಂಡಿದ್ದು ಕಣ್ಣೀರು, ಮೂಕರೋದನ, ಮೌನ, ಹೋದಲ್ಲಿ, ಬಂದಲ್ಲಿ ತಲ್ಲಣಿಸುವ ಭಯಗ್ರಸ್ತ ಮನಸ್ಸು. ಆತನಕ ಬರಿದೆ ದುಃಸ್ವಪ್ನವೆಂದೆಣಿಸಿದ್ದು ಕೊನೆಗೂ ವಾಸ್ತವವಾಗಿ ಕಣ್ಣೆದುರು ಇಳಿದು ಕುಳಿತಿತ್ತು.

ಒಂದೆಡೆ ಗಾಳಿಸುದ್ದಿ, ವದಂತಿಗಳ ಅತಿವೃಷ್ಟಿ. ಮತ್ತೊಂದೆಡೆ, ಆಧಾರಸಹಿತವಾದ, ಅಧಿಕೃತವಾದ ಸಂಗತಿಗಳ ಅನಾವೃಷ್ಟಿ. ಭರವಸೆಗೆ ಬರ. ನಂಬಿಕೆಗೆ ಕೊಡಲಿಯೇಟು. ನಂಬಿದ ದೇವರಿಗೂ ಜಡಿದು ಬೀಗ, ಬಡಿದಿದ್ದು ಅನಿರ್ದಿಷ್ಟ ಅವಧಿಯ ಚಿಲಕ. ವೈದ್ಯರು, ವಿಜ್ಞಾನಿಗಳು ಹೇಳುವುದನ್ನು ಕೇಳಲು ಸದಾ ತವಕ. ಪರ್ಯಾಯಗಳು ದೂರದಿಗಂತದಲ್ಲೆಲ್ಲೂ ಕಾಣುತ್ತಿರಲಿಲ್ಲ. ದಾರಿಕಾಣದ ಅಸಹಾಯಕ ಸ್ಥಿತಿ.

ಹೀಗೇಕಾಯಿತು? ಇದಕ್ಕೆಲ್ಲ ಯಾರು ಹೊಣೆ? ನೇರವಾಗಿ ಯಾರತ್ತಲೂ ಬೊಟ್ಟುಮಾಡಿ ತೋರಿಸಲಾರದ, ಎಲ್ಲಿಗೇ ಹೋದರೂ ಯಾರಿಗೇ ಅಂದರೂ ಕೊನೆಗೆ ಸ್ವಂತದ ಬುಡಕ್ಕೇ ಬಂದು ನಿಲ್ಲುವ ಹತಾಶ ಸ್ಥಿತಿ, ಸನ್ನಿವೇಶ. ಖಚಿತ ಉತ್ತರವಿಲ್ಲದ ಪ್ರಶ್ನೆಗಳು ಬೃಹದಾಕಾರ ಬೆಳೆದು ನಿಂತವು. ಅಖಾಡಕ್ಕಿಳಿದವು ಆರೋಪ-ಪ್ರತ್ಯಾರೋಪ, ವಾದ-ಪ್ರತಿವಾದ, ಕಿರಿಚಾಟ-ಕೆಸರೆರಚಾಟ, ನಿಂದನೆ-ಆಪಾದನೆ. ಸಾಮಾನ್ಯನ ಬದುಕಿನಲ್ಲಿ ಉಳಿದಿದ್ದು ಕೇವಲ ಶೂನ್ಯ ಸಂಪಾದನೆ.

ಬದುಕು ಎನ್ನುವುದು ಸಾಧಾರಣ ಪರಿಸ್ಥಿತಿಯಲ್ಲಿಯೇ ಎಲ್ಲರಿಗೂ ಸಮನಾದ ಊಟವನ್ನು ಉಣಬಡಿಸುವುದಿಲ್ಲ. ಸಂಕಟದ ಕಾಲದಲ್ಲಿ ಅದನ್ನು ನಿರೀಕ್ಷಿಸುವುದಾದರೂ ಹೇಗೆ? ರೋಗಬಾಧೆಯ ನೇರ ಆಕ್ರಮಣಕ್ಕೆ ತುತ್ತಾಗಿ ಜೀವ ತೆತ್ತವರ ಸಂಖ್ಯೆ ಲಕ್ಷಗಟ್ಟಲೆಯಾದರೆ ಕುಟುಂಬದ ಸದಸ್ಯರನ್ನು, ಬಂಧುಮಿತ್ರರನ್ನು, ಬದುಕಿನಾಸರೆಯಾಗಿದ್ದ ವ್ಯಾಪಾರ-ವಹಿವಾಟುಗಳನ್ನು ಕಳೆದುಕೊಂಡು, ಬದುಕಿಯೂ ಅರೆಜೀವವಾದವರ ಲೆಕ್ಕ ಸಿಕ್ಕರೆ ಅದು ಕೋಟಿಕೋಟಿಯಾದೀತು. ಸಾವು-ನೋವು, ದುಃಖ-ಅಗಲಿಕೆ-ನರಳಿಕೆ, ಕಷ್ಟನಷ್ಟಗಳಿಗೆಲ್ಲ ವಿಧಿಯನ್ನು ಹೊಣೆಯಾಗಿಸಿ, ಕೆಲಕಾಲ ಶೋಕದಲ್ಲಿ ಮುಳುಗಿದರೂ ಮೇಲೆದ್ದು ಬದುಕನ್ನು ಕಟ್ಟಿಕೊಳ್ಳುವ ಅನಿವಾರ್ಯತೆ, ಕಟ್ಟಿಕೊಳ್ಳಲೇಬೇಕಾದ ಕಟುವಾಸ್ತವ ಒಂದೆಡೆಗಿತ್ತು, ಮತ್ತೊಂದೆಡೆ, ತಮ್ಮ ಕರ್ತೃತ್ವಶಕ್ತಿ, ಪರಿಶ್ರಮ, ಶ್ರದ್ಧೆ, ಬದ್ಧತೆಗಳಿಂದಲೇ ಸ್ವಂತದ, ಕುಟುಂಬದ ಜೊತೆಗೆ ಸಮುದಾಯದ ಒಳಿತಿಗೂ ದುಡಿಯುವವರ ಸಾಕಷ್ಟು ಉದಾಹರಣೆಗಳನ್ನು ಕಾಣಬಹುದಿತ್ತು.

ವೈಯಕ್ತಿಕ ಶುಚಿತ್ವ, ನೆರೆಹೊರೆ-ಪರಿಸರದ ಸ್ವಚ್ಛತೆ, ದೈಹಿಕ ಅಂತರದ ಅಗತ್ಯವನ್ನು ಕೆಲವರಿಗೆ ವಿವರಿಸಬೇಕಾದ ಅವಶ್ಯಕತೆಯೇ ಬೀಳಲಿಲ್ಲ. ಆದರೆ, ಇಂತಹ ವಿಪರೀತ ಪರಿಸ್ಥಿತಿಯಲ್ಲಿಯೂ ಸ್ವಂತದ, ಮನೆಯ, ಕುಟುಂಬದ, ಸಮುದಾಯದ ಸುರಕ್ಷೆಯತ್ತ ಗಮನ ಹರಿಸದೇ ಬೇಜವಾಬ್ದಾರಿಯುತವಾದ ವರ್ತನೆಗಳನ್ನು ಮೆರೆಯುವವರೂ ಧಾರಾಳವಾಗಿ ಕಂಡುಬಂದರು. ಇಂತಹವರಲ್ಲಿ ಕೆಲವರಾದರೂ ಪಾಠ ಕಲಿತರೇ, ವರ್ಷಾನುಗಟ್ಟಲೆಯ ಅಭ್ಯಾಸ-ಆಚರಣೆಗಳನ್ನು ಬದಲಾಯಿಸಿಕೊಂಡರೇ ಎಂದು ಒಮ್ಮೊಮ್ಮೆ ಆಶ್ಚರ್ಯವಾಗುತ್ತದೆ. ಈಗಲೂ ಬದಲಾಗಲಿಲ್ಲ ಎಂದರೆ ಅದೂ ಆಶ್ಚರ್ಯಕರ ಸಂಗತಿಯೇ. ಬದಲಾಗಲು ಇನ್ನೆಂತಹ ಹೊಡೆತ ಬೀಳಬೇಕಿತ್ತು? ಸಾಮ, ದಾನ, ಭೇದೋಪಾಯಗಳನ್ನು ಪ್ರಯೋಗಿಸಿ ನೋಡಿದ ಪ್ರಕೃತಿ ಮನುಷ್ಯನ ಅಹಂಕಾರವನ್ನು ಬಗ್ಗುಬಡಿಯಲು ದಂಡವನ್ನು ಕೈಗೆತ್ತಿಕೊಂಡಾಗಿದೆ. ಈಗಲೂ ಬುದ್ಧಿ ಕಲಿಯಲಿಲ್ಲವೆಂದಾದರೆ ಇನ್ಯಾವಾಗ ಎಂದೆಲ್ಲ ಯೋಚಿಸುತ್ತಲೇ ಮತ್ತೆ ಯುಗಾದಿ ಬಂದಿದೆ.

ಚಿತ್ರಗಳು: ತಾಜುದ್ದೀನ್‌ ಆಜಾದ್‌

ಎಲ್ಲೋ ಚೀನಾದ ವುಹಾನ್‌ನಲ್ಲಿ, ಕಂಡು ಕೇಳರಿಯದ ದೇಶದಲ್ಲಿ ಕಾಣಿಸಿಕೊಂಡಿದೆಯಂತೆ, ಅಷ್ಟು ಜನ ಸತ್ತರಂತೆ, ಇಷ್ಟು ಜನ ಕಾಯಿಲೆ ಬಿದ್ದಿರುವರಂತೆ, ಆಸ್ಪತ್ರೆಗಳು ತುಂಬಿತುಳುಕುತ್ತಿವೆಯಂತೆ, ವೈದ್ಯಕೀಯ ವ್ಯವಸ್ಥೆ ಕುಸಿದು ಬೀಳುತ್ತಿದೆಯಂತೆ ಎಂಬೆಲ್ಲ ಮಾತುಗಳು ಬರಿಯ ಮಾತಾಗದೇ ನಮ್ಮನಿಮ್ಮೆಲ್ಲರ ಮನೆಯಂಗಳದ ಹಾವಾಗಿ, ಕೊನೆಗದು ಮನೆಯೊಳಗೇ ಹೊಕ್ಕು ಹರಿದಾಡಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಊರೂರು ತಿರುಗತೊಡಗಿದ ‘ಮಹಾಮಾರಿ’ಯು ‘ರಣಕೇಕೆ’ ಹಾಕುತ್ತ, ‘ಮರಣಮೃದಂಗ’ವನ್ನು ಬಾರಿಸುತ್ತ ಹಳ್ಳಿಯ ಮೂಲೆಮೂಲೆಗಳಲ್ಲಿ ‘ರುದ್ರನರ್ತನ’ ಮಾಡಿ ನಲಿದಿದ್ದು ಸುಳ್ಳಲ್ಲ.

ಕಳೆದ ವರ್ಷ ಯುಗಾದಿಯ ಆಸುಪಾಸು ‘ಬಿಂದಾಸ್’ ಮನೋಭಾವದಲ್ಲಿ ಹಾಯಾಗಿ ಮಲಗಿದ್ದ ನಮ್ಮೆಲ್ಲರ ದೈನಂದಿನ ಬದುಕುಗಳೂ ದಿನಕಳೆದಂತೆ ಹಳಿ ತಪ್ಪತೊಡಗಿದ್ದವು. ಹಳ್ಳಿ-ತಾಲ್ಲೂಕು-ಜಿಲ್ಲೆ-ರಾಜ್ಯಗಳ ಗಡಿಗೆರೆಗಳನ್ನು ಮೀರಿ ಒಟ್ಟಾರೆ ದೇಶಕ್ಕೆ ದೇಶವೇ ನಲುಗತೊಡಗಿತು. ಭೂಮಂಡಲದ ಯಾವುದೋ ಗೋಳಾರ್ಧದಲ್ಲಿ ಸಂಭವಿಸುವ ಪಲ್ಲಟ, ತಲ್ಲಣಗಳು ವಿಶ್ವವ್ಯಾಪಿಯಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ ಎನ್ನುವ ಸತ್ಯ ನಿಧಾನವಾಗಿಯಾದರೂ ಒಳಗಿಳಿಯತೊಡಗಿತ್ತು. ಪ್ರಗತಿಯ ಪ್ರತೀಕವಾದ, ಪ್ರತಿಷ್ಠೆಯ ಸಂಕೇತವಾದ ಸಂಚಾರ-ಸಂಪರ್ಕ-ಸಂವಹನಗಳು ವರದ ಹಸ್ತದ ಜೊತೆಗೆ ವಿನಾಶದ ಕಬಂಧ ಬಾಹುಗಳನ್ನೂ ಚಾಚಿ, ಸಿಕ್ಕಿದ್ದನ್ನೆಲ್ಲ ಬಾಚಿ ಕೊಂಡೊಯ್ದಿದ್ದೂ ಆಯಿತು.

ತನ್ನೆಲ್ಲ ಋಣಾತ್ಮಕ ಪ್ರಭಾವಗಳ ಕಾರಣ ಯಾವ ತಾಂತ್ರಿಕ ಪ್ರಗತಿ, ಸಂವಹನ, ಮಾಹಿತಿ ತಂತ್ರಜ್ಞಾನವನ್ನು ಮಾನವ ಬದುಕಿನ ಅಭಿಶಾಪವೆಂದು ಕರೆಯಲು ಉದ್ಯುಕ್ತರಾಗಿದ್ದೆವೋ ಅದೇ ಮಾಹಿತಿ ತಂತ್ರಜ್ಞಾನವು ನಮ್ಮ ಪಾಲಿಗೆ ಧರೆಗಿಳಿದ ದೇವತೆಯೂ ಆಯಿತು. ಎಲ್ಲಿ, ಯಾವುದನ್ನು, ಎಷ್ಟು, ಹೇಗೆ, ಏಕೆ ಬಳಸಿಕೊಳ್ಳಬೇಕು ಎಂಬ ವಿವೇಚನೆಯನ್ನೂ ಅದು ನಮ್ಮ ಮುಂದಿಟ್ಟಿತು. ಈಗ ವಿವೇಕವೆನ್ನುವುದು ತಲೆಗೆ ಸೀಮಿತವಾಗುಳಿಯಲಿಲ್ಲ, ಬೆರಳ ತುದಿಗಿಳಿದಿದೆ. ಮಾಹಿತಿ-ಜ್ಞಾನಗಳೆಲ್ಲದರ ಇಮ್ಮುಖ ಚಲನೆಯನ್ನು ಸಮರ್ಪಕವಾಗಿ ನಿರ್ವಹಿಸಿಕೊಳ್ಳುವ ಹೊಣೆ ನಮ್ಮ ಮೇಲಿದೆ. ಕಾಲ ಅಂತಹದೊಂದು ಅವಕಾಶವನ್ನು ನಮಗೆ ಒದಗಿಸಿದೆ. ಸಂಯಮದ ಒರೆಗಲ್ಲಿಗೆ ತಿಕ್ಕಿ ಹೊಳಪಾಗಿಸಿಕೊಳ್ಳಬೇಕಾದ ಅದೆಷ್ಟೋ ಕಲ್ಲುಗಳನ್ನು ಮಡಿಲಿಗೆ ಹಾಕಿನೋಡುತ್ತಿದೆ ಕಾಲ. ಕಾಲಷ್ಟೇ ಅಲ್ಲ, ಕಾಲ ಕೆಳಗಿನ ನೆಲವೂ ಗಟ್ಟಿಯಾಗಿರಲೇಬೇಕು ಓಡಲು, ಓಡಿ ನೆಲೆ ಮುಟ್ಟಲು ಎನ್ನುವುದನ್ನು ಸನ್ನಿವೇಶವು ಮನವರಿಕೆ ಮಾಡಿಕೊಡುತ್ತಲೇ ಇದೆ. ಯುಗಾದಿ ಮತ್ತೆ ಬಂದಿದೆ.

ಮನೆಮನೆಯ ಕದ ತಟ್ಟಿ ಭೀತಿಯ ಬೀಜ ಹಂಚಿಹೋಗಿದೆ ಕೊರೊನಾ. ಇದ್ದ ನೆಲವನ್ನೇ ಹಸನು ಮಾಡಬೇಕಿದೆ, ಬಿದ್ದ ಮಳೆಯ ನೀರನ್ನೇ ಕಾಪಿಟ್ಟು ಹನಿಸಬೇಕಿದೆ ಭೂಮಿಗೆ. ಇರುವ ಮಣ್ಣನ್ನೇ ಉತ್ತು, ಸಿಕ್ಕ ಬೀಜವನ್ನೇ ಬಿತ್ತಿ ಭರವಸೆಯ ಬೆಳೆ ತೆಗೆಯಬೇಕಿದೆ.

ಕುಟುಂಬದ ಸದಸ್ಯರನ್ನು, ಆಪ್ತೇಷ್ಟರನ್ನು ಕಳೆದುಕೊಂಡ ದುಃಖ, ಕುಸಿದುಬಿದ್ದ ಬದುಕಿನ ನೆಲೆಗಟ್ಟಿನ ನಷ್ಟ ಅಗಾಧವಾದುದು. ಅದಕ್ಕೆ ಯಾವ ಮಾತೂ ಯಾವ ಸಾಂತ್ವನವೂ ಸಮಾಧಾನ ನೀಡದು, ಪರಿಹಾರ ಒದಗಿಸದು. ಈ ಹಿನ್ನೆಲೆಯಲ್ಲಿ ಮತ್ತು ಯಾವ ಕ್ಷಣ ಏನೋ ಹೇಗೋ ಎಂಬ ಅನಿಶ್ಚಿತತೆ ಕಾಡುತ್ತಿರುವ ವಿಚಿತ್ರ ಸನ್ನಿವೇಶದಲ್ಲಿ, ಈ ತನಕದ ಬದುಕು ಒದಗಿಸಿದ ಸುರಕ್ಷಿತ ನೆಲೆಯಲ್ಲಿ ಕುಳಿತು ತೋಚಿದ್ದನ್ನು ಹೇಳುವುದು, ಬರೆಯುವುದು ಕೂಡ ಒಂದು ರೀತಿಯಲ್ಲಿ ಮುಜುಗರದ ಸಂಗತಿಯೇ. ಆ ಕುರಿತು ಕ್ಷಮೆ ಇರಲಿ. ಬದುಕಿನ ನಶ್ವರತೆ, ಶಾಶ್ವತತೆಯೆಡೆಗಿನ ತುಡಿತ ಮಾತ್ರ ಸ್ಥಿರವೆಂಬ ತಾತ್ವಿಕ ನೆಲೆಯಲ್ಲಿ ಜೀವನವನ್ನು ಮರುರೂಪಿಸಿಕೊಳ್ಳಬೇಕಾದ ಸಂಧಿಕಾಲದಲ್ಲಿ ನಾವಿದ್ದೇವೆ. ಅದಕ್ಕೆ ಪೂರಕವಾದ ಜೀವನಶೈಲಿ, ಬದುಕಿನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎನ್ನುವುದು ತಡವಾಗಿಯಾದರೂ ಅರ್ಥವಾಗುತ್ತಿದೆ.

ಮನುಷ್ಯ ಕೊನೆಗೂ ಮನುಷ್ಯನೇ. ಕಾಮ, ಕ್ರೋಧಾದಿ ದುರ್ಗುಣಗಳಂತೆ ಪ್ರೀತಿ-ಪ್ರೇಮ-ದಯೆ-ಕರುಣೆ-ಅನುಕಂಪ-ಮಮತೆ ಸಹಾಯ-ತ್ಯಾಗ-ಬಲಿದಾನಗಳಂತಹ ಒಳ್ಳೆಯ ಗುಣಗಳೂ ಇವೆಯಲ್ಲವೇ ಅವನಲ್ಲಿ? ಮನುಷ್ಯನ ಈ ಎಲ್ಲ ಮುಖಗಳ, ಮಿಶ್ರಗುಣಗಳ ಅನಾವರಣವಾಗಿದ್ದೂ ಈ ಕಾಲದಲ್ಲೇ ಅಲ್ಲವೇ? ಬಂದ ವಿಪತ್ತನ್ನು ಎದುರಿಸಲೇ ಬೇಕಿತ್ತು. ಬೇರೆ ದಾರಿ ಇರಲಿಲ್ಲ. ಸಾಂಘಿಕ, ಸಾಂಸ್ಥಿಕ, ಸಾಮುದಾಯಿಕ ಶಕ್ತಿಗಳ ಬೆಲೆ ಅರಿವಾಗತೊಡಗಿದ್ದು ಈಗಲೇ ಅಲ್ಲವೇ? ಪರಸ್ಪರ ಸಹಾಯ-ಸಹಕಾರ-ಸಹಯೋಗದ ನೆಲೆಯಲ್ಲಿ ನೆರವಿನ ಬೇರುಗಳು ಬಲವಾಗಿದ್ದು, ಹರಿವಿನ ಸೆಲೆಗಳು ಸ್ಪಷ್ಟವಾಗಿದ್ದು, ಸ್ಫುಟಗೊಂಡಿದ್ದು ಈಗಲೇ ಅಲ್ಲವೇ?

ಟೀಕೆ-ಟಿಪ್ಪಣಿಗಳ ಭರಪೂರ ಪ್ರವಾಹದಲ್ಲಿ, ಆಗಬೇಕಿದ್ದ ಕೆಲಸವನ್ನು ಆಗುಮಾಡುತ್ತಿರುವವರ ಶ್ರಮವನ್ನು ಅಲ್ಲಗಳೆಯಲು ಸಾಧ್ಯವೇ? ಧನಾತ್ಮಕ ಧೋರಣೆಯಿಲ್ಲದೇ ಪ್ರಪಂಚ ನಡೆದೀತೇ ಎಂದುಕೊಳ್ಳುತ್ತಿರುವಾಗಲೇ ಮತ್ತೆ ಬಂದಿದೆ ಯುಗಾದಿ.

ಒಟ್ಟಾರೆ ವಿದ್ಯಮಾನಗಳನ್ನು, ವೈಶ್ವಿಕ ವ್ಯಾಪಾರಗಳನ್ನು ಗಮನಿಸಿದರೆ, ವ್ಯಕ್ತಿಗತ ಬದುಕಿನ ಕಷ್ಟ-ನಷ್ಟ-ಏರಿಳಿತಗಳಂತೆಯೇ, ಪ್ರತಿಯೊಂದು ಯುಗವೂ ಕಾಲಘಟ್ಟವೂ ತನ್ನದೇ ಬಿಕ್ಕಟ್ಟುಗಳನ್ನು ಆಗಾಗ ಎದುರಿಸುತ್ತಲೇ ಬಂದಿದೆ. ಭೂಗ್ರಹವನ್ನಷ್ಟೇ ಲೆಕ್ಕಕ್ಕೆ ತೆಗದುಕೊಂಡರೂ ಅದರ ಹುಟ್ಟಿನಿಂದೀಚೆ ಲಕ್ಷಾಂತರ ವರ್ಷಗಳಲ್ಲಿ ಅದೆಷ್ಟೋ ಬದಲಾವಣೆಗಳು ಆಗಿಹೋಗಿವೆ. ಮುಂದೆಯೂ ಆಗಲಿವೆ. ಯಾರ ಅಳುವಿಗೂ ಅಳವಿಗೂ ನಿಲುಕದಂತೆ ಪರಿವರ್ತನೆಯ ಚಕ್ರ ಸುತ್ತುತ್ತಲೇ ಇರುತ್ತದೆ. 2021, ಮಾರ್ಚ್ ಕಾಲಿಟ್ಟು, ಬರಲಿರುವ ಯುಗಾದಿಯ ನಿರೀಕ್ಷೆಯಲ್ಲಿ, ಇನ್ನೇನು ಅಸ್ತವ್ಯಸ್ತವಾಗಿದ್ದ ಜನಜೀವನ ನಿಧಾನಕ್ಕೆ ಸ್ಥಿರತೆಯತ್ತ ವಾಲಿಯೇಬಿಟ್ಟಿತು ಎಂದುಕೊಳ್ಳುತ್ತಿರುವಾಗಲೇ ಕೊರೊನಾದ ಅಲೆ ಹೊರಳಿ ಮೇಲೆದ್ದಿದೆ. ಈ ದಿನಗಳೆರಡರ ನಡುವಿನದೇ ನಿಜಕ್ಕೂ ಪರ್ವಕಾಲ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಲೇ ಸುಖವೋ ದುಃಖವೋ ಯುಗಾದಿಯನ್ನು ಸ್ವಾಗತಿಸಲೇಬೇಕಿದೆ.

ವ್ಯಕ್ತಿಯಾಗಿ ನಾನೇನೂ ಅಲ್ಲ, ಸಮುದಾಯವಾಗಿ ಮಾತ್ರ ಇಲ್ಲಿ ಮಾನವನ ಬದುಕಿಗೆ ಮಹತ್ವ ಎಂಬುದನ್ನು ಅಡಿಗಡಿಗೆ ಮನದಟ್ಟಾಗಿಸುತ್ತ, ‘ಸಂಘೇ ಶಕ್ತಿ ಕಲೌಯುಗೇ’ ವಾಕ್ಯ ನಿಜವಾಗುವ ಲಕ್ಷಣಗಳನ್ನು ತೋರುತ್ತ, ನಾನೆಂಬುದು ಈ ಮಹಾಸಾಗರದಲ್ಲಿ ಒಂದು ಬಿಂದು ಮಾತ್ರ ಎಂಬುದನ್ನು ಮತ್ತೆ ಮತ್ತೆ ನೆನಪಿಸುತ್ತಲೇ ಯುಗಾದಿ ಮರಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.